ಸಿರಿ ಸರಸು - ಮಿನಿ ಕಥೆ

ಸಿರಿ ಸರಸು - ಮಿನಿ ಕಥೆ

ಸಂಧ್ಯಾಕಾಲ. ಆ ಮನೆಯ ಆನಂದರಾಯರ ಬದುಕಿಗೂ ಸಂಜೆ ಆವರಿಸಿತ್ತು. ಎರಡು ತಿಂಗಳಿನಿಂದ ಹಾಸಿಗೆ ಹಿಡಿದಿದ್ದ ಮಡದಿ ಮಹಾಲಕ್ಷ್ಮಿ ತೀರಿಹೋಗಿದ್ದು ಅಂತ್ಯಕ್ರಿಯೆ ಮುಗಿದಿತ್ತು. ನಾನಿನ್ನು ಒಂಟಿಗಾಲಿಯ ಗಾಡಿ. ಅನ್ಯರ ಆಸರೆಯಿಲ್ಲದೆ ಬದುಕು ಬಂಡಿ ಓಡದು. ರಕ್ತ ಹಂಚಿಕೊಂಡು ಹುಟ್ಟಿದ ಮೂವರು ಮಕ್ಕಳೂ  ತನ್ನನ್ನು  ಸಾಕುವುದು ಕನಸಿನ ಮಾತು. ಈ ಎಲ್ಲಾ ಯೋಚನೆಗಳ ಜೊತೆಗೆ ಮಡದಿಯ ಮಮತೆಯ ಕೂಸಿಗೆ  ತಿಳಿಸದೆ ತಪ್ಪು ಮಾಡಿದೆನೋ ಎಂಬೊಂದು ಅಪರಾಧಿ ಪ್ರಜ್ಞೆ ಅವರನ್ನು ಕಾಡತೊಡಗಿತು.

ಹಿರಿಮಗ ಅರವಿಂದ ಅಮೇರಿಕದಲ್ಲೆ ತಳವೂರಿದ್ದರೆ, ಸದಾನಂದ, ಸಂಪನ್ನ ಇಬ್ಬರೂ ಸ್ವದೇಶದಲ್ಲೆ ಪಟ್ಟಣದಲ್ಲಿ ಕುಟುಂಬ  ಸಮೇತ ಇದ್ದಾರೆ. ಸದಾನಂದ, ಸಂಪನ್ನ, ಅಪ್ಪನ ಒತ್ತಾಯದ ಕರೆಗೆ ಅಮ್ಮನ ಅಂತಿಮ ದರ್ಶನಕ್ಕೆ ಬಂದಿದ್ದರೆ; ಅರವಿಂದನಾದರೋ ಬರಲಾಗುವುದಿಲ್ಲ ಎಂದು ಫೋನಾಯಿಸಿದ್ದ!.

ಇನ್ನು ಅಪ್ಪನ ಹೊಣೆ....? ನೀನು ವಹಿಸಿಕೋ ನೀನು ವಹಿಸಿಕೋ ಸದಾನಂದ, ಸಂಪನ್ನನ ವಾಗ್ವಾದ!.

ಅಪ್ಪನ ಆಸ್ತಿಯನ್ನು ಮೂವರಿಗೂ ಹಂಚಿಕೊಟ್ಟಿದ್ದಾರೆ ತಾನೇ? ನಾವೆಲ್ಲ ಅವಧಿ ಪ್ರಕಾರ ನೋಡಿಕೊಳ್ಳಲೇಬೇಕು. ಸಂಪನ್ನ ತೀರ್ಪಿತ್ತ.

ಯಾರೂ ಆ ಬಗ್ಗೆ ಚರ್ಚೆಮಾಡುವುದು ಬೇಡ. ಅಣ್ಣಾಜಿಯವರನ್ನು ನಾನೇ ಸಾಕುತ್ತೇನೆ. ಧ್ವನಿ ಬಂದೆಡೆಗೆ ಎಲ್ಲರೂ ನೋಡಿದರು. 

ಬಂದವಳು ಸರಸು. ಮಹಾಲಕ್ಷ್ಮಿಯ ಪ್ರೀತಿಯ ಸಾಕುಮಗಳು. ಸ್ವಂತ ಮಕ್ಕಳಾಗುವ ಮೊದಲೇ ಮುಂಬಾಗಿಲ ಹೊರಗೆ ದೊರಕಿದವಳು!. ತನಗೆ ಮನಸ್ಸಿಲ್ಲದಿದ್ದರೂ ದೇವರ ಕೊಡುಗೆ ಎಂದು ನಂಬಿ; ಪ್ರೀತಿ ತೋರಿ ಸಾಕಿ ಸಲಹಿದ್ದಳು ಮಹಾಲಕ್ಷ್ಮಿ. ಅಪ್ಪ ಎನ್ನಲೂ ಆಕೆಗೆ ಆಸ್ಪದ ಕೊಡದೆ ಕೆಲಸದ ಹುಡುಗಿಯಂತೆ ಕಂಡಿದ್ದ ತಾನು; ಪ್ರಾಯಕ್ಕೆ ಬಂದವಳು ಸಾಹಿತಿಯೊಬ್ಬನನ್ನು ಪ್ರೀತಿಸಿ ಮದುವೆಯಾದಾಗ  ಆಕೆಯ ಸಂಪರ್ಕವನ್ನೇ ಕಡಿದಿದ್ದೆ. ರಾಯರ ಮನದ ಮೂಲೆಯಿಂದ ಹಳೆಯ ಕಹಿನೆನಪು ಹೊರಗೆ ಬಂತು.

ಅರೆ...ಸರಸು.....ಯಾವಗ್ಬಂದೆ?. ರಾಯರು ಬೆರಗಾಗಿ ಕೇಳಿದರು.

ಈಗತಾನೇ ಬಂದೆ ಅಣ್ಣಾಜಿ. ಅಮ್ಮ ಹಾಸಿಗೆ ಹಿಡಿದ ವಿಚಾರ ಯಾರು ಯಾರಿಂದಲೋ ತಿಳಿದು ಓಡೋಡಿ ಬಂದೆ. ಅಪ್ಪನ ಪ್ರೀತಿ, ಅಮ್ಮನ ಎದೆಹಾಲು ಇವೆರಡು ಮಾತ್ರ ನನಗೆ ದೊರಕಿಲ್ಲ. ಮತ್ತೆಲ್ಲವನ್ನೂ ನೀಡಿದ ಈ ಅಮ್ಮನ ಅಂತಿಮ ದರ್ಶನದ ಭಾಗ್ಯ ನನಗಿಲ್ಲದಾಯಿತು. ಸ್ವಂತ ತಂದೆಯನ್ನೇ ಕಾಣದ ನನಗೆ ಈ ಸಾಕುತಂದೆಯನ್ನಾದರೂ ಸಾಕುವ ಅವಕಾಶ ಮಾಡಿಕೊಡಿ ಅಣ್ಣಾಜಿ.... ಬಿಕ್ಕುತ್ತಾ ಬಂತು ಆಕೆಯ ಕೇಳಿಕೆ. 

ಈ ಮುಗ್ಧೆಗೆ ನಾನೆಷ್ಟು ಅನ್ಯಾಯ ಮಾಡಿದೆ! ಸ್ವಂತ ಮಕ್ಕಳು ತೋರದ ಪ್ರೀತಿಯನ್ನು ಈ ಸಾಕು ಮಗಳು ತೋರಿಸುವಳಲ್ಲ! ಈಕೆಯ ಮುಂದೆ ನಾನೆಷ್ಟು ಕುಬ್ಜನಾಗಿ ಹೋದೆ.., ಕಂಗೆಟ್ಟರು ರಾಯರು.

ಏನು ಯೋಚಿಸುತ್ತಿದ್ದೀರಾ ಅಣ್ಣಾಜೀ.... ನಾನು ಬಡವಳು ಕೈಲಾಗದು ಎಂದೇ?. ಆ ಯೋಚನೆ ಬಿಡಿ.

ಇಲ್ಲ..., ನೀನು ನಿಜವಾಗಿಯೂ ನಮ್ಮೆಲ್ಲರ ನಡುವೆ ಸಿರಿವಂತೆ... ಸಿರಿಸರಸು ಕಣಮ್ಮ ನೀನು!. ನಿನ್ನ ಗುಣದಿಂದ ನನ್ನ ಕಣ್ಣು ತೆರೆಯಿತು. ಇನ್ನು ಮುಂದೆ `ಅಣ್ಣಾಜಿ' ಬೇಡ. `ಅಪ್ಪಾಜಿ' ಎಂದೇ  ಹೇಳು ಮಗಳೆ. ನಿನ್ನ ಗಂಡ- ಮಕ್ಕಳನ್ನು ಇಲ್ಲಿಗೆ ಕರೆಸಮ್ಮ. ನೀವೆಲ್ಲ ಇಲ್ಲೇ ಇರಿ. ನನ್ನ ಹೆಸರಿನಲ್ಲಿರುವ ಈ ಮನೆ ಇನ್ನು ನಿನಗೆ ಸೇರಿದ್ದು. ನಿನ್ನ ಸಂಸಾರ ಇಲ್ಲೇ ಸಾಗಲಿ.

ಭಾವುಕರಾಗಿ ಬಾಯ್ತುಂಬ ಹೇಳಿ, ಬರಸೆಳೆದ ರಾಯರ ಹೃದಯದಲ್ಲಿ ಮಹಾಮಮತೆ ಒಸರಿತು!. ಕ್ಷಣ ಬಿಟ್ಟು ನೋಡಿದಾಗ...

ರಾಯರೇ ಸರಸ ನಿಮಗೆ ಹುಟ್ಟಿದ ಮಗಳೆ!. ಅವಳಮ್ಮ ನನ್ನ ಸೋದರತ್ತೆ ಗೌರಿಯನ್ನು ಪ್ರೇಮಿಸಿದ ನೀವು ಜಾತಿ ಅಡ್ಡ ಬಂದಾಗ ಆಕೆಯನ್ನು ಕೈ ಬಿಟ್ಟು ಬೇರೆ ಮದುವೆಯಾದಿರಿ!!. ಬಸಿರಾದ ಸಂಗತಿ ಬಚ್ಚಿಟ್ಟು ಆಕೆ ಮಗುವನ್ನು ಹೆತ್ತು; ನಿಮ್ಮನೆಯ ಜಗಲಿಯಲ್ಲಿ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಬಗ್ಗೆ ಕಾಗದ ಬರೆದಿರಿಸಿದ್ದಳು ನನ್ನ ಅತ್ತೆ. ಅದೀಗ ನಮ್ಮನೆಯ ಹಳೆಪೆಟ್ಟಿಗೆಯೊಂದರಿಂದ ದೊರಕಿತು. 

ಅತ್ತೆಯ ಭಾವಚಿತ್ರ ತೋರಿಸಿದ ಸರಸಳ ಪತಿ ಶಶಾಂಕ! ವಿಷಯ ತಿಳಿದು ಕುಸಿದು ಕುಳಿತ ರಾಯರನ್ನು ಸರಸು ಉಪಚರಿಸಿದಳು.

-ವಿಜಯಾಸುಬ್ರಹ್ಮಣ್ಯ, ಕುಂಬಳೆ

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ