ಸಿಸ್ಟಂ ಅಡ್ಮಿನಿಸ್ಟ್ರೇಟರ್ ಅಪ್ರಿಶಿಯೇಶನ್ ಡೇ - ಜುಲೈ ೨೫

ಸಿಸ್ಟಂ ಅಡ್ಮಿನಿಸ್ಟ್ರೇಟರ್ ಅಪ್ರಿಶಿಯೇಶನ್ ಡೇ - ಜುಲೈ ೨೫

ಬರಹ

ಕಂಪ್ಯೂಟರ್ ನಿರ್ವಾಹಕರನ್ನ ವರ್ಷದ ೩೬೪ ದಿನಗಳೂ ಎಲ್ಲರೂ ಪ್ರತಿದಿನ ಒಂದಲ್ಲ ಒಂದು ಕಾರಣದಲ್ಲಿ ಶಪಿಸುವುದು ಸಹಜ. ಜುಲೈ ೨೫ ಇದಕ್ಕೆಲ್ಲ ಹೊರತು. ಅಂದು ಸಿಸ್ಟಂ ಅಡ್ಮಿನಿಸ್ಟ್ರೇಟರ್ ಗಳನ್ನ ಮೆಚ್ಚಿ ಶ್ಲಾಘಿಸಲಾಗುತ್ತದೆ. ಇದೊಂದು ಅಂತರರಾಷ್ಟ್ರೀಯ ದಿನ.

ದಿನವಿಡೀ ಕಂಪ್ಯೂಟರ್ ಗಳನ್ನ ಅವಲಂಬಿಸಿರುವ ಜಗತ್ತು ವರ್ಷಪೂರ್ತಿ ದಿನವಿಡೀ ಒಂದಲ್ಲ ಒಂದು ಕಾರಣದಿಂದ ಸಿಸ್ ಅಡ್ಮಿನ್ ಅನ್ನು ಅವಲಂಬಿಸ ಬೇಕಾಗುತ್ತದೆ, ವೈರಸ್ ಇರಲಿ, ಪ್ರಿಂಟರ್, ನೆಟ್ವರ್ಕ್, ಹಾರ್ಡ್ವೇರ್ ನ ತೊಂದರೆಯಿರಲಿ, ನಿಮ್ಮ ಮಾಹಿತಿಯನ್ನ ಇನ್ಯಾರೋ ಹ್ಯಾಕ್ ಮಾಡಿರಲಿ ನಮಗೆ ಬೇಕಿರೋದು ಅವನೇ. ವಾರದ ಕೊನೆಯಿದ್ದರೂ ಅವನಿಗೆ ಮಾತ್ರ ರಜೆಯಿಲ್ಲ. ಅವನನ್ನ ಕರೆದು ಕೆಲಸ ಮಾಡಿಸ್ಕೊ ಬೇಕಾದಾಗ ನಮಗೆ ಅವನು ಆ ಕೆಲಸದ ಮೇಲಿಟ್ಟಿರುವ ನಿಷ್ಟೆ, ಶ್ರದ್ದೆ ಗಮನಕ್ಕೆ ಬರೋದು ತುಂಬಾ ಕಮ್ಮಿ. ಇದು ದಿನಾಲೂ ಇದ್ದದ್ದೆ ಅಂತ ಹಳೆಯ ಕಂಪ್ಯೂಟರ್ ಅಥವಾ ಅದರಲ್ಲಿರೋ ತಂತ್ರಾಂಶದ ದೋಷಗಳಿದ್ದರೂ ಶಾಪ ಮಾತ್ರ ಅಡ್ಮಿನ್ ಮೇಲೆ. ಅವನನ್ನ ವರ್ಷದ ಒಂದು ದಿನವಾದರೂ ಎಲ್ಲರೂ ಹೊಗಳಲಿ ಎಂದು ಈ ದಿನ.

ಸಂಪದ ವೆಬ್ ಸೈಟ್ ಡೌನ್ ಆದಾಗ, ಅದರಲ್ಲೆಲ್ಲೋ ಕಾಮೆಂಟೋ, ಕಂಟೆಂಟೋ ಅಳಿಸಿದೆ ಅಂತ ತಿಳಕೊಂಡು ಕೆಲ ಕಾಮೆಂಟುಗಳನ್ನ ಹಾಕಿದ್ದು ನೆನಪಿಗೆ ಬಂದು, ಈ ದಿನದ ಬಗ್ಗೆ ನಿಮ್ಮೆಲ್ಲರಿಗೆ ತಿಳಿಸೋಣ ಅಂತ ಈ ಲೇಖನ. ಸಂಪದವನ್ನ ಜತನದಿಂದ ಕಾಯ್ದು ಕೊಂಡು ಬಂದಿರುವ ಹೆಚ್.ಪಿ.ಎನ್ ಗೆ ಈ ದಿನದ ಶುಭಾಶಯಗಳು.

ನಾನು ಈದಿನವನ್ನ ಆಚರಿಸಿದ ರೀತಿ ಬೇರೆಯದೇ ಇತ್ತು. ನನ್ನ ಕಂಪೆನಿಯಲ್ಲಿರುವ ಎಲ್ಲರೂ ಸಿಸ್ಟಂ ಅಡ್ಮಿನ್ಗಳೇ. ಅನೇಕ ಟೀಮ್ ಗಳಿರುವೆಡೆ ಕೆಲಸದ ಬಗೆಗಿನ ಜ್ಞಾನವನ್ನ ಇತರರೊಡನೆ ಹಂಚಿಕೊಳ್ಳೋ ಅಭ್ಯಾಸವನ್ನ ಬೆಳೆಸೋದು ನಾಲೆಡ್ಜ್ ಮ್ಯಾನೇಜ್ಮೆಂಟ್ ನ ಕೆಲಸ. ಹೊಸದಾಗಿ ಕೆಲಸಕ್ಕೆ ಸೇರಿ,ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿರುವ ಯುವ ಸಿಸ್ಟಂ ಅಡ್ಮಿನ್ ಗಳಿಗೆ ಡಾಕ್ಯುಮೆಂಟೇಶನ್ ಅನ್ನೋದು ಕಿರಿ ಕಿರಿಯ ವಿಷಯ. ಅಂತ ಒಂದು ಕಿರಿ ಕಿರಿಯ ವಿಷಯವನ್ನ ಹವ್ಯಾಸವನ್ನಾಗಿ ಮಾಡಿ ಕೊಳ್ಳೋದು ಬ್ಲಾಗಿಂಗ್ ಮಾಡ್ಲಿಕ್ಕೆ ಶುರು ಮಾಡಿದಾಗ. ಇತ್ತೀಚೆಗೆ ನನ್ನ ಕಂಪೆನಿಯ ಇನ್ಪಾರ್ಮೇಶನ್ ಮ್ಯಾನೇಜ್ ಮೆಂಟಿಗೆಂದು ಹೊಸದಾಗಿ ಅಳವಡಿಸಿದ ತಂತ್ರಾಂಶದಲ್ಲಿ , ಹೊಸ ಮಾಹಿತಿ ವರ್ಗವನ್ನ ತೆರೆದು, ನಮಗೆ ತಿಳಿದಿರುವ ಮಾಹಿತಿಯನ್ನ ಇತರರೊಡನೆ ಹಂಚಿಕೊಳ್ಳಲು ಕೊಟ್ಟ ಒಂದು ಚಿಕ್ಕ ಉದಾಹರಣೆ ಒಂದೇ ದಿನದಲ್ಲಿ ಉತ್ತಮ ಫಲಿತಾಂಶ ನೀಡಿದೆ. ಅನೇಕರು ನೆನ್ನೆಯವರೆಗೂ ಹೊಸಬರಿಗೆ ಕ್ಲಿಷ್ಟ ಅನ್ನಿಸಿದ್ದ ಸಮಸ್ಯೆಗಳನ್ನ ಬಗೆಹರಿಸಲಿಕ್ಕೆ ಬೇಕಾದ ಮಾಹಿತಿಯನ್ನ ಎಲ್ಲರೊಡನೆ ಹಂಚಿಕೊಳ್ಳಲಿಕ್ಕೆ ಶುರುಮಾಡಿದ್ದಾರೆ. ಅಂತೂ ಈ ದಿನ ನನಗೆ ಆಫೀಸ್ ನಲ್ಲಿ ಹೊಸ ಕಾರ್ಯವಿಧಾನವನ್ನ ಅಳವಡಿಸಲಿಕ್ಕೆ  ಸಾಧ್ಯಮಾಡಿ ಕೊಡ್ತು.

ನೀವೂ ನಿಮ್ಮ ಸಿಸ್ಟಂ ಅಡ್ಮಿನ್ ಗೆ ಒಂದು ಸಣ್ಣ ಥ್ಯಾಂಕ್ಸ ಹೇಳಿ ಈ ದಿನ. ಈ  ಕೊಂಡಿ ನೋಡಿ ಈ ದಿನದ ಬಗೆಗಿನ ಅನೇಕ ಮಾಹಿತಿಯನ್ನ ಇದು ನಿಮ್ಮ ಮುಂದಿಡುತ್ತದೆ.