ಸುಡು ಬಯಲು

ಸುಡು ಬಯಲು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎಂ ಎಸ್ ಮಣಿ
ಪ್ರಕಾಶಕರು
ಐ ಎಚ್ ಎಸ್ ಪ್ರಕಾಶನ, ಮಾರುತಿನಗರ, ವಿಜಯಪುರ, ಬೆಂಗಳೂರು ಗ್ರಾ. ಜಿಲ್ಲೆ.
ಪುಸ್ತಕದ ಬೆಲೆ
ರೂ. ೩೭೫.೦೦, ಮುದ್ರಣ: ೨೦೨೨

'ಸುಡು ಬಯಲು' ಎನ್ನುವುದು ಒಂದು ಅಂಕಣ ಬರಹಗಳ ಸಂಗ್ರಹ. ೭೨ ಬರಹಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕವು ಕೊರೊನಾ ಸಾಂಕ್ರಾಮಿಕದ ಸಮಯದ ಜನರ ತಲ್ಲಣಗಳು, ವೈದ್ಯರ ಶ್ರಮ, ಮಾಧ್ಯಮದವರ ಅತಿರೇಕ ಎಲ್ಲವುದರ ಕುರಿತು ಬೆಳಕು ಚೆಲ್ಲುತ್ತದೆ. ಅದಕ್ಕೇ ಮಣಿ ಅವರು ಪುಸ್ತಕದ ಮುಖಪುಟದಲ್ಲೇ 'ಸತ್ಯಾನ್ವೇಷಣೆಯ ಬೆನ್ನೇರಿ...' ಎಂದು ಮುದ್ರಿಸಿದ್ದಾರೆ. ಪತ್ರಕರ್ತರಾಗಿರುವ ಮಣಿ ಅವರು ಕೊರೊನಾ ಸಂದರ್ಭದ ವಾಸ್ತವಾಂಶಗಳನ್ನು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. 

ಬೆಂಗಳೂರಿನ ಹಿರಿಯ ಪತ್ರಕರ್ತರೂ, ರೆಡ್ ಕ್ರಾಸ್ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿರುವ ಎಸ್. ನಾಗಣ್ಣ ಇವರು ಪುಸ್ತಕ ಬೆನ್ನುಡಿ ಬರೆಯುತ್ತಾ ಹೇಳುತ್ತಾರೆ "ಕಳೆದೆರಡು ವರ್ಷಗಳಿಂದ ಕೊರೋನಾ ಎಂಬ ಕಾಣದ ವೈರಾಣು ಇಡೀ ಜಗತ್ತನ್ನು ತಲ್ಲಣಗೊಳಿಸಿತು. ಜನರ ದೈನಂದಿನ ಬದುಕನ್ನು ನರಕವಾಗಿಸಿತು. ಬದುಕೆಂದರೆ ನೀರ ಮೇಲಿನ ಗುಳ್ಳೆಯಂತೆ ಅನಿಶ್ಚಿತ ಅನ್ನುವ ಭಾವ ಮೂಡಿಸಿತು. ಇಂತಹ ಸನ್ನಿವೇಶದಲ್ಲಿ ಮಾಧ್ಯಮಗಳು, ವಿಶೇಷವಾಗಿ ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯ ಸ್ಥಾನದಲ್ಲಿ ನಿಂತು ಎಚ್ಚರದ ಪಾಠಗಳನ್ನು ಬೋಧಿಸಿದವು. ಏಕಕಾಲಕ್ಕೆ ಜನರಲ್ಲಿ ಜಾಗೃತಿಯನ್ನು ಭರವಸೆಯನ್ನು ಮೂಡಿಸಿದವು. ಸರ್ಕಾರವನ್ನು ಎಚ್ಚರಗೊಳಿಸಿದವು. ವ್ಯವಸ್ಥೆಯ ಅವ್ಯವಸ್ಥೆಯನ್ನು, ಕರಾಳತೆಯನ್ನು ಬೆತ್ತಲು ಮಾಡಿದವು. ಸಾಮಾಜಿಕ ವೈದ್ಯರಾಗಿ ಪತ್ರಕರ್ತರು ಹದ್ದಿನಕಣ್ಣಿನಲ್ಲಿ ಕೆಲಸ ಮಾಡಿದರು.

ಇಂತಹ ಜವಾಬ್ದಾರಿ ಅರಿತ, ಜನಪರ ಪತ್ರಕರ್ತರಲ್ಲಿ ನಮ್ಮ ಡಾ. ಎಂ ಎಸ್ ಮಣಿ ಅವರು ಒಬ್ಬರು. ಕೊರೋನಾ ಭೀತಿಯ ಸನ್ನಿವೇಶದಲ್ಲಿಯೂ ಒಬ್ಬ ಯೋಧನಂತೆ ನಿಂತು ಅವರು ವಹಿಸಿದ ಪಾತ್ರ, ತೋರಿದ ಕಾಳಜಿ, ಅಂತರಂಗದ ಆಶಯ ಏನು ಎನ್ನುವುದನ್ನು ಅವರು ಪತ್ರಿಕೆಯಲ್ಲಿ ಬರೆದ ಬರಹಗಳು ಹೇಳುತ್ತವೆ. ಅಂತಹ ಪ್ರಾಮಾಣಿಕ ಬರಹಗಳ ಲೇಖನಗಳ ಸಂಗ್ರಹ ರೂಪವೇ 'ಸುಡು ಬಯಲು'. ಒಂದು ಸಾಹಿತ್ಯ ಕೃತಿಯಾಗಿ ಓದುಗರ ಅಂಗಳಕ್ಕೆ ಬಂದಿದೆ.

ಹೀಗಾಗಿ 'ಸುಡು ಬಯಲು' ಎಲ್ಲರೂ ಓದಲೇ ಬೇಕಾದ ಸಂಗ್ರಹ ಯೋಗ್ಯ ಕೃತಿ. ಕೊರೋನಾ ಕಾಲದ ಆತಂಕದ ಬದುಕಿನ ಹತ್ತಾರು ಮುಖಗಳನ್ನು ಪರಿಚಯಿಸುತ್ತದೆ. ಕೊರೋನಾ ಭೀತಿ, ಲಾಕ್ ಡೌನ್ ಸೃಷ್ಟಿಸಿದ ನರಕ, ಮೆಡಿಕಲ್ ಮಾಫಿಯಾ, ಅಧಿಕಾರಿಗಳ ಭ್ರಷ್ಟತೆ, ಶಾಲೆಗಳ ಸ್ಥಿತಿಗತಿ, ದಿನಗೂಲಿ ನೌಕರರ-ಬೀದಿಬದಿ ವ್ಯಾಪಾರಿಗಳ ಸಂಕಷ್ಟ, ಮಸಣದ ಹೂವುಗಳ ಸಂಕಟ... ಹೀಗೆ ಹಲವು ಸಂಗತಿಗಳನ್ನು ಆರಿಸಿಕೊಂಡು ನಿರ್ಭೀತಿಯಿಂದ ಬರೆದ ಎಂ ಎಸ್ ಮಣಿ ಅವರ ದಿಟ್ಟತನ ನನಗೆ ಇಷ್ಟವಾಯಿತು. ಈ ಕಾರಣವಾಗಿ 'ಸುಡು ಬಯಲು' ಕೊರೋನಾ ಕಾಲಘಟ್ಟದ ಸತ್ಯ ಸಂಗತಿಯಾಗಿ, ಅಧಿಕೃತ ದಾಖಲೆಯಾಗಿ, ನೈಜ ಇತಿಹಾಸವಾಗಿ ಜನರ ಮಧ್ಯದಲ್ಲಿ ಚಿರಕಾಲ ನಿಲ್ಲಲಿದೆ."