ಸಿದ್ದು, ಡಿಕೆಶಿ ಆಡಳಿತ ಮೇಲೆ ಕರುನಾಡಿಗೆ ಅಪಾರ ನಿರೀಕ್ಷೆ

ಸಿದ್ದು, ಡಿಕೆಶಿ ಆಡಳಿತ ಮೇಲೆ ಕರುನಾಡಿಗೆ ಅಪಾರ ನಿರೀಕ್ಷೆ

ಆರು ದಿನಗಳ ನಿರಂತರ ಸಮಾಲೋಚನೆ ಬಳಿಕ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧಾರ ತೆಗೆದುಕೊಂಡಿದೆ. ಆ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸುವಲ್ಲಿ ಸಫಲತೆಯನ್ನು ಕಂಡಿದೆ. ಇಬ್ಬರೂ ಶನಿವಾರ (ಮೇ ೨೦) ಮಧ್ಯಾಹ್ನ ೧೨.೩೦ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲಿಗೆ ಕರ್ನಾಟಕ ಸರ್ಕಾರ ರಚನೆ ಪ್ರಕ್ರಿಯೆ ಮಹತ್ತರ ಘಟ್ಟ ತಲುಪಿದಂತಾಗಿದೆ. ಆದರೆ ಕಳೆದೊಂದು ವಾರದಿಂದ ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ರೇಸಿಗಿಳಿದು, ರಾಷ್ಟ್ರಮಟ್ಟದ ಸುದ್ದಿಯಾದರು. ಕರ್ನಾಟಕ ಚುನಾವಣೆಯನ್ನು ಗೆದ್ದದ್ದಕ್ಕಿಂತ ಕಾಂಗ್ರೆಸಿಗೆ ಮುಖ್ಯಮಂತ್ರಿ ಹುದ್ದೆ ಆಯ್ಕೆ ಪ್ರಕ್ರಿಯೆಯೇ ಕಷ್ಟವಾಯಿತು ಎಂಬೆಲ್ಲಾ ಟೀಕೆಗಳು ಕೇಳಿ ಬಂದವು. ಈಗ ಬರುತ್ತಿರುವ ಮಾಧ್ಯಮಗಳ ವರದಿ ಪ್ರಕಾರ, ಸಿದ್ಧರಾಮಯ್ಯ-ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯಾಗಿದೆಯಂತೆ. ಆದರೆ ಕಾಂಗ್ರೆಸ್ ಅಧಿಕೃತವಾಗಿ ಧೃಢಪಡಿಸಿಲ್ಲ. ಯಾವಿದೇ ಪಕ್ಷವಾದರೂ ಇದನ್ನು ಬಹಿರಂಗವಾಗಿ ಖಚಿತಪಡಿಸುವುದೂ ಇಲ್ಲ. ಇದೆಲ್ಲಾ ಆಂತರಿಕ ವ್ಯವಹಾರ. ಒಬ್ಬ ನಾಯಕ ಕೆಲವೇ ತಿಂಗಳು ಅಥವಾ ವರ್ಷದವರೆಗೆ ಸಿಎಂ ಆಗಿರುತ್ತಾನೆ ಎಂಬ ವಿಷಯ ಹೊರಬಿದ್ದರೆ, ಅದರಿಂದ ಆಡಳಿತ ಯಂತ್ರದ ಮೇಲೆ ಪರಿಣಾಮವಾಗುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣ.

೨ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವ ಸಿದ್ಧರಾಮಯ್ಯ ಅವರಿಗೆ ಅಪಾರ ಅನುಭವವಿದೆ. ಡಿ ಕೆ ಶಿವಕುಮಾರ್ ಮೊದಲ ಬಾರಿ ಡಿಸಿಎಂ ಆಗುತ್ತಿದ್ದರೂ ಅನುಭವಿಗಳು. ಇಬ್ಬರೂ ಜತೆಗೂಡಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕರ್ನಾಟಕವನ್ನು ಪ್ರಗತಿ ಪಥದ ಕಡೆಗೆ ಒಯ್ಯಬಹುದು ಎಂಬ ಸಹಜ ನಿರೀಕ್ಷೆ ಜನಸಾಮಾನ್ಯರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ೫ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ರಾಜ್ಯ ಎದುರು ನೋಡುತ್ತಿದೆ. ಹಲವೆಡೆ ಜನರು ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆ ನಂಬಿ ವಿದ್ಯುತ್ ಶುಲ್ಕ ಕಟ್ಟಲು ನಿರಾಕರಿಸುತ್ತಿದ್ದಾರೆ ಎಂಬ ವರದಿ ಬರುತ್ತಿವೆ. ಇದನ್ನು ನಿಭಾಯಿಸುವ ಸವಾಲು ಇಬ್ಬರ ಮೇಲೂ ಇದೆ. ಸಿದ್ಧರಾಮಯ್ಯ-ಶಿವಕುಮಾರ್ ಇಬ್ಬರೂ ಬಲಾಢ್ಯ ನಾಯಕರು. ಇಬ್ಬರೂ ಅಧಿಕಾರದ ಉನ್ನತ ಹುದ್ದೆಯಲ್ಲಿರುವುದರಿಂದ ಎರಡು ಅಧಿಕಾರ ಕೇಂದ್ರಗಳು ಸ್ಥಾಪನೆಯಾಗಿ, ಹೊಂದಾಣಿಕೆಯ ಕೊರತೆ ಸೃಷ್ಟಿಯಾಗಬಹುದು. ಸರ್ಕಾರ ನಡೆಸುವ ಜತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗುವುದೇ ಇಬ್ಬರ ಮೇಲಿರುವ ಮತ್ತೊಂದು ಸವಾಲು. ಕರ್ನಾಟಕದ ಕಾಂಗ್ರೆಸ್ ಗೆಲುವನ್ನು ಇಡೀ ದೇಶವೇ ಬದಲಾವಣೆಯ ಪರ್ವದಂತೆ ಕಾಣುತ್ತಿದೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ಇಬ್ಬರ ಮೇಲಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೯-೦೫-೨೦೨೩