ಸಿರಿಕಂಠದ ಸ್ವರ ವಾಣಿ - ವಾಣಿ ಜಯರಾಮ್
ಭಾವವೆಂಬ ಹೂವು ಅರಳಿ
ಗಾನವೆಂಬ ಗಂಧ ಚೆಲ್ಲಿ...
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು...
ಈ ಹಾಡುಗಳನ್ನು ರೇಡಿಯೋದಲ್ಲಿ ಕೇಳಿದಾಗ ಅದೇನೋ ಮೋಡಿ ಮಾಡುವ ಸ್ವರ. ಸಾವಿರಾರು ಹಾಡುಗಳನ್ನು ಹಾಡಿ ಜನಮಾನಸದಲ್ಲಿ ಸ್ಥಾನ ಪಡೆದ ನೆಚ್ಚಿನ ಸಿರಿಕಂಠದ ಸ್ವರ ವಾಣಿ, ಗಾಯಕಿ, ವಾಣಿ ಜಯರಾಮ್ ಇನ್ನಿಲ್ಲವೆಂದಾಗ ಬಹಳ ದುಃಖವಾಗಿ ಅವರು ಹಾಡಿದ ಒಂದಷ್ಟು ಹಾಡುಗಳು ಕಿವಿಯಲ್ಲಿ, ಮನಸಿನಲ್ಲಿ ಗುಂಯ್ ಗುಡಲು, ರಿಂಗಣ ಹೊಡೆಯಲು ಆರಂಭಿಸಿತು. ಕೆಲವೇ ದಿನಗಳ ಹಿಂದೆ ಕೇಂದ್ರ ಸರಕಾರ ಇವರ ಕಲಾ ಸಾಧನೆಯನ್ನು ಪರಿಗಣಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ಆ ಪ್ರಶಸ್ತಿಯನ್ನು ಪಡೆಯಲು ವಾಣಿ ಜಯರಾಮ್ ಇನ್ನಿಲ್ಲ ಎಂಬ ಸುದ್ದಿಯನ್ನು ನಂಬಲೇ ಆಗುತ್ತಿಲ್ಲ.
'ದಾರಿ ಕಾಣದಾಗಿದೆ ರಾಘವೇಂದ್ರನೆ' ಎಂಥ ಭಕ್ತಿಭಾವ ತುಂಬಿದ ಗಾಯನ. ಚಿತ್ರರಂಗದಲ್ಲಿ ಹಾಡಿನಲ್ಲಿ ಓರ್ವ ಉನ್ನತ ಛಾಪನ್ನು ಮೂಡಿಸಿದ ದೈತ್ಯ ಪ್ರತಿಭೆ ವಾಣಿಯಮ್ಮನವರೆಂದರೆ ತಪ್ಪಾಗಲಾರದು. ಭಾರತದ ಸರಿಸುಮಾರು ೧೪ ಭಾಷೆಗಳಲ್ಲಿ ಹಾಡಿದ್ದಾರಂತೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡ ಇವರು ಖ್ಯಾತ ಸಿತಾರ್ ವಾದಕ ಜಯರಾಮ್ ರವರನ್ನು ಪತಿಯಾಗಿ ಸ್ವೀಕರಿಸಿದ್ದರು. ಅನೇಕ ಆಲ್ಬಂ ಹಾಡುಗಳನ್ನು ಸಹ ಹಾಡಿದವರು. ಗಝಲ್, ಭಜನ್, ಭಕ್ತಿಗೀತೆಗಳ ಹಾಡಿನಲ್ಲೂ ಪರಿಣಿತರು.
೧೯೪೫ರ ನವಂಬರ ೩೦ ರಂದು ಬುವಿಯ ಬೆಳಕನ್ನು ಕಂಡ ಇವರು, ಚಿಕ್ಕಂದಿನಲ್ಲೇ ಸಂಗೀತವನ್ನು ವಿದ್ವಾನ್ ರಂಗಾರಾಮಾನುಜ ಅಯ್ಯಂಗಾರ್ ಅವರ ಶಿಷ್ಯೆಯಾಗಿ, ಶ್ರೀನಿವಾಸ ಅಯ್ಯಂಗಾರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡಿದರಂತೆ. ೧೦ ವರುಷದ ಚಿಕ್ಕ ಬಾಲಕಿಯ ಸಂಗೀತ ಕಛೇರಿ ಮರೆಯಲಾಗದ ಕ್ಷಣ. ಚೆನ್ನೈ ಸಂಗೀತ, ನೃತ್ಯಗಳ ಆಡೊಂಬಲ. ಉತ್ತಮ ಸಂಗೀತ ಶಿಕ್ಷಣದೊಂದಿಗೆ, ಅರ್ಥಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿ ಪಡೆದ ಹೆಗ್ಗಳಿಕೆ ಇವರದು. ಕೆಲವು ಸಮಯ ಬ್ಯಾಂಕ್ ಒಂದರಲ್ಲಿ ಕೆಲಸವನ್ನೂ ಮಾಡಿದ್ದರು ವಾಣಿಯಮ್ಮನವರು. ನಂತರ ತಮ್ಮ ಸಂಗೀತ ಕಲೆಗೆ ಬ್ಯಾಂಕ್ ಉದ್ಯೋಗ ಅಡ್ಡಿಯಾಗುತ್ತದೆ ಎಂದು ಕಂಡಾಗ ಅದನ್ನು ತ್ಯಜಿಸಿದರು.
ಇವರಿಗೆ ದೊರೆತ ಮಾನ-ಸನ್ಮಾನಗಳು ಲೆಕ್ಕವಿಲ್ಲದಷ್ಟು. ಮೂರು ರಾಷ್ಟ್ರ ಪ್ರಶಸ್ತಿ, ೨೭ ವಿವಿಧ ರಾಜ್ಯಗಳಲ್ಲಿ ಶ್ರೇಷ್ಠ ಗಾಯಕಿ ಪ್ರಶಸ್ತಿ, ಇತ್ತೀಚೆಗೆ ಕೇಂದ್ರ ಸರಕಾರದ ಘೋಷಿಸಿದ ಅತ್ಯುನ್ನತ ನಾಗರೀಕ ಸನ್ಮಾನ ಪದ್ಮಭೂಷಣ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಲ್ಲಿ ಅಭಿನಂದನೆ ದೊರೆತ ಮಹಾನ್ ಸಾಮ್ರಾಜ್ಞಿ.
ಪ್ರಕೃತ ಚೆನ್ನೈಯಲ್ಲಿ ಮಕ್ಕಳಿಗಾಗಿ ಸಂಗೀತ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಸಂಗೀತ ಸಂಶೋಧನಾ ಕೇಂದ್ರ ನಡೆಸುತ್ತಿದ್ದರಂತೆ. ಕ್ಯಾನ್ಸರ್ ಪೀಡಿತ ರೋಗಿಗಳ ನೋವನ್ನು ಶಮನ ಮಾಡುವ 'ನೋವು ನಿವಾರಣಾ ಶಿಬಿರ' ದ ಆಯೋಜನೆಯೂ ಮಾಡುತ್ತಿದ್ದರು. ಸಂಗೀತದ ಕುರಿತಾಗಿ ಸೆಮಿನಾರ್ ಗಳನ್ನು ಏರ್ಪಡಿಸಿ, ಸಾವಿರಾರು ಸಂಗೀತ ಕಲಿಕೆಯ ವಿದ್ಯಾರ್ಥಿಗಳಿಗೆ ದಾರಿ ತೋರಿಸುತ್ತಿದ್ದರು. ತಮ್ಮ ಪತಿ ಜಯರಾಮ್ ಅವರ ನಿಧನದ ಬಳಿಕ ಇವರು ಚೆನ್ನೈನ ಮನೆಯೊಂದರಲ್ಲಿ ಒಂಟಿಯಾಗಿಯೇ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ ವಾಣಿ ಜಯರಾಮ್ ಅವರು ಸಂಗೀತ ಕಲಿಸುವುದರಲ್ಲೇ ಆತ್ಮ ಸಂತೃಪ್ತಿಯನ್ನು ಪಡೆಯುತ್ತಿದ್ದರು. ಇವರು ಹಾಡುಗಳನ್ನು ಹಾಡುವ ವೈಖರಿಗೆ ತಲೆದೂಗದವರಿಲ್ಲ ಎನ್ನಬಹುದು. ಒಂದಷ್ಟು ಹಾಡುಗಳು ಸ್ಮೃತಿಪಟಲದಲ್ಲಿ ನಲಿದಾಡುತ್ತಿದೆ.
'ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ.'
'ನೀಲಮೇಘ ಶ್ಯಾಮ ನಿತ್ಯಾನಂದ ಧಾಮ'
'ವಸಂತ ಬರೆದನು ಒಲವಿನ ಓಲೆ'
'ಬೆಸುಗೆ ಬೆಸುಗೆ'
'ಏನೇನೋ ಆಸೆ,ನೀ ತಂದ ಭಾಷೆ'.
ಬರೆದರೆ ಬರೆದಷ್ಟೂ ಮುಗಿಯದು.
ನಮ್ಮೆಲ್ಲರ ನೆಚ್ಚಿನ ವಾಣಿಯಮ್ಮ ಇನ್ನಿಲ್ಲವೆಂಬ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೇನು ಮಾಡೋಣ? ನೀಡುವವನೂ ಕರೆಯಿಸಿಕೊಳ್ಳುವವನೂ ಆತನಲ್ಲವೇ? ೧೦ ಸಾವಿರದವರೆಗೂ ಹಾಡುಗಳನ್ನು ಹಾಡಿದ ವಾಣಿಯಮ್ಮನಿಗೆ ಭಾವಪೂರ್ಣ ಶ್ರದ್ಧಾಂಜಲಿ.
-ರತ್ನಾ ಕೆ ಭಟ್,ತಲಂಜೇರಿ
(ಸಂಗ್ರಹ:ವಿವಿಧ ಮೂಲಗಳಿಂದ) ಚಿತ್ರ ಕೃಪೆ: ಇಂಟರ್ನೆಟ್ ತಾಣ