ಸಿ ಎ ಎ: ಅಮೇರಿಕದ ಅಧಿಕಪ್ರಸಂಗ
ಭಾರತ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸುತ್ತಿರುವ ಹಿಂದುಗಳು, ಕ್ರೈಸ್ತರು, ಸಿಕ್ಕರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ತನ್ನ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸಹಜವಾಗಿಯೇ ಈ ನಡೆಯಿಂದ ಆತಂಕಕ್ಕೆ ಒಳಗಾಗಿರುವ ಭಾರತದಲ್ಲಿನ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸಿ ಎ ಎ ವಿರುದ್ಧ ಅಪಸ್ವರ ಹೊರಡಿಸಿವೆ. ನೆರೆಯ ಪಾಕಿಸ್ತಾನ ಕೂಡಾ ಇಂತಹ ನಡೆಯ ವಿರುದ್ಧ ಅಪಸ್ವರ ಎತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ ಅಮೇರಿಕ ಕೂಡಾ ತಾನು ಸಿ ಎ ಎ ಜಾರಿಯಿಂದ ಆತಂಕಗೊಂಡಿರುವುದಾಗಿಯೂ, ಅದರ ಅನುಷ್ಟಾನವನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿಯೂ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಇದಂತೂ ಅಮೇರಿಕದ ಅನಪೇಕ್ಷಿತ ಹೇಳಿಕೆಯೇ ಸರಿ. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಯಾವುದೇ ಅಧಿಕಾರ ಅಮೇರಿಕಕ್ಕಿಲ್ಲ. ಧಾರ್ಮಿಕ ಅಸಮಾನತೆಯನ್ನು ತಾನು ಸಹಿಸುವುದಿಲ್ಲ ಎಂದೂ ಅಮೇರಿಕವು ಹೇಳಿದ್ದು, ಅದಕ್ಕೆ ಸಿ ಎ ಎ ಕುರಿತಾದ ಪ್ರಾಥಮಿಕ ಜ್ಞಾನವೂ ಇಲ್ಲವೆಂದು ಇದು ತೋರ್ಪಡಿಸುತ್ತದೆ. ಭಾರತದ ಕ್ರಮವು ಮಾನವೀಯ ನೆಲೆಯಿಂದ ಕೂಡಿದ್ದು ಅದಕ್ಕೆ ನಿಜವಾಗಿ ಅಮೇರಿಕದಂತಹ ದೇಶಗಳು ಶ್ಲಾಘನೆಯ ನುಡಿಯಾಡಬೇಕಿತ್ತು. ಇಷ್ಟಕ್ಕೂ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಯಾವುದೇ ಕಾಯ್ದೆಯನ್ನು ಜಾರಿಗೆ ತರುವ ಅಧಿಕಾರ ಭಾರತಕ್ಕಿದೆ. ಅದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ.
ಹಿಂದೂಗಳ ಹಿತಾಸಕ್ತಿಗೆ ಪೂರಕವಾಗುವಂತಹ ಯಾವುದೇ ಮ್ಕ್ರಮ ತೆಗೆದುಕೊಂಡರೂ ಭಾರತದಲ್ಲಿ ಕೆಲವರಿಗೆ ಮೈ ನವೆ ಉಂಟಾಗುತ್ತದೆ. ಅಮೇರಿಕದಂತಹ ದೇಶಗಳೂ ಅದಕ್ಕೆ ದನಿಗೂಡಿಸುತ್ತವೆ. ಆದರೆ ಸಿ ಎ ಎ ಕಾಯ್ದೆಯಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನಮ್ಮ ದೇಶದಲ್ಲಿ ರಕ್ಷಣೆ ನೀಡುವ ಅವಕಾಶಗಳಿವೆಯೇ ಹೊರತು, ಬೇರಾರಿಗೂ ಅದರಿಂದ ತೊಂದರೆ ಕೊಡುವ ಪ್ರಸ್ತಾಪವೇ ಇಲ್ಲ. ಮುಸ್ಲಿಮರನ್ನು ಈ ಕಾಯ್ದೆಯಿಂದ ಹೊರಗಿಡಲು ಕಾರಣವೇನೆಂದರೆ, ನೆರೆಯ ಮುಸ್ಲಿಮ್ ರಾಷ್ಟ್ರಗಳಲ್ಲಿ ಅವರು ಧಾರ್ಮಿಕ ನೆಲೆಯಲ್ಲಿ ದೌರ್ಜನ್ಯ ಅನುಭವಿಸುವ ಸಾಧ್ಯತೆಯಿಲ್ಲ ಎಂಬ ಕಾರಣಕ್ಕಾಗಿ. ಭಾರತೀಯ ಮುಸ್ಲಿಮರಿಗಂತೂ ಈ ಕಾಯ್ದೆಯಿಂದ ಯಾವುದೇ ಪ್ರತಿಕೂಲವಿಲ್ಲ ಎಂಬುದನ್ನು ಹಲವಾರು ಪ್ರಜ್ಞಾವಂತ ಮುಸ್ಲಿಮ್ ಮುಖಂಡರೇ ಹೇಳಿದ್ದಾರೆ. ಅಮೇರಿಕವು ತನ್ನ ಮಿತಿಯನ್ನು ಆರಿತುಕೊಂಡು ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸದಿರುವುದೇ ಒಳ್ಳೆಯದು.
ಕೃಪೆ: ‘ಹೊಸ ದಿಗಂತ' ಸಂಪಾದಕೀಯ, ದಿ: ೧೬-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ