ಸೀಳಿದ ಮನಸ್ಸು ಮತ್ತು ತೂತುಬಿದ್ದ ಬಕೆಟ್ಟು!

ಸೀಳಿದ ಮನಸ್ಸು ಮತ್ತು ತೂತುಬಿದ್ದ ಬಕೆಟ್ಟು!

ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಯವರು ಹೇಳಿದ ತಾತ್ವಿಕ ಚಿಂತನೆಗಾಗಿ ಒಂದು ಕಥೆ.

ಒಬ್ಬ ಜ್ಞಾನಿ ರಾಜನಿದ್ದ. ಪ್ರತಿದಿನ ಅವನ ಕ್ಷೌರ ಮಾಡಲು ಕ್ಷೌರಿಕನಿದ್ದ. ಆತನ ಕಾಯಕಕ್ಕೆ ಸಂಭಾವನೆ ಎರಡು ಚಿನ್ನದ ನಾಣ್ಯ. ಅಷ್ಟರಿಂದ ಆನಂದದ ಜೀವನ ಸಾಗಿಸುತ್ತಿದ್ದ. ಒಂದು ದಿನ ಬೇರೊಂದು ಊರಿಗೆ ಪ್ರಯಾಣ ಹೊರಟಿದ್ದ. ಮಾರ್ಗಮಧ್ಯ ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಮಲಗಿದ. ಆಯಾಸಗೊಂಡ ಶರೀರಕ್ಕೆ ಜಂಪು ಆವರಿಸಿತು. ಅರೆನಿದ್ರೆಯಲ್ಲಿ ಒಂದು ಕನಸು. ಕನಸಿನಲ್ಲಿ "ನಾನು ನಿನ್ನ ಮನೆಗೆ ಬರಬೇಕೆಂದಿದ್ದೇನೆ ಬರಲೇ" ಎಂಬ ಒಂದು ಧ್ವನಿ ಕೇಳಿಸಿತು. ಕ್ಷೌರಿಕ ಕೇಳಿದ ನೀನು ಯಾರು? ಧ್ವನಿ ಹೇಳಿತು, "ನಾನು ಏಳು ರಂಜಣಿ (ಕೊಪ್ಪರಿಗೆ)ಗೆ ಬಂಗಾರದ ನಾಣ್ಯ" ತುಂಬಿರುವ ಸಂಪತ್ತಿನ ದೇವತೆ ಎಂದು. ಯಾರು ಬೇಡ ಅಂದಾರು? ಅವಶ್ಯವಾಗಿ ಬಾ, ನಾನು ನಿನ್ನನ್ನು ಸ್ವಾಗತಿ ಸುತ್ತೇನೆ ಎಂದ ಕ್ಷೌರಿಕ. 'ಆಯಿತು ನೀನಿನ್ನು ಮನೆಗೆ ಹೋಗು, ನಾಳೆ ಬೆಳಿಗ್ಗೆ ನಾನು ನಿನ್ನ ಮನೆಯಲ್ಲಿರುತ್ತೇನೆ' ಎಂದಿತು. ಪ್ರಯಾಣ ಮರೆತ, ಮನೆಗೆ ಬಂದ. ರಾತ್ರಿ ನಿದ್ರೆ ಹೇಗೆ ಬರಬೇಕು?

ಬೆಳಿಗ್ಗೆ ಮನೆಯ ಹಿಂದಣ ಕೋಣೆಯಲ್ಲಿ ಏಳು ಹಂಡೆ. ಒಂದೊಂದನ್ನೇ ತೆರೆದುನೋಡುತ್ತ ಬಂದರೆ ಚಿನ್ನದ ನಾಣ್ಯಗಳಿಂದ ಆರು ತುಂಬಿದ್ದವು, ಏಳನೆಯದರಲ್ಲಿ ನಾಲ್ಕು ಬೆರಳಿನಷ್ಟು ಖಾಲಿ. ಇದೊಂದು ತುಂಬಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸಮಾಧಾನ. ಆರು ತುಂಬಿದ ಹಂಡೆ ಇವನ ಮನಸ್ಸನ್ನು ತುಂಬಲಿಲ್ಲ, ನಾಲ್ಕು ಬೆರಳು ಖಾಲಿ ಇರುವ ಏಳನೆ ಹಂಡೆ, ಮನಸ್ಸನ್ನು ಖಾಲಿ ಮಾಡಿತು. ಹೇಗಾದರೂ ಮಾಡಿ ಇದನ್ನು ತುಂಬಿಸಬೇಕು ಎಂಬ ಹಪಹಪಿ. ಹೆಂಡತಿಗೆ ಹೇಳಿದ, ನೀನೂ ಕಸ - ಮುಸುರೆ ಕೆಲಸಕ್ಕೆ ಹೋಗು, ಮಕ್ಕಳೂ ಎಲ್ಲಿಯಾದರೂ ಕೆಲಸಕ್ಕೆ ಹೋಗಲಿ, ಇದನ್ನು ಹೇಗಾದರೂ ಮಾಡಿ ತುಂಬಿಸೋಣ. ನಾಲ್ಕು ಬೆರಳು ತುಂಬಿಸುವುದೇನು ಕಷ್ಟ, ಒಂದೆರಡು ತಿಂಗಳಲ್ಲಿ ತುಂಬಿಸಬಹುದು ಎಂಬ ಯೋಚನೆಯಲ್ಲಿಯೇ ಅರಮನೆಗೆ ಹೋದ. ಲವಲವಿಕೆ ಇಲ್ಲದ ಇವನ ಮುಖ ನೋಡಿ ರಾಜ ಕೇಳಿದ, 'ಯಾಕೋ ಇಂದು ಚಿಂತೆಯಲ್ಲಿದ್ದೀ' ಎಂದಿನ ಖುಷಿ ಇಲ್ಲ ಎಂದು ಕೇಳಿದ. ಏನು ಮಾಡುವುದು ನೀವು ಕೊಡುವ ಎರಡು ನಾಣ್ಯ ಸಾಲುತ್ತಿಲ್ಲ ಎಂದ. ನಿನ್ನೆಯ ವರೆಗೆ ಎರಡು ನಾಣ್ಯಗಳಲ್ಲಿಯೇ ಅತ್ಯಂತ ಸುಖೀ ಜೀವನ ಸಾಗಿಸುತ್ತಿದ್ದವನಿಗೆ ಇಂದು ಕೊರತೆ. ಹಾಗೋ ಇಂದಿನಿಂದ ಮೂರು ನಾಣ್ಯ ತೊಗೊ ಎಂದು ಕೊಟ್ಟ. ಅದನ್ನು ಖರ್ಚು ಮಾಡದೇ ಹಂಡೆಗೆ ಹಾಕಿದ. ಹೆಂಡತಿ-ಮಕ್ಕಳ ದುಡಿಮೆಯಲ್ಲಿ ಖರ್ಚು ಕಡಿಮೆ ಮಾಡಿ, ಅದನ್ನೂ ಹಾಕಿದ. ದಿನಗಳುರುಳಿದವು, ಆದರೂ ಇವನಲ್ಲಿದ್ದ ಮೊದಲಿನ ಹಸನ್ಮುಖ ಮರಳಲಿಲ್ಲ. ರಾಜ ಮತ್ತೆ ಕೇಳಿದ, ಏನು ಮಾಡಲಿ ದುಬಾರಿ ದಿನಗಳು, ದುಡಿಮೆ ಸಾಲುತ್ತಿಲ್ಲ, ಸುಳ್ಳು ಹೇಳಲು ಪ್ರಾರಂಬಿಸಿದ. ಹಾಗೋ ಹತ್ತು ನಾಣ್ಯ ತೊಗೊ ಎಂದ. ಈ ರೀತಿ ತಮ್ಮ ದುಡಿಮೆಯ ಬಹು ಭಾಗವನ್ನು ಹಾಕುತ್ತ ಪ್ರತಿ ದಿನ ಅಳತೆ ನೋಡುತ್ತಿದ್ದ. ಅದು ಬರೊಬ್ಬರಿ ನಾಲ್ಕು ಬೆರಳು ಖಾಲಿಯಾಗಿಯೇ ಇರುತ್ತಿತ್ತು. 

ಅರೆಹೊಟ್ಟೆ ಉಣ್ಣುತ್ತ ದುಡಿದದ್ದನ್ನೆಲ್ಲ ವರ್ಷ ವಿಡೀ ಹಾಕಿದರೂ ತುಂಬದ್ದರಿಂದ ಜೀವನದ ಸುಖ ಸಂತೋಷಗಳೆಲ್ಲ ಮಾಯವಾಗಿ ರೋಗಿಷ್ಟನಂತೆ ಕಾಣತೊಡಗಿದ. ರಾಜ ಕೇಳಿದ, ಯಾಕೋ ಮೊದಲು ಎರಡು ನಾಣ್ಯಗಳಲ್ಲಿ ಸಂತೋಷದಿಂದಿರುತ್ತಿದ್ದವನು ಈಗ ಹತ್ತು ನಾಣ್ಯಗಳನ್ನು ಕೊಟ್ಟರೂ ಅತ್ಯಂತ ದುಃಖಿಯಾಗಿರುವೆಯಲ್ಲ ಎಂದು. ಆತ ಸುಮ್ಮನಿದ್ದ. ನಿನ್ನ ಮನೆಗೆ "ಏಳು ರಂಜಣಿಗೆಗಳು" ಏನಾದರೂ ಬಂದಿರುವವೇನು? ನಿಮಗೆ ಹೇಗೆ ಗೊತ್ತು? ನಾನೂ ಅದನ್ನೇ ಮಾಡಿ ಬಂದಿರುವವ ಅದಕ್ಕೇ ಕೇಳಿದೆ. 'ರಾಜ ಜ್ಞಾನಿಯಾಗಿದ್ದ'. ಆ ನಾಲ್ಕು ಬೆರಳು ಖಾಲಿ ಜಾಗ ಎಂದೂ ತುಂಬುವದಿಲ್ಲ. ಹೀಗೇ ಇದ್ದರೆ ನೀನು ಸತ್ತೇ ಹೋಗುತ್ತಿ. ಆ ದೇವತೆಯಿಂದ ಮೊದಲು ಬಿಡುಗಡೆ ಹೊಂದು ಎಂದು ಉಪದೇಶಿಸಿದ.

ಕ್ಷೌರಿಕ ಮನೆಗೆ ಬಂದು ಹೇಳಿದ, ದೇವೀ ನಿನ್ನನ್ನು ತುಂಬಿಸುವುದು ನನ್ನಿಂದಾಗುವುದಿಲ್ಲ ಹೋಗಿಬಾ ಎಂದು ಕೈಮುಗಿದ. ಆಗ ದೇವತೆ ಹೇಳಿತು, ಆಯಿತು ವರ್ಷವಿಡೀ ನಿನ್ನಿಂದ ನಾನು ಸಾಕಷ್ಟು ಉಂಡಿದ್ದೇನೆ. ಹೋಗ್ತೇನೆ, ನನ್ನನ್ನು ಬರಮಾಡಿಕೊಳ್ಳುವ ನಿನ್ನಂಥವರು ಇನ್ನೂ ಸಾಕಷ್ಟಿದ್ದಾರೆ, ನಾನಿರೋದೇ ಹಿಂಗ. "ನಾನು ಬರುವುದು ಮನುಷ್ನನ ಮನಸ್ಸನ್ನು ತುಂಬಲಿಕ್ಕಲ್ಲ ಬರಿದು ಮಾಡಾಕ".   

 *I am not here to make the people rich. I want to make them ever wanting.*

                *.ಇದು ಮಾನವರ ಮನಸ್ಸು.*

           ನಮ್ಮ ಮನಸ್ಸೇ ಹಂಡೆ. ಒಂದಲ್ಲ, ಏಳು.

ಅದು ತನ್ನಲ್ಲಿರುವ ವಸ್ತುಗಳಿಂದ ತೃಪ್ತಿಯಿಂದಿರುವುದಿಲ್ಲ. ಹತ್ತು ಎಕರೆ ಭೂಮಿ ಇದ್ದವರು ನೂರು ಎಕರೆ ಮಾಡಲು, ಲಕ್ಷ ರೂಪಾಯಿ ದುಡಿಮೆ ಇದ್ದವರು, ಕೋಟಿ ರೂಪಾಯಿ ಮಾಡಲು, ಮಂತ್ರಿ ಆಗಿದ್ದವ, ಮುಖ್ಯಮಂತ್ರಿ ಆಗಲು, ಜೀವನವಿಡೀ ಹೋರಾಡುತ್ತಿರುತ್ತಾರೆ. ತೃಪ್ತಿ ಎಂದಿಗೂ ಇರುವುದಿಲ್ಲ. ಹೋರಾಟದಲ್ಲಿಯೇ ಆಯುಸ್ಸು ಮುಗಿಯುತ್ತದೆ, " ಸಂಪತ್ತಿನ ದೇವತೆ ನಗುತ್ತಿರುತ್ತದೆ."

ಈ ಕಥೆಯನ್ನು ಹೇಳಿದ ಪೂಜ್ಯ ಸ್ವಾಮೀಜಿಯವರ ಚರಣ ಕಮಲಗಳಿಗೆ ನಮನಗಳು.

(ಆಧಾರ)