ಸುಂದರ ಗಝಲ್ ಗಳ ಮೋಹ !

ಸುಂದರ ಗಝಲ್ ಗಳ ಮೋಹ !

ಕವನ

ಗಝಲ್ ೧

ಜಗದಗಲ ಕತ್ತಲೆಯ ಓಡಿಸಲು ಬಂದಿರುವೆಯಾ ನೊಂದಿರುವ ಮನಗಳಿಗೆ ಜ್ಯೋತಿಯಾಗು

ಬಟ್ಟ ಬಯಲಿನಲಿ ತಿರುಗಾಡಿಕೊಂಡಿರುವೆಯಾ ಬಾಂಧವರ ತನುವುಗಳಿಗೆ ಜ್ಯೋತಿಯಾಗು

 

ಮಥಿಸಿರದ ಭಾವಗಳು ಸುತ್ತೆಲ್ಲ ಹರಡಿರಲು ಸಮಯ ನಿಲ್ಲದೇ ಇರಲು ಸೋಲುವೀಯೇನು

ಎಣಿಕೆ ತಪ್ಪಿದ ನೋಟ ಹಸಿರ ಸಿರಿ ಸುರುಟಿರಲು ಮಲಗಿರುವ ಕನಸುಗಳಿಗೆ ಜ್ಯೋತಿಯಾಗು

 

ಅಂತರಾತ್ಮಕೆ ಹೊಡೆತ ಬಿದ್ದಿರುವ ಕಾಲದೊಳು ಕನ್ನಡಿಯ ಹೊಳಪಂತೆ ಪ್ರಜ್ವಲಿಸುವಿಯೇನು

ಸುಧೆಯೊಳಗಿನ ನೀರ ಹರಿವಿಕೆಯ ರೀತಿಯಲಿ ಮೌನವಾಗಿರುವ ಕಣ್ಣುಗಳಿಗೆ ಜ್ಯೋತಿಯಾಗು

 

ಹೃದಯದೊಳಗಿನ ಹುಸಿರಾಗಗಳ ತೊಡೆಯುವ ಸಪ್ನ ಗೀತೆಗಳ ಸುಂದರಿ ನೀನಾಗುವಿಯೇನು

ಹಸನಾದ ಬದುಕೊಳಗೆ ವ್ಯಸನಗಳ ದೂಡುತಲಿ ಸ್ಥಿತವಾಗಿರುವ ಜೀವಗಳಿಗೆ ಜ್ಯೋತಿಯಾಗು

 

ಈಶನೊಲವಿನ ಸನಿಹ ದೀಪಾವಳಿ ನಿಂತಿರಲು ಕೈಹಿಡಿವ ಸಖಿಯೊಲವು ಸವಿಯಾಗಿದೆಯಿಂದು

ಹೊಸತೆನುವ ಸಂಗದೊಳು ಪ್ರೀತಿ ಉಕ್ಕೇರುತಿರೆ ಬಯಕೆಯಿರುವ ನನಸುಗಳಿಗೆ ಜ್ಯೋತಿಯಾಗು

***

ಗಝಲ್-೨

 

ಇನ್ನೊಬ್ಬರ ಬರಹಗಳನು ಕೆಣಕದಿರು ಕೇಡು ನಿನಗೆ

ಬೇರೆಯವರ ಜೀವನದಿ ಇಣುಕದಿರು ಕೇಡು ನಿನಗೆ

 

ಹೊಟ್ಟೆ ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು

ಊಟವಾದ ನಂತರದಲ್ಲಿ ಮಲಗದಿರು ಕೇಡು ನಿನಗೆ

 

ನಡೆವ ದಾರಿಯನು ಗಮನಿಸದೆ ಮುಂದೆ ಹೋಗುವರೆ

ಕಲ್ಲುಮುಳ್ಳುಗಳ ಒಡಲೊಳಗೆ ನಿಲ್ಲದಿರು ಕೇಡು ನಿನಗೆ

 

ಸೌಂದರ್ಯ ಇದೆಯೆಂದು ಮನ ಬಂದಂತೆ ತಿರುಗುವುದೆ

ಉತ್ಸವ ಮೂರ್ತಿಯಂತೆಯೇ ಬದುಕದಿರು ಕೇಡು ನಿನಗೆ

 

ಪ್ರತಿಯೊಬ್ಬರ ಗೌರವಿಸು ಜೊತೆಗೇ ಬರುವನು ಈಶಾ

ಪಂಡಿತನು ನಾನೆಂದೆನುತಲೇ ಸಾಗದಿರು ಕೇಡು ನಿನಗೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್