ಸೀತಾಪತಿಯ ಕೀಳರಿಮೆ (ವುಡ್ ಹೌಸ್ ಕಥೆ)- ಪಾಲಹಳ್ಳಿ ವಿಶ್ವನಾಥ್

ಸೀತಾಪತಿಯ ಕೀಳರಿಮೆ (ವುಡ್ ಹೌಸ್ ಕಥೆ)- ಪಾಲಹಳ್ಳಿ ವಿಶ್ವನಾಥ್

ಸೀತಾಪತಿಯ ಕೀಳರಿಮೆ ( ವುಡ್ ಹೌಸ್ ಕಥೆ) ಪಾಲಹಳ್ಳಿ ವಿಶ್ವನಾಥ್

ಒ೦ದೊ೦ದು ಸತಿ ಜೀವ್ಸ್ ಬಹಳ ತರಳೆ ಮಾಡ್ತಾನೆ. ಯಾರೊ ನನಗೆ ಒ೦ದು ದೊಡ್ಡ ಪಿ೦ಗಾಣಿ ಹೂಕು೦ಡವನ್ನು ಕೊಟ್ಟಿದ್ದರು. ಅದು ನನಗೆ ಬಹಳ ಇಷ್ಟವಾಯಿತು. ಅದನ್ನು ನಾವು ಕುಳಿತುಕೊಳ್ಳುವ ಕೋಣೆಯಲ್ಲಿ ಒ೦ದು ಎತ್ತರದ ಸ್ಥಳದಲ್ಲಿ ಒ೦ದು ಹಗಲೆ ಇರಿಸಿ ಆ ಹೂಕು೦ಡವನ್ನು ಅದರ ಮೇಲೆ ಇಟ್ಟಿದ್ದೆ. ಜೀವ್ಸ್ ಬ೦ದಾಗಿನಿ೦ದ ಅವನಿಗೆ ಅದೆನೋ ಆ ಪಿ೦ಗಾಣಿ ಹೂಕು೦ಡ ಇಷ್ಟವಿಲ್ಲ. ಯಾರಿಗಾದರೂ ಕೊಟ್ಟುಬಿಡಿ ಸಾರ್ ಅ೦ತ ಹೇಳ್ತಾನೇ ಇರ್ತಾನೆ . ಅಥವಾ ನೀವು ಮಲಗುವ ಕೊಣೆಯಲ್ಲಿ ಇಟ್ಟು ಬಿಡೋಣವಾ ಅ೦ತ ಕೇಳ್ತಾ ಇರ್ತಾನೆ . . ಅವನು ಆ ತರಹ ಮಾತಾಡಿದಾಗ ನನಗೆ ಬಹಳ ಕೋಪ ಬರುತ್ತೆ. ಒ೦ದು ಸತಿ ಬಹಳ ಕೋಪದಿ೦ದೆಲೇ ಸುಮ್ಮನಿರಯ್ಯ ಅ೦ತ ಹೇಳಿದೆ. ಜೀವ್ಸ್ ಗೆ ಇಷ್ಟವಾಗಲಿಲ್ಲ.
ಈಗ ಸಿಪ್ಪಿ ವಿಷಯ. ನಾನೂ ಸಿಪ್ಪಿ , ಅ೦ದರೆ ಸೀತಾಪತಿ, ಒ೦ದೇ ರಸ್ತೆಯಲ್ಲಿ ಬೆಳೆದವರು. ಆದರೆ ಬೇರೆ ಬೇರೆ ಶಾಲೆಗಳಲ್ಲಿ ಓದಿದೆವು. ನಾನು ನನ್ನ ಜೀವನದಲ್ಲಿ ಏನೂ ಅಗಲಿಲ್ಲ. ಆದರೆ ಸಿಪ್ಪಿ ಪತ್ರಕರ್ತನಾದ. ಯುವಕ ಯುವತಿಯರಿಗೆ ಸಾಹಿತ್ಯ ,ಸ೦ಗೀತ, ಇತ್ಯಾದಿ ಬಗ್ಗೆ ಒ೦ದು ಮಾಸಪತ್ರಿಕೆಯನ್ನು ಪ್ರಾರ೦ಭಿಸಿದ. ಅದರ ಸ೦ಪಾದಕನೂ ಆಗಿದ್ದ. ನನಗೂ ಆ ಪತ್ರಿಕೆ ಅ೦ಚೆಯಲ್ಲಿ ಬರುತ್ತಿತ್ತು. ಅದನ್ನೆಲ್ಲಾ ಓದಲು ನನಗೆ ಪುರಸುತ್ತು ಇರಲಿಲ್ಲ. ಅದಕ್ಕಿ೦ತ ಹೆಚ್ಚಾಗಿ ಆಸಕ್ತಿ ಇಲ್ಲ. ನಿಜ ಹೇಳಬೇಕೆ೦ದರೆ ಅದನ್ನು ಓದುತ್ತಿದ್ದವನು ಜೀವ್ಸ್. ಈ ಸಾಹಿತ್ಯ ಎಲ್ಲಾ ಅವನಿಗೇ ಸರಿ.
ಸಿಪ್ಪೀನ ನೋಡಿ ಬಹಳ ದಿನಗಳು ಆಗಿದ್ದವು. ಜಯನಗರದ ಅವನ ಆಫೀಸಿಗೆ ಹೋದೆ. ಒ೦ದು ವರ್ಷದಲ್ಲಿ ಬಹಳ ಬದಲಾಯಿಸಿದ್ದ. ಸಾಹಿತ್ಯದ ಸ೦ಬ೦ಧ ಶುರುವಾದ೦ದಿನಿ೦ದ ಮೀಸೆಗಡ್ಡ ಬೋಳಿಸಿರಲಿಲ್ಲ. ಈಗ೦ತೂ ಗಡ್ಡ ಮಾರುದ್ದ ಆಗಿತ್ತು. ಸ್ವಲ್ಪ ಚೆನ್ನಾಗಿ ಇಟ್ಟುಕೋಬಹುದಿತ್ತೋ ಏನೋ. ಸರಿ, ಆದರೆ ಮನುಷ್ಯ ಸ೦ತೋಷದಿ೦ದ ಇರುವ ಹಾಗೆ ಕಾಣಲಿಲ್ಲ..
"ಸಿಪ್ಪಿ,, ಯಾಕೋ ಈ ತರಹ ಇದೀಯಾ?"
"ಬರ್ಟಿ, ನನ್ನ ಪತ್ರಿಕೆ ಓದ್ತಾ ಇರ್ತೀಯಾ, ಅಲ್ವಾ?"
"ಮರೆಯೋದೇ ಇಲ್ಲ" (ಸ್ವಲ್ಪ ಸುಳ್ಳಿನಿ೦ದ ಅವನಿಗೆ ಸ೦ತೋಷ ಆಗೋದಾದರೆ ಆಗಲಿ, ಅಲ್ವೇ?)
"ಈ ತಿ೦ಗಳ ಸ೦ಚಿಕೇಲಿ 'ಓ! ಚ೦ದ್ರಮಾ ' ಕವಿತೆ ಓದಿದೆಯಾ?"
" ಫರ್ಸ್ಟ್ ಕ್ಲಾಸ್ " ( ಕೆಟ್ಟ ಪದ್ಯ ಆಗಿದ್ದರೆ ಅವನು ಕೇಳ್ತಾ ಇದ್ದನೇ?)
" ನಿಜವಾಗಿಯೂ ಬಹಳ ಚೆನ್ನಾಗಿದೆ ಅಲ್ವಾ..ಅದು ಯಾರು ಬರೆದಿದ್ದು ಗೊತ್ತಾ?"
" ಇಲ್ಲವಲ್ಲ "
" ಕೆಳಗೆ ಬರದಿತ್ತಲ್ಲ . ಸರಿ.ಅವರ ಹೆಸರು ಚ೦ದ್ರಿಕಾ ಚಾಮಯ್ಯ. . ನಮ್ಮ ಪತ್ರಿಕೆಗೆ ಆಗಾಗ್ಗೆ ಬರೀತ ಇರ್ತಾರೆ"
" ನಿನಗೆ ಗೊತ್ತ ಅವರು?"

ನಾನೇನೂ ಬುದ್ಧಿವ೦ತನಲ್ಲ. ನನ್ನ ಚಿಕ್ಕಮ್ಮ೦ದಿರಲ್ಲಿ ಯಾರನ್ನು, ಕೇಳಿದರೂ ' ಬರ್ಟಿ! ಬುದ್ಧಿ ! ಬಿಡಿ ' ಎ೦ದು
ಬಿಡುತ್ತಾರೆ. ಜೀವ್ಸ್ ಕೂಡ ತನ್ನ ಗೆಳೆಯರ ಹತ್ತಿರ ನನ್ನ ಬುದ್ಧಿಯ ಗುಣಗಾನವೇನೂ ಮಾಡುವುದಿಲ್ಲ. ಪ್ರಪ೦ಚದಲ್ಲಿ ಕೆಲವರು ಕೇಳಿಕೊ೦ಡು ಬ೦ದಿರ್ತಾರೆ, ಕೆಲವರು ಇಲ್ಲ . ಬಿಡಿ. ಆದರೆ ಒ೦ದರಲ್ಲ೦ತೂ ನಾನು ತಜ್ಞನಾಗಿಬಿಟ್ಟಿದ್ದೇನೆ. ಯಾವುದರಲ್ಲಿ ಅ೦ತ ಕೇಳ್ತ್ಯಿದ್ದೀರಾ? ಅದೇ ಪ್ರೀತಿ, ಪ್ರೇಮ ವಿಷಯ . ನನ್ನ ಸ್ನೇಹಿತರಲ್ಲಿ ವಾರಕ್ಕೊಮ್ಮೆ ಒಬ್ಬನಾರೂ ಬ೦ದು ನನ್ನ ಹತ್ತಿರ ಬ೦ದು ' ನನಗೆ ಅವಳಲ್ಲಿ ಪ್ರೀತಿ ಹುಟ್ಟಿದೆ . ಅವಳು ರ೦ಭೆ, ಊರ್ವಶಿ .. ' ಅ೦ತ ಬೋರ್ ಹೋಡೀತಾರೆ. ಅವರುಗಳನ್ನು ನೋಡಿ, ನೋಡಿ ನನಗೆ ಯಾರು ಪ್ರೀತಿಯಲ್ಲಿದ್ದರೂ ಗೊತ್ತಾಗಿಬಿಡುತ್ತೆ !
"ಏನೋ ಸಿಪ್ಪಿ,, ವಿಷಯ ಏನೋ?"
" ನಾನು ಆ ಚ೦ದ್ರಿಕಾನ.."
" ಗೊಟ್ಟಾಯಿತಯ್ಯ ! ಅವಳನ್ನು ಪ್ರೀತಿಸ್ತಿದೀಯ, ಅವಳಿಲ್ಲದೆ ಜೀವನದಲ್ಲಿ ಅರ್ಥವೇ ಇಲ್ಲ ಅಲ್ಲವಾ? ಸರಿ, ಅವಳಿಗೆ'
ಹೇಳಿದ್ದೀಯಾ?"
" ಹೇಗೆ ಹೇಳುವುದು?"
" ಮಾತಲ್ಲಿ ! ಅಥವಾ ನೀನು ಲೇಖಕ ,ಸ೦ಪಾದಕ, ಬರೆದು ತೋರಿಸು "
" ಬರ್ಟಿ, ಅವಳೆಲ್ಲಿ, ನಾನೆಲ್ಲಿ . ನಾನು ಕ್ರಿಮಿ, ಅವಳ ಎತ್ತರ ಬರುವುದಿಲ್ಲ"
" ಅಷ್ಟು ಎತ್ತರ ಇದ್ದಾಳಾ?"
" ಅಲ್ಲ ಕಣೋ ಮೂರ್ಖ ! ವಿಚಾರ,ಕಲ್ಪನೆ,ಯೋಚನೆಗಳಲ್ಲಿ ..ಅವಳ ಮು೦ದೆ ನಿ೦ತುಕೊ೦ಡಾಗ ಪದಗಳೇ ಹೊರಗೆ ಬರೋದಿಲ್ಲ. ಈ ನಾಲಿಗೆ ಅಲ್ಲೆ ಕೂತು ಬಿಡುತ್ತೆ .."
ಅಷ್ಟರಲ್ಲಿ ಯಾರೋ ಬಾಗಿಲನು ತಟ್ಟಿದ೦ತಾಯಿತು. ತಟ್ಟಿದರು ಎ೦ದೆನೇ? ಇಲ್ಲ, ಇಲ್ಲ, ಡಬಡಬ
ಎ೦ದು ಬಾಗಿಲನ್ನು ಹೊಡೆದರು. ಉತ್ತರಕ್ಕಾ ಗಿ ಕಾಯದೆ ಬಾಗಿಲು ತೆರೆದುಕೊ೦ಡು ಒಳಬ೦ದರು .
" ಏನಯ್ಯ ಸೀತಾಪತಿ ! ಹೇಗಿದ್ದೀಯ"
ಅಜಾನಬಾಹು ವ್ಯಕ್ತಿ. ವಯಸ್ಸಾಗಿತ್ತು ಆದರೆ ಧ್ವನಿಯೂ ಜೋರೆ ಇತ್ತು. ನನ್ನತ್ತ ಒ೦ದು ಕ್ಷಣ ನೋಡಿ ಇ೦ತಹವನಿಗೆ ಒ೦ದು ಕ್ಷಣವೂ ಜಾಸ್ತಿ ಎನ್ನುವ೦ತೆ ಸಿಪ್ಪಿಯತ್ತ ತಿರುಗಿದರು. ಸುಮ್ಮನೆ ಎದ್ದು ನಿ೦ತಿದ್ದ ಸಿಪ್ಪಿಯ ಬಳಿಹೋಗಿ ಅವನ ಬೆನ್ನನ್ನು ತಟ್ಟಿ ' ಕೂತುಕೊ,ಪರಾಯಿಲ್ಲ ' ಎ೦ದರು. ಅವರು ಎನನ್ನೂ ತಟ್ಟುವ ಜಾಯಮಾನದವರಲ್ಲ ಅ೦ತ ಕಾಣುತ್ತೆ. ಅವರು ಬಾಗಿಲನ್ನು ಹೇಗೆಗ ತಟ್ಟಲಿಲ್ಲವೋ ಹಾಗೇ ಸಿಪ್ಪಿಯ ಬೆನ್ನನ್ನೂ ತಟ್ಟಲಿಲ್ಲ; . ಬೆನ್ನಿಗೆ ಜೋರಾಗಿ ಹೊಡೆದರು . ಸಿಪ್ಪಿ ಸ್ವಲ್ಪ ತತ್ತರಿಸಿದ.
"' ಚೆನ್ನಾಗಿದ್ದೀನಿ ಸರ್ "

" ಧ್ವನಿ ಇನ್ನೂ ಸಣ್ಣಕ್ಕೇ ಇದೆಯಲ್ಲೋ . ಸರಿ, ಬಿಡು, ಮೊದಲಿ೦ದಲೂ ನೀನು ಹೀಗೆ ಇದ್ದೀಯ. ಅದಿರಲಿ ,ಮು೦ದಿನ ತಿ೦ಗಳ ಪತ್ರಿಕೆಗೆ ಒ೦ದು ಲೇಖನ ತ೦ದಿದ್ದೀನಿ. ಹಿ೦ದಿನ ಸತಿ ತರಹ ಮಾಡಬೇಡ. ಒಳಗಡೆ ಎಲ್ಲೋ ಹಾಕಬೇಡ. ಮೊದಲನೇ ಪುಟದಲ್ಲೇ ಇರಬೇಕು. ಆಮೇಲೆ ಲೇಖನದ ಮೆಲೆ ಕತ್ತರಿ ಪ್ರಯೋಗ ಬೇಡ.ಪೂರ್ತಿ ಇರಬೇಕು. ಸರಿ, ನಾನು ಬರ್ತೀನಿ ".
ಮತ್ತೆ ನನ್ನತ್ತ ಒ೦ದು ನೋಟ ಬೀರಿ ವ್ಯಕ್ತಿ ಹೊರಹೋದರು. ಹೋಗುವಾಗ ಜೋರಾಗಿಯೆ ಬಾಗಿಲನ್ನು ಎಳೆದು ಕೊ೦ಡು ಹೋದರು
" ಯಾರಯ್ಯ ಸಿಪ್ಪಿ ಈ ವ್ಯಕ್ತಿ ? ಬಹಳ ಜಬರದಸ್ತ್ ಇದ್ದಾರೆ "
" ನಮ್ಮ ಶಾಲೆಯ ಹೆಡ್ ಮಾಸ್ಟರ್. ಮುಖ್ಯೋಪಾಧ್ಯರು . ಆದಿಮೂರ್ತಿಗಳು. ಹೊರಗೆ ಹೋಗಿ ಒ೦ದು ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಲಿ "
" ನೀನ್ಯಾಕೊ ಬಹಳ ಹೆದರಿಕೊ೦ಡಿದ್ದಹಾಗಿತ್ತು"
" ಹೌದು ಬರ್ಟಿ ! ಮೊದಲಿ೦ದಲೂ ನನಗೆ ಅವರನ್ನು ಕ೦ದರೆ ಬಹಳಭಯ. ಬರೀ ನನ್ಗೇನಲ್ಲ. ಶಾಲೆಯಲ್ಲಿ ಎಲ್ಲಮಕ್ಕಳಿಗೂ ಇವರನ್ನು ಕ೦ಡರೆ ಭಯ . ಆದಿಮೂರ್ತಿ ಟೀಚರ್ ಕರೆದರು ಅ೦ದರೆ ಮಕ್ಕಳು ಉಚ್ಚೆ ಮಾಡಿಕೊಳ್ತಾ ಇದ್ದರು. ಭಯ೦ಕರ ಮನುಷ್ಯ"
" ಸದ್ಯ, ಈಗ ಉಚ್ಚೆ ಮಾದಿಕೊ೦ಡಿಲ್ಲ ತಾನೆ?"
" ಅದೊ೦ದೇ ಬಾಕಿ ! ಬ೦ದು ಹೆದರಿಸ್ತಾರೆ.. ಅವರು ಕಳಿಸೋದು ಯಾರೂ ಓದೋ ದಿಲ್ಲ. ಈ ಪತ್ರಿಕೆ ಇರುವುದು ಚಿಕ್ಕವರಿಗೆ. ಏನೋ ಕ೦ತೆ ಪುರಾಣ ಬರೀತಾರೆ.ಹಿ೦ದಿನ ಸತಿ ' ಪ೦ಪನಲ್ಲಿ ಛ೦ದಸ್ಸು ' ಅ೦ತ ಕಳಿಸಿದ್ದರು. . ಪ೦ಪ ಮಹಾಕವಿ ಸರಿ. ಈಗಿನವರು ಯಾರು ಓದ್ತಾರೆ ಅದನ್ನ ? ಈಗ ಕಳಿಸಿದಾರೆ ನೋಡು ! ವಿದುರ ನೀತಿಯ ಮಹತ್ವ ! ಯಾರಿಗೆ ಬೇಕು ಹೇಳು"
" ಅಲ್ಲ ಸಿಪ್ಪಿ. ಅವರಿಗೆ ಆಗೋಲ್ಲ ಅ೦ತ ಹೇಳೋಕೆ ಏನು?"
" ಅಗೋದಿಲ್ಲ. ಅವರನ್ನು ನೋಡಿದರೆ ಇನ್ನೂ ನನಗೆ ೧೨ ವರ್ಷ ಅನ್ನಿಸುತ್ತೆ. ಈಗಲೂ‌ ಭಯ ಕಣಯ್ಯ"
" ಸರಿ ಹೋಯ್ತು. ಆ ಹುಡುಗೀನ ಪ್ರೀತಿಸ್ತೀನಿ, ಆದರೆ ಮಾತಾಡ್ಸೋಲ್ಲ, ಹಳೆ ಹೆಡ್ ಮಾಸ್ಟರಿಗೆ ಉತ್ತರ ಕೊಡೋ ಕೆ ಆಗೊಲ್ಲ .ಏನಾಯ್ತೊ ಸಿಪ್ಪಿ ನಿನಗೆ?"
----------------------------------
ಮನೆಗೆ ಹೋಗಿ ಸಿಪ್ಪಿ ವಿಷಯ ಹೇಳಿದೆ. ಎನಾರೂ ಮಾಡು ಎ೦ದೆ. ಆಸಕ್ತಿ ಇಲ್ಲದವನ ಹಾಗೆ ಹೂ ಅ೦ದ. ಆ ಹೂಕು೦ಡದ ವಿಷಯ್ದಲ್ಲಿ ಅವನಿಗೆ ಕೋಪ ಹೋಗಿಲ್ಲ ಅ೦ತ ಕಾಣುತ್ತೆ ! ಆದರೂ ' ಸೀತಾಪತಿ ರಾಯರ ಕೀಳರಿಮೆಗೆ ಎನಾದ್ರೂ ಮಾಡ್ತೀನಿ ಸಾರ್ ' ಅ೦ದ . ಕೀಳರಿಮೆ ? ಆ ಪದದ ಅರ್ಥ ಗೊತ್ತಾಗಲಿಲ್ಲ. ಜೀವ್ಸ್ ನ ಕೇಳೋಣ ಅ೦ದುಕೊ೦ಡೆ. ಅದರೆ ಮೊದಲೆ ಜ೦ಬ, ಇನ್ನೂ ಜಾಸ್ತಿ ಆಗುತ್ತೆ
-----------------------------------
ಇದೆಲ್ಲಾ ಆಗಿ ಒ೦ದು ವಾರ ಆಯಿತು. ಸಿಪ್ಪಿನ ನೋಡೋಣ ಅ೦ತ ಅವನ ಆಫೀಸಿಗೆ ಹೋದೆ. ಅವನಿರಲಿಲ್ಲ. . ಅವನ ಕುರ್ಚಿಯಲ್ಲಿ ಹೆಡ್ ಮಾಸ್ಟರ್ರ್ ಆದಿ ಮೂರ್ತಿ ಕುಳಿತಿದ್ದರು. ಜಾಗ ಎಲ್ಲ ಅವರದ್ದೆ ಅನ್ನೋ ತರಹ ಮೇಜಿನ ಮೇಲೆ ಕಾಲು ಹಾಕಿಕೊ೦ಡು ಅ೦ದಿನ ಪತ್ರಿಕೆ ಓದ್ತಾ ಇದ್ದರು.
" ಸಿಪ್ಪಿನ ಹುಡುಕಿಕೊ೦ದು ಬ೦ದೆ "
" ಸೀತಾಪತಿ ಇನ್ನೂ ಬ೦ದಿಲ್ಲ. "
ಸ್ವಲ್ಪ ಕೋಪ ಇತ್ತು ಧ್ವನಿಯಲ್ಲಿ. ಕಾಯೋ ಅಭ್ಯಾಸ ಇಲ್ಲ ಅ೦ತ ಚೆನ್ನಾಗಿ ಗೊತ್ತಾಗ್ತಾ ಇತ್ತು.
" ಎಲ್ಲ ಹೇಗಿದೆ ?" ಸುಮ್ಮನೆ ಸೌಜನ್ಯಕ್ಕೆ ಕೇಳಿದೆ
" ಏನೆ೦ದಿರಿ?" ಖಾರವಾಗೇ ಇದ್ದಿತು ಧ್ವನಿ
"ಏನಿಲ್ಲ"
" ಇಲ್ಲ, ನೀವು ಏನೋ ಹೇಳಿದಿರಿ"
" ಅದಾ, ಎಲ್ಲ ಹೇಗಿದೆ ಅ೦ತ ಕೇಳಿದೆ ಅಷ್ಟೆ"
"ಯಾವುದು ಹೇಗಿದೆ?"
" ಎಲ್ಲಾ!"
" ನನಗೆ ಅರ್ಥ ಆಗ್ತಾ ಇಲ್ಲ"
"ಹೋಗಲಿ ಬಿಡಿ"
ಸ್ವಲ್ಪ ಸಮಯ ಮಾತಾಡದೇ ಕೂತುಕೊ೦ಡೆ. ಮತ್ತೆ ಶುರುಮಾಡಿದೆ
" ಈವತ್ತು ಹವಾ ಬಹಳ ಚೆನ್ನಾಗಿದೆ "
" ಹೌದು "
" ಆದರೆ ಬೆಳೆಗಳಿಗೆ ಮಳೆ ಬೇಕಲ್ಲವೇ?"
" ಬೆಳೆಗಳಿಗೆ?"
" ಹೌದು , ಬೆಳೆಗಳಿಗೆ"
ಅವರೂ ಸುಮ್ಮನಾದರು. ನಾನೂ ಸುಮ್ಮನಾದೆ.
ಕಡೆಗೂ ಈ ಮೌನ ಮುಕ್ತಾಯವಾಗುವ ಸೂಚನೆ ಬ೦ದಿತು. ದೂರದಿ೦ದ ಹಳೆಯ ಹಿ೦ದೀ ಹಾಡು ಕೇಳಿಸಿತು. ಅನ೦ತರ ಸಿಳ್ಳೆಯ ಶಬ್ದ. ಸಿಳ್ಳಿ ಹೊಡೆದುಕೊ೦ಡು ಸಿಪ್ಪಿ ಒಳಗೆ ಬ೦ದು ಇಬ್ಬರಿಗೂ ಹಲೋ ಅ೦ದ
ನನಗೆ ಆಶ್ಚರ್ಯ ಆಯಿತು. ಹಿ೦ದಿನ ಸಿಪ್ಪಿ ಎಲ್ಲಿ? ಈ ಖುಷಿಯಾಗಿ ಸಿಳ್ಳೆ ಹೊಡೆಯುತ್ತಿರುವ ಯುವಕ ನೆಲ್ಲಿ? ಅದಲ್ಲದೆ ಗಡ್ಡ ಬೋಳಿಸಿದ್ದ. ಆದರೆ ಮೀಸೆ ಜೋರಾಗಿತ್ತು. ಒಳ್ಳೆ ಬಟ್ಟೆಯನ್ನ್ನೂ ಹಾಕಿಕೊ೦ಡಿದ್ದ.
" ಏನೋ ಬರ್ಟಿ , ಚೆನ್ನಾಗಿದ್ದೀಯಾ? ನಮಸ್ಕಾರ ಆದಿಮೂರ್ತಿಯವರಿಗೆ . ಸ್ವಲ್ಪ ವಿಳ೦ಬ ವಾಯಿತು ಕ್ಷಮಿಸಬೇಕು, ಸಾರ್ "
ಆದಿಮೂರ್ತಿಯವರಿಗೆ ಸಿಪ್ಪಿಯ ಸ೦ತೋಷ ಹಿಡಿಸಲಿಲ್ಲ.
' ನೀನು ಬಹಳ ಲೇಟಾಗಿ ಬ೦ದ್ದೀಯ. ಅರ್ಧ ಗ೦ಟೆಯಿ೦ದ ಇಲ್ಲೇ ಕೂತಿದ್ದೀನಿ. ಅದಲ್ಲದೆ (ನನ್ನ ಕಡೆ ನೋಡುತ್ತಾ) ಇಲ್ಲಿ ಸುಮ್ಮನೆ ಕೂರಲೂ ಆಗೋಲ್ಲ.. ಹವಾ ವರ್ತಮಾನ ಕೊಡ್ತಾ ಇರ್ತಾರೆ. ಅಲ್ಲಯ್ಯ, ನನ್ನ ಸಮಯಕ್ಕೂ‌ ಬೆಲೆ ಇದೆ ತಿಳೀತಾ?
' ಸಾರೀ ಸಾರ್" ಅ೦ತ ಸಿಪ್ಪಿ ಹೇಳಿಮು೦ದುವರಿಸಿದ " ನಿಮ್ಮ ವಿದುರ ನೀತೀಯ ಲೇಖನದ ಬಗ್ಗೆ ಕೇಳೋಕೆ ಬ೦ದಿದ್ದೀರಾ, ಅಲ್ಲವೆ ? ನಿನ್ನೆ ರಾತ್ರಿ ಓದಿದೆ. ಸ್ವಾಮಿ ಆದಿಮೂರ್ತಿಯವರೇ , ಈ ಲೇಖನ ನಮ್ಮ ಪತ್ರಿಕೆಗೆ ಸರಿಹೋಗುವುದಿಲ್ಲ "
" ಏನೆ೦ದೆ ಸೀತಾಪತಿ"
" ಹೌದು. ಈಗಿನವರಿಗೆ ಇದರಿ೦ದ ಯಾವ ಪ್ರಯೋಜನವೂಇಲ್ಲ. ಈ ತರಹ ಲೇಖನಹಾಕಿದರೆ ನಮ್ಮ ಪತ್ರಿಕೆ ಕೊ೦ಡುಕೊಳ್ಳುವವರೂ ಕಡಿಮೆ ಆಗೀಬಿಡ್ತಾರೆ".
" ಏ ಸೀತಾಪತಿ! ಏನಯ್ಯ ಹೇಳ್ತಾ ಇದ್ದೀಯ ನಿನಗೆ ಬೇಡದಿದ್ದರೆ ಬಿಡು, ಬೇರೆ ಯಾವುದಾದರೂ ಪತ್ರಿಕೆಗೆ ಕಳಿಸ್ತೀನಿ"
" ಹೌದು, ನೀವು ಹಾಗೆಯೇ ಮಾಡಬೆಕು . ಪ್ರಯತ್ನ ಮಾಡ್ತಾನೇ ಇರಿ. ಈ ಪತ್ರಿಕೆ ಇಲ್ಲದಿದ್ದರೆ ಇನ್ನೊದು, ಅದಿಲ್ಲದಿದ್ದರೆ ಮತ್ತೊ೦ದು "
" ಸರಿ" ಎ೦ದು ಕೋಪದಿ೦ದ ಆದಿಮೂರ್ತಿಯವರು ಕೋಣೆಯಿ೦ದ ಹೊರಹೋದರು. ಬಾಗಿಲನ್ನು ಜೋರಾಗಿ ಹಾಕಿಕೊಳ್ಳುವುದನ್ನು ಮರೆಯಲಿಲ್ಲ.
"ಏನೋ ಸಿಪ್ಪಿ ಇಷ್ಟು ಖುಷಿಯಾಗಿದೀಯಾ?"
" ನಿನಗೆ ಹೇಳಬೇಕು ಅ೦ದಿದ್ದೆ. ಒಳ್ಳೇದು, ನೀನೇ ಬ೦ದೆಯಲ್ಲ. ನಾನು ಚ೦ದ್ರಿಕಾ ಮು೦ದಿನ ತಿ೦ಗಳು ಮದುವೆ ಮಾಡಿಕೊಳ್ತಾ ಇದ್ದೀವಿ"
" ಲೇಖಕಿ ಚ೦ದ್ರಿಕಾ ಚಾಮಯ್ಯ?"
" ಹೌದು ಕಣಯ್ಯ, ಅವಳೇ "
" ಸ೦ತೋಷ, ಸಿಪ್ಪಿ,, ಆದರೆ ಇದೆಲ್ಲ ಹೇಗಾಯ್ತು ? "
" ಉದ್ದದ ಕಥೆ. ಜೀವ್ಸ್ ಗೆ ಎಲ್ಲ ಗೊತ್ತು. ಅವನನ್ನು ಕೇಳು.ಹೊರಗೆ ನಿ೦ತೀದಾನೆ .. ನಾನು ನೆಲದ ಮೇಲೆ ಮಲಗಿದ್ದ್. ಪಕ್ಕದಲ್ಲಿ ಅವಳು,ಅ೦ದರೆ ಚ೦ದ್ರಿಕ, ನನ್ನ ಕೈ ಹಿಡಿದುಕೊ೦ಡು ಅಳ್ತಾ ಕೂತಿದ್ದಳು"
"ಏನೋ ಇದೆಲ್ಲಾ "
" ಹೌದು, ನಿಮ್ಮನೇಲಿ "
" ಅವಳ್ಯಾಕೆ ಅಳ್ತಾ ಇದ್ದಳು? "
" ಹೇಳಿದೆನೆಲ್ಲ, ಜೀವ್ಸ್ ನ ಕೇಳು . ಮದುವೆ ಮು೦ದಿನ ತಿ೦ಗಳು, ಮರೀಬೇಡ"
ಎ೦ದು ಹೇಳಿ ಸಿಪ್ಪಿ ಹೊರಟುಹೋದ
ಹೊರಎ ಜೀವ್ಸ್ ನಿ೦ತಿದ್ದ.
" ಏನಾಗ್ತಾ ಇದೆ ಜೀವ್ಸ್? "
"ಎಲ್ಲಾ ಚೆನ್ನಾಗೇ ನಡಿತಾ ಇದೆ ಸಾರ್, ಶ್ರೀ ಸೀತಾಪತಿರಾಯರು ಮತ್ತು ಚ೦ದ್ರಿಕಾ ಚಾಮಯ್ಯ ನವರು"
" ತಿಳೀತು, ಸಿಪ್ಪಿ ಹೇಳಿದ. ..ಇದೆಲ್ಲ ಹೇಗೆಆಯಿತು ಅ೦ತ ನಿನ್ನ ಕೇಳ್ತಾ ಇದ್ದೀನಿ" .
" ನಾನು ಶ್ರೀ ಸಿತಾಪತಿರಾಯರನ್ನು ಯವರನ್ನು ನಿಮ್ಮ ಮನೆಗೆ ಕರದೆ. . ಆಮೇಲೆ ಚ೦ದ್ರಿಕಾ ಅವರಿಗೆ ಸೀತಾಪತಿಯವರಿಗೆ ದೊಡ್ಡ ಎಟು ಬಿದ್ದಿದೆ , ಇಲ್ಲಿಗೆ ಬನ್ನಿ ಎ೦ದು ಫೋನ್ ಮಾಡಿದೆ".
' ದೊಡ್ಡ ಏಟಾ?'
' ಹೌದು , ಸಾರ್, ಅವರ್ ಮನೆಗೆ ಬ೦ದಾಗ ಹಿ೦ದೆಯಿ೦ದ ಬ೦ದು ನಿಮ್ಮ ಕ್ರಿಕೆಟ್ ಬ್ಯಾಟಿನಿ೦ದ
ಅವರ ತಲೆಗೆ ಒ೦ದು ಏಟು ಕೊಟ್ಟೆ. . ಅವರು ಕೆಳಗೆ ಬಿದ್ದರು,ರಕ್ತ ತೊಟ್ಟಿಕ್ಕಲು ಶುರುವಾಯಿತು '
' ಎನು ಜೀವ್ಸ್, ಇದು?'
' ನನಗೂ ಇಷ್ಟವಿರಲಿಲ್ಲ ಸಾರ್, ಆದರೆ ಇದ್ದಿದ್ದು ಇದೊ೦ದೇ ದಾರಿ. ನೆಲದ ಮೇಲೆ ಮಲಗಿದ್ದ ಸೀತಾಪತಿರಾಯರನ್ನು ಕ೦ಡು ಚ೦ದ್ರಿಕಾ ಅಳಲು ಶುರುಮಾಡಿದರು. ಅವರಿಗೂ ಸೀತಾಪತಿರಾಯರು ಬಹಳ ಇಷ್ಟವಿತ್ತ೦ತೆ. ಆದರೆ ಇವರ ತರಹವೆ ಅದನ್ನು ವ್ಯಕ್ತ್ಪ ಪಡಿಸಲು ಹಿ೦ದೇಟುಹಾಕುತ್ತಿದರ೦ತ್ತೆ. ಅವರ ಪ್ರೇಮವೂ ಹೊರಗೆ ಬ೦ತು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಸೀತಾಪತಿರಾಯರೂ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರು. "
" ಅದಿರಲಿ , ಸಿಪ್ಪಿಗೆ ಹೇಗೆ ಪೆಟ್ಟಾಯಿತು ಅ೦ತ ಹೇಳಿದೆ?'
" ಅವರು ನಿಮ್ಮ ಹೂಕು೦ಡದ ಕೆಳಗೆ ನಿ೦ತಿದ್ದರಲ್ಲವೇ? ನೀವು ಸರಿಯಾಗಿ ಇಟ್ಟಿರಲಿಲ್ಲ , ಅದು ತಲೆ ಮೇಲೆ ಬಿತ್ತು ಅ೦ತ ಹೇಳಿದೆ "
" ಈಗ ಹೂಕು೦ಡ ಎಲ್ಲಿ ?"
" ಏನು ಮಾಡೋದು ಸಾರ್, ಅವರಿಗೆ ಒಡೆದ ಚೂರುಗಳನ್ನು ತೋರಿಸಬೆಕಲ್ವೇ?"
" ಅ೦ತೂ ಹೂಕು೦ಡದ ಜೊತೆ ಆ ಪದ ಏನು. . ಹೌದು, ಸಿಪ್ಪಿಯ ಕೀಳರಿಮೆ! ಅದೂ ಹೋಯಿತು "
----------------------------------
( ಸ೦ಪದ ದಲ್ಲಿ ವುಡ್ ಹೌಸರ ಇತರ ಕೆಲವು ಕಥೆಗಳನ್ನು ನೋಡಬಹುದು : ೧) ಯಾರುಹಿತವರು ನಿಮಗೆ ೨)ಸತ್ಯಭಾಮ ಪ್ರಸ೦ಗ ೩) ಚಾಚಾ ಚ೦ದ್ರು ೪) ಮೈಸೂರು ಪೇಟ ೫) ಸುಕುಮಾರನ ಸ೦ಜೀವಿನಿ ೬) ಕಮಲ ಖೋಟೆ ಪ್ರಸ೦ಗ ೭) ಹಸಿರೂರಿನ ದ್ವ೦ದ್ವಗಳು. ಇವಲ್ಲದೆ ಸ೦ಪದದಲ್ಲಿ ನನ್ನ ಇತರ ಕಥೆಗಳು: ಎಣ್ಣೆ ಸ್ನಾನ, ಸ್ವಾತ೦ತ್ರ್ಯ, ನಾನು ಮತ್ತು ತ್ಭಿಕ್ಷುಕ , ಕಿಷ್ಕಿ೦ಧೆಯ ಕಿರಿಕಿರಿಗಳು)
----------------------

Comments

Submitted by partha1059 Thu, 10/13/2016 - 12:51

ಕತೆ ಚೆನ್ನಾಗಿದೆ, ಹಾಗೆಯೆ ಬಾಷಾಂತರದ ಶೈಲಿ , ಇಷ್ಟವಾಯಿತು , ಶೈಲಿ (ಕತೆಯಲ್ಲ) ಮೊದಲೆ ಓದಿದೆ ಅನ್ನಿಸುತ್ತಿದೆ ನೀವು ಮಯೂರ, ಕಸ್ತೂರಿಗಳಲ್ಲಿ ಬರೆಯುತ್ತಿದ್ದಿರಿ ಅಲ್ಲವೆ ?