ಸುಪ್ರೀಂ ಕೋರ್ಟಿನ ತೀರ್ಪು: ರೈತರ ಬದುಕುವ ಹಕ್ಕು ಸುಪ್ರೀಂ

ಸುಪ್ರೀಂ ಕೋರ್ಟಿನ ತೀರ್ಪು: ರೈತರ ಬದುಕುವ ಹಕ್ಕು ಸುಪ್ರೀಂ

ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿಗೆ ನಿಗದಿತ ಬೆಲೆ ಪಡೆಯುವ ಬೆಳೆಗಾರರ ಹಕ್ಕಿನ ಬಗ್ಗೆ ಕಾನೂನು ಏನು ಹೇಳುತ್ತದೆ? ಮಾನ್ಯ ಮುಖ್ಯ ನ್ಯಾಯಾಧೀಶ ಎಚ್. ಎಲ್. ದತ್ತು ಅವರ ನೇತೃತ್ವದ ಸುಪ್ರೀಂ ಕೋರ್ಟಿನ ಬೆಂಚ್ ೧೩ ಅಕ್ಟೋಬರ್ ೨೦೧೪ರಂದು, ಈ ವಿಷಯದಲ್ಲಿ ನೀಡಿರುವ ಚಾರಿತ್ರಿಕ ತೀರ್ಪು ಬೆಳೆಗಾರರ ಹಕ್ಕಿಗೆ ಅಗ್ರಪಟ್ಟ ಕಟ್ಟಿದೆ. “ಬದುಕುವ ಹಕ್ಕು” (ಈ ಪ್ರಕರಣದಲ್ಲಿ ರೈತರದ್ದು) ಬೇರೆಲ್ಲ ವಿಷಯಗಳಿಗಿಂತ ಪ್ರಧಾನವಾದದ್ದು (ಈ ಪ್ರಕರಣದಲ್ಲಿ ವ್ಯಾಪಾರದ ಹಕ್ಕು) ಎಂಬ ತತ್ವವನ್ನು ಎತ್ತಿ ಹಿಡಿದಿದೆ.
ಇದೇನಿದು ಪ್ರಕರಣ? ಪ್ರತಿ ವರುಷ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಂದ ಕಬ್ಬು ಖರೀದಿಸಿ, ಅದರಿಂದ ಸಕ್ಕರೆ ಉತ್ಪಾದಿಸುತ್ತವೆ. ಈ ಸಕ್ಕರೆಯನ್ನು ಅಡಮಾನ ಹಾಕಿ, ಬ್ಯಾಂಕುಗಳಿಂದ ಕೋಟಿಗಟ್ಟಲೆ ರೂಪಾಯಿ “ದುಡಿಯುವ ಭಂಡವಾಳ” ಎಂಬ ಸಾಲ ಪಡೆಯುತ್ತವೆ. ಸಕ್ಕರೆ ಮಾರಾಟದಿಂದ ಬಂದ ಆದಾಯದಿಂದ ಬ್ಯಾಂಕುಗಳ ಸಾಲ ಮರು ಪಾವತಿಸಿ, ಉಳಿದ ಹಣದಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬೆಲೆ ಪಾವತಿಸಬೇಕೆಂಬುದು ನಿಯಮ. ಆದರೆ, ಸಕ್ಕರೆ ಕಾರ್ಖಾನೆಗಳು ಉಳಿದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿ, ಕಬ್ಬು ಬೆಳೆಗಾರರ ಪಾವತಿಯನ್ನು ಬಾಕಿ ಇಟ್ಟುಕೊಳ್ಳುತ್ತಿವೆ. ಇದರಿಂದಾಗಿ, ಕಬ್ಬು ಬೆಳೆಗಾರರಿಗೆ ಹಣ ಪಾವತಿಯಲ್ಲಿ ಆರು ತಿಂಗಳಿನಿಂದ ಮೂರು ವರುಷಗಳ ವಿಳಂಬ. ಈ ಕಾರಣದಿಂದಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಲವು ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕೆಂದು ಕಬ್ಬು ಬೆಳೆಗಾರರ ಸಂಘಟನೆಯಾದ ರಾಷ್ಟ್ರೀಯ ಕಿಸಾನ್ ಮಜ್ದೂರ್ (ರಾಕಿಮ) ಸಂಘಟನೆ ನಿರ್ಧರಿಸಿತು. ನವಂಬರ್ ೨೦೧೨ರಲ್ಲಿ ಅಲ್ಲಹಾಬಾದ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಸ್ಟಾಕನ್ನು ಮಾರಿದಾಗ, ಮೊದಲಾಗಿ ಕಬ್ಬು ಬೆಳೆಗಾರರ ಬಾಕಿ ಪಾವತಿಸುವಂತೆ ಆದೇಶ ನೀಡಬೇಕೆಂದು ಹೈಕೋರ್ಟಿಗೆ ನಿವೇದಿಸಿತು.
ಅಲ್ಲಹಾಬಾದ್ ಹೈಕೋರ್ಟ್ ಈ ದಾವೆಯ ತೀರ್ಪು ನೀಡಿದ್ದು ೫ ಸಪ್ಟಂಬರ್ ೨೦೧೪ರಂದು. ಕಬ್ಬು ಬೆಳೆಗಾರರ ಬಾಕಿ ಪಾವತಿಗಾಗಿ ಸಕ್ಕರೆ ಕಾರ್ಖಾನೆಗಳು ತಮ್ಮ ಸಕ್ಕರೆ ಸ್ಟಾಕನ್ನು ಮಾರಲು ಪರವಾನಗಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಹೈಕೋರ್ಟಿನ ಆದೇಶ. ಇದಕ್ಕಾಗಿ ಉತ್ತರಪ್ರದೇಶ ಕಬ್ಬು (ಪೂರೈಕೆ ಮತ್ತು ಖರೀದಿ) ಕಾಯಿದೆ ೧೯೫೩ರ ಸೆಕ್ಷನ್ ೧೭(೫) ಅನ್ನು ಹೈಕೋರ್ಟ್ ಸಕ್ರಿಯಗೊಳಿಸಿತು. ತಮ್ಮ ಸಾಲಕ್ಕೆ ಭದ್ರತೆಯಾಗಿದ್ದ ಸಕ್ಕರೆ ಸ್ಟಾಕಿನ ಮೇಲಣ ತಮ್ಮ ಅಡಮಾನದ ರಕ್ಷಣೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೈಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಪಿಟಿಷನ್ ಸಲ್ಲಿಸಿದವು. ಇದನ್ನು ಸುಪ್ರೀಂ ಕೋರ್ಟಿನ ಬೆಂಚ್ ೧೩ ಅಕ್ಟೋಬರ್ ೨೦೧೪ರಂದು ವಜಾ ಮಾಡಿ, ಅಲ್ಲಹಾಬಾದ್ ಹೈಕೋರ್ಟಿನ ಆದೇಶವನ್ನು ಎತ್ತಿ ಹಿಡಿಯಿತು. ಕಬ್ಬು ಬೆಳೆಗಾರರಿಗೆ ಕಳೆದ “ಕಬ್ಬು ಅರೆಯುವ ಹಂಗಾಮಿನ” ಬಾಕಿ ಹಣ ರೂ.೮,೭೫೪ ಕೋಟಿ ಪಾವತಿಸ ಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶಿಸಿದೆ.
ಸುಪ್ರೀಂ ಕೋರ್ಟಿನ ಈ ಚಾರಿತ್ರಿಕ ತೀರ್ಪಿನ ಬಗ್ಗೆ ಭಾರತೀಯ ಸಕ್ಕರೆ ಕಾರ್ಖಾನೆಗಳ ಅಸೋಷಿಯೇಷನಿನ ಉಪ ಮುಖ್ಯಸ್ಥರಾದ ಭಾರತಿ ಬಾಲಾಜಿ ಅವರ ಹೇಳಿಕೆ ಹೀಗಿದೆ: “ಹಲವು ವರುಷಗಳಿಂದ ನಮ್ಮದು ನಷ್ಟದ ಉದ್ಯಮವಾಗಿದೆ ….. ನಮ್ಮ ಮುಂದಿನ ಹೆಜ್ಜೆ ಬೇಗನೇ ನಿರ್ಧರಿಸಲಿದ್ದೇವೆ.” ರಾಕಿಮ ಸಂಘಟನೆಯ ಸಂಚಾಲಕರಾದ ವಿ. ಎಂ. ಸಿಂಗ್, ಈ ಹೇಳಿಕೆಯನ್ನು ಹೀಗೆ ಪ್ರಶ್ನಿಸುತ್ತಾರೆ, “ತಮಗೆ ನಷ್ಟವಾಗುತ್ತಿದೆ ಎನ್ನುವ ಸಕ್ಕರೆ ಕಾರ್ಖಾನೆಗಳು ಕಳೆದ ಹತ್ತು ವರುಷಗಳಲ್ಲಿ ತಮ್ಮ ಘಟಕಗಳ ಸಂಖ್ಯೆಯನ್ನು ೩೪ರಿಂದ ೧೦೦ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದು ಹೇಗೆ?”
ಅಂತೂ, ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಲಕ್ಷಗಟ್ಟಲೆ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಮಾರಾಟ ಮಾಡಿ ೧೫ ದಿನಗಳಲ್ಲಿ ಪಾವತಿ ಪಡೆಯಲು ಸಹಾಯವಾದೀತು. ಉತ್ತರಪ್ರದೇಶದ ಸಕ್ಕರೆ ಕಾರ್ಖಾನೆಗಳಿಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ, ಕಳೆದ ಸಾಲಿನಲ್ಲಿ ರೂ.೪,೮೯೦ ಕೋಟಿ ಆರ್ಥಿಕ ನೆರವು ನೀಡಿದ್ದು, ಇದರ ಬಹುಪಾಲು ಅನ್ಯ ಉದ್ದೇಶಗಳಿಗೆ ಬಳಕೆಯಾಗಿದೆ. ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕಳೆದ ವರುಷದಲ್ಲಿ ದಾಖಲಾಗಿರುವ ೬೦ ಎಫ್ಐಆರ್ಗಳೇ ಇದಕ್ಕೆ ಪುರಾವೆ.
ಈ ದೇಶದ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳನ್ನು ಅವಲಂಬಿಸಿದ ಎಲ್ಲ ವ್ಯಾಪಾರ ವಹಿವಾಟುಗಳಲ್ಲಿ ಬೆಳೆಗಾರರ ಹಕ್ಕು ಸಾಧನೆ ಮಾಡಲಿಕ್ಕಾಗಿ, ಸುಪ್ರೀಂ ಕೋರ್ಟಿನ ಈ ಚಾರಿತ್ರಿಕ ತೀರ್ಪನ್ನು ಪರಿಣಾಮಕಾರಿಯಾಗಿ ಬಳಸಲು ಎಲ್ಲ ರೈತಪರ ಸಂಘಟನೆಗಳೂ ಸಜ್ಜಾಗಬೇಕಾಗಿದೆ.