ಸುಂದರ ಕನಸು

ಸುಂದರ ಕನಸು

 


 
ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ  ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ.
 
" ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿದರೂ ಕಡಿಮೆಯಾಗದೇ ಸಮೃದ್ಧವಾಗಿರಬೇಕು. ಜನರು ಜೀವನವನ್ನು ಪ್ರೀತಿಸಬೇಕು. ನಿತ್ಯದೂಟವನ್ನು ಸವಿಯುವುದರಲ್ಲಿ ಸಂತೋಷಿಯಾಗಿರಬೇಕು. ತನ್ನ ಕೆಲಸದಲ್ಲಿ ಸ್ವರ್ಗೀಯ ಆನಂದ ಅನುಭವಿಸಬೇಕು. ತನ್ನ ಪಾಲಿಗೆ ಬಂದ ಮನೆ, ಹೆಂಡತಿ, ಮಕ್ಕಳು, ಬಂಧು - ಬಾಂಧವರು, ಗೆಳೆಯರು ಇವರೊಡನೆ ಆತನ ಹೃದಯ ಹರ್ಷಿತ ವಾಗಿರಬೇಕು.ಸಕಲಜೀವರಲ್ಲಿ ಮತ್ತು ಮಾನವರಲ್ಲಿ ಸಮ ಪ್ರೇಮಿಯಾಗಿದ್ದು, ತಾನು ಮಾಡುವ ಪ್ರತಿ ಕೆಲಸವೂ ದೈವಿಸಾಧನೆ ಎನಿಸಬೇಕು. "   ಎಂತಹ ಅದ್ಭುತ ಕನಸು.
 
ಇಂತಹ ಕನಸು ಹುಟ್ಟಿದ ಈ ಭೂಮಂಡಲ ಹೇಗಿತ್ತು?  ಹಚ್ಚ ಹಸಿರಿನ ವನಸಿರಿ. ಫಲಪುಷ್ಪಗಳ ಕಾಡುಗಳು, ಫಲವತ್ತಾದ ಮಣ್ಣು, ಈ ಭೂಮಿಯನ್ನು ಸಿಂಗರಿಸಿತ್ತು. ಹರಿಯುವ ನದಿ, ಸಾಗರ, ಆಕಾಶದೆತ್ತರಕ್ಕೆ ಇರುವ ಪರ್ವತ ಶ್ರೇಣಿ, ಬೆಟ್ಟಗಳ ಸಾಲು ಸಾಲು. ಕಾಡು ಗುಡ್ಡಗಳ ಮಧ್ಯೆ ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಮೃಗ, ಪಕ್ಷಿ, ಜೀವ-ಜಂತುಗಳು.  ಋತುಗಳ ಆಧಾರಿತ ಹವಾಮಾನ,  ಇಷ್ಟೆಲ್ಲಾ ಇರುವ ಈ ಭೂಮಂಡಲ ಯಾವ ಸ್ವರ್ಗಕ್ಕೆ ಕಡಿಮೆಯಾಗಿತ್ತು ?
 
ಆದರೆ,  ಇಂದು ನಾವು ಬದುಕುತ್ತಿರುವ ಈ  ಭೂಮಂಡಲವನ್ನು ನಾವು ಅದೆಷ್ಟು ಹದಗೆಡೆಸಿದ್ದೇವೆ?  ಸೌಂದರ್ಯವನ್ನು ಅದೆಷ್ಟು ಹಾಳುಮಾಡಿದ್ದೇವೆ?  ಅದೆಷ್ಟು ಜೀವಿಗಳಿಗೆ ಹಿಂಸಿಸಿದ್ದೇವೆ?  ಎಷ್ಟೊಂದು ಪ್ರಾಣಿ ಸಂಕುಲವನ್ನೇ ನಾಶಮಾಡಿ, ಕೆಲವನ್ನು ಈ ಭೂ ಮಂಡಲದಿಂದಲೇ ಮರೆ ಮಾಡಿದ್ದೇವೆ.   ಸ್ವರ್ಗದಂತೆ ಇದ್ದ  ಈ ಭೂಮಿ  ಈಗ ನರಕವಾಗಿದೆ. ಏಕೆ ಹೀಗೆ?
 
ಮಾನವನ ದುರಾಸೆಯ ಮನದಲ್ಲಿ ಸರ್ವ ವಿನಾಶಕ ಶಸ್ತ್ರ ಅಸ್ತ್ರಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಈ ಭೂ ಮಂಡಲವನ್ನು  ತುಂಬಿ ಬಿಟ್ಟಿದೆ. ಒಂದು ಬೀಜ ಹಾಕಿ ಲಕ್ಷಾಂತರ ಬೀಜ ಬೆಳೆವ ಮಣ್ಣನ್ನು ವಿಷಮಯವನ್ನಾಗಿ   ಮಾಡಿದೆ. ಬೆಳೆದ ಹಣ್ಣನ್ನು ತಿನ್ನದೇ, ಕೊಳೆಸಿ, ಹುಳಿಗೊಳಿಸಿ, ಕುಡಿದು  , ಕುಣಿದು , ಉನ್ಮತ್ತನಾಗಿ ಹುಚ್ಚನಾಗಿದ್ದಾನೆ. ನಾಲಗೆಯ ರುಚಿಗೆ  ಸತ್ವಯುತ ಆಹಾರದ ಬದಲಿಗೆ ಖಾದ್ಯ ಮೋಹಕ್ಕೆ ಬಿದ್ದು ರೋಗಗಳ ಗೂಡಾಗಿದ್ದಾನೆ . ಜೊತೆಗೆ ಸಮಾಜವನ್ನು ರೋಗದ ಕೂಪಕ್ಕೆ ತಳ್ಳುತ್ತಿದ್ದಾನೆ  . ಮತ ಭಿನ್ನತೆ ಹುಟ್ಟು ಹಾಕಿ , ಜಾತಿ-ಮತ-ಧರ್ಮಗಳ ವಿಷ ಬೀಜ ಬಿತ್ತಿ, ಧರ್ಮ ರಕ್ಷಣೆಯ ಹೆಸರಲ್ಲಿ ಘೋರ ಯುದ್ಧ ಮಾಡಿಸಿ,ರಕ್ತದ ಕೊಡಿ ಹರಿಸಿದ್ದಾನೆ. ಇಂತಹ  ಸಮಯದಲ್ಲಿ ಸುಂದರ ಕನಸು ನನಸಾಗುವುದೇ ? ನನಸಾಗಲು ಏನು ಮಾಡಲು ಸಾಧ್ಯ?
 
ಭಗವಂತ ನಮಗಾಗಿ ನೀಡಿರುವ ಸಕಲವೂ ಸುಂದರ, ಸುಖಕರವೆ ಆಗಿದೆ .  ಆದರೆ ಅದರ ಬಳಕೆಯಲ್ಲಿ ನಾವು ಎಡವುತ್ತಿದ್ದೇವೆ.  ಈ ದೇಹ ಭಗವಂತನ ಕಾಣಿಕೆ.  ಎಲ್ಲವೂ ಪವಿತ್ರವೇ.  ಈ ದೇಹವನ್ನು ಆನಂದ ಸ್ವರೂಪವನ್ನಾಗಿ ಮಾಡಿ ಈ ಜಗತ್ತಿಗೆ ಕಳುಹಿಸಿದ್ದಾನೆ. ಇದನ್ನು ಅಪವಿತ್ರ ಮಾಡಿದ್ದೇವೆ   ಈ ಜಗತಿನಲ್ಲಿರುವುದನ್ನು ಪಡೆದು, ಜಗತ್ತಿಗೆ ಒಳಿತು ಮಾಡುವುದನ್ನು ಚಿಂತಿಸಬೇಕಾಗಿದೆಯಲ್ಲವೇ ? ಈ ಜೀವನವನ್ನು ಸ್ವರ್ಗೀಯ, ದಿವ್ಯ ಜೀವನವನ್ನಾಗಿ ಪರಿವರ್ತಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ, ಅಲ್ಲವೇ? ಈ ಜಗತ್ತಿನ ಒಳ್ಳೆಯದನ್ನು ಅನುಭವಿಸಿ, ಇತರರಿಗೂ ಅದನ್ನು ಉಳಿಸಿ ಬೆಳೆಸಬೇಕಲ್ಲವೇ?.  ಪರಸ್ಪರ ಪ್ರೀತಿ ಪ್ರೇಮಗಳು ಬೆಸೆದಾಗ ಈ ಭೂಮಿಯೇ ಸ್ವರ್ಗವಾಗುತ್ತದೆ. ಆಗ ನಾವು ಸ್ವರ್ಗಕ್ಕಾಗಿ ತವಕಿಸುವ ಪ್ರಶ್ನೆಯೇ ಬರುವುದಿಲ್ಲ ಅಲ್ಲವೇ?  ಸರ್ವೇ ಜನಾಃ ಸುಖಿನೋ ಭವಂತು ಎಂಬುದು ತನಗೆ ತಾನೇ ಉದ್ಧಾರವಾಗುತ್ತದೆ.  ಸುಂದರ ಕನಸು ನನಸಾಗುವ ಲಕ್ಷಣ ತನಗೆ ತಾನೇ ಗೋಚರವಾಗುತ್ತದೆ.
 
ಇಂತಹ ಉದಾತ್ತ ವಿಚಾರಗಳು ಮೊದಲು  ನಮ್ಮ ಮನೆ, ಮನಸ್ಸಿನಿಂದಲೇ ಒಂದೊಂದು ಚಿಕ್ಕ ಪ್ರಯತ್ನಗಳಾಗಿ   ಪ್ರಾರಂಭವಾಗಬೇಕು. ನನ್ನೊಬ್ಬನಿಂದ ಏನಾಗುತ್ತೆಂಬ ಧೋರಣೆ ಬಿಡೋಣ.   ಒಂದು  ಉತ್ತಮ ವಿಚಾರ, ಒಂದು ಸನ್ನಡತೆ, ಒಂದು ಉತ್ತಮ ಪ್ರಯತ್ನ    ಮಾಡಲು ಪ್ರಾರಂಭಿಸೋಣ.   ಸುಂದರ ಕನಸನ್ನು ಸಾಕಾರ ಮಾಡಲು ಮೊದಲ ಹೆಜ್ಜೆ ಇಡೋಣ.
 
ಈ ಚಿಂತನೆಗೆ ನೀವೇನು ಹೇಳುತ್ತಿರಾ?

Comments