ಸುಂದರಿಯರ ಕಾಟವೋ ಕಾಟ !

ಸುಂದರಿಯರ ಕಾಟವೋ ಕಾಟ !

 

 
ಇಂದಿನ ಕೆಲಸ ಆಯ್ತು ... ಅದೇನು ’ಇಂದಿನ’ ಅಂತ ನಿಖರವಾಗಿ ಅಂದ್ರ? ಹೀಗೆ ಒಬ್ಬರು ಒಂದು ಸಂಜೆ ನನ್ನ ಬಳಿ ’ಎಲ್ಲ ಕೆಲಸ ಆಯ್ತಪ್ಪ, ನಾನು ಹೊರಟೆ ಅಂದ್ರು" ... ನಾನು ಕೇಳಿದೆ "ಅಂದ್ರೇ, ನಾಳೆಯಿಂದ ನೀವು ಬರೋಲ್ಲ ಹಾಗಿದ್ರೆ?" ಅಂತ .. ಇದೇ ಪ್ರಶ್ನೆ ನನ್ನನ್ನು ಯಾರೂ ಕೇಳಬಾರದು ನೋಡಿ ! ಅದಕ್ಕೇ ಅಷ್ಟು ನಿಖರವಾದ ಸ್ಟೇಟ್ಮೆಂಟು ...
 
ಕರಿ ಬಣ್ಣದ ಜರ್ಕಿನ್ ತೊಟ್ಟು, ಬ್ಯಾಕ್-ಪ್ಯಾಕ್ ಹೊತ್ತು, ಹೆಲ್ಮೆಟ್’ಅನ್ನು ಕೈಯಲ್ಲಿ ಪಿಡಿದು ಠೀವಿಯಿಂದ ಹೊರಟೆ ... ಬೈಕಿನಲ್ಲಿ ಹೋಗೋ ಮಜ, ಕಾರಿನಲ್ಲಿ ಇರೋಲ್ಲ ಕಣ್ರೀ ... ನಿಜ, ನನ್ ಹತ್ತಿರ ಕಾರು ಇಲ್ಲ, ಅದಕ್ಕೇ ಹಾಗೆ ಹೇಳಿದ್ದು !!
 
ನನ್ನ Cube’ನಿಂದ ಹೊರಬಂದು, ಯಾವುದೋ ಲವ್-triangle ಸಿನಿಮಾ ಕಥೆ ಡಿಸ್ಕಸ್ ಮಾಡುತ್ತಿದ್ದ ಸ್ನೇಹಿತರ Circle’ಗೆ line’ಆಗಿ ಬ್ಯೆ ಹೇಳುತ್ತ, ಆಕಾಶದಾಗೆ ನಕ್ಷತ್ರ ಮೂಡುವ ಮುನ್ನ ಮನೆ ಸೇರುವ ತವಕದಿ ಹೊರಟಂತೆ, ನನ್ನ ಬಗ್ಗೆಯೇ ಏನೋ ಜೋಕು ಹೇಳಿದ ಅವರುಗಳ ನಗೆಯ volume ಸೂರು ಹಾರುವ ಹೋಗೋ ಆದಂತೆ, ಆ Area’ದಲ್ಲಿ ಇದ್ದರೆ ತೊಂದರೆ ಎಂದುಕೊಂಡು ಧಡ ಧಡ ನೆಡೆದು ಲಿಫ್ಟ್’ನ ಬಳಿ ಬಂದೆ ... ಸಾರಿ, ನಾನೇನೂ ಜ್ಯಾಮೆಟ್ರಿ ಕ್ಲಾಸ್ ತೊಗೊಳ್ತಿಲ್ಲ !
 
ನಾನಿದ್ದ ಪ್ಲೋರ್’ಗೆ ಬರುತ್ತಿದ್ದ ಲಿಫ್ಟ್’ಗೆ  ಕಾಯುತ್ತಿದ್ದ ಹುಡುಗಿಯೊಬ್ಬಳ ಜೊತೆ ನಾನೂ ನಿಂತೆ ... ಬಂದು ನಿಂತ ಲಿಫ್ಟ್’ನ ಒಳಗೆ ಅವಳ ಹಿಂದೆಯೇ ಹೋದೆ ! ಯಾರಪ್ಪಣೆಯೂ ಇಲ್ಲದೆ ಬಾಗಿಲು ತಾನಾಗೆ ಜಡಿದುಕೊಂಡಿತು ..
 
ಲಿಫ್ಟ್’ನ ಬಾಗಿಲಿಗೆ ಎದುರಾಗಿ ತಿರುಗಿದ್ದ ನಾನು, ಶರ್ಟ್’ನ ಕಾಲರ್’ಅನ್ನು ಸರಿ ಮಾಡಿಕೊಂಡು, ಹೆಲ್ಮೆಟ್’ಅನ್ನು ಕೊಂಕಳ ಕೆಳಗೆ ಇಟ್ಟುಕೊಂಡು ಕನ್ನಡಕ ಸರಿಪಡಿಸಿಕೊಂಡೆ ... ನನ್ನ ಮನದಲ್ಲಿ ನಾನು ಬೈಕ್ ರೇಸ್’ನ ಸವಾರನಾಗಿದ್ದೆ. ಲಿಫ್ಟ್ ಬಾಗಿಲು ತೆರೆದುಕೊಂಡಿತು ... ಹೊರಗೆ ಅಡಿಯಿಟ್ಟೆ ....
 
ಇದೇನಿದು? ನಾನು ಲಿಫ್ಟ್ ಏರಿದ ಫ್ಲೋರ್ ! ಬೆಪ್ಪುತಕ್ಕಡಿ ಬೋಳೇ ಶಂಕರ ನಾನು !! ಲಿಫ್ಟ್’ನಲ್ಲಿ ಹೋದ ಮೇಲೆ ಸುಮ್ನೆ ನಿಂತರೆ ಅದು ತಾನೇ ಏನು ಮಾಡುತ್ತೆ?
 
ಹಾಗೇ ಮತ್ತೆ ಒಳಗೆ ಹೋದೆ ... ಈ ಬಾರಿ ಗುಂಡಿ ಒತ್ತುವುದ ಮರೆಯಲಿಲ್ಲ ... ಹುಡುಗಿ ನಗುತ್ತಾ ಫೋನಿನಲ್ಲಿ ಏನೋ ಮಾತನಾಡುತ್ತಿದ್ದಳು ... ನನಗೆ ಆ ಭಾಷೆ ಅರಿಯದಿದ್ದರೂ ನನ್ನ ಘನವಾದ ಜ್ಞ್ನಾನದ ಬಗ್ಗೆಯೇ ಮಾತು ಎಂದು ಚೆನ್ನಾಗಿ ಅರಿವಾಗಿತ್ತು ! ಥತ್! ಇಷ್ಟು ಹೊತ್ತೂ ಸ್ಟೈಲ್ ಮಾಡಿದ್ದು ವೇಸ್ಟ್ ಆಯ್ತು ...
 
ಯಾವ ಭವನೆಯೂ ಇಲ್ಲದೆ, ಜಾತಿ-ಮತ-ಲಿಂಗ ಭೇದ ತೋರದ ಲಿಫ್ಟ್ ಇಬ್ಬರನ್ನು ಒಟ್ಟಿಗೆ ಗ್ರೌಂಡ್ ಫ್ಲೋರಿಗೆ ಸೇರಿಸಿತ್ತು ... ನಾನು ಬೈಕಿನತ್ತ ಧೀಮಂತ ಹೆಜ್ಜೆ ಹಾಕಿದರೆ, ಕುದುರೆಯಂತಹ ಖರಪುಟ ನಡಿಗೆಯೊಂದಿಗೆ ಅವಳಿಗಾಗಿ ಕಾದಿದ್ದ ಕಾರಿನಲ್ಲಿ ಆಕೆ ನುಸುಳಿದಳು ... ಜುಟ್ಟು ಹಾರಿಸುತ್ತ, ಹೈ-ಹೀಲ್ಸ್ ಸದ್ದಿನೊಂದಿಗೆ ಆಕೆ ನಡೆಯುತ್ತಿದ್ದುದರಿಂದ ಕುದುರೆಯಂತಹ ನಡಿಗೆ ಎಂದೆ ಅಷ್ಟೇ !
 
ಸ್ಟೈಲು ಹೊಡೆಯಲು ಹೋಗಿ ಹುಡುಗಿಯ ಮುಂದೆ ಪೆದ್ದನಾಗಿ ಟೈಮ್ ವೇಶ್ಟ್ ಮಾಡಿಕೊಂಡಿದ್ದೇ ಅಲ್ಲದೇ, ನಾಳೆ ಆಕೆ ತನ್ನ ಸ್ನೇಹಿತೆ/ತರ ಮುಂದೆ ಇದನ್ನು ಹೇಳಿಕೊಳ್ಳುವುದು ಗ್ಯಾರಂಟಿ ಅನ್ನಿಸಿ, ಇನ್ನೂ ಹಿಂಸೆಯಾಯಿತು ... ಏನ್ ಮಾಡೋದು? ಎಲ್ಲ ದಿನ ಹುಣ್ಣಿಮೆ ಆಗಿರಲ್ಲಾರೀ ... ನನ್ ಕೇಸಲ್ಲಿ, ಅಮಾವಾಸ್ಯೆ ಕಳೆದು ಪಾಡ್ಯದಿಂದ ಮುಂದೆ ಹೋಗೇ ಇಲ್ಲ ಅನ್ನಿಸುತ್ತೆ ....
 
ಅಂದೂ ಹೀಗೇ ಆಗಿತ್ತು ... ಮುಂಜಾನೆ (ನನಗೆ) ಹತ್ತು ಘಂಟೆಗೆ ಆಫೀಸಿಗೆ ಬರುತ್ತಿದ್ದೆ ... ಯಥಾಪ್ರಕಾರ ಭರ್ಜರಿಯಾಗಿ ಸಿಂಗರಿಸಿಕೊಂಡು ... ಎಷ್ಟು ಜನ ನನ್ನ ಕಡೆ ನೋಡಿಕೊಂಡು ಹೋದರೋ ಗೊತ್ತಿಲ್ಲ ... ಕಛೇರಿಯ ರಸ್ತೆಯಲ್ಲೂ ಅದೇ ಅನುಭವ ... ಕೊನೆಗೆ ಗಾಡಿ ಪಾರ್ಕ್ ಮಾಡುವಷ್ಟರಲ್ಲಿ ಸಾಕಾಗಿತ್ತು ಈ ಅಭಿಮಾನಿಗಳ ಕಾಟ ...
 
ಅಲ್ಲಿ ಕಂಡ ನನ್ನ ಟೀಮ್’ನ ಹುಡುಗಿಗೆ ’ಹಾಯ್’ ಎಂದು ಕೈ ಬೀಸಿದೆ ... ಆಕೆ ನಸುನಗುತ್ತ "ಇನ್ನೂ ನಿಮ್ ಗಾಡಿ ಹೆಡ್ ಲೈಟ್ ಆಫ್ ಮಾಡೋಕ್ಕೆ ಟೈಮ್ ಸಿಕ್ಕಿಲ್ವಾ?" ಅಂದಳು !!! ಥತ್! ಮನೆ ಹಾಳಾಗ .... ಏನೇನೋ ಅಂದುಕೊಂಡಿದ್ದೆ !!
 
ಗಾಡಿ ಕಿಕ್ ಮಾಡಿ ಗೇರ್ ಬದಲಿಸಿದೆ ... ಗಾಡಿ ಆಫ್ ಆಯ್ತು .... ಒಮ್ಮೆ ಸುತ್ತಲೂ ನೋಡಿದೆ ... ಸದ್ಯ ಯಾರೂ ನೋಡಲಿಲ್ಲ .... ಮತ್ತೆರಡು ಬಾರಿ ಹಾಗೇ ಆಯ್ತು ... ಗಾಡಿಗೆ ಥಂಡಿ ಏರಿರಬೇಕು ... ದಪ್ಪ ಜರ್ಕಿನ್ ... ಮುಖ ಮುಚ್ಚಿದ ಹೆಲ್ಮೆಟ್ ... ಹತ್ತು ಬಾರಿ ಕಿಕ್ ... ಎಲ್ಲ ಸೇರಿ ಕಂಕುಳಲ್ಲಿ ಸಣ್ಣಗೆ ಬೆವರು ಇಳಿದಿತ್ತು ....
 
ಅಂತೂ ಗಾಡಿ ಸ್ಟಾರ್ಟ್ ಆಯ್ತು .... ಕುರುಕ್ಷೇತ್ರವನ್ನು ಹೊಕ್ಕ ಅರ್ಜುನ ಒಮ್ಮೆ ತನ್ನ ಬಿಲ್ಲಿನ ಹೆದೆಯನ್ನು ಮೀಟಿದಾಗ ಹೊರಹೊಮ್ಮಿದ ಸದ್ದಿನಂತೇನೂ ನನ್ನ ಗಾಡಿ ಸದ್ದು ಮಾಡಲಿಲ್ಲ ... ಬದಲಿಗೆ, ಇಡೀ ಕಛೇರಿಯನ್ನೇ ಅಲುಗಾಡಿಸಿತೋ ಏನೋ ಎಂಬ ಸದ್ದು ಮಾಡಿತು ....
 
ಜಮ್ಮಂತ ಹೊರಟು, ಹತ್ತು ನಿಮಿಷ ಸಾಗಿ, ಮೂಲೆಯ ಶಾಂತಿ ಸಾಗರದ ಬಳಿ ಎಡಕ್ಕೆ ತಿರುಗಿದೆ ... ಈ ದಾರಿ ನನಗೆ ಅತೀ ಪ್ರಿಯ ... ದೊಡ್ಡ ಮನುಷ್ಯರ ಮನೆ ಕನ್ಯಾಮಣಿಗಳು ಜುಟ್ಟನ್ನು ’ಟಿಂಗ್ ಟಿಂಗ್’ ಎಂದು ಕುಣಿಸುತ್ತ ಸಂಜೆ ಜಾಗ್ ಮಾಡುವ ಬೀದಿ ಇದು ... ಸಾವಧಾನವಾಗಿ ಸಾಗುತ್ತಿದ್ದೆ ...
 
ಸ್ವಲ್ಪ ದೂರದಲ್ಲಿ ಭವ್ಯವಾದ ಕಟ್ಟಡ ಕಂಡು ಬಂತು ... ರೋಡಿನಿಂದ ಬಿಲ್ಡಿಂಗ್’ನ ದ್ವಾರಕ್ಕೆ ಕನಿಷ್ಟ ಅಂದ್ರೂ ಮೂವತ್ತು ಮೆಟ್ಟಿಲಿದ್ದವು ... ಇದರ ಡಿಸೈನ್ ಮಾಡಿದವರು ಯಾರೋ ದೇವಸ್ಥಾನದ ಆರ್ಕಿಟೆಕ್ಟ್ ಇರಬೇಕು ...  ಒಂದು ಹದಿನೈದು ಮೆಟ್ಟಿಲ ನಂತರ ಒಂದು ಪ್ಲಾಟ್ ಫಾರಂ ಬೇರೆ ... ಸುಧಾರಿಸಿಕೊಳ್ಳಲು ಇರಬೇಕು ...
 
ಹಾಗೇ ನೋಡುತ್ತ ಬರುತ್ತಿದ್ದೆ ... ಆ ಪ್ಲಾಟ್ ಫಾರಂ ಮೇಲೆ ಆಕೆ ನಿಂತಿದ್ದಳು ... ಕಪ್ಪು ಬಣ್ಣದ ಚೂಡಿದಾರಕ್ಕೆ ಬಂಗಾರದ ಬಣ್ಣದ ಲೈನಿಂಗ್ ಇತ್ತು ... ಹೆಗಲಿಗೆ ಸಣ್ಣ ಚೀಲ ನೇತುಹಾಕಿಕೊಂಡು, ಯಾವುದೋ ಪುಸ್ತಕವನ್ನು ಎದೆಗವುಚಿಕೊಂಡು ಯಾರನ್ನೋ ಕಾಯುತ್ತಿದ್ದಳು ...
 
ನವಿರಾಗಿ ಬೀಸುತ್ತಿದ್ದ ಗಾಳಿಗೆ, ಇಂಪಾದ ಸಂಗೀತಕ್ಕೆ ಮನಸೋತು ತೂಗುವ ತಲೆಯಂತೆ, ತೂಗಾಡುತ್ತಿತ್ತು ಆ ಮುಂಗುರುಳು ... ಕಾಯುವಿಕೆಯ ಭಂಗಿ ನಿಜಕ್ಕೂ ಶೋಭಾಯಮಾನವಾಗಿತ್ತು .... ಕಪ್ಪು ಚೂಡಿದಾರ ಬೆಳಿಗ್ಗೆ ಯಾರ ಮೈಮೇಲೋ ನೋಡಿದ ನೆನಪು ... ಕಾಮನ್ ಡ್ರಸ್ ಇರಬೇಕು ... ಬಹುಶ: ಯಾವುದೋ ಖ್ಯಾತ ಸಿನಿಮಾದಲ್ಲಿ ನಾಯಕಿ ಧರಿಸಿದ್ದ ಡಿಸೈನ್ ಇರಬೇಕು ... ಪರಚಿಂತೆ ನಮಗ್ಯಾಕೆ, ಬಿಡಿ
 
ಸೂಕ್ಷ್ಮವಾಗಿ ಗಮನಿಸಿದೆ ... ಪರಿಚಿತ ಮುಖ ! ತಿಳಿದವರೇ ಆದರೆ ನಾನೇ ಡ್ರಾಪ್ ಕೊಡಬಹುದಲ್ಲವೇ? ಅಂದುಕೊಳ್ಳುತ್ತಿರುವಾಗಲೇ, ಆಕೆ ಪಕ್ಕಕ್ಕೆ ತಿರುಗಿದಳು ... ಆ ಹಿರಿಯರು, ಆಕೆಯ ಕಛೇರಿಯವರೇ ಇರಬೇಕು ... ನಮ್ರತೆಯಿಂದ ನಿಂತ ಭಂಗಿ ನೋಡಿದರೆ, ಆಕೆಯ ಬಾಸ್ ಇರಬೇಕು ...
 
ಪರಿಚಿತರೇ ಆದರೂ, ಅಲ್ಲಿ ನಿಂತು ಮಾತನಾಡಿಸುವುದು ತರವಲ್ಲ ... ಮರ್ಯಾದೆ ಅಲ್ಲ ...
 
ಅವಳದೇ ಗುಂಗಿನಲ್ಲಿ, ಹಾಗೇ ಸಾಗಿದ್ದೆ ... ಇವತ್ತೇ ಕೊನೆ ... ನಾನು ಹೀಗೆಲ್ಲ ಮತ್ತೊಬ್ಬ ಹೆಣ್ಣನ್ನು ನೋಡಬಾರದು ... ಹೌದು ಕಣ್ರೀ, ಮದುವೆ ಮುಂಚೆ ಹೀಗೆಲ್ಲ ಎಲ್ಲರನ್ನೂ ನೋಡಿಕೊಂಡು ಸ್ಟೈಲ್ ಹೊಡೀತಿದ್ದೆ ಅಂತ ಈಗಲೂ ಹಾಗೇ ನೆಡೆದುಕೊಳ್ಳಲಾಗುತ್ತದೆಯೇ? ನನ್ನ ಮರ್ಯಾದೆ ನಾನು ಕಾಪಾಡಿಕೊಳ್ಳಬೇಕು ...
 
ನಿಜ ... ಹೈದಿನೈದು ದಿನಗಳ ಹಿಂದೆ ಮದುವೆಯಾಗಿತ್ತು ... ಆಹಾ! ಹೇಗೆ ಉರುಳಿತೋ ಗೊತ್ತಿಲ್ಲ ... ಮನದಲ್ಲಿ ನನ್ ಹೆಂಡತಿಯ ಚಿತ್ರ ಹಾಗೇ ಮೂಡಿಬಂತು ..... ಅಯ್ಯೋ! ಇದೇನಿದು? ಆ ಮೆಟ್ಟಿಲ ಮೇಲೆ ನಿಂತ ಹುಡುಗಿಯ ಚಿತ್ರವೇ ಬರುತ್ತಿದೆ ?
 
ಗಾಡಿ ಗಕ್ಕನೆ ನಿಲ್ಲಿಸಿದೆ ! ತಲೆಯನ್ನೊಮ್ಮೆ ಜೋರಾಗಿ ಅಲ್ಲಾಡಿಸಿದೆ ... reboot ಆಗಲಿ ಎಂದಲ್ಲ ... ನನ್ನ ಹಾಳು ಮರೆವಿಗೆ !!
 
ಯಪ್ಪಾ, ಶಂಬುಲಿಂಗ .... ಆ ಮೆಟ್ಟಿಲ ಸುಂದರಿ ನನ್ ಹೆಂಡತಿ !!!!
 
ಮದುವೆಯಾದ ಮೇಲೆ ಇಬ್ಬರೂ ಕೆಲಸಕ್ಕೆ ಬಂದ ಮೊದಲ ದಿನ ಇಂದು ... ನನ್ನ ಕಛೇರಿಯ ಹಾದಿಯಲ್ಲೇ ಅವಳ ಕಛೇರಿಯೂ ಇದ್ದುದರಿಂದ ಒಟ್ಟಿಗೆ ಹೋಗಿ ಬರಲು ಅನುಕೂಲವಾಗಿತ್ತು .... ಇದೇ ಮೊದಲಾದ್ದರಿಂದ ನನಗೆ ಮರೆತೇ ಹೋಗಿತ್ತು ....
 
ಒಂದೇ ಕ್ಷಣದಲ್ಲಿ ಗಾಡಿಯನ್ನು ತಿರುಗಿಸಿ, ವಾಪಸ್ ಹೋಗಿ, ಅಲ್ಲಿ ನಿಂತು, ಗಾಡಿ ಆಫ್ ಮಾಡಿ, ಅವಳತ್ತ ನೋಡಿ ಹಲ್ಕಿರಿದೆ ... ಆಗಲೇ ಕೆಳಗಿಳಿದು ಬಂದಿದ್ದ ನನ್ನಾಕೆ ಕೆಂಪಾಗಿದ್ದಳು ...
 
"ನನ್ ಮರೆತು ಮುಂದೆ ಹೋದ್ರಿ, ಅಲ್ವಾ?" ಅಂದಳು ....
 
"ಹಾಗೇನಿಲ್ಲ, ಈ ಬಿಲ್ಡಿಂಗೋ, ಆ ಬಿಲ್ಡಿಂಗೋ ಗೊತ್ತಾಗಲಿಲ್ಲ. ಅದಕ್ಕೇ ಮುಂದೆ ಹೋದೆ"
 
"ನನ್ ಕಡೆ ನೋಡ್ಕೊಂಡೂ ಮುಂದೆ ಹೋದ್ರಿ ಅಂದ್ರೆ, ನನ್ ಮುಖವೂ ಮರೆತು ಹೋಯ್ತಾ"
 
ಇನ್ನೇನಾದರೂ ಹೇಳುವ ಮುನ್ನ ಗಾಡಿ ಸ್ಟಾರ್ಟ್ ಮಾಡಿಯೇಬಿಟ್ಟೆ !!! ಆದರೆ ನನ್ ಮೆಟ್ಟಿಲ ಸುಂದರಿ ಕುಳಿತ ಮೇಲೆ ಹೊರಟೆ ಅನ್ನಿ !!
 

 

Comments

Submitted by bhalle Tue, 10/30/2012 - 17:48

In reply to by sathishnasa

ಹಾಗೇನಿಲ್ಲ ಸತೀಶ್ ... ಹದಿನೈದು ದಿನಗಳು ಬೇರೆಯವರನ್ನು ನೋಡಿರಲಿಲ್ಲವಲ್ಲ, ಹಾಗಾಗಿ ಸ್ವಲ್ಪ ಆ ನೆನಪು ಸೈಡ್-ವಿ೦ಗ್'ಗೆ ಹೋಗಿತ್ತು
Submitted by bhalle Tue, 10/30/2012 - 17:48

In reply to by kpbolumbu

ಕ್ರುಷ್ಣಪ್ರಕಾಶ್'ರೆ ಒಳ್ಳೆ ವಿಷಯಾನೇ ಕೇಳಿದ್ರಿ :-) ಬೀದಿಯಲ್ಲಿ ಯಾಕೆ ರ೦ಪಾಟ ಅ೦ತ ಕಾಮಿಡಿ ... ಟ್ರಾಜಿಡಿ ಆಗದೆ ಇದ್ದಿದ್ದರೆ ನೆನಪಲ್ಲಿ ಇರ್ತಿತ್ತಾ ಘಟನೆ? ;-)
Submitted by Prakash Narasimhaiya Tue, 10/30/2012 - 16:34

ಆತ್ಮೀಯ ಭಲ್ಲೆಜಿ, ಭಲ್ಲೆ.....ಭಲ್ಲೆ.....ನಿಮ್ಮೂರ ಸುಂದರಿಯರ ಮಧ್ಯೆಯಲ್ಲಿ ನಿಮ್ಮ ಪರ್ಸನಲ್ ಸುಂದರಿ ಕಾಣಲು ತಡ ಅದಾದ್ದು ಹೆಚ್ಚೇನೂ ಅಲ್ಲ ಬಿಡಿ. ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಬಾರ್ದೂಂತ ನಿಮ್ಮ ಪ್ರಯತ್ನ. ಗಾದೆ ಏನೂಂತ ಕೇಳಿದ್ರಾ? ಹೆಣ್ಣಿಗೆ ಹಠ ಇರಬಾರದು.....ಗಂಡಿಗೆ ಚಟ ಇರಬಾರದುಂತ......ಇರಲಿಬಿಡಿ ನಮಗ್ಯಾಕೆ ಬೇರೆಯವರ ಸಮಾಚಾರ? ಅಲ್ಲವೇ ಭಲ್ಲೆಜಿ????
Submitted by venkatb83 Tue, 10/30/2012 - 18:41

In reply to by bhalle

ಆಧುನಿಕ ಶ್ರೀ ಕೃಷ್ಣ....!! ಮತ್ತೆ ಅವತ್ತಿಂದೆ ರಿಪೀಟ್ ಆಗಲಿ ಆಗಬಹುದು ಅಂತ ಕಾಯಕ್ ಹತ್ತಿದ್ರೆನೋ..! ಪಾಪ...!! ಅಂತ್ಯ ಸಖತ್ ಮಾರಾಯ್ರೇ.. ಏನ್ ಮೇಲೆ ಮೇಲೆ ಹಾಸ್ಯ ಬರಹಗಳು.. ನಮಗೆ ಬರೆಯೋಕ್ ಆಗದೆ ಒದ್ದಾದುತಿದ್ರೆ ನೀವ್ ಮತ್ತು ಜಯಂತ್ ಮೇಲಿಂದ ಮೇಲೆ ...........!!ಹೇಗೆ? ನಿಮ್ಮ ಆ ಚಟುವಟಿಕೆಯ ಗುಟ್ಟು ಏನು ಗುರುಗಳೇ?? ಸೂಪರ್ ಕಣ್ರೀ ಹಾಸ್ಯ.. ಶುಭವಾಗಲಿ. ನನ್ನಿ \|
Submitted by bhalle Tue, 10/30/2012 - 18:50

In reply to by venkatb83

ನಾವು ಒನ್-ವೇ ಕೃಷ್ಣ .... ನಾವು ನೋಡುತ್ತಿದ್ದೆವು ಕನ್ಯಾಮಣಿಗಳನ್ನ ... ಆದರೆ ಅವರು ನೋಡಬೇಕಲ್ಲ? ಧನ್ಯವಾದಗಳು ಸಪ್ತಗಿರಿ'ಯವರೇ ಸು೦ದರಿಯರ ವಿಷಯ ಅಂದ್ರೆ ಅದು ಹಾಗೆ ... 'ಮೇಲ್'ಗೆ (male) ಮೇಲಿ೦ದ ಮೇಲೆ ಐದಿಯಾ ಬರುತ್ತಿರುತ್ತದೆ :-)
Submitted by Chikku123 Fri, 11/02/2012 - 13:10

:) ;) ;) ಸದ್ಯ ಮೇಡಂ ಲಿಫ್ಟ್ ಬೇಕಾ ಅಂತ ಕೇಳಲಿಲ್ವಲ್ಲ!!! ಚೆನ್ನಾಗಿದೆ ಭಲ್ಲೆಯವ್ರೆ
Submitted by bhalle Fri, 11/02/2012 - 22:11

In reply to by Chikku123

ಖಂಡಿತ ನಿಜ ಚಿಕ್ಕು ... ಇವತ್ತಿಗೂ ನನ್ನಾಕೆಯನ್ನು ಮಾತನಾಡಿಸಿದ ಆ ಬಾಸ್'ಗೆ ನಾನು ಋಣಿ ... ಆತ ಮಾತನಾಡಿಸದೆ ಇದ್ದಿದ್ರೆ, ಕೇಳುತ್ತಿದ್ದೇನೋ ಏನೋ !!!