ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ

ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಾಕೋನಹಳ್ಳಿ ವಿನಯ್ ಮಾಧವ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ : ೨೦೨೨

ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. ೨೫ ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ.

ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಾದಂಬರಿ ‘ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ’. ಒಕ್ಕಲೊಂದರ ಆತ್ಮಕಥೆಯೆಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಲೇಖಕ, ಹಿರಿಯ ಪತ್ರಕರ್ತ ಜೋಗಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕುವೆಂಪು ಅವರ ಕಾನೂರು ಹೆಗ್ಗಡಿತಿ, ರಾವ್ ಬಹಾದ್ದೂರ್ ಬರೆದ ಗ್ರಾಮಾಯಣ, ಶಿವರಾಮ ಕಾರಂತರ ಮರಳಿ ಮಣ್ಣಿಗೆ- ಮುಂತಾದ ಕಾದಂಬರಿಗಳನ್ನು ಓದುತ್ತಿದ್ದಾಗ ಅವು ಕಾಲ್ಪನಿಕವೋ ಕಾದಂಬರಿಕಾರರು ಕಂಡ ಬದುಕಿನ ಚಿತ್ರಣವೋ ಅನ್ನಿಸಿದ್ದುಂಟು. ಅವು ಕಾಲ್ಪನಿಕ ಕೃತಿಗಳು ಅಂತ ಗೊತ್ತಾದ ನಂತರವೂ ಆ ಕಾದಂಬರಿಗಳಲ್ಲಿ ಬರುವ ಪಾತ್ರಗಳು ಮಲೆನಾಡಿಗೋ ಕರಾವಳಿ ತೀರಕ್ಕೋ ಬಯಲುಸೀಮೆಗೋ ಹೋದಾಗ ಎದುರಾಗಿದ್ದೂ ಇದೆ. ಹಾಗೆ ನೋಡಿದರೆ ಕಾದಂಬರಿಗೂ ಜೀವನಚರಿತ್ರೆಗೂ ಅಂಥ ವ್ಯತ್ಯಾಸವೇನೂ ಇಲ್ಲ. ಎಷ್ಟೋ ಕಾದಂಬರಿಗಳು ಲೇಖಕ ಕಂಡ ಬದುಕಿನ ಚಿತ್ರಣವೇ ಆಗಿರುತ್ತವೆ, ಹನೂರು ಕೃಷ್ಣಮೂರ್ತಿಯವರ ಅಜ್ಞಾತನ ಆತ್ಮಚರಿತ್ರೆ, ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ, ಗಜಾನನ ಶರ್ಮರ ಪುನರ್ವಸು, ನಾಗವೇಣಿ ಅವರ ಗಾಂಧಿ ಬಂದ- ಮೊದಲಾದ ಕೃತಿಗಳನ್ನು ಓದಿದಾಗ ಅವು ವಾಸ್ತವ ಮತ್ತು ಕಲ್ಪನೆಯ ಹೊಸಿಲಲ್ಲಿ ಇದ್ದಂತೆ ಅನಿಸುತ್ತವೆ. ಅಷ್ಟಕ್ಕೂ ಲೇಖಕ ಹಿಡಿಯುವುದು ತನ್ನ ಕಾಲವನ್ನೇ ಅಲ್ಲವೇ? ಅಂಥದ್ದರಲ್ಲಿ ವಿನಯ್ ಮಾಧವ್ ಒಂದು ದಿನ 'ನನ್ನ ಕುಟುಂಬದ ಚರಿತ್ರೆಯನ್ನು ಕಾದಂಬರಿಯನ್ನಾಗಿ ಬರೆದಿದ್ದೇನೆ. ಓದಿ ನೋಡಿ' ಎಂದು ಹೇಳಿ ಹಸ್ತಪ್ರತಿಯನ್ನು ಕಳುಹಿಸಿಕೊಟ್ಟರು. ಪತ್ರಕರ್ತರಾಗಿರುವ, ಹಲವಾರು ವರ್ಷ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿರುವ, ರಾಜಕಾರಣದ ಮೊಗಸಾಲೆಗಳಲ್ಲೂ ಅಡ್ಡಾಡಿರುವ ಮತ್ತು ಅಭಯಾರಣ್ಯಗಳಲ್ಲೂ ಆಸಕ್ತಿ ಹೊಂದಿರುವ ವಿನಯ್ ಮಾಧವ್ ಬರೆದ ಎರಡು ಪ್ರಕಟಿತ ಮತ್ತು ಒಂದು ಅಪ್ರಕಟಿತ ಕೃತಿಗಳನ್ನು ಓದಿದ ನನಗೆ ಅವರ ಬರಹಗಳ ರುಚಿ ಗೊತ್ತಿತ್ತು. ಕಲ್ಪನೆ ಮತ್ತು ವಾಸ್ತವವನ್ನು ಹದವಾಗಿ ಬೆರೆಸುವ ವಿನಯ್, ಸಂಕೋಚ ಮತ್ತು ಘನತೆ ಎರಡನ್ನೂ ಬರಹಗಳಲ್ಲಿ ಕಾಯ್ದುಕೊಳ್ಳುವುದು ಕೂಡ ನಾನು ಗಮನಿಸಿದ್ದೆ ಎಂಬುದಾಗಿ ಹೇಳಿದ್ದಾರೆ. ೧೪೦ ಪುಟಗಳ ಈ ಪುಟ್ಟ ಕಾದಂಬರಿಯು ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ.

-ಸಂತೋಷ್ ಕುಮಾರ್, ಸುರತ್ಕಲ್