ಸುಂಕ ಕಟ್ಟಬೇಕಿದೆ...
ಹಸಿವು ನುಂಗುವ ತುತ್ತು ಅನ್ನ ಗಂಜಿಗೂ
ದಿನನಿತ್ಯದ ಹಾಲು ಮೊಸರು ಮಜ್ಜಿಗೆಗೂ
ಪೈಸೆ ಪೈಸೆಗೂ ಅಳೆತಗೋಲಿಟ್ಟು ಲೆಕ್ಕವಿಟ್ಟು
ಸುಂಕ ಕಟ್ಟಬೇಕಿದೆ
ಮುಂಜಾನೆಯಿಂದ ಮುಸ್ಸಂಜೆವರೆಗೆ
ಮೂರು ಕಾಸಿಗೆ ಮೈ ಮುರಿದು ದುಡಿದ
ಬಡವನ ಹರಿವ ನೆತ್ತರಲಿ ಪಡೆದ ಸರಕಿಗೂ
ಸುಂಕ ಕಟ್ಟಬೇಕಿದೆ
ತಾನು ಉತ್ತು ಬೆಳೆದ ದಾನ್ಯಗಳಿಗೆ
ಬೆಲೆ ಸಿಗದೆ ಬೀದಿಯಲಿ ಬಿಣಸಾಡಿದರೂ
ಲೆಕ್ಕಿಸದವರೂ ಪೊಟ್ಟಣದಲಿ ಖರೀದಿಸಿದರೆ ಸಾಕು
ಸುಂಕ ಕಟ್ಟಲೇಬೇಕಿದೆ
ಹತ್ತಿಪ್ಪತ್ತು ಸರಕು ಸರಾಂಜಾಮುಗಳಿಗೆ
ಹಸಿವು ನೀಗಿಸುವ ಆಹಾರ ನೀರಿಗೂ
ಜೀವ ಉಳಿಸುವ ಮಾತ್ರೆ ಔಷದಿಗಳಿಗೆ
ಸುಂಕ ಕಟ್ಟಬೇಕಿದೆ
ಬಿಸಿಲು ಮಳೆಯಿಂದ ಹಾಳಾದ ಬೆಳೆ
ಕೈಗೆಟುಕದೆ ಸಾಲದ ಹೊರೆ ಏರಿದೆ
ಬ್ಯಾಂಕುಗಳ ಸಾಲಕ್ಕೆ ಚಕ್ರಬಡ್ಡಿ ಮಿತಿಮೀರಿದೆ
ದುಡಿಯುವ ದೇಹ ದಣಿದು ಬಡವಾದರೂ
ಸುಂಕ ಕಟ್ಟಬೇಕಿದೆ
ಹೊಟ್ಟೆಯ ಹಸಿವಾ ತಣಿಸುವ ಗಂಜಿ ತುತ್ತಿನ
ಸೋರುವಾ ಮಳೆಯಲಿ ಬದುಕು ಕಟ್ಟಿಕೊಂಡರೂ
ಕೈ ಬೊಗಸೆಯಲಿ ಬಗೆದು ಉಳಿದು ಅಳಿದರೂ
ಸುಂಕ ಕಟ್ಟಬೇಕಿದೆ
ಬ್ಯಾಂಕುಗಳಿಂದ ಸಾಲ ಪಡೆದು
ಉದ್ದಿಮೆಗಳಿಗೆ ಉಂಡೆ ನಾಮ ಹಾಕಿ
ಮೋಜ ಮಸ್ತಿ ಮಾಡುವವರ
ವಿದೇಶಕ್ಕೆ ಹಾರಿದವರಾ ಸಾಲ ಮನ್ನಾ ಮಾಡಲಾದರೂ
ಸುಂಕ ಕಟ್ಟಬೇಕಿದೆ
ಐಷಾರಾಮಿ ವೈಭೋಗದಿ ಮೆರೆವಾ
ವಜ್ರ ವೈಡೂರ್ಯಗಳಿಗೆ ಕೊಂಚವೇ
ರಜತ ಪರದೆಯ ಮೇಲೆ ಹಸಿವಿನ
ಹಸಿ ಸುಳ್ಳಿನ ಕಥೆ ಹೇಳುವವರಿಗೆ
ಸುಂಕ ಕಟ್ಟಬೇಕಿದೆ
ಮೃಷ್ಢಾನ್ನಭೋಜನ ತಿನ್ನುವ ಕೆಲವರ ತಣಿಸಲೂ
ಹಸಿವಿನ ಹೊಟ್ಟೆಯಲಿ ಬೆನ್ನಿಗಂಟಿದ ದೇಹದಿ
ಉಳಿದ ಬಡ ಮಾಂಸ ರಕ್ತ ಬಸಿದಾದರೂ
ಸುಂಕ ಕಟ್ಟಬೇಕಿದೆ
ರಾಜಕೀಯದವರ ಹಸಿ ಸುಳ್ಳಿನ ಮಾತಿಗೂ
ಆಡಂಬರದ ಹುಸಿ ಸುಳ್ಳು ಆಶ್ವಾಸನೆಗಳ
ಸುಂಕ ಬಿದ್ದರೆ ಬಡವನೆದೆಯಲಿ ನೆಮ್ಮದಿಗೆ
ಸುಂಕ ಕಟ್ಟಬೇಕಿದೆ ...
-ದಿವಾಕರ್.ಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ