ಸುಂದರ ಗಝಲ್ ಗಳ ಲೋಕ
೧.
ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ
ಸಾಗರದ ಅಲೆಯೊಳಗೆ ಕೋಪ ಏತಕೆ ಇಂದು
ಜೀವನದ ಕನಸೊಳಗೆ ಮನ ಇರುವುದೇ ಗೆಳತಿ
ನನಸಿನೊಳು ಸಾಗದಿರೆ ಬಾಳ ಒಲುಮೆಯು ಬೇಕೆ
ಧನವೆಲ್ಲ ಬರಿದಾಗೆ ಸಾವು ಬರುವುದೇ ಗೆಳತಿ
ಬಾಡಿರುವ ಹೃದಯದೊಳು ಮೋಹ ಕಂಡಿತೇ ಹೇಳು
ನಡುಗುತಿಹ ತನುವಿಂದ ಪ್ರೀತಿ ಸಿಗುವುದೇ ಗೆಳತಿ
ನೊಂದಿರುವ ಆತ್ಮ ಸಖಿ ಎಲ್ಲಿಹಳೋ ಈಶಾ
ಕಾರಣವು ಇಲ್ಲದೆಯೇ ಉಸಿರು ನಿಲುವುದೇ ಗೆಳತಿ
***
೨.
ಹಸಿರಿಂದ ತುಂಬಿರುವ ಭೂಮಿಯನು ನೋಡಿದೆನು ಸಖಿ
ಕೆಸರಲ್ಲಿ ಅರಳಿದ ತಾವರೆಯ ಕಾಡಿದೆನು ಸಖಿ
ವಿಪರೀತ ಎನಿಸುವ ಬದುಕಲ್ಲಿ ಏನಿದೆಯೊ ಹೇಳುವೆಯಾ
ಕನಸಿನ ಜೊತೆಗಾರ ನನಸಂತೆ ಮೂಡಿದೆನು ಸಖಿ
ಚಿಂತಿಸುವ ಸರಕಿಂದು ಬರದಿರಲಿ ತಲೆಯಲಿ ತಿಳಿಯಿತೆ
ಚಿಂತನೆಗೆ ಸಾಗುತಿಹ ವಿಷಯವ ಬೇಡಿದೆನು ಸಖಿ
ಮಹಡಿಯ ಹಜಾರದಿ ನಲಿದೆನು ಕಣ್ಣನಿಂದು ಮಿಟುಕಿಸಿ
ಮೋಹವದು ತುಂಬುತಿರೆ ಹೃದಯದಿ ಹಾಡಿದೆನು ಸಖಿ
ಸವಿಯಾದ ತನುವಲಿ ಮನವಿರೆ ದೂರವೆಲ್ಲೂ ಹೋಗದಿರು
ಇಷ್ಟವಾಯ್ತೆ ನಿನಗಿಲ್ಲಿ ಪ್ರೀತಿಯನು ನೀಡಿದೆನು ಸಖಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
