ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ...?
ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು. ಅಕಾಲದಲ್ಲಿ ಮಳೆಯಾಗುವ ಸಂದರ್ಭದಲ್ಲಿ ಗುಡುಗು - ಮಿಂಚು ಅಧಿಕ. ಆ ಸಮಯದಲ್ಲಿ ರಕ್ಷಣೆ ಹೇಗೆ...?
* ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ. ನಿಲ್ಲ ಬೇಡಿ.
* ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
* ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು. (ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)
* ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ ಇಳಿರಿ. ಏಕೆಂದರೆ ಎತ್ತರದ ಪ್ರದೇಶಗಳು ಮಿಂಚನ್ನು ಬಹುಬೇಗನೇ ಆಕರ್ಷಿಸುತ್ತವೆ.
* ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಹೆಚ್ಚು ಆಕರ್ಷಿಸುತ್ತದೆ.
* ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ. ನೀರು ಮಿಂಚನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
* ವಿದ್ಯುತ್ ಕಂಬ, ಇಲೆಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.
* ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ ಇವುಗಳಿಂದ ದೂರವಿರಿ. ಇವುಗಳು ಮಿಂಚನ್ನು ಬಹುಬೇಗನೇ ಆಕರ್ಷಿಸುತ್ತವೆ.
* ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.
* ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
* ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ.
* ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
* ಕಂಪ್ಯೂಟರ್ ಗಳಿಂದ ದೂರ ಇರಿ. ಟಿವಿ, ಫ್ರಿಡ್ಜ್, ಕೇಬಲ್ ಮೊದಲಾದ ವಸ್ತುಗಳನ್ನು ಬಳಸಬೇಡಿ. ಅವುಗಳ ವಿದ್ಯುತ್ ಸಂಪರ್ಕವನ್ನು ತಪ್ಪಿಸುವುದು ಉತ್ತಮ.
* ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪರ್ಶಿಸದೆ ಕೋಣೆಯ ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.
(ಮಾಹಿತಿ: ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಕಂದಾಯ ಇಲಾಖೆಯ ಪ್ರಕಟಣೆ)