ಸುಖ ಸಂಸಾರಕ್ಕೆ ಅರಿತು ಬಾಳುವುದೇ ಸೂತ್ರ

ಸುಖ ಸಂಸಾರಕ್ಕೆ ಅರಿತು ಬಾಳುವುದೇ ಸೂತ್ರ

ಅಕ್ಕ ಪಕ್ಕದ ಎರಡು ಮನೆ. ಎರಡೂ ಮನೆಯಲ್ಲೂ ಸಂಸಾರಸ್ಥರೆ ಇದ್ದಾರೆ. ಗುಂಡನ ಮನೆಯವರು ಸಾಕಷ್ಟು ಮಡಿ ಹಾಗೇ ದೇವರಲ್ಲಿ ಅಪಾರ ನಂಬಿಕೆ. ಮತ್ತೊಬ್ಬ ಸುಬ್ಬನ ಮನೆಯವರು ಮಡಿ ಅಂತ ಏನೂ ಇಲ್ಲ, ಆದರೆ ಎಷ್ಟು ಬೇಕೋ ಅಷ್ಟು ದೇವರನ್ನು ನಂಬಿದ್ದಾರೆ. ಇಬ್ಬರ ಮನೆಯಲ್ಲು ಮಕ್ಕಳು. ದಿನಾ ಒಂದಲ್ಲ ಒಂದಕ್ಕೆ ಜಗಳ, ಸರಿಯಾಗಿ ವಿಷಯ ಏನೂ ಅಂತ ನೋಡಿದ್ರೆ, ಅದು ಜಗಳ ಆಡೋ ವಿಷಯನೇ ಅಲ್ಲ. ತಮ್ಮ ಮೂಗಿನ ನೇರಕ್ಕೆ ಜೀವನ ನಡೆಸುವವರು. ಮಧ್ಯಮ ವರ್ಗದ ಕುಟುಂಬ.

 

ಪರದೆ ಮೇಲಕ್ಕೆ

ಬೆಳಗ್ಗೆನೇ ಗುಂಡ ಬಾವಿಯಲ್ಲಿ ಕೊಡದಿಂದ ತಲೆ ಮೇಲೆ ನೀರು ಹುಯ್ಕೊತಾ ಇದಾನೆ. ಅದು ತಾಮ್ರದ ಕೊಡ, ತಂಡಿಗೆ ಮಂತ್ರನೂ ನಡುಗ್ತಾ ಇದೆ. ಥೂ ಇವಳಿಗೆ ಬಟ್ಕಂಡೆ, ಪ್ಲಾಸ್ಟಿಕ್ ಕೊಡ ತಗೊಂಡು ಬಾರೆ ಅಂತ, ಪಕ್ಕದ ಮನೆಯೋಳು ಜೊತೆ ಹರಟೆ ಹೊಡೆಯಕ್ಕೆ, ಟಿವಿ ಧಾರವಾಹಿ ನೋಡಕ್ಕೆ ಟೈಂ ಇರುತ್ತೆ, ಏನು ದರಿದ್ರ ಅಂತ ಸಿಕ್ಕಳೋ, ಥೂ ನನ್ನ ಕರ್ಮ. ಮನೆಗೆ ಬಂದು ಜೋರಾಗಿ ಸುಪ್ರಭಾತ ಹಾಡು ಹಾಕಿದ್ದಾನೆ. ಅವನ ಹೆಂಡತಿ ಸುಶೀಲಾ, ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕುತ್ತಿದ್ದಾಳೆ. ರಸ್ತೆ ಕಸ ಹೊಡೆಯೋನು ಗುಟ್ಕಾ ಉಗಿಯುತ್ತ ಬರುತ್ತಿದ್ದಂತೆ, ಮನೆಯೊಳಗೆ ಬಂದು ನಿಂತ ಸುಶೀಲ. ಅವನು ಮುಂದೆ ಸಾಗಿದ ನಂತರ ಮತ್ತೆ ಮನೆ ಮುಂದೆ ನೀರು ಚುಮುಕಿಸಿ, ರಂಗೋಲಿ ಹಾಕುವ ಕಾರ್ಯದಲ್ಲಿ ತೊಡಗುತ್ತಾಳೆ. ಯಾಕಮ್ಮಾ, ಎಂಜಲು ಕಣೋ, ಮಕ್ಕಳು ತಮ್ಮ ಹೋಂ ವರ್ಕ್್ನಲ್ಲಿ ಬಿಸಿಯಾಗಿದ್ದಾರೆ.

ಗುಂಡ : ಲೇ ಸುಶೀಲಾ, ಪಂಚ ಪಾತ್ರೆ, ಉದ್ದರಣೆ ಎಲ್ಲೆ. ಆಮೇಲೆ ಮಣೆ ಎಲ್ಲೆ

ಸುಶೀಲ : ಅಲ್ಲೇ ಇದೆ ನೋಡ್ರೀ

ಗುಂಡ : ಅಯ್ಯೋ ನಿನ್ನ ಪಿಂಡ, 5ಗಂಟೆಯಿಂದ ಹುಡುಕ್ತಾ ಇದೀನಿ. ಎಲ್ಲೂ ಸಿಕ್ತಾ ಇಲ್ವಲ್ಲೇ, ಹಳ್ಳಿಗೆ ಬೇರೆ ಸೈಕಲ್ ನಲ್ಲಿ ಹೋಗಬೇಕು. ಯಾವನೋ ಮುಂಡೇ ಮಗ ಇನ್ಸ್ ಪೆಕ್ಷನ್ ಗೆ ಬೇರೆ ಬರ್ತಾನಂತೆ. ಇವತ್ತು ಏಕಾದಶಿ ಬೇರೆ. ಹಿಂಗೆ ಟೆನ್ಷನ್ ಆದ್ರೆ ಗ್ಯಾಸ್, ಅಸಿಡಿಟಿ ಗ್ಯಾರಂಟಿ. ಅದೇನು ಅಂತ ಗಂಟು ಬಿದ್ದಿಯೋ, ಸುಮ್ನೆ ನನ್ನ ಅಕ್ಕನ ಮಗಳು ಸುಮನ್ನೇ ಮದುವೆಯಾಗಿದ್ರೆ ಆಗ್ತಿತ್ತು. ಪೆದ್ದಿ ತರಾ ಇದ್ರು, ನಾ ಹೇಳಿದ್ದನ್ನ ಸರಿಯಾಗಿ ಮಾಡೋಳು. ಏನೋ ಬುದ್ದಿವಂತೆ, ನೋಡಕ್ಕೆ ಸ್ವಲ್ಪ ಚೆನ್ನಾಗಿದೀಯಾ ಅಂತು ಕಟ್ಕಂಡು, ಈಗ ನೋಡು ಏಗಬೇಕಾಗಿದೆ.

ಸುಶೀಲ : ನಿಮ್ಮ ಜೊತೆ ಏಗಿ, ಏಗಿ ನನಗೂ ಸಾಕಾಗಿ ಹೋಗಿದೆ. ಅದೇನೂ ಅಂತ ನಮ್ಮಪ್ಪ ನಿಮಗೆ ಕೊಟ್ನೋ. ಬೇರೆ ಎಲ್ಲೂ ಗಂಡೇ ಸಿಗಲಿಲ್ಲ ಅಂತ ನಿಮ್ಮನ್ನ ಕಟ್ಟಿದಾರೆ. ಬೇಡ ಅಂತ ಬಡ್ಕೊಂಡೆ, ಸರ್ಕಾರಿ ಮೇಸ್ಟ್ರು, ಸಾಯೋತನಕ ನೆಮ್ಮದಿಯಾಗಿರಬಹುದು ಅಂದ್ಲು ನಮ್ಮಮ್ಮ, ಮದುವೆಯಾದ ಮೇಲೆ ಚೆನ್ನಾಗಿ ಇರ್ತೀಯಾ ಅಂದ ಜ್ಯೋತಿಷಿ, ಈ ಸಾರಿ ಊರಿಗೆ ಹೋದಾಗ ಸಿಗಲಿ ಅವನು ಹಳೇ ಸೌಟಲ್ಲೇ ಅವನ ತಲೆ ಮೇಲೆ ಹಾಕ್ತೀನಿ.

ಗುಂಡ : ಸಿಕ್ತು ಬಿಡು. ಹುಣಸೆಹಣ್ಣು ಹಾಕಿ ತೊಳೆಯೋದು ಅಲ್ವಾ. ಓಂ ಕೇಶವಾಯ ಸ್ವಾಃ, ಒಲೆ ಮೇಲೆ ಹಾಲು ಇದೆ ನೋಡು, ಓಂ ನಾರಾಯಣಾಯ ಸ್ವಾಃ, ನನ್ನ ಬಟ್ಟೆ ತೆಗೆದಿಡೇ, ಓಂ ಮಾಧವಾಯ ಸ್ವಾಃ, ಬೇಗ ತೆದಿಡೇ, ಗೋವಿಂದಾಯ ನಮಃ. ಥೂ ಕಡೇಗೂ ಹಾಲು ಉಕ್ತು.

ಸುಶೀಲಾ : ಸಾರಿಗೆ ಹಾಕಕ್ಕೆ ಇಲ್ಲಾ. ಇನ್ನು ಪಾತ್ರೆಗೆ ಬೇರೆ. ನೀವು ದೇವರ ಪೂಜೆ ಮಾಡ್ತಾ ಇದೀರೋ, ಏನೂ. ( ಈ ಕಡೆ ಸಿಡಿಯಲ್ಲಿ ಸುಪ್ರಭಾತ ಬಡ್ಕೊತಾ ಇದೆ. ಗಂಡ ಹೆಂಡತಿಯ ಜೋರು ಸಂವಾದ ಮತ್ತೊಂದು ಕಡೆ. ಮಕ್ಕಳು ಒಂದು ಸಾರಿ ಒಳಗೆ ನೋಡ್ತಾರೆ, ಮತ್ತೆ ಹೊರಗೆ ಅಮ್ಮನ್ನ ನೋಡ್ತಾರೆ)

 

ಈ ಕಡೆ ಪಕ್ಕದ ಮನೆಯಲ್ಲಿ ಹಾಸಿಗೆ ಮೇಲೆ

ಸುಬ್ಬ ಮನೆಗೆ ಬರೋದೆ ರಾತ್ರಿ ಹನ್ನೆರಡಕ್ಕೆ. ರಾತ್ರಿ ಒಂದು ರವಂಡ್ ಫುಲ್ ಪೋಚ್ಕಂಡು ಬಂದು ಮಲಗಿದ ಅಂದ್ರೆ, ಅವನಿಗೆ ಎಚ್ಚರವಾಗೋದೆ ಗುಂಡನ ಮನೆಯಲ್ಲಿ ಸುಪ್ರಭಾತ ಹಾಕಿದ ಮೇಲೆ

ಸುಬ್ಬ : ಗುಂಡನ ಮನೆಗೆ ಹೋಗಿ ಸಿಡಿ ಸವಂಡ್ ಕಡಿಮೆ ಮಾಡಕ್ಕೆ ಹೇಳೆ. ಭಕ್ತಿ ಇದ್ದರೆ ಹೆಡ್ ಪೋನ್ ಹಾಕ್ಕಂಡ್ ಕೇಳಕ್ಕೆ ಹೇಳು. ದಿನಾ ಬೆಳಗ್ಗೆ ನಮ್ಮ ಹೆಣ ಎತ್ತಿಸ್ತಾನೆ. ನಾನೇ ಹೋಗಿ ಉಗೀತಿದ್ದೆ. ಹೋದ ತಿಂಗಳು ಕೈ ಗಡ ಅಂತ ಇಸ್ಕಂಡಿದ್ದು ಇನ್ನೂ ಕೊಟ್ಟಿಲ್ಲ.

ಮೀನಾ : ಅಯ್ಯೋ ನೀವೇ ಹೋಗಿ ಹೇಳ್ರಿ. ನಾನೇದ್ರೂ ಇಷ್ಟೊತ್ತಿಗೆ ಹೋದ್ರೆ, ಸುಶೀಲ ಆ ವೃತ ಮಾಡು, ಈ ವೃತ ಮಾಡು ಮುಂದಿನ ಜನ್ಮದಲ್ಲೂ ಇವರೇ ಸಿಕ್ತಾರೆ ಅಂತ ಹೇಳ್ತಾಳೆ. ಪ್ರತೀ ಜನ್ಮದಲ್ಲಿ ನೀವೇ ಸಿಕ್ಕರೆ ಲೈಫ್ ಬೋರ್ ಆಗಲ್ವಾ.

ಸುಬ್ಬ : ಹೌದು ಕಣೆ, ಮೂರು ಹೊತ್ತು ಹಂದಿ ತಿಂದಂಗೆ ತಿನ್ನಕ್ಕೆ ತಂದು ಹಾಕ್ತೀನಲ್ಲಾ, ನಾನು ಹೊಡಕೊಬೇಕು. ನಿಮ್ಮಪ್ಪ ಮದುವೆಯಾದಾಗ ಜಮೀನು ಕೊಡ್ತೀನಿ ಅಂದ, ಬೈಕ್ ಕೊಡ್ತೀನಿ ಅಂದ. ಎಲ್ಲಾ ಟೋಪಿ ಹಾಕಿ ನಿನ್ನಂತಹ ಗೂಬೆಯನ್ನು ಕಟ್ಟಿದಾನಲ್ಲೇ, ನನ್ನ ಸೊಗಸಿಗೆ ಯಾವಾಳಾದ್ರೂ ಶ್ರೀಮಂತರ ಮನೆ ಹುಡುಗಿ ಸಿಕ್ಕಿರೋದು ಗೊತ್ತೇನೆ.

ಮೀನಾ : ಹೌದೌದು, ನಿಮ್ಮ ಮಕ್ಕೆ ಎಲ್ಲೂ ಹೆಣ್ಣು ಸಿಗಲ್ಲ ಅಂತ ನಿಮ್ಮಪ್ಪ ನಮ್ಮಪ್ಪನ ಕಾಲು ಹಿಡಿದುಕೊಂಡದಕ್ಕೇ ನಾನು ನಿಮ್ಮನ್ನ ಕಟ್ಕಂಡಿದ್ದು, ಬರೀ ತಿನ್ನಕ್ಕೆ ತಂದು ಹಾಕಿಬಿಟ್ಟರೆ ಮುಗೀತಾ, ಇವತ್ತಿನವರೆಗೂ ಒಂದು ಪಿಚ್ಚರ್, ಷಾಪಿಂಗ್ ಅಂತ ಕರ್ಕಂಡು ಹೋಗಿದಿರಾ. ನನ್ನ ಬಾಳೇ ಇಷ್ಟು ಆಯ್ತು (ಅಳು)

ಸುಬ್ಬ : ಥೂ ಬೆಳಗ್ಗೆನೇ ಶುರುವಾಯ್ತು, ಕ್ಯಾಂಟೀನ್್ಗೆ ಹೋಗಿ ಕಾಫಿ ಕುಡ್ಕಂಡು ಬರ್ತೀನಿ.

ಸರಿ ಬೆಳಗ್ಗೆ 10, ಇಬ್ಬರೂ ಡ್ಯೂಟಿಗೆ ಹೊರಟರು. ಏನೋ ಗುಂಡ ತಿಂಡಿ ಆಯ್ತೇನೋ, ಇಲ್ಲಪ್ಪಾ ಇವತ್ತು ಏಕಾದಶಿ, ಅದಕ್ಕೆ ಅಂತ ಡೈಜೀನ್ ಅಂಗೇ ಒಂದು ಮೂರು ಒಮೇಜ್ ಇಟ್ಕಂಡಿದೀನಿ. ಮತ್ತೆ ಇದು ತಿಂಡಿ ಆದಂಗೆ ಆಯ್ತಲ್ಲಾ, ಬಾರೋ ಶಾಂತಿಸಾಗರ್ ನಲ್ಲಿ ಒಳ್ಳೆ ಬಿಸಿ ಪೂರಿ ಹಾಕ್ತಾರೆ ತಿಂದು ಹೋಗೋಣ. ಅಯ್ಯಯ್ಯಪ್ಪಾ ಇಷ್ಟು ದಿನ ನಾ ಮಾಡ್ಕಂಡು ಬಂದಿರೋ ವೃತ ಹಾಳಾಗುತ್ತೆ.

 

ಈ ಕಡೆ,

ಏನ್ರೀ ಸುಶೀಲಾ, ಏನು ಇವತ್ತು ತಿಂಡಿ, ಏನೂ ಇಲ್ಲ ಬರೀ ಮೂರು ಲೋಟ ನೀರು, ಮಕ್ಕಳಿಗೆ ಚಟ್ನಿಪುಡಿ ಅವಲಕ್ಕಿ, ನಿಮ್ಮ ಮನೆಯಲ್ಲಿ, ನಮ್ಮ ಮನೇಲಿ ಇವತ್ತು ಇಡ್ಲಿ, ಸಾಂಬಾರ್ ಹಂಗೇ ವಡೆ. ಅಯ್ಯೋ ಯಾರು ಹೋದ್ರು, ಥೂ ಯಾರೂ ಹೋಗಿಲ್ಲ ಬಾಯಿ ಕೆಟ್ಟಿತ್ತು ಅಂತ ಮಾಡ್ದೆ ಅಷ್ಟೆ. ನಮ್ಮ ಮನೆ ಪ್ರಾಣಿಗೆ ಇದು ಬೇಡ್ವಂತೆ. ಅದಕ್ಕೆ ಅದು ಹೋಟೆಲ್ ಗೆ ಹೋಗಿದೆ. ನನಗೂ ಇವೆಲ್ಲಾ ತಿನ್ನಬೇಕು ಅಂತ ಇಷ್ಟ ಕಣ್ರೀ, ಆದ್ರೆ ನಮ್ಮ ಪ್ರಾಣಿ ಏಕಾದಶಿ, ಅಂತ ಹೆಣ ಎತ್ತಿಸುತ್ತೆ. ಮೊದಲು ನಾನು ರಂಭನ ತರಾ ಇದ್ದೆ. ಈ ಮನುಷ್ಯನ್ನ ಮದುವೆಯಾದ ಮೇಲೆ. ಪಾತ್ರೆ ತೊಳೆಯೋ ಸಾಕಮ್ಮ ಆದಂಗೆ ಆಗಿದೀನಿ ಕಣ್ರೀ,. ಹೂಂ ಕಣ್ರೀ ನಾನು ಅಷ್ಟೆ, ಮೊದಲು ಐಶ್ವರ್ಯ ಇದ್ದಂಗೆ ಇದ್ದೆ, ಈ ಮನುಷ್ಯನ ಜೊತೆ ರೇಗಾಡಿ, ಥೈರಾಯಿಡ್ ಬಂದು ಮಂಜುಮಾಲಿನಿ ತರಾ ಆಗಿದೀನ್ರಿ ಅಂದ್ಲು ಮೀನಾ.

ಒಂದು ಕಡೆ ಮಡಿ, ಇನ್ನೊಂದು ಕಡೆ ಹೇಗೆ ಬೇಕೋ ಹಾಗೆ ಇರುವಂತಹ ಮನುಷ್ಯ. ಜೀವನ ಪೂರ್ತಿ ಹೀಗೆ ಇರುತ್ತಾರಾ ಎಂದರೆ ಅದಕ್ಕೂ ಒಂದು ದಿನ ಬದಲಾವಣೆ ಬರುತ್ತದೆ. ಸುಶೀಲಾ ಯಾವುದೋ ಒಂದು ಖಾಯಿಲೆಯಿಂದ ಹಾಸಿಗೆ ಹಿಡಿಯುತ್ತಾಳೆ. ಇತ್ತ ಸುಬ್ಬನೂ ಆಸ್ಪತ್ರೆ ಸೇರುತ್ತಾನೆ. ಮಡಿ ಎನ್ನುತ್ತಿದ್ದ ಗುಂಡ, ಹೆಂಡತಿ ಹಾಸಿಗೆ ಹಿಡಿದಾಗ ಅನಿವಾರ್ಯವಾಗಿ ವ್ಯವಸ್ಥೆಗೆ ಒಗ್ಗಬೇಕಾಗುತ್ತದೆ. ಮಡಿ ಅಂತ ಮಾಡಿದ್ರೆ ಹೆಂಡತಿಗೆ ಅಡುಗೆ ಮಾಡುವವರು ಯಾರು, ನೋಡಿಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಉದ್ಭವವಾಗುವುದರಿಂದ ತನ್ನ ಜೀವನವನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಾ ಹೋಗುತ್ತಾನೆ. ಇತ್ತ ಐಷಾರಾಮಾಗಿ ಇದ್ದ ಸುಬ್ಬ ಬದಲಾಗುತ್ತಾನೆ. ಜೀವನದಲ್ಲಿ ಸಾಕಷ್ಟು ನೋವುಂಡ ಮೇಲೆ, ತನ್ನ ಸಂಸಾರ, ಮನೆ ಎನ್ನುವುದರ ಬಗ್ಗೆ ಜವಾಬ್ದಾರಿ ಮೂಡುತ್ತಾ ಹೋಗುತ್ತದೆ. ಈ ಮುಂಚೆ ನಡೆಯುತ್ತಿದ್ದ ಜಗಳಗಳಿಗೆ ಬ್ರೇಕ್ ಬೀಳುತ್ತದೆ.

ನಂತರ

ಸುಬ್ಬ : ಎಲ್ಲಿಗೆ ಹೋಗ್ತಾ ಇದೀಯೋ? ಇವತ್ತು ಏಕಾದಶಿ ಅಲ್ವಾ ಮತ್ತೆ ಟಿಫಿನ್ ಕ್ಯಾರಿಯರ್

ಗುಂಡ : ಸ್ಕೂಲಿಗೆ ಕಣೋ, ಏಕಾದಶಿ ನಿಜ, ನಮ್ಮ ಆರೋಗ್ಯನೂ ನೋಡಕಬೇಕು ಅಲ್ವಾ, ಹೌದು ನಿನ್ನ ಕೈಯಲ್ಲಿ ಏನು ಕ್ಯಾರಿಯರ್.

ಸುಬ್ಬ : ದೋಸೆ ಕಣಯ್ಯಾ, ಮನೆ ತಿಂಡಿ ತಿಂದ್ರೆ ಆರೋಗ್ಯನೂ ಚೆನ್ನಾಗಿರುತ್ತೆ, ಕಾಸು ಉಳಿಯುತ್ತೆ. ಆಮೇಲೆ ಸಂಜೆ ಇವತ್ತು ಸಂಪದ ಕಲಾಕ್ಷೇತ್ರದಲ್ಲಿ ಒಂದು ನಾಟಕ ಇದೆ, ಹೋಗೋಣಪಾ ಬೇಗ ಬಂದು ಬಿಡು.

ಶುಭಂ

ಸಮಯ ಹೆಚ್ಚಸಿಲು ಮತ್ತಷ್ಟು ಡೈಲಾಗ್್ಗಳನ್ನು ಸೇರಿಸಬಹುದು.