ಸೀಟ್ ಬ್ಲಾಕ್ ದಂಧೆ ನಿಲ್ಲಲಿ

ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು ೧೮೧೫ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟು ಬಯಸಿ ಈ ವರ್ಷ ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಸೀಟ್ ಬ್ಲಾಕಿಂಗ್ ದಂಧೆಯ ಅನುಮಾನಕ್ಕೆ ಪುಷ್ಟಿ ನೀಡಿದೆ.
ವೈದ್ಯ ಕೋರ್ಸ್ ಕಷ್ಟವಾಗುತ್ತಿದೆ ಎಂಬ ಕಾರಣ ನೀಡಿ ಕೆಲ ವಿದ್ಯಾರ್ಥಿಗಳು ಮತ್ತೆ ಸಿಇಟಿ ಬರೆದು ಎಂಜಿನಿಯರಿಂಗ್ ಪ್ರವೇಶ ಬಯಸಿದ್ದಾರೆ. ಇನ್ನೂ ಕೆಲವರು ಕೋರ್ಸ್ ಇಷ್ಟವಾಗದ ಕಾರಣ ಎಂಜಿನಿಯರಿಂಗ್ ಕೋರ್ಸ್ಗೆ ಸೇರಬಯಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇಂಥ ಸಕಾರಣ ನೀಡಿ ಮತ್ತೆ ಸಿಇಟಿ ಬರೆಯುವುದಕ್ಕೆ ಅಭ್ಯಂತರವಿಲ್ಲ ಇದಕ್ಕೆ ನಿಯಮಗಳಲ್ಲೂ ಅವಕಾಶವಿದೆ. ಆದರೆ, ನೂರಾರು ವಿದ್ಯಾರ್ಥಿಗಳು ಕೋರ್ಸ್ ತ್ಯಜಿಸಿ ಮತ್ತೆ ಸಿಇಟಿ ಬರೆಯುವುದು ಸೀಟ್ ಬ್ಲಾಕ್ ದಂಧೆ ಕುರಿತು ಮಧ್ಯವರ್ತಿಗಳ ಮೇಲೂ ಅನುಮಾನ ಬರುವಂತಿದೆ.
ಈ ಹಿಂದೆ, ಉತ್ತರ ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕರೆಸಿ 'ನೀಟ್' ಪರೀಕ್ಷೆ ಬರೆಸುವ ಮೂಲಕ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳನ್ನು ಬ್ಲಾಕ್ ಮಾಡುತ್ತಿದ್ದ ದಂಧೆ ಯಥೇಚ್ಛವಾಗಿ ನಡೆಯುತ್ತಿತ್ತು. ಪದೇಪದೆ ಆಯ್ಕೆ ಕೊಟ್ಟು ಸೀಟು ಕಾಯ್ದಿರಿಸುವ ಮೂಲಕ ಅಂತಿಮ ಸುತ್ತಿನಲ್ಲಿ ಸೀಟು ದೊರೆತಾಗ ನಿಗದಿತ ಅವಧಿಯೊಳಗೆ ಪ್ರವೇಶ ಪಡೆಯದಿದ್ದಲ್ಲಿ ಅಂಥ ಸೀಟುಗಳು ಸಹಜವಾಗಿ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಪಾಲಾಗುತ್ತಿದ್ದವು. ಈ ದಂಧೆಯಲ್ಲಿ ಮಧ್ಯವರ್ತಿಗಳು, ಕಾಲೇಜಿನ ಕೆಲ ಸಿಬ್ಬಂದಿ ಭಾಗಿಯಾಗಿರುವುದು ಬಯಲಾಗಿತ್ತು. ಅಲ್ಲದೆ, ಸೈಬರ್ ಸೆಂಟರ್ಗಳಲ್ಲೂ ವಿದ್ಯಾರ್ಥಿಗಳ ದತ್ತಾಂಶ ಕದ್ದು ಸೀಟು ಬ್ಲಾಕ್ ಮಾಡುವ ದಂಧೆ ನಡೆಯುತ್ತಿದ್ದುದು ಜಗಜ್ಜಾಹೀರಾಗಿತ್ತು.
ಕ್ರಮೇಣ ಸೀಟು ಬ್ಲಾಕ್ ದಂಧೆ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೂ ಕಾಲಿಟ್ಟಿತು. ಜೆಇಇ ಹಾಗೂ ಅಖಿಲ ಭಾರತ ಕೋಟಾದಡಿ ವೈದ್ಯ ಸೀಟು ಪಡೆದ ವಿದ್ಯಾರ್ಥಿಗಳಿಂದ ಮಧ್ಯವರ್ತಿಗಳು ಮತ್ತೆ ಸಿಇಟಿ ಬರೆಸಿ ಸೀಟ್ ಬ್ಲಾಕ್ ಮಾಡುವ ದಂಧೆ ಮುಂದುವರಿಸುವುದಕ್ಕೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಾರಿ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.
ವಿದ್ಯಾರ್ಥಿಯ ಅರ್ಜಿ ನಂಬರ್ ಜತೆಗೆ ಮೊಬೈಲ್ಗೆ ಒಟಿಪಿ, ಅಭ್ಯರ್ಥಿ ಮುಖಚರ್ಯೆ ಪತ್ತೆ ನಂತರ ಲಾಗಿನ್ ಆಗುವ ಕ್ರಮ ಕೈಗೊಂಡಿದೆ. ಇದರಿಂದ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದು ತಪ್ಪಿದೆ. ಅಲ್ಲದೆ, ಅರ್ಜಿ ಸಲ್ಲಿಸುವುದರಿಂದ ಹಿಡಿದು ಅಂತಿಮವಾಗಿ ಕಾಲೇಜಿನಲ್ಲಿ ಪ್ರವೇಶ ಪಡೆಯುವವರೆಗೂ ಈ ವ್ಯವಸ್ಥೆ ಚಾಲ್ತಿಯಲ್ಲಿರುತ್ತದೆ. ಇದರಿಂದ ಅರ್ಹ ಅಭ್ಯರ್ಥಿಯ ಸೀಟು ಬೇರೆಯವರ ಪಾಲಾಗುವುದು ತಪ್ಪಲಿದೆ. ಈ ವಿದ್ಯಾರ್ಥಿಗೆ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ತಮ್ಮ ಇಚ್ಛೆಗೆ ಅನುಸಾರ ತಮಗಿಷ್ಟವಾದ ಕಾಲೇಜಿನಲ್ಲಿ ಸೀಟು ಸಿಕ್ಕರೂ ಉದ್ದೇಶಪೂರ್ವಕವಾಗಿ ಪ್ರವೇಶ ಪಡೆಯದಿದ್ದಲ್ಲಿ ಅಂಥವರ ಮೇಲೆ ಕೆಇಎ ನಿಗಾ ವಹಿಸಿ, ವಿಚಾರಣೆ ನಡೆಸಬೇಕಿದೆ. ಸೀಟು ಬ್ಲಾಕ್ ದಂಧೆಗೆ ಈಗಲೇ ಕಡಿವಾಣ ಹಾಕದಿದ್ದರೆ, ಈ ಸಮಸ್ಯೆ ಪುನರಾವರ್ತನೆಗೊಳ್ಳುವ ಅಪಾಯವೂ ಇಲ್ಲದಿಲ್ಲ, ಕೆಇಎ ಕಟ್ಟೆಚ್ಚರ ವಹಿಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೧-೦೫-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ