ಸುದ್ದಿಯ ಆದ್ಯತೆಗಳು ಹೇಗಿರಬೇಕು?

ಸುದ್ದಿಯ ಆದ್ಯತೆಗಳು ಹೇಗಿರಬೇಕು?

ಒಂದು ರಾಸಲೀಲೆಯ ಸುತ್ತವೇ ಸುತ್ತುತ್ತಿರುವ ಕರ್ನಾಟಕದ ಟಿವಿ ಮಾಧ್ಯಮ ಲೋಕ. ಕೊರೋನಾ ವೈರಸ್ ಅನ್ನು  ಹಿಂದಿಕ್ಕಿದ ಅಶ್ಲೀಲ ಸಿಡಿ. ರೈತರ ಸಮಸ್ಯೆಗಳನ್ನು ಮರೆಮಾಚಿದ ಲೈಂಗಿಕ ವಿಕೃತಿಯ ದೃಶ್ಯಗಳು. TRP ಗೆ ಬಲಿಯಾದ ಶೈಕ್ಷಣಿಕ ಕ್ಷೇತ್ರದ ಹಲವಾರು ಸಮಸ್ಯೆಗಳು. ಬ್ರೇಕಿಂಗ್ ನ್ಯೂಸ್ ಗೆ ಶರಣಾದ ಆರ್ಥಿಕ ಕುಸಿತದ ದುಷ್ಪರಿಣಾಮಗಳು. ರಾಜಕಾರಣಿಗಳ ತಂತ್ರ ಕುತಂತ್ರಗಳ ತೆವಲಿಗೆ ಬಲಿಯಾದ ನೈತಿಕ ಮೌಲ್ಯಗಳು. ಅನೈತಿಕತೆಯನ್ನೇ ಒಂದು ಚರ್ಚೆಯಾಗಿಸಿ ಮನಸ್ಸುಗಳನ್ನು ಕಲುಷಿತ ಗೊಳಿಸಿದ ದೃಶ್ಯ ಮಾಧ್ಯಮಗಳು.

ಇದರಿಂದಾಗಿ,

ಮಾಧ್ಯಮಗಳಿಗೆ ಸಂಪೂರ್ಣ ಲಾಭ,

ರಾಜಕಾರಣಿಗಳಲ್ಲಿ ಕೆಲವರಿಗೆ ಲಾಭ, ಕೆಲವರಿಗೆ ನಷ್ಟ,

ಸಾಮಾನ್ಯ ಜನರಿಗೆ ಮಾತ್ರ ಸಂಪೂರ್ಣ ನಷ್ಟ.

ಸುದ್ದಿಯ ಆದ್ಯತೆಗಳು ಹೇಗಿರಬೇಕು?, ಸುದ್ದಿಯ ಪ್ರಸಾರದಿಂದ ಒಟ್ಟು ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳು ಏನು? ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಮಿತಿಗಳೇನು? ಎಂಬ ಸೂಕ್ಷ್ಮವಾದ ಅಧ್ಯಯನದ ಭಾಗಗಳು ಪತ್ರಕರ್ತರಿಗೆ ತಿಳಿದಿರಬೇಕಾದ ಮೂಲಭೂತ ವಿಷಯಗಳು.

TRP ಹೆಚ್ಚಿಸುವುದು, ಜನಪ್ರಿಯತೆಯ ಹಿಂದೆ ಬೀಳುವುದು, ಅಸತ್ಯ ಹಿಂಸೆ ಕ್ರೌರ್ಯದ ದೃಶ್ಯಗಳನ್ನು ವಿಜೃಂಭಿಸುವುದು ಅನಾಗರಿಕ ಅಮಾನವೀಯ ಪತ್ರಿಕಾ ಧರ್ಮದ ಲಕ್ಷಣಗಳು ಎಂಬುದನ್ನು ಮರೆತ ಪತ್ರಕರ್ತ ಗೆಳೆಯರು. ಒಂದು ಸಿನಿಮಾ ಬಿಡುಗಡೆಗೆ ಕೊಡುವ ಅತಿರೇಕದ ಪ್ರಚಾರದಲ್ಲಿ ಕೇವಲ ಒಂದು ಪರ್ಸೆಂಟ್ ಸಹ ರೈತರ ಶೋಷಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ನಿರ್ಲಕ್ಷ್ಯ ತೋರುತ್ತಾರೆ ಮಾಧ್ಯಮ ಸ್ನೇಹಿತರು.

ಯಾವುದೇ ಒಬ್ಬೇ ಒಬ್ಬ ಸಿನಿಮಾ ಹೀರೋ ಸಹ ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ( ವೈಯಕ್ತಿಕ ಸಣ್ಣ ಪುಟ್ಟ ಸಹಾಯ ಬಿಟ್ಟು ) ಆದರೆ ಆ ಕೃತಕ ಮನರಂಜನಾ ಉದ್ಯಮದ ನಟರನ್ನು ಹಾಡಿ ಹೊಗಳಿ ಅತಿಮಾನುಷ ವ್ಯಕ್ತಿಯಂತೆ ಚಿತ್ರಿಸುತ್ತಿರುವ ಅಭಿರುಚಿ ಹೀನ ದೃಶ್ಯ ಮಾಧ್ಯಮಗಳು.

ಕೇವಲ ಸಮಾಜಕ್ಕೆ ಬಾಯಿಗೆ ಬಂದಂತೆ ನೈತಿಕ ಮೌಲ್ಯಗಳ ಬಗ್ಗೆ ಪಾಠ ಮಾಡುವುದಕ್ಕಿಂತ ಅವುಗಳು ಜನರಲ್ಲಿ ಅನುಷ್ಠಾನಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸುವುದು ಪತ್ರಕರ್ತರ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ

ವಿಕೃತಗಳು ಮತ್ತು ವಿಕೃತ ಮನಸ್ಥಿತಿಯ ಜನರನ್ನೇ ಹೆಚ್ಚು ಜನಪ್ರಿಯ ಗೊಳಿಸುವ ಮೂಲಕ ಸಮಾಜದ ಒಟ್ಟು ಸ್ವಾಸ್ಥ್ಯವನ್ನೇ ಹಾಳು ಮಾಡಲು ಮುಂದಾಗಿರುವ ಮಾಧ್ಯಮಗಳು.

ಎಲ್ಲಾ ಮಾಧ್ಯಮಗಳು ಸೇರಿ ರಚನಾತ್ಮಕ ಕಾರ್ಯತಂತ್ರ ರೂಪಿಸಿಕೊಳ್ಳದೇ ಕೇವಲ ಹಣ ಸಂಪಾದನೆಯೇ ಮುಖ್ಯ ಗುರಿಯಾಗಿ ಕಾರ್ಯನಿರ್ವಹಿಸಿದರೆ ಮುಂದಿನ ದೃಶ್ಯ ಮಾಧ್ಯಮಗಳ ಭವಿಷ್ಯ ಅತ್ಯಂತ ಕಳವಳಕಾರಿ ಎಂದು ಎಚ್ಚರಿಸುತ್ತಾ....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 135 ನೆಯ ದಿನ ಕೊಪ್ಪಳ ನಗರದಲ್ಲಿಯೇ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ