ಸಿನಿಲೋಕ 21

ಸಿನಿಲೋಕ 21

ಪುಸ್ತಕದ ಲೇಖಕ/ಕವಿಯ ಹೆಸರು
ಎ ಎನ್ ಪ್ರಸನ್ನ
ಪ್ರಕಾಶಕರು
ಪಾಂಚಜನ್ಯ ಪ್ರಕಾಶನ, ಕಳಂಜ ಗ್ರಾಮ, ಸುಳ್ಯ-೫೭೪ ೨೧೨
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೩

‘ಸಿನಿ ಲೋಕ ೨೧’ ಪುಸ್ತಕವು ಇಪ್ಪತ್ತೊಂದನೇ ಶತಮಾನದ ಆಯ್ದ ಜಾಗತಿಕ ಶ್ರೇಷ್ಟ ಚಲನಚಿತ್ರಗಳ ವಿಶ್ಲೇಷಣಾತ್ಮಕ ಲೇಖನಗಳ ಸಂಕಲನವಾಗಿದೆ. ಎ.ಎನ್.ಪ್ರಸನ್ನ ಈ ಕೃತಿಯ ಲೇಖಕರು. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಇವರು. ತಮ್ಮ ಮುನ್ನುಡಿಯಲ್ಲಿ ಅವರು ಮರೆದ ನುಡಿಗಳು ಹೀಗಿವೆ...

“ಸಿನಿಲೋಕ-21 ಕೃತಿಯು ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತ ಲೇಖನ ಮಾಲೆ. ಇಪ್ಪೊತ್ತೊಂದನೆ ಶತಮಾನದ ಈ ಸಿನಿಮಾಗಳು ಇತ್ತೀಚಿನ ಹೊಸ ಅನ್ವೇಷಣೆಯಾದ ಡಿಜಿಟಲ್‌ ತಂತ್ರಗಳ ಬಳಕೆಯಿಂದಾಗಿ ಮಾತ್ರ ಭಿನ್ನವಾಗಿಲ್ಲ, ಬದುಕನ್ನು ದಾಖಲಿಸುವ ಭಿನ್ನ ಮಾದರಿಯಾಗಿಯೂ ವಿಶಿಷ್ಟವಾಗಿದೆ. ಕಳೆದ ಶತಮಾನದ ಎರಡನೆ ದಶಕದಲ್ಲಾದ ರಷ್ಯಾದ ಕ್ರಾಂತಿಯು ಸೋವಿಯತ್‌ ಸಿನಿಮಾದ ಗತಿ ತಾರ್ಕಿಕ ಕಟ್ಟುವಿಕೆಗೆ ಕಾರಣವಾದರೆ, ಫ್ಯಾಸಿಸಂ ಬೆಳವಣಿಗೆಯ ಮುನ್ಸೂಚನೆಯಾಗಿ ಮೂರನೆಯ ದಶಕದಲ್ಲಿ ಜರ್ಮನ್‌ ಎಕ್ಸಪ್ರೆಷನಿಸಂ ಹುಟ್ಟಿಗೆ ಕಾರಣವಾಯಿತು. ನಲವತ್ತರ ದಶಕದಲ್ಲಿ ಸಿನಿಮಾ ಭಾಷೆಯಲ್ಲಿನ ಹೊಸ ದೃಶ್ಯಬಿಂಬನ ಕ್ರಮವಾದ ನವವಾಸ್ತವವಾದ(ನಿಯೋರಿಯಲಿಸಂ) ಶೈಲಿಯ ಹುಟ್ಟಿಗೆ ದ್ವಿತೀಯ ಮಹಾಯುದ್ಧವು ಕಾರಣವಾದರೆ, ಅರವತ್ತರ ದಶಕದಲ್ಲಿ ಎಲ್ಲೆಡೆ ಹರಡಿದ ಮನುಷ್ಯನ ಅಸ್ಮಿತೆಯ ಹುಡುಕಾಟವು ಫ್ರೆಂಚ್ ನ್ಯೂ ವೇವ್ ಗೆ ಮೂಲವಾಯಿತು. ಎಂಬತ್ತರ ದಶಕದಲ್ಲಿ ತೃತೀಯ ಜಗತ್ತಿನ ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ಮೂರನೇ ಜಗತ್ತಿನ ರಾಜಕೀಯ ಸಿನಿಮಾಗಳ ಪಂಥಕ್ಕೆ ಅಡಿಪಾಯ ಹಾಕಿತು. ಅವುಗಳ ಮುಂದುವರಿಕೆಯಾಗಿ ಇಪ್ಪತ್ತೊಂದನೇ ಶತಮಾನದ ಚಿತ್ರಗಳು ತನ್ನ ಕ್ಷೇತ್ರದಲ್ಲಾದ ಡಿಜಿಟಲ್ ಬೆಳವಣಿಗೆಯನ್ನು ಬಳಸಿಕೊಂಡು ಮನುಕುಲದ ಹೊಸಾ ಬಿಕ್ಕಟ್ಟುಗಳನ್ನು ಅನನ್ಯವಾದ ಸಿನಿಮಾಭಾಷೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಹೊಸ ಸಿನಿಮಾ ಪರಿಭಾಷೆಯನ್ನು ಹುಟ್ಟುಹಾಕುತ್ತಿವೆ. ಎ. ಎನ್. ಪ್ರಸನ್ನ ಅವರು ಈ ಬೆಳವಣಿಗೆಯ ಪೂರ್ವಾಪರವನ್ನು ಕೆಲವು ವಿಶಿಷ್ಟ ಸಿನಿಮಾ ಕೃತಿಗಳ ಮೂಲಕ ಅರ್ಥೈಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ.

ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಸಿನಿಮಾ ಇನ್ನೂ ಹರೆಯದಲ್ಲಿದೆ. ಕೇವಲ ನೂರಾಮೂವತ್ತು ವರ್ಷಗಳ ಪರಂಪರೆ ಇರುವ ಈ ಮಾಧ್ಯಮವು ಪ್ರತಿ ಹದಿನೈದು-ಇಪ್ಪತ್ತು ವರ್ಷಗಳಿಗೊಮ್ಮ ಭಾಷೆ-ಸಂವಹನ ಕುರಿತ ಚಿಂತನೆಗಳನ್ನು ಪರಿಷ್ಕರಿಸುತ್ತಾ, ಅವುಗಳಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಹೊಸದಾಗಿ ರೂಪಿಸುತ್ತಾ ಸಾಗಿದೆ. ಅದರ ಜೊತೆಗೇ ಉಳಿದ ಮಾಧ್ಯಮಗಳ ಜೊತೆ ಅನುಸಂಧಾನ ನಡೆಸುತ್ತಾ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳತ್ತಾ ಸಾಗಿದೆ. ಪ್ರಧಾನವಾಹಿನಿಯ ಸಿನಿಮಾಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕನನ್ನು ಸೆರೆದಿಟ್ಟುಕೊಳ್ಳಲು ಹೊಸ ಹೊಸ ತಂತ್ರಗಳನ್ನು, ಆಕರ್ಷಣೆಗಳನ್ನು ಬಳಸತೊಡಗಿದರೆ, ಉಪವಾಹಿನಿಯಲ್ಲಿ ಸಾಗುತ್ತಿರುವ ಕೆಲವರು ತಮ್ಮ ರಾಜಕೀಯ ಚಿಂತನೆಗಳನ್ನು, ತಾತ್ವಿಕ ನೆಲೆಗಳನ್ನು, ದರ್ಶನವನ್ನು ಹಂಚಿಕೊಳ್ಳಲು ಹೊಸ ಅಭಿವ್ಯಕ್ತಿ ಕ್ರಮವನ್ನು ಬಳಸತೊಡಗಿದ್ದಾರೆ. ಇನ್ನೂ ಕೆಲವರು ಪ್ರೇಕ್ಷಕರ ಗ್ರಹಣಗುಣವನ್ನು ಧ್ಯಾನಸ್ಥ ನೆಲೆಗೆ ಏರಿಸುವ ಪ್ರಯತ್ನ ಮಾಡುತ್ತಾ ಸಿನಿಮಾದಲ್ಲಿ ಸಂವಹನ ಶಕ್ತಿಯನ್ನು ಹರಿತಗೊಳಿಸುತ್ತಿದ್ದಾರೆ.

ಇಪ್ಪತ್ತನೆಯ ಶತಮಾನದ ಅಂತ್ಯ, ಇಪ್ಪತ್ತೊಂದನೆಯ ಆರಂಭ ಒಂದು ಸಮಸ್ಯಾತ್ಮಕ ತಿರುವು ಪಡೆದ ಕಾಲ. ಎಲ್ಲ ರೀತಿಯ ಪರ‍್ಯಾಯ ಚಿಂತನೆಗಳೂ ಬದಿಗೆ ತಳ್ಳಲ್ಪಟ್ಟು, ಗ್ರಾಹಕ ಸಂಸ್ಕೃತಿಯೊಂದೇ ಮುನ್ನೆಲೆಗೆ ಬರತೊಡಗಿದ ಕಾಲ. ತನ್ನ ವೈಯಕ್ತಿಕ ದರ್ಶನ ಹಂಚಿಕೊಳ್ಳುವುದಕ್ಕೆ, ನಿಕಷಕ್ಕೆ ಒಡ್ಡುವುದಕ್ಕೆ, ಸಿನಿಮಾ ಸಂಸ್ಕೃತಿಯನ್ನು ಬಳಸಿಕೊಳ್ಳುತ್ತಿದ್ದ ನಿರ್ದೇಶಕರಂತೂ ನಿಬ್ಬೆರಗಾದ ಕಾಲ. ಈ ಸುನಾಮಿ ಅಲೆಯಲ್ಲಿ ಕೊಚ್ಚಿಹೋಗಿ, ನಿರ್ದಿಷ್ಟ ಕಾಲ, ದೇಶಗಳ ಹಂಗಿಲ್ಲದೇ, ಸಮುದಾಯದ ಒಳತಿನ ಬಗ್ಗೆ ಕಾಳಜಿ ಇಲ್ಲದೇ, ಲಾಭದ ಬಗ್ಗೆ ಮಾತ್ರ ಗಮನವಿಟ್ಟು ಸಿನಿಮಾ ನಿರ್ಮಾಣಕ್ಕೆ ಇಳಿವ, ಬಹು ಬಂಡವಾಳ ಸುರಿಯುವ ಚಿತ್ರ

ನಿರ್ಮಾಪಕರ ಹಾಗೂ ಬಹುರಾಷ್ಟ್ರೀಯ ಚಿತ್ರ ನಿರ್ಮಾಣ ಸಂಸ್ಥೆಗಳು ಒಡ್ಡುವ ಆಮಿಷಕ್ಕೆ ಸಿಲುಕಿ ತೇಲಿ ಹೋದವರ ಸಂಖ್ಯೆಯೇ ಜಾಸ್ತಿ. ತನ್ನತನದ ಬಣ್ಣ, ರುಚಿ, ವಾಸನೆ, ಚಹರೆ ಕಳೆದುಕೊಂಡ ಇಂತಹ ಚಿತ್ರಗಳಿಗೆ ವ್ಯಾಪಕ ಪ್ರಚಾರ ಕೂಡ ಮಾಡುವ ಕಾರ್ಪೊರೇಟ್ ಹಾಗೂ ಸತ್ತೆಯ ಹುನ್ನಾರವೂ ಸೇರಿದಾಗ ಚಿತ್ರಗಳು ಸಪಾಟಾಗಿ, ಏಕರೂಪ ಪಡೆಯುವತ್ತ ಹೆಜ್ಜೆ ಹಾಕತೊಡಗಿದ್ದು ದೊಡ್ಡ ದುರಂತ. ಇಂತಹ ದುರಿತ ಕಾಲದಲ್ಲಿ ಪ್ರವಾಹದ ವಿರುದ್ಧ ಈಜಾಡುವ ಸಾಹಸ ಮಾಡುವವರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಾ ಇರುವುದು ಸಂತಸದ ವಿಷಯ. ಉದ್ಯಮದ ಹಿಡಿತ ಬಲವಾದಷ್ಟೂ ಅದನ್ನು ವಿರೋಧಿಸುವ, ಪ್ರತಿರೋಧ ವ್ಯಕ್ತಪಡಿಸುವ ಹಲವು ಅನ್ಯ ಮಾರ್ಗಗಳನ್ನು, ಭಿನ್ನರೀತಿಯ ಅಭಿವ್ಯಕ್ತಿ ಕ್ರಮಗಳನ್ನು ಕಂಡುಕೊಳ್ಳುತ್ತಾ ಹೋದ ನಿರ್ದೇಶಕರ ಕಾಣಿಕೆ ಅಮೋಘ. ಎ. ಎನ್. ಪ್ರಸನ್ನರವರು ಆರಿಸಿದ ಈ ನಲವತ್ತು ಚಿತ್ರಗಳು ಅಂತಹ ಪ್ರಯತ್ನಗಳ ಪರಿಚಯವಾಗಿದೆ.

ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ‍್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ. ಇವು ಮಂದಗತಿಯ ಚಿತ್ರಗಳಲ್ಲ, ಮಂದಶೈಲಿಯ ಚಿತ್ರಗಳು. ಧಾವಂತದ ಇಂದಿನ ಬದುಕಿನಲ್ಲಿ ಘಟನೆಗಳನ್ನು, ವಿವರಗಳನ್ನು ಗಮನಿಸಲೇ ಅಸಾಧ್ಯವಾದ ಇಂದಿನ ದಿನಗಳಲ್ಲಿ ಘಟನೆಗಳನ್ನೆ ಮಂದ ಶೈಲಿಯಲ್ಲಿ ಚಿತ್ರಿಸಿ, ಧ್ಯಾನಸ್ಥ ಸ್ಥಿತಿಯಲ್ಲಿ ವಿಷಯ ಗ್ರಹಿಸುವಂತೆ ಮಾಡುವುದು ಈ ಶೈಲಿಯ ಹೆಗ್ಗಳಿಕೆ. ಇಪ್ಪತ್ತನೆಯ ಶತಮಾನದಲ್ಲಿ ಕಾರ್ಲ್‌ ಡ್ರೈಯರ್‌, ರಾಬರ್ಟ್ ಬ್ರೆಸ್ಸೋನ್, ತಾರ್ಕೋವಸ್ಕಿ ಮುಂತಾದ ಕೆಲವರೇ ಬಳಸಿದ ಈ ಶೈಲಿಯಲ್ಲಿ ಇತ್ತೀಚಿಗೆ ಅನೇಕ ಚಿತ್ರಗಳು ತಯಾರಾಗುತ್ತಿದ್ದು, ಬಹು ಪ್ರಭಾವ ಬೀರುತ್ತಿರುವ ಹೊಸಾ ಶೈಲಿಯಾಗಿದೆ. ಮೆಕ್ಸಿಕೋದ ಕಾರ್ಲೋಸ್‌ ರೆಗೆಡೋಸ್‌, ಫಿಲಿಪೈನ್ಸ್ ದೇಶದ ಲವ್‌ ಡಯಾಸ್, ಮಲೇಷಿಯಾ ಸಂಜಾತ ತೈವಾನ್‌ನ ತ್ಸಾಯಿ ಮಿಂಗ್‌ ಲಿನ್ ರ ಚಿತ್ರಗಳಲ್ಲಿ ಇವನ್ನು ಕಾಣಬಹುದು. ಹಾಗೆಯೇ ಭಾರತವೂ ಸೇರಿದಂತೆ ಈ ಶೈಲಿಯನ್ನು ಬಳಸುತ್ತಿರುವ ಚಿತ್ರ ನಿರ್ದೇಶಕರು ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟವಾದ ಚಿತ್ರಗಳಿಂದ ಪ್ರಭಾವ ಬೀರುತ್ತಿದ್ದಾರೆ.

ಕೆ.ಪಿ.ಟಿ.ಸಿ.ಎಲ್ ನಲ್ಲಿ ಅಭ್ಯಂತರರಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಎ. ಎನ್‌. ಪ್ರಸನ್ನರವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಮಕ್ಕಳ ಸಾಹಿತ್ಯದ ಅಧ್ವರ್ಯರಾಗಿ ಸಾಹಿತ್ಯ ಕೃಷಿ ಮಾಡುತ್ತ ಬಂದವರು. ಇತ್ತೀಚಿನ ಕೆಲವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲೂ ಕೃಷಿ ಮಾಡುತ್ತಿದ್ದಾರೆ. ಸ್ವತ: ಚಿತ್ರ ನಿರ್ದೇಶನ, ದೂರದರ್ಶನ ಧಾರಾವಾಹಿಯೂ ಮಾಡುತ್ತಾ ಗಣನೀಯ ಸೇವೆ ನೀಡಿದ್ದಾರೆ. ಸಿನಿಮಾ ಕುರಿತಾಗಿ ಅವರು ಬರೆದ ನಾಲ್ಕನೆಯ ಪುಸ್ತಕವಿದು. ಪ್ರಸ್ತುತ ಈ ಪುಸ್ತಕವು ಇಪ್ಪತ್ತೊಂದನೆಯ ಶತಮಾನದ ಈ ಮೊದಲೆರಡು ದಶಕಗಳಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾದ ಸಿನಿಮಾಗಳಲ್ಲಿ ಮುಖ್ಯವಾದ ನಲವತ್ತು ಕೃತಿಗಳನ್ನು ಸಮರ್ಥವಾಗಿ ಕನ್ನಡಿಗರಿಗೆ ಪರಿಚಯಿಸುತ್ತದೆ. ಇಂಗ್ಲಿಷಿನಲ್ಲಿ ವಿಕಿಪೀಡಿಯಾ, ಐ.ಎಂ.ಡಿ.ಬಿ ಮೊದಲಾದ ಜಾಲತಾಣಗಳು ಮಾಡುತ್ತಿರುವ ಕೆಲಸವನ್ನು ಕನ್ನಡದಲ್ಲಿ ಆರಂಭಿಸಿದ ಸಾಧನೆ ಈ ಕೃತಿಯದು. ಅದಕ್ಕಾಗಿ ಪ್ರಸನ್ನ ಅವರನ್ನು ಅಭಿನಂದಿಸುತ್ತೇನೆ. ಸುಮಾರು ನಾಲ್ಕು ದಶಕಗಳ ಒಡನಾಟ, ಸ್ನೇಹ ನಮ್ಮದು. ನನಗೆ ಮುನ್ನುಡಿ ಬರೆಯುವ ಸೌಭಾಗ್ಯ ದೊರಕಿಸಿದ ಪ್ರಸನ್ನರಿಗೆ ವಂದನೆಗಳನ್ನು ಹೇಳುತ್ತೇನೆ.”