ಸೀರೆ ವ್ಯಾಪಾರ

ಸೀರೆ ವ್ಯಾಪಾರ

ಕವನ

ಇಲಕಲ್ಲ ಸೀರಿ ಉಟ್ಕೊಂಡ ನಾರೀರು 

ಮದುವಿ ಛತ್ರಕ ಹೊಂಟಾರ

ಹೆಣ್ಣಿನ ಕಡಿ ಮಂದಿಯೆಲ್ಲ 

ಕಣ್ ಕಣ್ ಬಿಟ್ಕಂಡ ನೋಡ್ಯಾರ

 

ಮದುವಣಗಿತ್ತಿ ಮೊಗದಾ ನಾಚಿಕಿ 

ಇವರಾ ಮಾರಿಗಿ ಬಂದಾವ

ನಾಗರದಷ್ಟಕ ಉದ್ದದ ವೇಣಿಯು 

ಬೆನ್ನಿಲಿ ನಾಟ್ಯ ಆಡ್ಯಾವ

 

ಹತ್ತಿರ ಹೋದ್ರೆ ಪರಿಮಳವೆಂತದೂ 

ಸೆಂಟ್ ನು ಹಾಕ್ಕೊಂಡು ಬಂದಾರ

ಎಲ್ರೂ ಒಟ್ಟಿಗೆ ಕುಂತ್ಗಂಡು ಏನೋ 

ಮಾತನು ಆಡುತ ನಕ್ಕಾರ

 

ಸಾದಾ ಸೀರೆಯ ನಾರಿಯು ಒಬ್ಬಳು 

ಮಿಣಿಮಿಣಿ ಇವರನು ನೋಡ್ಯಾಳ

ಆಸೆಯು ಕಣ್ಣಲಿ ನೋಡುತ ಮೆಲ್ಲಗೆ 

ಬೆಲೆಯಿದಕೆಷ್ಟೆಂದು ಕೇಳ್ಯಾಳ

 

ನಮ್ಕಡಿ ಸಿಗಲ್ಲ ಇಂತ ಸೀರಿ 

ಎನ್ನುತ ಬಣ್ಣನೆ ಮಾಡ್ಯಾಳ

ದುಡ್ಡಿಗಿ ಸೀರಿ ಕಳಿಸಿ ಎಂದು 

ಅವರೊಡನಾಗಲೆ ಹೇಳ್ಯಾಳ

 

ಇಲಕಲ್ ಸೀರೆಯ ನಾರಿಯರೆಲ್ಲ

ಬಂದಿಹ ಗುಟ್ಟನು ಹೇಳ್ಯಾರ

ಆನ್ಲೈನ್ ಸಂಸ್ಥೆಯ ಸೇವಕಿಯರು ನಾವು 

ಎನ್ನುತ ವ್ಯಾಪಾರ ಮಾಡ್ಯಾರ

 

✍️ಲತಾ ಬನಾರಿ

(ಶಂಕರಾನಂದ ಹೆಬ್ಬಾಳಣ್ಣನ ಸಹಾಯದಿಂದ ಅಂದೊಮ್ಮೆ ಬರೆದ ಕವನ)

ಚಿತ್ರ್