ಸಿಟ್ಟು ಬಂದಾಗ ದನಿ ಎತ್ತರವಾಗುವುದೇಕೆ?

ಸಿಟ್ಟು ಬಂದಾಗ ದನಿ ಎತ್ತರವಾಗುವುದೇಕೆ?

ಬರಹ

ಇವೊತ್ತಿನ ಮೆಯ್ಲಲ್ಲಿ ಬಂದ ಒಂದು ಕತೆ.

ಸಂತಗುರುವೊಬ್ಬ ತನ್ನ ಶಿಷ್ಯರನ್ನು ಕೇಳುತ್ತಾನೆ: "ಸಿಟ್ಟು ಬಂದಾಗ ನಾವೇಕೆ ದನಿ ಎತ್ತರಿಸಿ ಕರ್ಕಶವಾಗಿ ಮಾತಾಡುತ್ತೇವೆ?"
ಸ್ವಲ್ಪ ಆಲೋಚನೆಯ ಬಳಿಕ ಶಿಷ್ಯರು ಹೇಳುತ್ತಾರೆ:"ಏಕೆಂದರೆ ಸಿಟ್ಟು ನಮ್ಮ ಶಾಂತಚಿತ್ತವನ್ನು ಕದಡುತ್ತದೆ."
ಗುರು: "ಹೌದು, ಆದರೆ ನಿಮ್ಮ ಪಕ್ಕದಲ್ಲೇ ಇರುವವರೊಡನೆ ಮಾತಾಡಲೂ ದನಿ ಎತ್ತರಿಸಬೇಕೇಕೆ? ಜೋರಾಗಿ ಕೂಗುವುದು ಯಾಕಾಗಿ?"

ಶಿಷ್ಯಂದಿರ ಉತ್ತರಗಳಿಂದ ತೃಪ್ತನಾಗದ ಗುರು ತನ್ನ ವಿವರಣೆಯನ್ನು ಬೋಧಿಸುತ್ತಾನೆ: "ಪರಸ್ಪರರ ಮೇಲೆ ಸಿಟ್ಟು ಮಾಡಿಕೊಂಡಾಗ ಇಬ್ಬರ ಹೃದಯಗಳೂ ದೂರವಾಗುತ್ತವೆ. ಹೃದಯಗಳು ದೂರವಾದಷ್ಟೂ ಆ ದೂರವನ್ನು ಕ್ರಮಿಸಲು ದನಿ ಅಷ್ಟೇ ಎತ್ತರವಾಗಬೇಕಾಗುತ್ತದೆ."

ಇದೇ ತರ್ಕವನ್ನು ಮುಂದುವರಿಸಿದ ಗುರು ಹೇಳುತ್ತಾನೆ: "ಇಬ್ಬರು ಪ್ರೀತಿ ಮಾಡುವಾಗ ಏನಾಗುತ್ತದೆ? ಅವರ ಹೃದಯಗಳು ಹತ್ತಿರವಾಗಿರುತ್ತವೆ, ಆದ್ದರಿಂದ ಮೃದುವಾಗಿ ಮಾತಾಡುತ್ತಾರೆ. ಪ್ರಣಯಿಗಳಲ್ಲಿ ಈ ಪ್ರೀತಿ ಇನ್ನೂ ಹೆಚ್ಚಾಗಿ ಇಬ್ಬರ ಹೃದಯಗಳು ಬಹಳ ಹತ್ತಿರ ಬಂದಾಗ ಅವರ ಮಾತುಗಳು ಪಿಸುಗುಟ್ಟುವ ಮಟ್ಟಕ್ಕೆ ಇಳಿಯುತ್ತವೆ."

ನೀತಿ: ಸಂಪದಿಗರೇ, ಚರ್ಚೆ ಮಾಡುವಾಗ ನಿಮ್ಮ ಹೃದಯಗಳು ದೂರವಾಗದಂತೆ ಎಚ್ಚರವಹಿಸಿರಿ. ಇತರರ ಹೃದಯಗಳು ನಿಮ್ಮಿಂದ ದೂರವಾಗಲು ಕಾರಣರಾಗಬೇಡಿ; ಇಲ್ಲವಾದಲ್ಲಿ ದೂರ ಬಹುದೂರವಾಗಿ ಮರಳಿ ಬಂದು ಒಗ್ಗೂಡಲು ದಾರಿತಪ್ಪಿ ಹೋಗಬಹುದು. ಸಂಪದ ತಾಣದ ದಾರಿಯೂ ಕಾಣದಾಗಬಹುದು.