ಸುಧಾರಣೆ ಸಾಕಾರವಾಗಲಿ

ಭ್ರಷ್ಟಾಚಾರ ಹಳೆಯ ಜಾಡ್ಯವಾಗಿದ್ದರೂ, ಇದರ ನಿವಾರಣೆಗೆ ಹೊಸ ಹೊಸ ಅಸ್ತ್ರಗಳನ್ನು ಬಳಸಲೇ ಬೇಕಾಗುತ್ತದೆ. ಬಹುತೇಕ ಎಲ್ಲ ವಲಯಗಳಲ್ಲಿ ಅದರಲ್ಲೂ ಸರ್ಕಾರಿ ಮಟ್ಟದಲ್ಲಿ, ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಕಂಡು ಬರುವ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಜನಸಾಮಾನ್ಯರು ವ್ಯವಸ್ಥೆ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವ ಅಪಾಯಕಾರಿ ಸನ್ನಿವೇಶ ಎದುರಾಗುತ್ತದೆ. ಆಡಳಿತ ಸುಧಾರಣೆಯ ಕ್ರಮಗಳು ಸೇರಿದಂತೆ ಇತರ ಸುಧಾರಣೆಗಳಿಗೂ, ಅಭಿವೃದ್ಧಿ ಕಾರ್ಯಗಳಿಗೂ ಪ್ರಮುಖ ಅಡ್ಡಿಯೇ ಈ ಭ್ರಷ್ಟಾಚಾರ ಎಂಬ ಪೆಡಂಭೂತ. ಪರಿಸ್ಥಿತಿ ಶೋಚನೀಯ ಘಟ್ಟಕ್ಕೆ ತಲುಪಿದ್ದರೂ, ರಾಜಕೀಯ ಪಕ್ಷಗಳು ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡುತ್ತ ಕಾಲಹರಣ ಮಾಡುತ್ತವೆಯೇ ಹೊರತು; ಈ ಸಮಸ್ಯೆಗೆ ಮದ್ದು ಕಂಡು ಹಿಡಿಯುವ ಇಚ್ಛಾಶಕ್ತಿ ಪ್ರದರ್ಶಿಸುವುದಿಲ್ಲ. ಪರಿಣಾಮ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಕಾಸು ಕೊಡದೆ ಫೈಲು ಮುಂದೆ ಹೋಗುವುದಿಲ್ಲ. ಇದರಿಂದ ಜನಸಾಮಾನ್ಯರು ರೋಸಿಹೊಗಿದ್ದರೆ, ಮತ್ತೊಂದೆಡೆ ಟೆಂಡರ್ ಗಳಲ್ಲಿ ನಡೆಯುವ ಅವ್ಯವಹಾರ, ಕಮೀಷನ್ ದಂಧೆಯ ಸ್ವರೂಪವಂತೂ ಭಯಾನಕ. ಕಮೀಷನ್ ದಂಧೆ ಆರೋಪದಲ್ಲೇ ಸಚಿವರೊಬ್ಬರು ಇತೀಚೆಗೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಭ್ರಷ್ಟಾಚಾರ ಆಡಳಿತ ವ್ಯವಸ್ಥೆಯನ್ನು ಹಾಳೂ ಮಾಡುವ ಜತೆಗೆ, ಅಭಿವೃದ್ಧಿಯ ಆಶಯಕ್ಕೆ ದೊಡ್ಡಪೆಟ್ಟು ನೀಡುತ್ತದೆ ಎಂಬುದನ್ನು ಮರೆಯುವಂತಿಲ್ಲ.
ಕಾಮಗಾರಿಯ ಟೆಂಡರ್, ಕಾರ್ಯಾದೇಶ ಪಡೆದುಕೊಳ್ಳುವ ಗುತ್ತಿಗೆದಾರರು ಕಮೀಷನ್ ಹಾವಳಿಯನ್ನು ವಿರೋಧಿಸಿ ಹೋರಾಟವನ್ನೂ ನಡೆಸಿದ್ದಾರೆ. ರಾಜ್ಯದಲ್ಲಿ ಗುತ್ತಿಗೆ ವ್ಯವಹಾರಗಳಲ್ಲಿ ಶೇಕಡ ೪೦ರಷ್ಟು ಕಮೀಷನ್ ಪಡೆಯಲಾಗುತ್ತಿದೆ; ಭ್ರಷ್ಟಾಚಾರದ ಈ ತೀವ್ರಸ್ವರೂಪಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಗುತ್ತಿಗೆದಾರರ ಸಂಘವು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೂ ಮನವಿ ನೀಡಿತ್ತು. ಈ ಕಮೀಷನ್ ಆರೋಪ-ಪ್ರತ್ಯಾರೋಪಗಳ ನಡುವೆಯೇ ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದು ತಳೆದಿದ್ದು, ಪರಿಣಾಮಕಾರಿಯಾಗಿ ಅದರ ಅನುಷ್ಟಾನವಾದರೆ ಸುಧಾರಣೆಯ ಹೊಸ ಹೆಜ್ಜೆಯೊಂದು ಸಾಕಾರಗೊಂಡಂತೆ. ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ ೫೦ ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳ ಟೆಂಡರ್ ಪರಿಶೀಲಿಸಲು ಸಮಿತಿ ರಚಿಸಲಾಗಿದೆ. ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ ಎಂದು ಸರ್ಕಾರ ಪ್ರತಿಪಾದಿಸಿದೆ. ೧೫ ದಿನದೊಳಗೆ ಟೆಂಡರ್ ಕಡತ ವಿಲೇವಾರಿ ಮಾಡುವಂತೆಯೂ ಆದೇಶಿಸಲಾಗಿದೆ. ಈ ಸಮಿತಿಯ ಕಾರ್ಯವೈಖರಿ ನೋಡಿಕೊಂಡು ಸಾಧ್ಯವಾದರೆ ಜಿಲ್ಲಾಮಟ್ಟಕ್ಕೂ ವಿಸ್ತರಣೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.
ಸಮಿತಿ ರಚನೆ ಒಳ್ಳೆಯ ನಿರ್ಧಾರವೇ. ಆದರೆ, ಇದು ಬರೀ ಕಣ್ಣೊರೆಸುವ ತಂತ್ರವಾಗಬಾರದು. ಸಮಸ್ಯೆಯ ತಾರ್ಕಿಕ ಅಂತ್ಯಕ್ಕೆ ಅದು ಪೂರಕವಾಗಬೇಕು. ಈ ಹಿಂದೆಯೂ ಮಹತ್ವದ ಸುಧಾರಣೆಗಳ ವಿಷಯದಲ್ಲಿ ತಜ್ಞರ ಸಮಿತಿ ನೀಡಿದ ವರದಿಗಳು ಧೂಳು ತಿನ್ನುತ್ತಿವೆ. ಈಗ ಟೆಂಡರ್ ಪರಿಶೀಲನೆ ಸಮಿತಿಯ ಪ್ರಕ್ರಿಯೆಯೂ ಹಾಗಾಗಬಾರದು. ಸಮಿತಿಗೆ ಸೂಕ್ತ ಅಧಿಕಾರ ನೀಡಿ, ಅದು ನೀಡುವ ಶಿಫಾರಸುಗಳನ್ನು ಅನುಷ್ಟಾನ ನಡೆದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ.
(ಕೃಪೆ ವಿಜಯವಾಣಿ, ಸಂಪಾದಕೀಯ, ದಿ. ೦೯-೦೫-೨೦೨೨)
ಚಿತ್ರ ಕೃಪೆ: ಅಂತರ್ಜಾಲ ತಾಣ