ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು! (ಭಾಗ 1)

ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು! (ಭಾಗ 1)

ಬರಹ

ಪೀಠಿಕೆ
-------

ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:
ಅದರ ಸಮಸ್ತ ನಾಗರಿಕರಿಗೆ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು
ಉಪಾಸನಾ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶ ಸಮಾನತೆ
ದೊರೆಯುವಂತೆ ಮಾಡಲು ಮತ್ತು
ವ್ಯಕ್ತಿ ಗೌರವವನ್ನು (ರಾಷ್ಟ್ರದ ಏಕತೆಯನ್ನು ಹಾಗೂ
ಅಖಂಡತೆಯನ್ನು) ಖಾತ್ರಿ ಮಾಡಿ ಅವರಲ್ಲಿ ಎಲ್ಲರಲ್ಲೂ
ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸುವುದಕ್ಕಾಗಿ
ಶ್ರದ್ಧಾಪೂರ್ವಕವಾಗಿ ದೃಢಸಂಕಲ್ಪ ಮಾಡಿದವರಾಗಿ;
ನಮ್ಮ ಸಂವಿಧಾನ ಸಭೆಯಲ್ಲಿ ಈ 1949 ನೆಯ ಇಸವಿ ನವೆಂಬರು ತಿಂಗಳು ಇಪ್ಪತಾರನೆಯ ತಾರೀಖಾದ ಇಂದಿನ ದಿವಸ ಈ ಮೂಲಕ ಸಂವಿಧಾನವನ್ನು ಅಧಿನಿಯಮಿತಗೊಳಿಸಿ, ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ನಮ್ಮ ಅಂದರೆ ಭಾರತದ ಸಂವಿಧಾನ ಎಷ್ಟು ಉದಾತ್ತ ಆದರ್ಶಗಳನ್ನು ಹೊಂದಿದೆ ಎನ್ನುವುದನ್ನು ಈ ಪ್ರಸ್ತಾವನೆ(Preamble)ಯೇ ಸ್ಪಷ್ಟಪಡಿಸಿಬಿಡುತ್ತದೆ. ಮೇಲಿನ ಪ್ರಸ್ತಾವನೆಯನ್ನು ಓದಿದಾಗ ನಮ್ಮ ಸಂವಿಧಾನವನ್ನು ಯಾವ ಉದ್ದೇಶವಿಟ್ಟುಕೊಂಡು ಯಾರು ಯಾರ ಸಲುವಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಶಾಸಕಾಂಗ, ಕಾರ್ಯಾಂಗ, ರಾಜ್ಯಾಂಗ ಹಾಗೂ ನಾವು(ಭಾರತದ ಪ್ರಜೆಗಳು) ಈ ಪ್ರಸ್ತಾವನೆಯನ್ನು ಮರೆತುಬಿಟ್ಟಂತೆ ತೋರುತ್ತಿದೆಯಾದ್ದರಿಂದ ಇದನ್ನು ಮತ್ತೆ ಮತ್ತೆ ನೆನೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.

ಈ ನಮ್ಮ ಸಂವಿಧಾನವನ್ನು ಭಾರತದ ಜನಗಳು ತಮಗೆ ತಾವೇ ಕೊಟ್ಟುಕೊಂಡಿದ್ದಾರೆ. ಅಂದರೆ, ಇಡೀ ಭಾರತದ ಜನತೆ ಒಟ್ಟಾಗಿ ಈ ಸಂವಿಧಾನವನ್ನು ರಚಿಸಿ ಅದಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುತ್ತಾರೆ. ಇಲ್ಲಿ ಭಾರತದ ಜನವೊಂದೇ ಮಹತ್ವದ ಅಂಶವೇ ಹೊರತು ಆ ಜನರ ರಾಜ್ಯ, ಜಾತಿ, ಮತ, ಪಂಥ ಇತ್ಯಾದಿ ಯಾವುದೂ ಅಲ್ಲ.

ಇಷ್ಟೆಲ್ಲವನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇಡೀ ಭಾರತೀಯ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿರುವಂತಹ ಈ ಸಂದರ್ಭದಲ್ಲಿ, ಸಮಾಜದ ಬಹುಮುಖ್ಯ ಪ್ರತಿನಿಧಿಯಾಗಿರುವ ಮಾಧ್ಯಮದ ವರ್ತನೆ ಸಾಕಷ್ಟು ಟೀಕೆಗೊಳಗಾಗುತ್ತಿದೆ. ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಬಹುಮುಖ್ಯವಾದುದು ಮಾಧ್ಯಮ ಸ್ವಾತಂತ್ರ್ಯ. ಇದು ಎಷ್ಟು ಮುಖ್ಯವಾದುದೆಂದರೆ, ಇಡೀ ವ್ಯವಸ್ಥೆ(ಶಾಸಕಾಂಗ, ಕಾರ್ಯಾಂಗ, ರಾಜ್ಯಾಂಗ) ಎಷ್ಟರ ಮಟ್ಟಿಗೆ ಸಂವಿಧಾನದ ಆಶಯವನ್ನು ಪ್ರತಿಬಿಂಬಿಸುತ್ತಿದೆ ಎಂಬುದನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಣೆಗಾರಿಕೆ ಮಾಧ್ಯಮದ ಮೇಲಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆದ ಅಪರಾಧಗಳ ಕುರಿತಂತೆ ಮಾಧ್ಯಮ ವರ್ತಿಸಿದ ರೀತಿ, ಅದರ ನೈತಿಕತೆಯನ್ನು, ಹೊಣೆಗಾರಿಕೆಯನ್ನು, ಸಮಾಜದಲ್ಲಿ ಅದರ ಪಾತ್ರವನ್ನು ಮರುಪ್ರಶ್ನಿಸುವಂತೆ ಮಾಡಿದೆ. ಈ ಕುರಿತು ಸಂಪದದ ಅನೇಕ ಗೆಳೆಯರು ಸಾಕಷ್ಟು ಬರೆದಿದ್ದಾರೆ, ಚರ್ಚಿಸಿದ್ದಾರೆಯಾದರೂ ನಾನು ಕೂಡ ಒಂದು ಕಾಲದಲ್ಲಿ ಮಾಧ್ಯಮವನ್ನು ವೃತ್ತಿಪರವಾಗಿ ಪ್ರತಿನಿಧಿಸಿದ ಕಾರಣಕ್ಕಾಗಿ ಎಷ್ಟೋ ತಿಂಗಳುಗಳಿಂದ ಈ ಕುರಿತು ಬರೆಯಬೇಕೆಂದಿದ್ದೆ. ಆದರೆ, ಎಲ್ಲದಕ್ಕೂ ಒಂದು ಕಾಲ ಬರಬೇಕಲ್ಲವೇ? ಈಗ ಆ ಕಾಲ ಬಂದೊದದಗಿದೆ. ಈ ಲೇಖನ ಕೇವಲ ಒಬ್ಬ ಸೂಕ್ಷ್ಮ ಮನಸ್ಸಿನ ಓದುಗನಾಗಿ, ಜವಾಬ್ದಾರಿಯುತ ನಾಗರಿಕನಾಗಿ, ನಮ್ಮದೆನಿಸುವಂತಹ ಚಿಂತನೆಗಳಿಗೆ ಅಕ್ಷರ ರೂಪವನ್ನು ಕೊಡುವ ಮೂಲಕ ನಮ್ಮನ್ನು ಪ್ರತಿನಿಧಿಸುವಂತಹ ಚಿಂತಕ ಬರಹಗಾರರು ವ್ಯಕ್ತಪಡಿಸಿದ ಮಾಧ್ಯಮಗಳ ಬೇಜವಾಬ್ದಾರಿತನದ ಕುರಿತಾಗಿ ನೀಡಿದ ಸ್ಪಂದನೆಗಳಿಗೆ ಪ್ರತಿಸ್ಪಂದನೆಯಾಗಿ ಮೂಡಿಬಂದಿದೆಯಷ್ಟೆ. ಆದ್ದರಿಂದ, ಇಲ್ಲಿಯ ಬಹಳಷ್ಟು ವಿಷಯಗಳಿಗೆ ವಸ್ತುನಿಷ್ಟ ಲೇಖನಗಳಿಗೆ, ಜವಾಬ್ದಾರಿಯುತ ವರದಿಗಾರಿಕೆಯಿಂದಾಗಿ ಎಂದೂ ನನ್ನನ್ನು ಆಕರ್ಷಿಸುವ ‘ದಿ ಹಿಂದೂ’ ಪತ್ರಿಕೆಗೆ ನಾನು ಋಣಿಯಾಗಿದ್ದೇನೆ.

ಈ ಹಿಂದೆಯೊಮ್ಮೆ ದಿ ಹಿಂದೂ ಈ ಕುರಿತು ತುಂಬಾ ವಿಸ್ತಾರವಾದ ಬರೆಹವೊಂದನ್ನು ಪ್ರಕಟಿಸಿತ್ತು. ಆ ಕುರಿತು ಇಂದಿನ ತಲೆಮಾರನ್ನು ಅರ್ಥಪೂರ್ಣವೆನಿಸುವಂತಹ ರೀತಿಯಲ್ಲಿ ಪ್ರತಿನಿಧಿಸುತ್ತಿರುವ 19ರ ಹರೆಯದ ಸುಪ್ರೀತ್ ಮಾಧ್ಯಮಗಳ ದುಂಡಾವರ್ತನೆ ಕುರಿತು ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯಿಸಿದ್ದ ಸಂದರ್ಭದಲ್ಲಿ ಹೆಸರಿದ್ದೆನಾದರೂ, ಆ ಕುರಿತು ನಾನು ಏನನ್ನೂ ಬರೆಯಲು ಸಾಧ್ಯವಾಗಿರಲಿಲ್ಲ.

ಮಾಧ್ಯಮಗಳ ಸ್ವಯಂ ನಿಯಂತ್ರಣದ ಕುರಿತು ಮತ್ತೊಬ್ಬ ಸೂಕ್ಷ್ಮ ಸ್ಪಂದನೆಯ ಬರೆಹಗಾರ್ತಿ ಪಲ್ಲವಿ ಕೂಡ ಒಳ್ಳೆಯ ಲೇಖನವನ್ನು ಬರೆದಿದ್ದರು. ಅದಕ್ಕೂ ಒಳ್ಳೆಯ ಪ್ರತಿಕ್ರಿಯೆಯೇ ದೊರೆತಿತ್ತು. ಹಾಗೆಯೇ, ಮಾಧ್ಯಮವನ್ನು ಪ್ರಜ್ಞಾವಂತಿಕೆಯಿಂದ ಪ್ರತಿನಿಧಿಸಿರುವ ಹಿರಿಯ ಪತ್ರಕರ್ತರೂ, ಸಜ್ಜನರೂ ಆಗಿರುವ ಚಾಮರಾಜರೂ ಬರೆದಿದ್ದರು. ಸಾಮಾನ್ಯವಾಗಿ ಗಂಭೀರ ಲೇಖನಗಳಿಗೆ ಅಷ್ಟೇನೂ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸದ ನಮ್ಮ ಸಂಪದ ಗೆಳೆಯರು ಮಾಧ್ಯಮ ಕುರಿತ ಲೇಖನಗಳಿಗೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯಿಸುತ್ತಿರುವುದು ಒಂದು ರೀತಿಯ ಆಶ್ಚರ್ಯವನ್ನೇ ಉಂಟುಮಾಡುತ್ತದೆ. ಹಾಗಾಗಿಯೇ, ಈ ಲೇಖನವನ್ನೂ ನಮ್ಮ ಸೂಕ್ಷ್ಮಮನಸ್ಸಿನ ಗೆಳೆಯರು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತಾರೆಂಬ ನಿರೀಕ್ಷೆಯಲ್ಲಿ ಬರೆಯಲು ಮುಂದಾಗಿದ್ದೇನೆ.

ಈ ಶೀರ್ಷಿಕೆ ನೋಡಿದಾಕ್ಷಣ ಎಂತಹವರಿಗೂ ಒಂದು ರೀತಿಯ ಮುಜುಗರವಾಗಬಹುದು. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅಕ್ರಮ, ಅನಿಷ್ಟಗಳನ್ನು ತಡೆಗಟ್ಟುವುದಕ್ಕಾಗದೇ ಹೋದರೂ ಪರವಾಗಿಲ್ಲ, ಇನ್ನಾದರೂ ನಮ್ಮ “ಪ್ರಜ್ಞಾವಂತ ಸಮಾಜ” ಕನಿಷ್ಟ ಪಕ್ಷ ಇಂತಹ ಅನ್ಯಾಯ, ಅತ್ಯಾಚಾರಗಳನ್ನು ವಿರೋಧಿಸುವಂತಾಗಬೇಕು. ಅದಕ್ಕಾಗಿ ಮೈ ಚಳಿ ಕೊಡವಿಕೊಂಡು ಏಳಬೇಕು ಎನ್ನುವ ಕಾರಣಕ್ಕಾಗಿ ಇಂತಹ “ಅಸಂಸ್ಕೃತ” ಎನಿಸಬಹುದಾದಂತಹ ಶೀರ್ಷಿಕೆಯನ್ನು ನೀಡಿದ್ದೇನೆ. ಸಂಪದಿಗರಾರು ಇದನ್ನು ತಪ್ಪಾಗಿ ಭಾವಿಸಬಾರದೆಂದು, ಅರ್ಥೈಸಬಾರದೆಂಬುದು ನನ್ನ ವಿನಯಪೂರ್ವಕ ಮನವಿ.

“ಸೂಳೆಗಾರಿಕೆ” ಮಾಡುವುದರ ಹಿಂದೆ ಯಾವುದೇ ಘನವಾದ ಉದ್ದೇಶವಿರುವುದಿಲ್ಲವಾದರೂ ಹೊಟ್ಟೆಪಾಡಿಗಾಗಿ, ಅನಿವಾರ್ಯ ಕಾರಣಗಳಿಂದಾಗಿ ಜನ ಇಂತಹ ದಂಧೆಗೆ ಬಲವಂತವಾಗಿ ಇಳಿಯಬಹುದೇನೋ. ಅದನ್ನು ಇಲ್ಲಿ ವಿಶ್ಲೇಷಿಸುವುದು ಬೇಕಿಲ್ಲ. ಇಲ್ಲಿ ಮಾಧ್ಯಮಗಳನ್ನು “ಸೂಳೆ”ಗೆ ಹೋಲಿಸುತ್ತಿಲ್ಲ. ಬದಲಿಗೆ, 24x7 ಎನ್ನುವ ಪರಿಕಲ್ಪನೆಯ ಹೆಸರಿನಲ್ಲಿ ಹೇಗೆ “ಮಜಾ” ಬೇಡುವಂತಹ ನೋಡುಗ ವರ್ಗಕ್ಕೋಸ್ಕರ “ಮಜಾ” ನೀಡುವಂತಹ “ಸೆನ್ಸೇಶನಲ್” ಸುದ್ದಿಗಳನ್ನು ಬೆನ್ನತ್ತಿ ಹೋಗುವ ಅಥವಾ ಸಿಕ್ಕ ಸುದ್ದಿಗಳಿಗೇ ಬಣ್ಣ ಬಳಿದು “ಸೆನ್ಸೇಶನಲ್” ಆಗಿಸುವ ಜಾಡನ್ನು ಇಂದಿನ ಬಹುತೇಕ ಮಾಧ್ಯಮಗಳು ಹಿಡಿದು ಹೊರಟಿರುವುದು ಖಂಡಿತವಾಗಿಯೂ ನಾಗರಿಕ ಸಮಾಜದ ಲಕ್ಷಣವಲ್ಲ. ಇಂದಿನ “ಕೊಳ್ಳುಬಾಕ ಸಂಸ್ಕೃತಿ”ಯಲ್ಲಿ ಕೊಳ್ಳುವವರ(ಪ್ರೇಕ್ಷಕ ವರ್ಗ) ಬೇಡಿಕೆಗಳಿಗೆ ಅನುಸಾರವಾಗಿ “ನೀಡುವವರು” ತಮ್ಮ ಕಾರ್ಯಕ್ರಮಗಳನ್ನು ಹೆಣೆಯುವಂತಾಗಿರುವ ಪರಿಸ್ಥಿತಿಯನ್ನು ಕಟುವಾಗಿ ಟೀಕಿಸುವ ದೃಷ್ಚಿಯಿಂದ ಕೊಳ್ಳುವ(ಪ್ರೇಕ್ಷಕ ವರ್ಗ) ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎನ್ನುವುದು ಈ ಲೇಖನದ ಉದ್ದೇಶ.

ಈಗಲೂ ಪತ್ರಿಕೋದ್ಯಮದ ರೀತಿ ರಿವಾಜುಗಳಿಗೆ ನೀತಿ ನಿಯಮಗಳಿಗೆ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿರುವ “ದಿ ಹಿಂದೂ”ವಿನಂತಹ ಪತ್ರಿಕೆಗಳು, ವಾಹಿನಿಗಳು ಇವೆಯಾದರೂ, ಹೇಗೆ “ಜನಪ್ರಿಯ ಸಂಸ್ಕೃತಿ” ಇಂತಹವನ್ನು ಮರೆಮಾಚಿ ತಾನು ಮುಂದೆ ನಿಲ್ಲುತ್ತದೆ, ಅತ್ಯಧಿಕ ಪ್ರಸಾರ, ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ. ಮನೆಯಲ್ಲಿ “ಗರತಿ”ಯಂತಹ ಪತ್ನಿಯನ್ನು ಇಟ್ಟುಕೊಂಡು ಹೊರಗೆ “ಸೂಳೆ”ಯರ ಬೆನ್ನತ್ತಿ ಹೋಗುವ ಪುರುಷರಂತೆ ಈ ಮಾಧ್ಯಮಗಳು. ಅದಕ್ಕಾಗಿ ಸತ್ಯ ಧರ್ಮಗಳನ್ನು, ನ್ಯಾಯ ನೀತಿಯನ್ನು ಎಲ್ಲದಕ್ಕಿಂತ ಮುಖ್ಯವಾಗಿ “ಮಾನವೀಯತೆ”ಯನ್ನು ಎತ್ತಿ ಹಿಡಿಯುವಂತಹ “ಗರತಿ” ಸಮಾಜವನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಕೈಲಿದೆ ಎನ್ನುವುದನ್ನು ರೂಪಕಾರ್ಥದಲ್ಲಿ ವಿವರಿಸುವುದಕ್ಕಷ್ಟೇ ಇಂತಹ ಶೀರ್ಷಿಕೆ.

ಆಗಸ್ಟ್ 3ರ “ದಿ ಹಿಂದೂ”ವಿನ ಭಾನುವಾರದ ಮ್ಯಾಗಜಿನ್ ನ ಮೊದಲ ಪುಟದಲ್ಲಿ ಮಾಧ್ಯಮ ಕುರಿತಂತೆ ಎರಡು ಅತ್ಯುತ್ತಮ ಲೇಖನಗಳು ಪ್ರಕಟಗೊಂಡಿವೆ. ಈ ಹಿಂದೆ “ದಿ ಹಿಂದೂ” ಮಾಧ್ಯಮಗಳ ಬೇಜವಾಬ್ದಾರಿತನ ಅನೈತಿಕತೆ ಕುರಿತು ಪ್ರಕಟಿಸಿದ್ದ ಲೇಖನವನ್ನೂ ಮಹಿಳಾ ಬರೆಹಗಾರ್ತಿಯೇ ಬರೆದಿದ್ದರು. ಈ ಲೇಖನಗಳನ್ನೂ ಅವರೇ ಬರೆದಿರುವುದು ಮತ್ತೊಂದು ರೀತಿಯ ಸಂತಸದ ಸಂಗತಿ. ಯಾಕೆಂದರೆ, ಇದು ಬಹುಸಂಖ್ಯಾತ ಪುರುಷ ವರ್ಗ ಇಂತಹ ಸೂಕ್ಷ್ಮವಿಚಾರಗಳ ಕುರಿತು ಕೇಂದ್ರೀಕರಿಸದೇ ಇರುವುದನ್ನು ಎತ್ತಿ ತೋರಿಸುತ್ತದೆ.

ಈ ಲೇಖನಗಳಲ್ಲಿ “ಮೀಡಿಯ ಆನ್ ಟ್ರಯಲ್” ಎನ್ನುವ ವಿಸ್ತಾರವಾದ ಚಿಂತನೆಗೆಡೆ ಮಾಡುವ ಲೇಖನವನ್ನು ಸರ್ವೋಚ್ಚ ನ್ಯಾಯಾಲಯದ ವಕೀಲೆ ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತೆಯಾಗಿರುವ ಇಂದಿರಾ ಜೈಸಿಂಗ್ ಬರೆದಿದ್ದರೆ, “ಮಾಧ್ಯಮಗಳ ಸ್ವಯಂ ನಿಯಂತ್ರಣ”ದ ಕುರಿತು ಅಖಿಲಾ ಶಿವದಾಸ್ ಬರೆದಿದ್ದಾರೆ.

ಇಂದಿರಾ ಜೈಸಿಂಗ್ ರವರ “Media on Trail”(ವಿಚಾರಣೆಯ ಕುರಿತು ಮಾಧ್ಯಮ) ಎನ್ನುವ ಲೇಖನದಲ್ಲಿ ದೇಶದೆಲ್ಲೆಡೆ ನಾನಾ ಕಾರಣಗಳಿಗಾಗಿ ಬಹುಚರ್ಚಿತವಾದ ಆರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಉಳಿಸಲು ಮಾಧ್ಯಮ ಸ್ವಾತಂತ್ರ್ಯ ಅತ್ಯಾವಶ್ಯಕವಾಗಿದ್ದರೂ, ವಸ್ತುಸ್ಥಿತಿಯನ್ನು ವರದಿಗೊಳಿಸುವುದು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ನಡುವಿನ ತೆಳುಗೆರೆಯನ್ನು ಮೀರಿ ಹೋಗುತ್ತಿರುವ ಮಾಧ್ಯಮಗಳು ಹೇಗೆ ಈ ಪ್ರಕ್ರಿಯೆಯಲ್ಲಿ ವ್ಯಕ್ತಿಗಳ “ಚಾರಿತ್ರ್ಯವಧೆ”ಗೆ ಕಾರಣವಾಗುತ್ತಿವೆ ಎನ್ನುವುದನ್ನು ವಸ್ತುನಿಷ್ಟವಾಗಿ ಚರ್ಚಿಸುತ್ತದೆ.

ಅಖಿಲಾ ಶಿವದಾಸ್ ರ “Need for Restraint”(ಸ್ವಯಂ ನಿಯಂತ್ರಣದ ಅಗತ್ಯ) ಲೇಖನವು ಜವಾಬ್ದಾರಿಯುತವಾದ ಸುದ್ದಿ ಪ್ರಸಾರ ಸಾಧ್ಯವಾಗುವುದು ಕೇವಲ ಸ್ವಯಂ ನಿಯಂತ್ರಣದಿಂದಷ್ಟೇ ಸಾಧ್ಯ ಅಥವಾ ಸಂಬಂಧಿಸಿದ ನೋಡುಗರು ಹಾಗೂ ಓದುಗರೊಂದಿಗೆ ಸಾಮಾನ್ಯ ಉದ್ದೇಶವನ್ನು ಹೊಂದಿದಾಗ ಮಾತ್ರ ಎನ್ನುವುದನ್ನು ಮಾನವೀಯ ನೆಲೆಯಲ್ಲಿ ತೆರೆದಿಡುತ್ತದೆ.

ಈ ಎರಡೂ ಲೇಖನಗಳ ಕೇಂದ್ರ ಬಿಂದು ಇತ್ತೀಚೆಗೆ ದೇಶದೆಲ್ಲೆಡೆ ತೀವ್ರ ಚರ್ಚೆಗೊಳಗಾದ ವಿವಾದಾಸ್ಪದ “ಆರುಷಿ ಕೊಲೆ ಪ್ರಕರಣ”ವಾಗಿರುವುದರಿಂದ ಇಲ್ಲಿ ಪ್ರಸ್ತುತಪಡಿಸಿರುವ ಅಭಿಪ್ರಾಯಗಳು, ದೃಷ್ಟಿಕೋನಗಳು, ವಸ್ತುಸ್ಥಿತಿಗಳು ಅದಕ್ಕೆ ಪೂರಕವಾಗಿವೆ. ಈ ಲೇಖನಗಳ ವಿಶ್ಲೇಷಣೆಯ ಜಾಡಿನಲ್ಲಿ ಒಂದು ಕಾಲದಲ್ಲಿ ಮಾಧ್ಯಮದ ವ್ಯಕ್ತಿಯಾಗಿದ್ದ ನಾನು ಮಾಧ್ಯಮಗಳ ಈ “ಸೂಳೆಗಾರಿಕೆ”ಗೆ ವ್ಯಥೆಪಡುತ್ತ, ಆರೋಗ್ಯವಂತ ಸಮಾಜಕ್ಕಾಗಿ ಹಂಬಲಿಸುವ ಪ್ರಜ್ಞಾವಂತ ನಾಗರಿಕರಲ್ಲೊಬ್ಬನಾಗಿ ವಸ್ತುಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಿದ್ದೇನೆ.

ಇನ್ನು ವಿಷಯಕ್ಕೆ ಬರುವಾದಾರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಉಳಿಸಲು ಮಾಧ್ಯಮ ಸ್ವಾತಂತ್ರ್ಯ ಅತ್ಯಾವಶ್ಯಕವಾಗಿದ್ದರೂ, ಮಾಧ್ಯಮ ತನ್ನ ಇತಿಮಿತಿಯನ್ನು ಅರಿಯದೆ ನ್ಯಾಯಾಂಗ ವ್ಯವಸ್ಥೆಗೆ ಪೂರಕವಾಗಿ ವರ್ತಿಸದೆ, ತಾನೇ ನ್ಯಾಯ ವಿಲೇವಾರಿ ಮಾಡುವ ವ್ಯವಸ್ಥೆಯ ಪಾತ್ರವನ್ನು ವಹಿಸಿದಾಗ ಎಂತಹ ಪ್ರಮಾದಗಳು ಸಂಭವಿಸುತ್ತವೆ ಎನ್ನುವುದಕ್ಕೆ ಆರುಷಿ ಕೊಲೆ ಪ್ರಕರಣ ಒಂದು ಸಾಕ್ಷಿಯಷ್ಟೆ.

ಇಲ್ಲಿಯವರೆಗೂ ಮಾಧ್ಯಮಗಳಿಂದ ಅಪರಾಧಿಯೆಂದೇ ಬಿಂಬಿತವಾಗಿದ್ದ ಕೊಲೆಯಾದ ಆರುಷಿಯ ತಂದೆ ಖ್ಯಾತ ವೈದ್ಯ ರಾಜೇಶ್ ತಳ್ವಾರ್ ಹಾಗೂ ತಾಯಿ ನೂಪುರ್ ತಳ್ವಾರ್ ಅವಳಿ ಕೊಲೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 59 ದಿನಗಳ ಸುದೀರ್ಘ ವಿಚಾರಣೆಯ ನಂತರ ಸಿಬಿಐನಿಂದ ದೋಷಮುಕ್ತರೆನಿಸಿಕೊಂಡಿರಬಹುದು. ಆದರೆ, ಅವರು ಮುಂದೇನು ಮಾಡಬಹುದು? ತಮ್ಮ ‘ಚಾರಿತ್ರ್ಯವಧೆ’ ಮಾಡಿರುವ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವರೇ? ವೈದ್ಯರಾಗಿ ತಾವು ಗಳಿಸಿದ್ದ ಹೆಸರನ್ನು ಮರಳಿಪಡೆಯುವರೇ? ತಪ್ಪದೇ ನೋಡಿ, ನಿಮ್ಮ ನೆಚ್ಚಿನ “…………” ವಾಹಿನಿಯಲ್ಲಿ ಎಂದು ನ್ಯೂಸ್ ಚಾನೆಲ್ಲುಗಳು ಮತ್ತೆ ತಮ್ಮ ಎಂದಿನ ನಿರ್ಲಜ್ಜತೆಯಿಂಜ ವಿಶೇಷ ವರದಿಯನ್ನೇ ಪ್ರಸಾರ ಮಾಡಬಹುದು. ಆದರೆ, ಹೆತ್ತ ತಂದೆ ತಾಯಿಗಳಾಗಿ ತಮ್ಮ ಮಗಳ ಸಾವಿನ ನೋವನ್ನು ಕೂಡ ಶೋಕಿಸಲಾಗದ ಪರಿಸ್ಥಿತಿಗೆ ಈ ದಂಪತಿಗಳನ್ನು ದೂಡಿ ಪ್ರಕರಣದುದ್ದಕ್ಕೂ “ಖಳನಾಯಕ”ನ ಪಾತ್ರ ನಿರ್ವಹಿಸಿದ ಮಾಧ್ಯಮಗಳಿಗೆ “ದಯವಿಟ್ಟು ನಮ್ಮನ್ನು ಒಂಟಿಯಾಗಿ ಬಿಡಿ”, “ನಮ್ಮ ಮಗಳ ಸಾವಿನ ನೋವನ್ನು ಅನುಭವಿಸುದಕ್ಕೆ ಬಿಡುವಷ್ಟಾದರೂ ಸಂಸ್ಕಾರ ತೋರಿ” ಎಂದು ಈ ದಂಪತಿಗಳು ಯಾಚಿಸುವಷ್ಟು ರೋದನೆಯನ್ನು ಈ ಮಾಧ್ಯಮಗಳು ನೀಡಿವೆ ಎಂದರೆ ಈ ಮಾಧ್ಯಮಗಳ ಅವಗೇಡಿತನ ಇನ್ನೆಷ್ಟಿರಬಹುದು!

ಇಂತದ್ದೇ ಪ್ರಕರಣಗಳು ವಿದೇಶಗಳಲ್ಲೂ ನಡೆದಿವೆ. ಆಗ ಅಲ್ಲಿ ಏನು ನಡೆದಿರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಪೋರ್ಚುಗಲ್ ನಲ್ಲಿ ನಡೆದ ಪ್ರಕರಣದ ಉದಾಹರಣೆಯನ್ನು ಇಲ್ಲಿ ನೀಡಬಹುದು: ಆರುಷಿ ಕೊಲೆ ಪ್ರಕರಣದಲ್ಲಿ ಆದಂತೆಯೇ ತಮ್ಮ ಮಗು ಕಾಣೆಯಾಗಿದ್ದಕ್ಕೆ ವೈದ್ಯ ದಂಪತಿಯನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಿ ಮಾನನಷ್ಟ ಮಾಡಿದ್ದಕ್ಕಾಗಿ ಸುಮಾರು 12 ಬ್ರಿಟಿಷ್ ಟ್ಯಾಬ್ಲಾಯ್ಡ್ ಗಳು ಕ್ಷಮೆ ಯಾಚಿಸಬೇಕಾಯಿತಲ್ಲದೆ, ದೊಡ್ಡ ಮೊತ್ತದ ಪರಿಹಾರಧನವನ್ನು ನೀಡಬೇಕಾಗಿ ಬಂತು.

ಒಂದೆಡೆ ಸುದ್ದಿವಾಹಿನಿಗಳು, ದಿನಪತ್ರಿಕೆಗಳು, ನಿಯತಕಾಲಿಕಗಳು ಸ್ಪರ್ಧೆ ಏರ್ಪಟ್ಟಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ವರದಿಗಳನ್ನು ಪ್ರಕಟಿಸಿದರೆ, ಪ್ರಕರಣ ಇನ್ನು ನಡೆಯುತ್ತಿರುವಾಗಲೇ, ತಪ್ಪಿತಸ್ಥರು ಯಾರು ಎನ್ನುವುದು ಇನ್ನೂ ನಿರ್ಧಾರವಾಗದ ಸಂದರ್ಭದಲ್ಲೇ ಈ ಕತೆಯನ್ನು ಆಧಾರವಾಗಿಟ್ಟುಕೊಂಡು ಧಾರಾವಾಹಿಯನ್ನು ನಿರ್ಮಿಸುವ ಯೋಜನೆಯನ್ನು ಒಂದು ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂದಿರುವುದಾಗಿ ನಾವು ಕೇಳಿದ್ದು, ಓದಿದ್ದು ಸಾಲದೆಂಬಂತೆ ನಮ್ಮ “ಅಮೂಲ್ಯ” 30-60 ನಿಮಿಷದ ಮನರಂಜನೆಗೆ ಒಂದು ಒಳ್ಳೆಯ ವಸ್ತು ಸಿಕ್ಕಿದಕ್ಕೆ ಆನಂದಿಸುತ್ತಾ ಆ ಧಾರಾವಾಹಿಯ ಬರುವಿಕೆಗೆ ಕಾದು ಕೂತದ್ದು ಉತ್ಪ್ರೇಕ್ಷೆಯ ಮಾತೇನಲ್ಲ!

ನಮ್ಮ ದೇಶ ಮಾಹಿತಿ ತಂತ್ರಜ್ಞಾನದೊಂದಿಗೆ ವಿಶ್ವದ ಮುಂಚೂಣಿ ರಾಷ್ಟ್ರಗಳೊಂದಿಗೆ ತನ್ನನ್ನು ಗುರುತಿಸಿಕೊಂಡು ಇಷ್ಟು ವೇಗವಾಗಿ ಮುನ್ನಡೆಯುತ್ತಿದ್ದರೂ, ಇಂತಹ ಸಂದರ್ಭಗಳಲ್ಲಿ ಬೇಕಾದ ನ್ಯಾಯಿಕ ಸಕ್ರಿಯತೆ ಹಾಗೂ ಸಾರ್ವಜನಿಕ ವಿರೋಧದ ಪ್ರದರ್ಶನದ ಗೈರು ಎದ್ದು ಕಾಣಿಸುವಷ್ಟು ರಾಚುತ್ತಿತ್ತು. 110 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ವಿಶ್ವದ ಪ್ರಮುಖ ಏಡ್ಸ್ ಬೀಡಾಗಿ ಬೆಳೆಯುತ್ತಿರುವ ನಮ್ಮ ದೇಶ ಎಷ್ಟು ಸುಸಂಸ್ಕೃತವಾದುದೆಂದರೆ, ಹೃತಿಕ್ ರೋಷನ್ ಐಶ್ವರ್ಯ ರೈಗೆ ಚುಂಬಿಸಿದ್ದಕ್ಕೆ, ಮಲ್ಲಿಕಾ ಶೆರಾವತ್ ಅರೆ ನಗ್ನಳಾದುದಕ್ಕೆ, ತನ್ನ ಸಹನಟರನ್ನು ಚುಂಬಿಸಿದ್ದಕ್ಕೆ, ಶ್ರಿಯಾ ಶರಣ್ ತುಂಡುಡುಗೆ ತೊಟ್ಟಿದ್ದಕ್ಕೆ, ಖುಶ್ಬು ವಿವಾಹಪೂರ್ವ ಲೈಂಗಿಕತೆ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದಕ್ಕೆ, ಸಾನಿಯಾ ಮಿರ್ಜಾ ಚೂಡಿದಾರ್, ಸೀರೆಯ ಬದಲು ತುಂಡುಡುಗೆ ತೊಟ್ಟು ಟೆನಿಸ್ ಆಡಿದ್ದಕ್ಕೆ ಕೇಸು ದಾಖಲಿಸುವಷ್ಟು. ಆದರೆ, ಅನ್ಯಾಯ ನಮ್ಮ ಕಣ್ಣೆದುರಿಗೇ ನಡೆಯುತ್ತಿದ್ದರೂ, ಗಾಂಧೀಜಿಯ ವಾಕ್ಯ ಪರಿಪಾಲನೆಯನ್ನು ಹೇಗಾದರೂ ಸರಿ ಮಾಡಿಯೇ ತೀರಿಬಿಡೋಣ ಎನ್ನುವವರಂತೆ “ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ನುಡಿಯಬಾರದು” ಎಂದು ಮುಗ್ಧ ಕಪಿಗಳಾಗಿ ಕುಳಿತುಬಿಡುವಷ್ಟು ಸಜ್ಜನಿಕೆ ನಮ್ಮದು!

ಸಿಬಿಐ ತಲ್ವಾರ್ ದಂಪತಿಗಳನ್ನು ದೋಷಮುಕ್ತಗೊಳಿಸುತ್ತಿದ್ದಂತೆಯೇ ಅಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಯ ಮೇಲೆ ಚರ್ಚೆಯನ್ನು ನಡೆಸಿದ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಂಡಂತೆ ತಮ್ಮಿಂದಾದ ತಪ್ಪಿಗೆ ಕ್ಷಮೆ ಕೋರಿದವಾದರೂ, ಎಂದಿನಂತೆ ತಮ್ಮ ತಪ್ಪುಗಳಿಗೆ ಸಮರ್ಥನೆಗಳನ್ನೂ ಕೊಡುವಲ್ಲಿ ಹಿಂದೆ ಬೀಳಲಿಲ್ಲ. ಕೆಲವು ಅದನ್ನೂ ಮಾಡಲಿಲ್ಲ ಎಂಬುದು ಮಾಧ್ಯಮಗಳ “ಭಂಡತನದ ದರ್ಶನ”ವನ್ನು ಮತ್ತೊಮ್ಮೆ ಮಾಡಿಸಿತಷ್ಟೆ.