ಸಿನಿಮಾ ನಿರ್ಮಾಣದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ...

ಸಿನಿಮಾ ನಿರ್ಮಾಣದಲ್ಲಿನ ಬದಲಾವಣೆಗಳನ್ನು ಗಮನಿಸಿದಾಗ...

ಹಿಂದೆ, ಮೊದಲು ಕಥೆ - ಚಿತ್ರಕಥೆ - ಸಂಭಾಷಣೆ - ಗೀತ ಸಾಹಿತ್ಯ - ಹೆಸರು ಎಲ್ಲವೂ ಸಿದ್ಧವಾದ ನಂತರ ಪಾತ್ರವರ್ಗ, ತಂತ್ರಜ್ಞರು ಮುಂತಾದ ಆಯ್ಕೆಗಳು ನಡೆಯುತ್ತಿದ್ದವು.

ಈಗ, ಮೊದಲು ನಾಯಕನ ಅನುಮತಿ, ಕೆಲವೊಮ್ಮೆ ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ, ನಾಯಕ ಮತ್ತು ಶೀರ್ಷಿಕೆಗೆ ಹೊಂದುವ ಕಥೆ, ನಾಯಕನ ಇಮೇಜ್ ಗೆ ತಕ್ಕಂತೆ ಚಿತ್ರಕಥೆ ಸಂಭಾಷಣೆ, ನಾಯಕನ ಇಚ್ಛೆಗೆ ತಕ್ಕಂತೆ ನಾಯಕಿ ಮತ್ತು ಇತರ ಪಾತ್ರಗಳು, ಸಂಗೀತ ಮತ್ತು ಅದಕ್ಕೆ ಅನುಗುಣವಾಗಿ ಗೀತ ಸಾಹಿತ್ಯ ಹೀಗೆ ಸಂಪೂರ್ಣವಾಗಿ ಬದಲಾಗಿರುವುದನ್ನು ಗಮನಿಸಬಹುದು.

ಬದಲಾವಣೆ ಜಗದ ನಿಯಮ. ಅದನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ ಬದಲಾವಣೆಗಳು ಆ ಕ್ಷೇತ್ರದ ಮೂಲ ಆಶಯಕ್ಕೆ ಧಕ್ಕೆ ತರಬಾರದು ಅಥವಾ ಅದಕ್ಕೆ ವಿರುದ್ಧ ಆಗಬಾರದು. ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆ, ರಾಜಕೀಯ, ಧರ್ಮ, ಭಾಷೆ ಯಾವುದೇ ಇರಲಿ ಬದಲಾವಣೆ ಅನುಭವದ ಆಧಾರದಲ್ಲಿ ಪ್ರಗತಿಗೆ ಪೂರಕವಾಗಿ ನಾಗರಿಕತೆಯ ಬೆಳವಣಿಗೆಗೆ ಅನುಕೂಲಕರವಾಗಿರಬೇಕು. ಇಲ್ಲದಿದ್ದರೆ ಅದರ ಮೂಲ ಸ್ವರೂಪವೇ ಬದಲಾಗಿ ಅನಾಗರಿಕ ಜೀವನದ ಕಡೆ ಸಾಗಿ ಮುಂದಿನ ಪೀಳಿಗೆಗೆ ಅಪಾಯಕಾರಿಯಾಗುವ‌ ಸಾಧ್ಯತೆ ಇದೆ.

ಸಿನಿಮಾ ಒಂದು ಕಲೆ ಉದ್ಯಮ ಮನರಂಜನೆ ವೃತ್ತಿ ಎಲ್ಲವೂ ಆಗಿದೆ. ಇದರಲ್ಲಿ ಆಗುವ ಬದಲಾವಣೆಗಳು ಈ ಅಂಶಗಳಿಗೆ ಪೂರಕವಾಗಿರಬೇಕೆ ಹೊರತು ಕೇವಲ ಜನಪ್ರಿಯತೆಯ ಆಧಾರದಲ್ಲಿ ಹಣವೇ ಮುಖ್ಯವಾಗಿ ಅದಕ್ಕೆ ತಕ್ಕಂತೆ ಬದಲಾವಣೆಗಳಾದರೆ ಇಡೀ ವ್ಯವಸ್ಥೆಯೇ ಕುಸಿಯುತ್ತದೆ.

ಚಿತ್ರರಂಗ ವೇಗವಾಗಿ ಮತ್ತು ವ್ಯಾಪಕವಾಗಿ ಬೆಳೆಯುತ್ತಿರುವುದು ನಿಜ. ತಂತ್ರಜ್ಞಾನದಲ್ಲಿ, ವಸ್ತು ವಿಷಯಗಳಲ್ಲಿ, ನಿರೂಪಣೆಯಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಆಗುತ್ತಿವೆ. ಇಂತಹ ಸಂದರ್ಭದಲ್ಲಿ ಕ್ಷಣಿಕ ಲಾಭದ ದುರಾಸೆಯಿಂದ ಟಿವಿ ಮತ್ತು ‌ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ನಿರ್ಮಾಣ ವಿಧಾನವನ್ನೇ ಬದಲಾಯಿಸಿ ಮನಸ್ಸಿಗೆ ಬಂದಂತೆ ನಿರ್ಮಿಸಿದರೆ ಅದರ ದುಷ್ಪರಿಣಾಮ ಮುಂದಿನ ದಿನಗಳಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.

ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ರಾಜಕೀಯ ಶಿಕ್ಷಣ ಪತ್ರಿಕೋದ್ಯಮ ವೈದ್ಯಕೀಯ ಹೇಗೆ ತನ್ನೆಲ್ಲಾ ಮೂಲ ಆಶಯಗಳನ್ನು ಮರೆತು ಅದಕ್ಕೆ ವಿರುದ್ಧವಾಗಿ ತನ್ನ ಸ್ವಾರ್ಥ ಸಾಧನೆಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಜನಪ್ರಿಯತೆಗಾಗಿ ಏನೆಲ್ಲಾ ತಂತ್ರಗಳನ್ನು ಅಳವಡಿಸಿಕೊಂಡು ಈಗ ಜನರಿಗೆ ಮಾರಕವಾಗಿ ಪರಿಣಮಿಸಿದೆ ಎಂಬುದನ್ನು ಗಮನಿಸಿದಾಗ ಚಿತ್ರರಂಗದ ನಿರ್ಮಾಣದಲ್ಲಿ ಆಗುತ್ತಿರುವ ಬದಲಾವಣೆಗಳು ಅದರ ಅಂತಃಸತ್ವವನ್ನೇ ಹೀರಿ ಸಮಾಜಕ್ಕೆ ಮುಖ್ಯವಾಗಿ ಯುವ ಪೀಳಿಗೆಗೆ ತಪ್ಪು ಸಂದೇಶ ನೀಡಿ ಕ್ರಿಯಾತ್ಮಕತೆಗಿಂತ ಕೃತಕ ಯಶಸ್ಸೇ ದೊಡ್ಡದು ಎಂಬ ಮನೋಭಾವನೆ ಬೆಳೆಸುತ್ತದೆ. ಈಗಾಗಲೇ ಇದು ಜಾರಿಯಲ್ಲಿದೆ. ಕನಿಷ್ಠ ಮುಂದಿನ ದಿಗಳಲ್ಲಾದರೂ ಬದಲಾವಣೆ ಉತ್ತಮ ದಿಕ್ಕಿನತ್ತ ಸಾಗಲಿ ಎಂದು ಆಶಿಸುತ್ತಾ.....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 261 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಿಂದ ಸುಮಾರು 25 ಕಿಲೋಮೀಟರ್ ದೂರದ ಕೆರೆಕಟ್ಟೆ ಗ್ರಾಮ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಬರೆದ ಬರಹ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ