ಸಿಂಹಾಸನ!

ಸಿಂಹಾಸನ!

ಬರಹ

ಅಸಿಂಹಾಸನ
ಅಂಕ ೧
[ಕೈಲಾಸ ಲೋಕದಲ್ಲಿ ಈಶ್ವರ ಪಾರ್ವತಿ ಪಗಡೆಯಾಡುತ್ತಾ ಕುಳಿತಿದ್ದಾರೆ. ಗಣೇಶ ಒಳಗೆ ಬರುತ್ತಾನೆ]
ಗಣೇಶ:- ಮಾತಾ ಪಿತರೆ, ಬೆಳಗಿನ ನಮನಗಳನ್ನು ಸ್ವೀಕರಿಸಿ.
ಈಶ್ವರ:- ನಮ್ಮ ಆಶೀರ್ವಾದ ನಿನಗೆಂದೆಂದೂ ಇದೆ ಮಗು.
ಪಾರ್ವತಿ:-ಕಂದ ನಿನ್ನ ಮುಖ ಏಕೆ ಬಾಡಿದೆ? ಕಣ್ಣೆಲ್ಲಾ ಕೆಂಪಾಗಿದೆ. ಮೈಯಲ್ಲಿ ಆರಾಮವಿಲ್ಲವೇ?
ಗಣೇಶ:- ಹೌದು ಮಾತೆಯೆ, ತಲೆಶೂಲೆ ನನ್ನನ್ನಾವರಿಸಿದೆ. ನಿದ್ರೆಯೇ ಸಾಲದಂತಾಗಿದೆ.
ಈಶ್ವರ:-ಕಾರಣ?
ಗಣೇಶ:- ಭೂಲೋಕದಲ್ಲಿ ಅತ್ಯಂತ ಗಲಾಟೆ, ಚೀರಾಟ ನನಗೆ ತಡೆದುಕೊಳ್ಳಲೇ ಆಗುತ್ತಿಲ್ಲ. ಅದರಿಂದ ನಾವು ಹೇಗೆ ಪಾರಾಗುವುದು ಎಂದು ಕೇಳಲೆಂದೇ ನಿಮ್ಮ ಬಳಿ ಬಂದಿದ್ದೇನೆ ತಂದೆಯೇ. ದಯವಿಟ್ಟು ನಮ್ಮನ್ನು ರಕ್ಷಿಸು.
ಪಾರ್ವತಿ:- ಹೌದು ಮಹಾದೇವ ಈ ಗಲಾಟೆ ನನಗೂ ಕೇಳಿ ಬರುತ್ತಿದೆ. ನನ್ನ ಕಂದ ಅನುಭವಿಸುತ್ತಿರುವ ಕಿರುಕುಳ ನನಗೂ ಸಹಾ ಆಗುತ್ತಿದೆ.
[ಅಷ್ಟರಲ್ಲಿ ಷಣ್ಮುಖ ಓಡಿ ಬರುವನು]
ಷಣ್ಮುಖ:- ತಂದೆಯೇ ಈ ಚೀರಾಟ ಎಲ್ಲಿಂದ ಬರುತ್ತಿದೆ? ಭೂಲೋಕದ ನಾಶವೇನಾದರೂ ಆಗುತ್ತಿದೆಯೇ? ನನ್ನ ಸಕ್ಕರೆ ನಿದ್ದೆಯನ್ನು ಹಾಳುಮಾಡಬೇಕೆಂದೇ ಈ ಭೂಲೋಕದ ಜನರಿಗೆ ಏಕೆ ಬುದ್ಧಿ ಕೊಡಲಿಲ್ಲವೋ ಆ ಬ್ರಹ್ಮದೇವ?
[ಇಂದ್ರನಾದಿಯಾಗಿ ಅನೇಕ ದೇವಾನು ದೇವತೆಗಳು ಕೈಲಾಸದರಮನೆಯ ಬಾಗಿಲಲ್ಲಿ ಪ್ರಾರ್ಥಿಸುತ್ತಿರುವ ದ್ವನಿ ಕೇಳಿ ಬರುತ್ತದೆ]
ದೇವಾದಿ ದೇವಾ ಶ್ರೀ ಶಂಕರ
ಶರಣಾದೆವೋ ನಿನ್ನಡಿಗಳಿಗೆ,
ಈಲೋಕ ಹೀಗೇಕೆ ನಡುಗುತಿದೆ?
ಜನರು ಈಗೇಕೆ ಗುಡುಗುತಿಹರು?
ಪರಿಹಾರ ಹುಡುಕಿ ಅಲೆಯುತಿಹರು
ಆ ಪರಿಹಾರ ನಿನ್ನಿಂದಲೇ ಅಲ್ಲವೇ?
ನಿನ್ನಿಂದಲೇ ಇದಕೊಂದು ಅಂತ್ಯವು
ನೀನಲ್ಲವೇ ನಮಗೆಲ್ಲಾ ವಂದ್ಯನು || ದೇವಾದಿ||
[ಈಶ್ವರ ಪಾರ್ವತಿ ಎಲ್ಲರೂ ಅಲ್ಲಿಗೆ ಬರುತ್ತಾರೆ.]
ಇಂದ್ರ :- ನಮ್ಮ ಸ್ವರ್ಗವನ್ನೇ ನಡುಗಿಸುವ ಈ ಗಲಾಟೆ ಎಲ್ಲಿಂದ ಬರುತ್ತಿದೆ ಪ್ರಭು? ಇದನ್ನು ನೀನಡಗಿಸಲಾರೆಯಾ ದೇವಾ?
ಈಶ್ವರ:- (ಮುಗುಳುನಗುತ್ತಾ) ಈ ಗಲಾಟೆಯು ಭೂಲೋಕದಲ್ಲಿರುವ ಭರತಖಂಡದಲ್ಲಿರುವ ಕರ್ನಾಟಕದಿಂದ ಬರುತ್ತಿದೆ. ಅಲ್ಲಿ ಒಂದು ಕುರ್ಚಿಯಲ್ಲಿ ಕೂರಲು ಅನೇಕರು ಹೊಡೆದಾಡುತ್ತಿದ್ದಾರೆ.
ಪಾರ್ವತಿ:- ಅಯ್ಯೋ ಪಾಪವೇ! ಅವರಿಗೆ ಕುರ್ಚಿಗಳ ಅಭಾವವೇ?
ಷಣ್ಮುಖ:- ಕುಳಿತುಕೊಳ್ಳಲು ಕುರ್ಚಿಯೇ ಬೇಕೇನು? ಇವರೆಲ್ಲರ ಭಾರವನ್ನು ಹೊತ್ತಿರುವ ಭೂದೇವಿ ಇಲ್ಲವೇನು?
ಈಶ್ವರ :- ವತ್ಸ, ಈ ಕುರ್ಚಿ ಅಂಥಿಂಥ ಕುರ್ಚಿಯಲ್ಲ. ಇದರ ಮಹಿಮೆ ಏನು ಎಂಬುದನ್ನು ಅಲ್ಲಿ ಬೇರೆಬೇರೆ ಕಡೆ ನಡೆಯುತ್ತಿರುವ ಘಟನೆಗಳಿಂದಲೇ ತಿಳಿಸುತ್ತೇನೆ ನೋಡಿ.
ಅಂಕ ೨
[ಒಬ್ಬ ನಾಯಕ ತನ್ನ ಚೇಲಾಗಳೊಂದಿಗೆ ಬರುತ್ತಾನೆ.]
ಚೇಲಾ ೧:- ಹೆಹ್ಹೆಹ್ಹೆ… ನೀವು ನಮ್ಮ ರಾಜರನ್ನು ಬಹಳ ಚೆನ್ನಾಗಿ ಆಡಿಸುತ್ತಿದ್ದೀರಿ.
ಚೀಲಾ ೨:- ಬಹಳಾ ಮಜಾ ಇದೆ ಒಳ್ಳೆ ಗೊಂಬೆಯಾಟ.
ನಾಯಕ:- ನಾನು ಯಾವಾಗಲೂ ಸಾಮಂತ ನಾಯಕನೇ ಆಗಿರಬೇಕೇನು? ನನ್ನ ಈ ಪುಟ್ಟ ರಾಜ್ಯವನ್ನೂ ಸಹಾ ಕಬಳಿಸಲು ಬರುತ್ತಿದ್ದಾನೆ ಆ ದುಷ್ಟ ರಾಜಾ.
ಚೇಲಾ ೩:- ಮೊದಲು ಅವನನ್ನು ಅಲ್ಲಿಂದ ಇಳಿಸಿ ನಮ್ಮ ರಾಜ್ಯದ ಸಿಂಹಾಸನದಲ್ಲಿ ನಿಮ್ಮನ್ನು ಕೂರಿಸುವ ತನಕ ನಮಗೆ ನಿದ್ದೆ ಬಾರದು ನಾಯಕರೆ.
ನಾಯಕ:- ಹೌದು ಇಡೀ ರಾಜ್ಯವೇ ನನ್ನದಾಗಬೇಕು. ಅದಕ್ಕಾಗಿ ನಾನು ಏನು ಮಾಡಲೂ ಸಿದ್ದನಿದ್ದೇನೆ.
ಚೇಲಾ ೧:- ಆದರೂ ನಮ್ಮ ರಾಜಾ ನಿಷ್ಟಾವಂತ ಎಂದು ಕೇಳಿದ್ದೇನೆ . ಅವನನ್ನು ಕೆಳಗಿಳಿಸುವುದು ಕಷ್ಟ ಎಂದು ಕೇಳಿದ್ದೇನೆ.
ನಾಯಕ:- (ಜೋರಾಗಿ ನಗುತ್ತಾನೆ) ಅಯ್ಯೊ ಮಂಕ ಅವನು ಅವನ ಚೇಲಾಗಾಳಿಗೆ ಮಾತ್ರ ನಿಯತ್ತಿನವನು. ಈಗ ನಾನು ನಿಮಗೆ ಇಲ್ಲವೇ?
ಚೇಲಾಗಳು:- ಹೌದು ಹೌದು.
ನಾಯಕ:- ಅವನೇನು ಬರಿ ಪ್ರಜೆಗಳ ಬೆಂಬಲದಿಂದ ರಾಜ್ಯವಾಳುತ್ತಿಲ್ಲ ಅಥವಾ ಈ ಸ್ಥಾನ ಅವನಿಗೇನೂ ಪಿತ್ರಾರ್ಜಿತವಾಗಿ ಬಂದದ್ದೂ ಅಲ್ಲ. ಅದು ನಮ್ಮೆಲ್ಲರ ಬೆಂಬಲದಿಂದ, ಅದರಲ್ಲೂ ಮುಖ್ಯವಾಗಿ ನನ್ನ ಬೆಂಬಲದಿಂದ ಬಂದದ್ದು. ನಮ್ಮೆಲ್ಲರ ಸಹಕಾರವಿಲ್ಲದಿದ್ದರೆ ಅವನು ಹೇಗೆ ರಾಜ್ಯವಾಳಲು ಸಾಧ್ಯವಾಗುತ್ತಿತ್ತು?
ಚೇಲಾ ೨:- ಹಾಗಾದರೆ ತಾವು ತಮ್ಮ ಸಹಕಾರವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿ ಕುಟುಕು ಮುಳ್ಳು ಆಡಿಸಿ ರಾಜನನ್ನು ನಡುಗಿಸುತ್ತಿರುವುದು ಅದಕ್ಕೇ ಹೌದೇ?
ನಾಯಕ:- ಈಗ ಇತರ ಸಾಮಂತ ನಾಯಕರ ಸೈನ್ಯಕ್ಕಿಂತ ನನ್ನ ಸೈನ್ಯ ದೊಡ್ಡದು. ಹೆಚ್ಚು ಬಲಯುತವಾದದ್ದು. ಅದಕ್ಕೆ ರಾಜನು ನನ್ನನ್ನು ಅಷ್ಟು ಪೂಸಿ ಹೊಡೆಯುತ್ತಿರುವುದು.
ಚೇಲಾ ೨:- ಸರಿ ನೀವು ನಿಮ್ಮ ಬೆಂಬಲ ಹಿಂತೆಗೆದುಕೊಂಡರೆ ಆ ರಾಜನ ಪತನವಾಗಬಹುದೇನೋ? ಆದರೆ ಆ ಸಿಂಹಾಸನ ನಿಮಗೇ ದಕ್ಕುವುದೆಂದು ನೀವು ಹೇಗೆ ಹೇಳುವಿರಿ?
ನಾಯಕ:- ಮೊದಲು ಅವನ ಪತನವಾಗಲಿ. ನಂತರ ಆ ಸಿಂಹಾಸನ ಹೇಗೆ ನನ್ನದಾಗುತ್ತದೆ ನೀನೇ ನೋಡುವಿಯಂತೆ.
ಚೇಲಾ ೩:- ಅದು ಅಷ್ಟು ಸುಲಭವಲ್ಲ. ಆ ಇನ್ನೊಂದು ಪಕ್ಷದ ನಾಯಕ ನಿಮಗೆ ಬಲವಾದ ಸ್ಪರ್ಧಿಯಾಗಿದ್ದಾನೆ.
ನಾಯಕ:- (ನಗುತ್ತಾನೆ) ಅವನಾ? ಅವನಿಗೂ ಒಂದು ದಾರಿ ಹುಡುಕಿದ್ದೇನೆ. ಅದು ನಿಮ್ಮ ಸಣ್ಣ ತಲೆಗಳಿಗೆ ತಿಳಿಯುವುದಿಲ್ಲ. ನನ್ನ ಆಜ್ಞೆಯಂತೆ ನಡೆಯಿರಿ ಸಾಕು.
ಅಂಕ ೩

ಪರಾಕು ಹೇಳುವವರು:- ಅನೇಕ ಅಡೆತಡೆಗಳನ್ನು ಮೀರಿ, ವಿವಿಧ ನಾಯಕರ ಕಿರುಕುಳಗಳನ್ನು ಸಹಿಸಿ, ತನ್ನ ಸಿಂಹಾಸನವೇ ಅಳ್ಳಾಡುತ್ತಿದೆ ಎಂಬುದನ್ನು ತಿಳಿದೂ ಸಹಾ ವಿಚಲಿತರಾಗದೇ ಅದಕ್ಕೆ ಅಂಟಿಕೊಂಡಿರುವ ರಾಜಾದಿ ರಾಜ ಮಹಾರಾಜ ವೀರ ತೇಜಾಪತಿಯವರು ಬರುತ್ತಿದ್ದಾರೆ ಪರಾಕ್, ಬಹು ಪರಾಕ್.
[ ಮಹಾರಾಜ ಸಭೆಗೆ ಬಂದು ತನ್ನ ಸಿಂಹಾಸನದಲ್ಲಿ ಕುಳಿತು ಕೊಳ್ಳುತ್ತಾರೆ. ಸಭಿಕರು ತಮ್ಮ ತಮ್ಮ ಆಸನವನ್ನು ಅಲಂಕರಿಸುವರು.]
ರಾಜಾ:- ಸಭೆಯ ಕಾರುಬಾರುಗಳು ಪ್ರಾರಂಭವಾಗಲಿ.
ಮಂತ್ರಿ:- ಸ್ವಾಮಿ ಈ ದಿನದ ವಿಚಾರ ಎಂದರೆ ರಾಜ್ಯದಲ್ಲಿ ಎಲ್ಲೆಡೆ ಆಗುತ್ತಿರುವ ಅಲ್ಲೋಲಕಲ್ಲೋಲಗಳ ಒಂದು ಸಂಕ್ಷಿಪ್ತ ವರದಿಯನ್ನು ಮೊದಲು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ. ಈ ನಗರದಲ್ಲಿ ನಿಮಗೆ ಬೆಂಬಲ ನೀಡಿರುವ ನಾಯಕರು ಈಗ ಅಸಹಕಾರ ಚಳುವಳಿ ಹೂಡುತ್ತಿದ್ದಾರೆ. ಮತ್ತೊಂದು ಪಕ್ಷದ ನಾಯಕರೂ ಮತ್ತು ಅವರ ಬಳಗದವರೂ ಎಲ್ಲೆಲ್ಲೂ ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿನ ಸಭಿಕರೆಲ್ಲರೂ ತಾವು ಪ್ರಜೆಗಳ ವಿಶ್ವಾಸವನ್ನು ಮತ್ತೆ ಪಡೆಯಲು ಪ್ರಯತ್ನಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಡುತ್ತಿದ್ದಾರೆ.
ರಾಜಾ:- ಸಭಿಕರೆಲ್ಲರೂ ತಮ್ಮ ತಮ್ಮ ಅಭಿಪ್ರಾಯ ತಿಳಿಸಲಿ.

[ಸಭಿಕರು ತಮ್ಮ ಅಭಿಪ್ರಾಯ ತಿಳಿಸಲು ತಾಮುಂದು ನಾಮುಂದು ಎಂದು ಗದ್ದಲ ಎಬ್ಬಿಸುತ್ತಿದ್ದಾರೆ. ಮಂತ್ರಿ ಅವರಲ್ಲಿ ಶಾಂತಿಯನ್ನು ಉಂಟು ಮಾಡಲು ಹೆಣಗಾಡುತ್ತಿದ್ದಾರೆ]
ಅಂಕ ೪
[ದೇವಲೋಕದಲ್ಲಿ ಎಲ್ಲರೂ ದಂಗು ಬಡಿದು ಭೂ ಲೋಕವನ್ನು ನೋಡುತ್ತಿದ್ದಾರೆ.]
ಈಶ್ವರ:- ಹೀಗೆ ಅಲ್ಲಿ ವಿವಿಧ ಪಕ್ಷಗಳು ಮಾಡುತ್ತಿರುವ ಗಲಬೆ ನಿಮ್ಮ ಕಿವಿಗಳನ್ನು ಹೀಗೆ ರಾಚುತ್ತಿವೆ.
ಇಂದ್ರ:- ಹಾಗಾದರೆ ಇದಕ್ಕೆ ಪರಿಹಾರ?
ಈಶ್ವರ:- ಪರಿಹಾರ ಇದಕ್ಕೆ ಇಲ್ಲವೆ ಇಲ್ಲ. ಅವರು ಹೀಗೆ ಹೋರಾಡುತ್ತಲೇ ಇರುತ್ತಾರೆ. ಒಬ್ಬ ಬಂದರೆ ಅವನ ಕಾಲೆಳೆಯಲು ಮತ್ತೊಬ್ಬ. ಹೀಗೆ ಇದು ಮುಂದುವರೆಯುತ್ತಲೇ ಇರುತ್ತದೆ.
ಪಾರ್ವತಿ:- ಹಾಗಾದರೆ ನಮ್ಮ ಗತಿ?
ಈಶ್ವರ:- ಏನು ಮಾಡುವುದು ದೇವಿ . (ನಿಟ್ಟುಸಿರು) ಆ ಮಾನವರನ್ನು ತಿದ್ದಲು ನಾನಿರಲಿ ಬ್ರಹ್ಮ, ವಿಶ್ಣು ಬಂದರೂ ಸಾದ್ಯವಿಲ್ಲ. ಅದಕ್ಕೆ ಈಗ ನಾನೆ ಒಂದು ಉಪಾಯ ಮಾಡುತ್ತೇನೆ.
ಗಣೇಶ :- ಏನದು?
ಈಶ್ವರ: ನಮ್ಮ ದೇವಲೋಕದ ಸುತ್ತಲೂ ಒಂದು ಸೌಂಡ್ ಪ್ರೂಫ಼ ಗಾಜನ್ನು ಹಾಕಿಸಿ ಬಿದುತ್ತೆನೆ ಆಗ ಆ ಮಾನವರು ಎಷ್ಟೇ ಕಚ್ಚಾಡಿ ಮಡಿದರೂ ನಮಗೆ ಏನು ತೊಂದರೆಯಾಗುವುದಿಲ್ಲ.
ಪಾರ್ವತಿ:- ಹಾಗಾದರೆ ಆ ಮಾನವರ ಗತಿ? ಅವರೂ ನಮ್ಮ ಮಕ್ಕಳೇ ಅಲ್ಲವೆ?
ಷಣ್ಮುಖ:- (ಮುಗುಳು ನಗುತ್ತ) ಅವರವರ ಪಾಪ ಅವರವರಿಗೆ ತಾಯೆ. ಅದಕ್ಕಾಗಿ ನಾವೇಕೆ ಮರುಗಬೇಕು? ಹೊಡೆದಾಡಿ ಸಾಯಲಿ ಬಿಡಿ.
ಗಣೇಶ:- ಹೂಂ. ನಾವು ಕಣ್ಣಿದ್ದೂ ಕುರುಡರಾಗಿ ಕಿವಿಯಿದ್ದೂ ಕಿವುಡರಾಗೊಣ.
ಪಾರ್ವತಿ:- ಅಯ್ಯೊ ಅವರು ನೊಂದರೂ ನಾವೇ ಹೊಣೆಯಲ್ಲವೆ?
ಈಶ್ವರ:- ಚಿಂತೆ ಪ್ರಯೋಜನವಿಲ್ಲ ದೇವಿ. ಈಗ ಲೋಕವೇ ವಿನಾಶದತ್ತ ದಾಪುಗಾಲಿಡುತ್ತಿದೆ ಅವರನ್ನು ಉಳಿಸಲು ಅವರನ್ನು ಹುಟ್ಟಿಸಿದ ಬ್ರಹ್ಮನಿಂದಲೂ ಸಾದ್ಯವಿಲ್ಲ ದೇವಿ. ಹೀಗಾಗಿ ಗಣೇಶ ಹೇಳಿದಂತೆ ನಾವು ಕಣ್ಣು, ಕಿವಿ ಮುಚ್ಚಿ ಕೂರುವುದೇ ಒಳ್ಳೆಯದು.
ಮುಕ್ತಾಯ
ಹೀಗೆ ದೇವಾದಿ ದೇವತಗಳೆಲ್ಲಾ ಈ ಗೋಜಲು ಸರಿಪಡಿಸಲು ಸಾದ್ಯವಿಲ್ಲ ಎಂದು ನಮ್ಮನ್ನು ಕೈ ಬಿಟ್ಟಿದ್ದಾರೆ. ಇನ್ನು ನಮ್ಮ ಮುಂದಿನ ಭವಿಷ್ಯ ಏನು?
************************************************