ಸಿ ಎಚ್ ಜಾಕೋಬ್ಲೋಬೊ C H JACOB LOBO

ಸಿ ಎಚ್ ಜಾಕೋಬ್ಲೋಬೊ C H JACOB LOBO

ಬರಹ

ಸಿ ಎಚ್ ಜಾಕೋಬ್ಲೋಬೊ C H JACOB LOBO
ಸಿ ಎಚ್ ಜಾಕೋಬ್ಲೋಬೊರವರು ಕೊಡಗಿನ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಬೆಪ್ಪನಾಡಿನ ರೈತಕುಟುಂಬದವರು. ಇವರ ಪೂರ್ವಿಕರು ಬಿಟಿಷರ ವಿರುದ್ದ ಟಿಪ್ಪುಸುಲ್ತಾನನಿಗೆ ಕುಮ್ಮಕ್ಕು ನೀಡಿ ಕಷ್ಟಕ್ಕೀಡಾದ ತುಕ್ಕಡಿ ಎಂಬ ಊರಿನವರು.

ಮಾನ್ಯರು ವಿದ್ಯಾರ್ಥಿದೆಸೆಯಲ್ಲಿ ಅಂದರೆ ಚಿಕ್ಕಮಗಳೂರು ಸರಕಾರಿ ಪ್ರೌಢಶಾಲೆಯಲ್ಲಿರುವಾಗ ಜಿಲ್ಲೆಯ ಪ್ರಥಮ ಸ್ವಾತಂತ್ರ್ಯೋತ್ಸವ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನಿತರು, ಶಾಲಾ ಕರ್ನಾಟಕ ಸಂಘದ ಕಾರ್ಯದರ್ಶಿ. ಮೈಸೂರು ಜವಾಬ್ದಾರಿ ಸರಕಾರದ ಸಾಧನೆಯ ಆಂದೋಲನದಲ್ಲಿ ಸ್ಥಾನಬದ್ದತೆಯಲ್ಲಡಲ್ಪಟ್ಟಿದ್ದರು.

ಭಾರತದ ವಾಯುದಳದ ಮಾಜಿ ಏರ್ಮನ್ ಆದ ಇವರು ಹಾಕಿ, ಟೇಬಲ್ಟೆನಿಸ್ ಕ್ರೀಡಾಪಟು. ಪುಣೆಯ ಅಖಿಲ ಭಾರತ ರಕ್ಷಣಾಪಡೆಗಳ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ವಾಯುದಳವನ್ನು ಪ್ರತಿನಿಧಿಸಿದವರು. ಅಮೆಚೂರು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧಿಕೃತ ಕ್ರೀಡಾಧಿಕಾರಿ. ಬೆಂಗಳೂರು ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರ ನಿಲಯಗಳ ಪ್ರಥಮ ಕ್ರೀಡೋತ್ಸವ (೧೯೭೩) ವನ್ನು ಸಂಘಟಿಸಿದವರು. ಬೆಂಗಳೂರು ಜಿಲ್ಲೆ ಭಾರತ ಸೇವಾದಳ, ಯೂತ್ ಹಾಸ್ಟೆಲ್ ಅಸೋಸಿಯೇಷನ್, ಮಂಗಳೂರು ವೈಎಂಸಿಎಗಳ ಕಾರ್ಯಕಾರಿ ಸದಸ್ಯರೂ, ಬೆಂಗಳೂರು ವಾಯುದಳ ಸ್ಟೋರ್ಕೀಪರ್ಸ್ ಅಸೋಸಿಯೇಷನ್ನಿನ ರಾಜ್ಯಘಟಕದ ಅಧ್ಯಕ್ಷರೂ ಆಗಿದ್ದರು. ರಾಜ್ಯ ಸಮಾಜಕಲ್ಯಾಣ ಅಧಿಕಾರಿ ಸಂಘದ ಸಂಸ್ಥಾಪಕ ಕಾರ್ಯದರ್ಶಿಗಳು.

'ಉದಯೋನ್ಮುಖ ಸಮಾಜ' 'ಉತ್ಕ್ರಮಣ ಶ್ರೇಣಿ ಹಾಗೂ ವ್ಯಕ್ತಿ ಗೌರವ' 'ಸಾಮಾಜಿಕ ಬದಲಾವಣೆ - ಒಂದು ವಿಧಾನ' 'ಕುಡುಬಿ ಬುಡಕಟ್ಟು' ಮುಂತಾದ ಪ್ರಬಂಧಗಳನ್ನು ರಚಿಸಿದ್ದಾರೆ. ಗೋಥೆನ್ಬರ್ಗ್ ವಿಶ್ವವಿದ್ಯಾಲಯವು ಪ್ರಕಟಿಸಿದ 'ಪರೋಕ್ಷ ಆಡಳಿತದ ರಾಜ್ಯಭಾರ ಮತ್ತು ಆರ್ಥಿಕ ಫಲ - ಮೈಸೂರು' ಪ್ರಕರಣ ಗ್ರಂಥನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ್ದಾರೆ. ಸಮಾಜಕಲ್ಯಾಣ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಅನುಭವಿಗಳೂ ಬಾನುಲಿ ಭಾಷಣಕಾರರೂ ಆಗಿದ್ದಾರೆ.

ಸಮಾಜಶಾಸ್ತ್ರದಲ್ಲಿ ಪದವೀಧರರಾಗಿರುವ ಇವರು ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿ. ಬರೋಡ ಎಂ ಎಸ್ ವಿಶ್ವವಿದ್ಯಾಲಯದಲ್ಲಿ 'ನಗರ ಸಮುದಾಯ ಸಂಘಟನೆ'ಯ ವಿಶೇಷ ಶಿಕ್ಷಣ ಪಡೆದು ನಗರ ಸಮುದಾಯಾಭಿವೃದ್ಧಿ ಯೋಜನಾಧಿಕಾರಿಯಾಗಿ, ಯುವಜನಸೇವಾ ಸಂಘಟನಾಧಿಕಾರಿಯಾಗಿ, ಹಲವು ಅಭಿರುಚಿಯ ಯುವಕಸಂಘಗಳನ್ನೂ, ಮಹಿಳಾ ಮಂಡಲಿಗಳನ್ನೂ, ಸಮುದಾಯ ಸಂಘಟನೆಗಳನ್ನೂ ಸಂಘಟಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಆರ್ಥಿಕ ಆಡಳಿತದಲ್ಲಿ ಕನ್ನಡ ಮಾದರಿ ರುಜುವನ್ನು ಅಳವಡಿಸಿಕೊಂಡು ೧೯೭೩ರಲ್ಲೇ ನಿಮ್ನ ವರ್ಗಗಳ ವಿದ್ಯಾರ್ಥಿವೇತನ ಮಂಜೂರಾತಿಗಳನ್ನು ಕನ್ನಡದಲ್ಲಿ ಹೊರಡಿಸಿದ ಪ್ರಥಮ ಅಧಿಕಾರಿಯಿವರು.

ಸರ್ಕಾರಿ ಸೇವೆಯ ನಂತರವೂ ಪ್ರಗತಿಪರ ಯೋಜನೆಗಳಲ್ಲಿ ತೊಡಗಿಸಿಕೊಂಡವರು. ಬೆಂಗಳೂರಿನಲ್ಲಿ ಎರಡುಸಲ ಕನ್ನಡ ಕ್ರೈಸ್ತ ಬರಹಗಾರರ ಶಿಬಿರಗಳನ್ನು ಸಂಘಟಿಸಿದವರು. ಅಂಬೇಡ್ಕರರ ಬಗ್ಗೆ ಇವರು ಬರೆದ ಪುಸ್ತಕ ಎರಡು ಮುದ್ರಣಗಳನ್ನು ಕಂಡಿದೆ.