ಸೀಡ್ ಟ್ರೇನಲ್ಲಿ ಬೀಜ ಬಿತ್ತನೆ

ಸೀಡ್ ಟ್ರೇನಲ್ಲಿ ಬೀಜ ಬಿತ್ತನೆ

ಮಳೆಗಾಲಕ್ಕೆ ಇನ್ನೂ ಹಲವು ತಿಂಗಳುಗಳಷ್ಟು ಸಮಯವಿದೆ. ಈಗಲೇ ತರಕಾರಿ ಬೆಳೆಯುವವರು ಕೆಲವೊಂದು ಪೂರ್ವ ತಯಾರಿಗಳನ್ನು ಮಾಡಿಟ್ಟುಕೊಂಡರೆ ಮಳೆಗಾಲದ ಸಮಯದಲ್ಲಿ ಪ್ರಯೋಜನಕ್ಕೆ ಬರುವ ಸಾಧ್ಯತೆ ಇದೆ. ತರಕಾರಿ ಬೆಳೆಸುವವರು ಬೀಜವನ್ನು ನೇರ ಬಿತ್ತನೆ ಮಾಡುವ ಬದಲಿಗೆ ಅದನ್ನು ಸೀಡ್ ಟ್ರೇಗಳಲ್ಲಿ ಬಿತ್ತನೆ ಮಾಡಿ, ಸಸಿ ಆದ ಬಳಿಕ  ಅದನ್ನು ನಾಟಿ ಮಾಡಿದರೆ ಉತ್ತಮ ಫಲಿತಾಂಶ ಖಂಡಿತಾ ಸಿಗುತ್ತದೆ. ಈ ತಂತ್ರಜ್ಞಾನದ ಬಗ್ಗೆ ಆಸಕ್ತ ತರಕಾರಿ ಕೃಷಿಕರು ಆಲೋಚನೆ ಮಾಡುವುದು ಒಳ್ಳೆಯದು.

ಮಳೆಗಾಲದಲ್ಲಿ ತರಕಾರಿ ಬೇಸಾಯ ಮಾಡುವವರು ಇನ್ನೇನು ಮಳೆಗಾಲ ಪ್ರಾರಂಭವಾಗುವ ಸಮಯ ಜೂನ್ ತಿಂಗಳಲ್ಲಿ  ಸಿದ್ದತೆ ಮಾಡುತ್ತಾರೆ. ಅಷ್ಟಾಗುವಾಗ ಜೂನ್ ತಿಂಗಳಲ್ಲಿ ೨ ವಾರ ಕಳೆದಿರುತ್ತದೆ. ನಂತರ ನೇರವಾಗಿ ಸಾಲುಗಳಲ್ಲಿ ಬೀಜ ಬಿತ್ತನೆ ಮಾಡುತ್ತಾರೆ. ಅದು ಮೊಳೆತು ಸಸಿಯಾಗಿ ಬೆಳೆಯುವಾಗ ಜೂನ್ ತಿಂಗಳು ಕಳೆದು ಜುಲೈ ಬಂದಿರುತ್ತದೆ. ಆಗ ಬಿರುಸಾದ ಮಳೆ ಸುರಿಯಲು ಪ್ರಾರಂಭವಾಗುತ್ತದೆ. ಸಸಿ ಎಳೆಯದಿದ್ದರೆ ಅದು ಬೆಳೆಯಬಹುದು ಇಲ್ಲವೇ ಅದರ ಬೆಳವಣಿಗೆ ಕುಂಠಿತವಾಗಬಹುದು. ಅದಕ್ಕೆ ಮಳೆಗಾಲ ಬರುವ ಸಮಯದಲ್ಲೇ ಸಾಮಾನ್ಯವಾಗಿ ನೆಡುವಷ್ಟು ಬಲಿತ ಸಸಿಗಳನ್ನೇ ಮಾಡಿ ಸಾಲುಗಳಲ್ಲಿ ನಿರ್ದಿಷ್ಟ ಅಂತದಲ್ಲಿ ನೆಟ್ಟು, ಮಳೆ ಜೋರಾಗಿ ಹುಯ್ಯುವ ಸಮಯಕ್ಕೆ ಸಸಿ ಬೆಳೆಯುವಂತಾದರೆ ನಷ್ಟ ಕಡಿಮೆ. ಈ ರೀತಿ ಸಸಿ ಮಾಡಿಕೊಂಡು ತರಕಾರಿ ಬೆಳೆದರೆ ಬೇಗ ಫಸಲು ಪ್ರಾರಂಭವಾಗುತ್ತದೆ. ಬೇಗ ಫಸಲು ಪ್ರಾರಂಭವಾದರೆ ಬೆಲೆ ಉತ್ತಮವಾಗಿರುತ್ತದೆ.

ಬೀಜಗಳನ್ನು ಎಷ್ಟು ಉತ್ತಮವಾಗಿ ಬಿತ್ತಿ ಸಸಿ ಮಾಡಿಕೊಳ್ಳುತ್ತೇವೆಯೋ ಅದರ ಮೇಲೆ ಅದರ ಮುಂದಿನ ಬೆಳವಣಿಗೆ ನಿಂತಿರುತ್ತದೆ. ನಮ್ಮ ಹಿರಿಯರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತನ್ನು ಹೇಳಿದ್ದು ಎಲ್ಲರಿಗೂ ಗೊತ್ತಿದೆ. ಅಂದರೆ ಮೊಳಕೆ ಬರುವಾಗ ದಷ್ಟ ಪುಷ್ಟವಾಗಿ ಬಂದರೆ ಅದಕ್ಕೆ ಜೀವಿತದ ಶಕ್ತಿ ಬಂದಂತೆ ಸೀಡ್ ಟ್ರೇ ಎಂಬ ಹೆಸರಿನಲ್ಲಿ ಬೀಜ ಬಿತ್ತಿ ಸಸಿ ಮಾಡುವ ಪಾತ್ರೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದಕ್ಕೆ ತುಂಬುವ ಮಾಧ್ಯಮವೂ ಸಹ ಲಭ್ಯವಿದೆ. ಇದನ್ನು ತುಂಬಿ ಮಳೆಗಾಲ ಪ್ರಾರಂಭವಾಗುವ ಮುಂಚೆ ಸಸಿ ಮಾಡಿಟ್ಟುಕೊಂಡರೆ ಮಳೆ ಪ್ರಾರಂಭವಾಗುವಾಗುವ ಸಮಯದಲ್ಲೇ ಸಸಿಯನ್ನು ನಾಟಿ ಮಾಡಿ ಬೇಗ ಫಸಲು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆಸುವವರು, ತಾರಸಿ ಮೇಲೆ ತರಕಾರಿ ಬೆಳೆಸುವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇವರು ಬೀಜಗಳನ್ನು ನೇರವಾಗಿ ಚಟ್ಟಿಗಳಲ್ಲಿ ಅಥವಾ ಗ್ರೋ ಬ್ಯಾಗುಗಳಿಗೆ ಹಾಕಿ ಸಸಿ ಮಾಡುತ್ತಾರೆ. ಈ ಬೀಜಗಳನ್ನು ಇರುವೆಗಳು ತಿಂದು ಅಥವಾ ಮೊಳಕೆ ಬರಲು ಸೂಕ್ತ ಅನುಕೂಲ ಇಲ್ಲದೆ ಕಷ್ಟದಿಂದ ಹುಟ್ಟಿದ ಸಸಿಗಳ ಬದುಕುವ ಪ್ರಮಾಣ ತುಂಬಾ ಕಡಿಮೆ ಇರುತ್ತದೆ.  ಒಂದೊಂದು ಚಟ್ಟಿಗೆ ಮೂರು ನಾಲ್ಕು ಬೀಜ ಬಿತ್ತಬೇಕಾಗುತ್ತದೆ. ಸೀಡ್ ಟ್ರೇ ಗಳಲ್ಲಿ ಸಸಿ ಮಾಡಿದಾಗ ಈ ಸಮಸ್ಯೆ ಇಲ್ಲ. ಸೀಡ್ ಟ್ರೇನಲ್ಲಿ ಸಸಿ ೧/೨ ಅಡಿಯಷ್ಟು ಬೆಳೆದ ಮೇಲೆ ಅದನ್ನು ಚಟ್ಟಿ ಇಲ್ಲವೇ ಗ್ರೋ ಬ್ಯಾಗಿಗೆ ವರ್ಗಾಯಿಸಿದರಾಯಿತು. ಸಸಿಯನ್ನು ತೆಗೆಯುವಾಗ ಯಾವುದೇ ಪೆಟ್ಟು ಆಗುವುದಿಲ್ಲ. ಎಲ್ಲಾ ನಮೂನೆಯ ತರಕಾರಿಗಳ ಬೀಜಗಳನ್ನಿ ಈ ಸೀಡ್ ಟ್ರೇನಲ್ಲಿ ಬಿತ್ತನೆ ಮಾಡಬಹುದು. ದೊಡ್ಡ ಟ್ರೇ ಆದರೆ ಸಸಿಯನ್ನು ೧ ಅಡಿ ತನಕವೂ ಬೆಳೆಸಿ ನಾಟಿ ಮಾಡಬಹುದು. ಇದರರಿಂದ ನೇರವಾಗಿ ತರಕಾರಿ ಬೀಜ ಬಿತ್ತಿ ಸಸಿ ಮೊಳೆತು ಬೇರು ಬಂದು ಸೆಟ್ ಆಗುವ ಸುಮಾರು ೧೫-೨೦ ದಿನ ಉಳಿತಾಯವಾಗಿ ಅಷ್ಟು ಬೇಗ ತರಕಾರಿಯ ಇಳುವರಿ ಪಡೆಯಬಹುದು. ಬರೇ ತರಕಾರಿಯಲ್ಲದೆ ನೇರವಾಗಿ ನೆಟ್ಟು ಸಸಿ ಮಾಡುವ ಎಲ್ಲಾ ನಮೂನೆಯ  ಸಸ್ಯಗಳನ್ನೂ ಇದೇ ರೀತಿ  ಬೆಳೆಸಬಹುದು.

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ