ಸಿಖ್ಖರ ವೀರ ಗುರು - ತೇಘ ಬಹಾದ್ದೂರ್
ಸಿಖ್ಖರ ಹಾಗೂ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಮತಾಂತರವನ್ನು ಖಂಡಿಸಿ, ಧರ್ಮರಕ್ಷಣೆಗಾಗಿ ತಮ್ಮ ಜೀವವನ್ನೇ ತೆತ್ತ ಹುತಾತ್ಮ ಗುರು ತೇಘ ಬಹಾದ್ದೂರ್. ಸಿಖ್ಖರ ಒಂಬತ್ತನೇಯ ಗುರುಗಳಾದ ಇವರು ಬಹಳಷ್ಟು ತಮ್ಮ ಜೀವಿತಾವಧಿಯಲ್ಲಿ ಲೋಕ ಕಲ್ಯಾಣ ಕೆಲಸಗಳನ್ನು ಮಾಡಿದ್ದಾರೆ. ಇವರು ೧೬೨೧ರ ಎಪ್ರಿಲ್ ೨೧ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದರು. ಇವರ ತಂದೆ ಸಿಖ್ಖರ ಆರನೆಯ ಗುರುಗಳಾದ ಗುರು ಹರಗೋಬಿಂದ ಹಾಗೂ ತಾಯಿ ನಾನಕಿ. ಸಿಖ್ಖರ ಐದನೇಯ ಗುರುಗಳಾದ ಗುರು ಅರ್ಜುನ್ ಇವರ ಅಜ್ಜ. ತೇಘ ಅಥವಾ ತೇಗ್ ಎಂದರೆ ಖಡ್ಗ ಎಂದರ್ಥ. ತಮ್ಮ ಮಗ ಸಾಹಸಿಯಾಗಬೇಕೆಂದು ತಂದೆಯ ಇಚ್ಚೆಯಾಗಿತ್ತು. ಅದಕ್ಕೇ ಅವರು ತಮ್ಮ ಮಗನಿಗೆ ತೇಘ ಬಹಾದ್ದೂರ್ ಎಂದು ನಾಮಕರಣ ಮಾಡಿದರು.
ಸಿಖ್ ಧರ್ಮದ ಸ್ಥಾಪಕರಾದ ಗುರು ನಾನಕರು ತಮ್ಮ ನಾಲ್ಕು ಉದಾಸಿಗಳನ್ನು ಪೂರ್ತಿಗೊಳಿಸಿದ ನಂತರ ಕಿರಾತಪುರದಲ್ಲಿ ಸ್ಥಾಪಿಸಿದ ವಿದ್ಯಾಸಂಸ್ಥೆಯಲ್ಲೇ ತೇಘ ಬಹಾದ್ದೂರ್ ಅವರ ವಿದ್ಯಾಭ್ಯಾಸವು ನಡೆಯಿತು. ಈ ಶಿಕ್ಷಣ ಸಂಸ್ಥೆಯಲ್ಲಿ ಇತಿಹಾಸ, ತತ್ವಜ್ಞಾನ, ಬ್ರಹ್ಮಜ್ಞಾನ, ಪುರಾತನ ಭಾಷೆಗಳ ಜೊತೆಗೆ ಕಡ್ಡಾಯವಾಗಿ ಶಸ್ತ್ರ ಅಭ್ಯಾಸವನ್ನೂ ಕಲಿಯಬೇಕಾಗಿತ್ತು. ಈ ರೀತಿಯ ಶಿಕ್ಷಣವನ್ನು ಪಡೆದು ತೇಘ ಬಹಾದ್ದೂರ್ ಅವರು ಉತ್ತಮ ವಿದ್ವಾಂಸ, ಕವಿ, ಗಮಕಿ ಹಾಗೂ ಕ್ರಾಂತಿಕಾರಿ ಸೇನಾನಿಯಾಗಿ ರೂಪುಗೊಂಡರು.
ಪ್ರತಿಯೊಂದು ಮಗುವಿಗೆ ಮನೆಯೇ ಪಾಠಶಾಲೆಯೆನ್ನುತ್ತಾರೆ. ಅದೇ ರೀತಿ ತೇಘ ಬಹಾದ್ದೂರ್ ಅವರಿಗೆ ಮನೆಯಲ್ಲಿ ಅವರ ತಾಯಿ ನಾನಕಿಯವರು ಮೊದಲ ಗುರುವಾಗಿದ್ದರು. ಜೀವನದಲ್ಲಿ ತೇಘ ಬಹಾದ್ದೂರ್ ಉತ್ತಮ ಸಂತರಾಗಲು ಮಹತ್ತರ ಪಾತ್ರವಹಿಸಿದರು. ಕೊನೆಗೆ ತನ್ನ ಮಗ ಹುತಾತ್ಮನಾದ ಘಟನೆಯನ್ನೂ ಕಣ್ಣಾರೆ ಕಂಡು ಮರುಗಿದರು. ತಾಯಿಯವರ ಜೊತೆಯಲ್ಲಿ ಇವರ ಮೇಲೆ ಪ್ರಭಾವ ಬೀರಿದವರೆಂದರೆ ತಂದೆ ಹರಗೋಬಿಂದರು ಹಾಗೂ ಸಂತ ಮಿಯಾ ಮೀರ್ ಹಾಗೂ ಮೀರ್ ನ ಭಕ್ತೆ ಬೇಬಿ ಕೌಲಾನ್. ಬೇಬಿ ಕೌಲಾನ್ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಗುರು ಹರಗೋಬಿಂದರ ರಕ್ಷಣೆಯಲ್ಲೇ ಕಳೆದರು.
೧೬೪೪ರಲ್ಲಿ ತೇಘ ಬಹಾದ್ದೂರ್ ಅವರ ತಂದೆಯವರು ನಿಧನರಾದರು. ನಂತರ ಇವರು ತಮ್ಮ ಊರಾದ ಕಿರಾತಪುರವನ್ನು ತ್ಯಜಿಸಿ ತಾಯಿ, ಪತ್ನಿ ಗುಜ್ರಿ ಅಥವಾ ಗುಜರಿ ಜೊತೆ ಅಮೃತಸರ ಜಿಲ್ಲೆಯ ಬಕಲಾ ಎಂಬ ಗ್ರಾಮಕ್ಕೆ ಹೋಗಿ ನೆಲೆಸಿದರು. ಈ ಗ್ರಾಮದಲ್ಲಿ ತೇಘ ಬಹಾದ್ದೂರ್ ಅವರು ಸುಮಾರು ೨ ದಶಕಗಳಿಗಿಂತಲೂ ಅಧಿಕ ಕಾಲ ವಾಸ್ತವ್ಯವಿದ್ದರು.
೧೬೬೪ರಲ್ಲಿ ಸಿಖ್ಖರ ಎಂಟನೇ ಗುರುಗಳಾದ ಹರಿ ಕೃಶನರು ದೆಹಲಿಯಲ್ಲಿ ದೇಹ ತ್ಯಾಗ ಮಾಡುವ ಸಂದರ್ಭದಲ್ಲಿ ತಮ್ಮ ಉತ್ತರಾಧಿಕಾರಿಯಾಗುವವರು ಬಕಲಾ ಗ್ರಾಮದಲ್ಲಿದ್ದಾರೆ ಎಂದು ಹೇಳಿದರಂತೆ. ಹಾಗೆ ಬಕಲಾ ಗ್ರಾಮಕ್ಕೆ ಹುಡುಕಿಕೊಂಡು ಬಂದ ಪ್ರಮುಖರಿಗೆ ಸುಮಾರು ೨೦ ಕ್ಕೂ ಅಧಿಕ ಮಂದಿ ತಾವೇ ಹರಿ ಕೃಶನರ ಉತ್ತರಾಧಿಕಾರಿಗಳಾಗುತ್ತೇವೆಂದು ಮುಂದೆ ಬಂದರಂತೆ. ಆದರೆ ಗುರು ಹರಿ ಕೃಶನರು ಪ್ರತಿಪಾದಿಸಿದ ತತ್ವಗಳನ್ನು ಮುಂದುವರೆಸಿಕೊಂಡು ಹೋಗಬಲ್ಲ ಉತ್ತರಾಧಿಕಾರಿ ತೇಘ ಬಹಾದ್ದೂರ್ ಅವರೇ ಎಂದು ಸಿಖ್ಖರ ಪ್ರಮುಖರು ತೀರ್ಮಾನಿಸಿದರು. ಹಾಗೆ ಇವರನ್ನು ಒಂಬತ್ತನೇಯ ಧರ್ಮಗುರುಗಳನ್ನಾಗಿ ಆಯ್ಕೆ ಮಾಡಲಾಯಿತು.
ತೇಘ ಬಹಾದ್ದೂರ್ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮೊಘಲರು ದೇಶವನ್ನಾಳುತ್ತಿದ್ದರು. ಹಿಂದೂ ವಿರೋಧಿ ದೊರೆಯಾದ ಔರಂಗಜೇಬ್ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಸಲುವಾಗಿ ದೇಶದೆಲ್ಲೆಡೆ ಕಾರ್ಯನಿರ್ವಹಿಸುತ್ತಿದ್ದನು. ಈ ವಿಷಯ ತಿಳಿದ ತೇಘ ಬಹಾದ್ದೂರ್ ಅವರು ಧರ್ಮ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಆನಂದಪುರ ಎಂಬ ನಗರವನ್ನು ಕಟ್ಟುವ ಸಂಕಲ್ಪ ಮಾಡಿದರು. ೧೬೭೨ರಲ್ಲಿ ಹತ್ತು ತಿಂಗಳ ಕಾಲ ಅವರು ಮಾಳ್ವಾ ದೇಶದ ಉದ್ದಗಲಕ್ಕೂ ಸಂಚರಿಸಿ ಅಲ್ಲಿಯ ಜನರನ್ನು ಜಾಗ್ರತಗೊಳಿಸಿದರು.
ಔರಂಗಜೇಬನು ತನ್ನ ಸರದಾರರಿಗೆ ಹಿಂದೂಗಳನ್ನು ಸಾಮೂಹಿಕವಾಗಿ ಮತಾಂತರ ಮಾಡಬೇಕೆಂದು ಆಜ್ಞೆ ನೀಡಿದನು. ಈ ಕಾರ್ಯವನ್ನು ಮೊದಲು ಕಾಶ್ಮೀರದಲ್ಲಿ ಪ್ರಾರಂಭಿಸಿ ಎಂದು ಕರೆಕೊಟ್ಟನು. ಕಾಬೂಲ ಮತ್ತು ಕಂದಹಾರಗಳಲ್ಲಿಯ ಅವಿದ್ಯಾವಂತ, ಹಿಂದುಳಿದ ಆದಿವಾಸಿ ಕಾಡುಜನರನ್ನು ಪ್ರಚೋದಿಸಿ, ಆಮಿಶ ತೋರಿಸಿ ಮತಾಂತರಕ್ಕೆ ಒಪ್ಪದ ಹಿಂದೂಗಳ ಮೇಲೆ ಆಕ್ರಮಣ ನಡೆಸುವಂತೆ ಮಾಡುವುದೇ ಔರಂಗಜೇಬನ ಯೋಜನೆಯಾಗಿತ್ತು. ಮನವೊಲಿಕೆಗೆ ಬಗ್ಗದಿದ್ದರೆ ಖಡ್ಗ ತೋರಿಸಿ ಬಲವಂತದಿಂದಲಾದರೂ ಮತಾಂತರ ಮಾಡುವುದು ಅವನ ಉದ್ದೇಶವಾಗಿತ್ತು. ಮತಾಂತರವಾಗಲು ವಿರೋಧಿಸಿದವರನ್ನು ಕೊಂದು ಬಿಡುವಂತೆ ಔರಂಗಜೇಬನು ಆಜ್ಞೆ ನೀಡಿದ್ದ. ಕಾಶ್ಮೀರದ ಸರದಾರನಿಗೆ ಹಿಂದೂಗಳು ಅದರಲ್ಲೂ ಕಾಶ್ಮೀರಿ ಬ್ರಾಹ್ಮಣರನ್ನು ಒಂದೇ ಸಲ ಬಲವಂತವಾಗಿ ಮತಾಂತರ ನಡೆಸುವುದು ಇಷ್ಟವಿರಲಿಲ್ಲ. ಅದಕ್ಕಾಗಿ ಅವನು ಅವರನ್ನು ಕರೆದು ೬ ತಿಂಗಳ ಸಮಯ ನೀಡಿ, ಆ ನಿಗದಿತ ಸಮಯದೊಳಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು ಇಲ್ಲವೇ ಘೋರ ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ಎಚ್ಚರಿಕೆಯನ್ನು ಕೊಟ್ಟ.
ಇದರಿಂದ ಹೆದರಿದ ಕಾಶ್ಮೀರಿ ಬ್ರಾಹ್ಮಣರು ಅಲ್ಲಿಂದ ಹೊರಟು ಅಮರನಾಥಕ್ಕೆ ತೀರ್ಥಯಾತ್ರೆ ಕೈಗೊಂಡು ಕೊನೆಗೆ ಆನಂದಪುರದಲ್ಲಿದ್ದ ಗುರು ತೇಘ ಬಹಾದ್ದೂರ್ ಅವರಲ್ಲಿಗೆ ಬಂದು ತಮ್ಮ ಕರುಣಾಜನಕ ಕಥೆಯನ್ನು ಹೇಳುತ್ತಾರೆ. ಇದನ್ನು ಕೇಳಿದ ಗುರುಗಳು ‘ಸರಿ, ನೀವು ಕಾಶ್ಮೀರಕ್ಕೆ ಮರಳಿ ಹೋಗಿ, ಸರದಾರ ಬಳಿ ಹೀಗೆ ಹೇಳಿ -ಗುರು ತೇಘ ಬಹಾದ್ದೂರ್ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ ನಾವೂ ಸ್ವೀಕರಿಸುತ್ತೇವೆ. ನೀವು ಮೊದಲು ಗುರುಗಳನ್ನು ಮಾತನಾಡಿಸಿ' ಎಂದು ಹೇಳಲು ಹೇಳಿದರು. ಬ್ರಾಹ್ಮಣರು ಕಾಶ್ಮೀರಕ್ಕೆ ಮರಳಿ ಮೊಘಲ್ ಸರದಾರನ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ಔರಂಗಜೇಬ ಕೆಂಡಾಮಂಡಲವಾಗಿ ಕೂಡಲೇ ಗುರು ತೇಘ ಬಹಾದ್ದೂರ್ ಅವರನ್ನು ಬಂಧಿಸಿ ದೆಹಲಿಗೆ ಕರೆತರಲು ಅಪ್ಪಣೆ ಮಾಡಿದ.
ಮೊದಲೇ ಇದರ ಅರಿವಿದ್ದ ತೇಘ ಬಹಾದ್ದೂರ್ ಅವರು ತಮ್ಮ ಮಗನಾದ ಒಂಬತ್ತು ವರ್ಷದ ಗೋಬಿಂದನಿಗೆ ಗುರುಪಟ್ಟವನ್ನು ಕಟ್ಟಿ, ತಮ್ಮ ನಿಕಟವರ್ತಿಗಳ ಜೊತೆ ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ತಾವೇ ದೆಹಲಿಗೆ ಹೋದರೆ ತಮ್ಮ ಗತಿ ಏನಾಗುವುದೆಂಬ ಅರಿವು ಗುರುಗಳಿಗೆ ಗೊತ್ತಿತ್ತು. ಆದರೆ ತಮ್ಮನ್ನು ನಂಬಿದ ಜನರಿಗಾಗಿ ಹುತಾತ್ಮರಾಗುವುದೂ ದೈವೇಚ್ಚೆ ಎಂದು ನಂಬಿದ್ದರು. ದೆಹಲಿ ತಲುಪಿದ ತೇಘ ಬಹಾದ್ದೂರ್ ಹಾಗೂ ಅವರ ಸಂಗಡಿಗರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಅಲ್ಲಿ ವಿವಿಧ ರೀತಿಯ ಆಮಿಷಗಳನ್ನು ತೋರಿಸಿ ಇಸ್ಲಾಂಗೆ ಮತಾಂತರವಾಗುವಂತೆ ಬಲವಂತ ಮಾಡಲಾಯಿತು. ಯಾವುದಕ್ಕೂ ಬಗ್ಗದಿದ್ದಾಗ ಕೊಲ್ಲುವುದಾಗಿ ಹೆದರಿಸಿಯೂ ನೋಡಿದರು. ಗುರುಗಳ ಕಣ್ಣ ಎದುರೇ ಅವರ ಸಂಗಡಿಗರಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು. ಆದರೆ ತೇಘ ಬಹಾದ್ದೂರ್ ಅವರು ಯಾವುದಕ್ಕೂ ಜಗ್ಗಲಿಲ್ಲ. ಅವರ ನಿರ್ಧಾರ ಅಟಲವಾಗಿತ್ತು. ಕೊನೆಗೆ ೧೬೭೫ರ ನವೆಂಬರ್ ೧೧ರಂದು ಔರಂಗಜೇಬನ ಆಜ್ಞೆಯಂತೆ ಸಾವಿರಾರು ಜನರ ಸಮ್ಮುಖದಲ್ಲಿ ತೇಘ ಬಹಾದ್ದೂರ್ ಅವರ ಶಿರವನ್ನು ಕತ್ತರಿಸಿ ಕೊಲ್ಲಲಾಯಿತು. ದೇಹವನ್ನು ಜನರಿಗೆ ನೀಡಿದರೆ ದಂಗೆಯಾಗಬಹುದು ಎಂಬ ಹೆದರಿಕೆಯಿಂದ ದೆಹಲಿಯಲ್ಲೇ ಗೌಪ್ಯವಾಗಿ ಅಂತ್ಯಸಂಸ್ಕಾರ ಮಾಡಲು ಪ್ರಯತ್ನಿಸಿದರು. ಆದರೆ ಗುರುಗಳ ಅನುಯಾಯಿಗಳು ಅವರ ರುಂಡವನ್ನು ತೆಗೆದುಕೊಂಡು ಹೋಗಿ ಆನಂದಪುರದಲ್ಲಿ ಅಂತ್ಯಸಂಸ್ಕಾರ ಮಾಡಿದರು.
ಹಿಂದೂ ಧರ್ಮದ ರಕ್ಷಣೆಗಾಗಿ ಸಿಖ್ಖರ ಗುರು ಒಬ್ಬರು ಬಲಿದಾನಗೈದ ಅಪರೂಪದ ವಿದ್ಯಮಾನವಿದು. ತೇಘ ಬಹಾದ್ದೂರ್ ಅವರ ಶಿರಚ್ಛ್ಹೇದನ ಮಾಡಿದ ದೆಹಲಿಯ ಚಾಂದನೀ ಚೌಕ್ ಸ್ಥಳದ ಬಳಿ ಇರುವ ‘ಶೇಷ್ ಗಂಜ್ ಸಾಹೇಬ' ಗುರುದ್ವಾರ ಕೇವಲ ಸಿಖ್ಖರಿಗೆ ಮಾತ್ರವಲ್ಲ ಹಿಂದೂಗಳಿಗೂ ಪವಿತ್ರವಾದ ಸ್ಥಳ. ತೇಘ ಬಹಾದ್ದೂರ್ ಅವರನ್ನು ‘ಹಿಂದ್ ಕಿ ಚಾದರ್' (ಹಿಂದೂ ಧರ್ಮದ ರಕ್ಷಕ) ಎಂಬ ನಾಮದಿಂದ ಕರೆದು ಈಗಲೂ ಗೌರವಿಸಲಾಗುತ್ತದೆ.
ಇವರ ತ್ಯಾಗ ಹಾಗೂ ಬಲಿದಾನದ ಪರಿಣಾಮವೇ ಮುಂದಿನ ದಿನಗಳಲ್ಲಿ ಗುರು ಗೋಬಿಂದ ಸಿಂಗರು ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಇದರಿಂದ ಮುಸಲ್ಮಾನರು ಭಾರತದ ಮೇಲೆ ದಾಳಿ ಮಾಡುವುದನ್ನು ಬಹುತೇಕ ತಡೆಯಲಾಯಿತಲ್ಲದೇ ಪಂಜಾಬ್ ಪ್ರದೇಶ ಸಿಖ್ಖರ ರಾಜ್ಯವಾಯಿತು. ತಾನು ನಂಬಿದ ತತ್ವ ಸಿದ್ಧಾಂತಗಳಿಗೆ ತಮ್ಮನ್ನು ಅರ್ಪಿಸಿಕೊಂಡು ಹುತಾತ್ಮರಾದ ತೇಘ ಬಹಾದ್ದೂರ್ ಅವರ ಸ್ಮರಣೆಯನ್ನು ಸಿಖ್ಖರು ಈಗಲೂ ಸದಾಕಾಲ ನೆನಪು ಮಾಡಿಕೊಳ್ಳುತ್ತಾರೆ. ತಾವು ಅನುಸರಿಸಿದ ಧರ್ಮ ಹಾಗೂ ಆ ಧರ್ಮದ ರಕ್ಷಣೆಗಾಗಿ ಜೀವ ತೆತ್ತ ಗುರು ತೇಘ ಬಹಾದ್ದೂರ್ ಅವರು ಚರಿತ್ರೆಯಲ್ಲಿ ಸದಾಕಾಲ ಮಹಾನ್ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾರೆ.
ಚಿತ್ರ: ಅಂತರ್ಜಾಲ ತಾಣದ ಕೃಪೆ