ಸಿಪ್ಪೆ

ಸಿಪ್ಪೆ

ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ ಬೀಜಗಳಿಗೆ ಎರಡೆರಡು ಸಿಪ್ಪೆ. ಸಿಪ್ಪೆಗಳೊಳಗೆ ತಿರುಳು ಸುರಕ್ಷಿತವಾಗಿರುತ್ತದೆ. ಸಿಪ್ಪೆಯನ್ನು ಕಳಚಿದ ನಂತರ ತಿರುಳು ತನ್ನ ಸುರಕ್ಷತೆಯನ್ನು ಕಳೆದು ಕೊಳ್ಳುತ್ತದೆ. ಸಂಸ್ಕರಿಸಿದರೆ ಅದರ ನಾಶ ತಕ್ಷಣಕ್ಕೆಆಗದೆ ಇರಲೂ ಬಹುದು. ಒಂದೊಮ್ಮೆಗೆ ಮೂಲ ಸಿಪ್ಪೆ ಕಳಚಿದ ಮೇಲೆ ಬೀಜಗಳನ್ನು ಕೃತಕ ಸಿಪ್ಪೆಯೊಳಗೆ ಶೇಖರಿಸಿ ರಕ್ಷಣೆ ಮಾಡುವುದೂ ಇದೆ. ಎಂದರೆ ತಿರುಳಿನ ರಕ್ಷಣೆಗೆ ಸಹಜ ಅಥವಾ ಕೃತಕವಾದ ಸಿಪ್ಪೆ ಬೇಕೇ ಬೇಕು

ಸಮಾಜದಲ್ಲಿ ಮಕ್ಕಳು ತಿರುಳು. ಅವರಿಗೆ ರಕ್ಷಣೆಯ ಕವಚವಾಗಿ ಎರಡು ಸಿಪ್ಪೆಗಳಂತೆ ತಂದೆ ಮತ್ತು ತಾಯಿ ಇರುತ್ತಾರೆ, ಕೆಲವೊಮ್ಮೆ ಸಹಜ ತಂದೆ ತಾಯಿಗಳು ಇಲ್ಲದೆ, ಸಾಕಿದ ತಂದೆ ತಾಯಿಗಳಿರುತ್ತಾರೆ. ತಂದೆ ತಾಯಿಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡುವ, ಅಥವಾ ಬೆಳೆಸುವ ಕ್ರಮಗಳ ಮೇಲೆ ಮಕ್ಕಳ ಬದುಕು ನಿರ್ಧಾರವಾಗುತ್ತದೆ. ಕೇವಲ ದೈಹಿಕ ಬೆಳವಣಿಗೆ ಮಾತ್ರವಲ್ಲದೆ ಮಾನಸಿಕ, ಬೌದ್ಧಿಕ, ಮೌಲ್ವಿಕ, ಭಾವನಾತ್ಮಕ ಹೀಗೆ ಹತ್ತಾರು ದೃಷ್ಟಿಕೋನಗಳಿಂದ ಮಕ್ಕಳನ್ನು ಬೆಳೆಸಬೇಕು. ಮಕ್ಕಳನ್ನು ಸಾಕುವುದೆಂಬ ಮಾತೂ ಕೆಲ ಹೆತ್ತವರ ಬಾಯಿಂದ ಕೇಳಿದ್ದೇವೆ. ಮಕ್ಕಳನ್ನು ಬೆಕ್ಕು, ನಾಯಿ, ಹಂದಿಗಳಂತೆ ಸಾಕುವುದಲ್ಲ. ಸರ್ವಾಂಗೀಣವಾಗಿ ಬೆಳೆಸುವುದು ಹೆತ್ತವರ ಧರ್ಮ. ಮಗುವಿಗೆ ಹದಿನೆಂಟು ವರ್ಷ ತುಂಬುವತನಕ ನಾವು ಸಿಪ್ಪೆಯಾಗಿ ಮಗುವನ್ನು ಭದ್ರವಾಗಿ ರಕ್ಷಿಸಿ ಬೆಳೆಸುತ್ತೇವೆ, ಎಂಬುದಾಗಿ ಹೆತ್ತವರು ಅದರ ಹುಟ್ಟಿಗೆ ಮೊದಲು ಒಂದು ಅಲಿಖಿತ ಒಪ್ಪಂದ ಮಾಡಿರುತ್ತಾರೆ. ಹೆತ್ತವರು ಸಿಪ್ಪೆಯೇ ಎಂದು ಕನಿಷ್ಠವಾಗಿ, ಲಘುವಾಗಿ ಯೋಚಿಸದಿರಿ. ಸಿಪ್ಪೆಯು ತಿರುಳಿಗೆ ಭದ್ರತೆ ನೀಡುವ, ಸುಂದರ ಸ್ವರೂಪ ನೀಡುವ ಅತ್ಯಂತ ಶಕ್ತಿಶಾಲಿ ರಕ್ಷಾ ಕವಚ.

ರಾಷ್ಟ್ರದ ತಿರುಳೆನಿಸಿದ ಮಕ್ಕಳನ್ನು ಸಂಸ್ಕರಿಸುತ್ತಾ ಹೋಗುವುದು ಸಿಪ್ಪೆಯಾಗಿ ಹೆತ್ತವರ ಹೊಣೆಗಾರಿಕೆ. ಮಕ್ಕಳು ಬ್ರಾಹ್ಮೀ ವೇಳೆಗೆ ನಿದ್ದೆಯಿಂದ ಏಳುವುದೂ ಸಂಸ್ಕಾರ. ಎದ್ದ ನಂತರ ಮಾಡಬೇಕಾದ ಬೇರೆ ಬೇರೆ ದೈನಂದಿನ ನಿಗದಿತ ಕೆಲಸಗಳನ್ನು ಕ್ರಮಾಗತವಾಗಿ ಮಾಡುವುದೂ ಸಂಸ್ಕಾರ. ಆದುದರಿಂದ ಸಂಸ್ಕಾರವೆನ್ನುವುದು ಶಿಸ್ತು ಮತ್ತು ಶಿಷ್ಟಾಚಾರಗಳ ಇನ್ನೊಂದು ಹೆಸರು. ಮನೆಗೆ ಬಂದ ಅತಿಥಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳುವುದು, ಅವರನ್ನು ಗೌರವಿಸಿ ಆದರಿಸುವುದು, ಮಧುರವಾಗಿ ವಿನಯದಿಂದ ಅವರೊಡನೆ ಮಾತನಾಡಿಸುವುದು ಇವೆಲ್ಲವೂ ಮಕ್ಕಳೆಂಬ ತಿರುಳನ್ನು ಸಂಸ್ಕರಿಸುವುದರ ಫಲ.

ಮೊಬೈಲು ರಿಂಗಣಿಸುತ್ತದೆ. ಕರೆಗಳನ್ನು ಸ್ವೀಕರಿಸುವ ವಿಧಾನದಲ್ಲೂ ಸಂಸ್ಕಾರವಿದೆ. ಕಷ್ಟದಲ್ಲಿರುವವರಿಗೆ ಕೈಲಾದ ನೆರವು ನೀಡುವುದು, ಇತರರ ಹಸಿವನ್ನು ಅಲ್ಪ ಪ್ರಮಾಣದಲ್ಲಾದರೂ ಶಮನಗೊಳಿಸುವುದು, ದುಃಖಿತನನ್ನು ಶಾಂತ ಗೊಳಿಸುವುದು, ಇವೆಲ್ಲವೂ ಸಂಸ್ಕಾರದ ಭಾಗಗಳೇ ಆಗಿವೆ. ಉಡುವ, ಉಣ್ಣುವ, ಕುಡಿಯುವ, ನಗುವ, ಹೊಗಳುವ, ಕೂಡುವ, ನಡೆಯುವ.. ಹೀಗೆ ಪ್ರತಿಯೊಂದು ಕೆಲಸದ ಹಿಂದೆಯೂ ಸಂಸ್ಕಾರದ ಸುಗಂಧವಿರಬೇಕು. ಹೆತ್ತವರು ಪ್ರಜ್ಞಾವಂತರೂ, ಬದ್ಧತೆಯ ಮಹಾ ಸಂಚಿಯೂ ಆದರ್ಶಗಳ ಗಣಿಯೂ ಆದಾಗ ಯೋಗ್ಯ ಸಿಪ್ಪೆಯೆನಿಸುವರು. ಯೋಗ್ಯ ಸಿಪ್ಪೆಯಿಂದ ತಿರುಳು ಸುರಕ್ಷಿತ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ