ಸುಬಾಬುಲ್: ಮೇವು, ಸೌದೆ ಕೊರತೆಗೆ ಪರಿಹಾರ
ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.
ವೇಗವಾಗಿ ಬೆಳೆಯುವ ಸುಬಾಬುಲ್ ಗಿಡದ ಉಪಯೋಗಗಳು ಹಲವು. ಇದರ ಎಲೆಗಳು ಜಾನುವಾರುಗಳಿಗೆ ಅಧಿಕ ಪ್ರೊಟೀನಿನ ಮೇವು. ಲೆಗ್ಯುಮಿನಸ್ ಸಸಿಯಾದ ಕಾರಣ, ಬೇರುಗಳಲ್ಲಿ ಸಾರಜನಕ ಸ್ಥಿರೀಕರಣ ಮಾಡಿ, ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಮಾತ್ರವಲ್ಲ, ಮೃದು ಮೋಪು ಒದಗಿಸುತ್ತದೆ. ಆದ್ದರಿಂದಲೇ, ಭಾರತ ಸರಕಾರ ಇದನ್ನು ಸಾಮಾಜಿಕ ಅರಣ್ಯ ಕಾರ್ಯಕ್ರಮದಲ್ಲಿ ಬೆಳೆಸಲು ಪ್ರೋತ್ಸಾಹಿಸಿತು – ಸಸ್ಯ ಸಂಪತ್ತು ಹೆಚ್ಚಿಸಲಿಕ್ಕಾಗಿ ಮತ್ತು ಗ್ರಾಮೀಣ ಕುಟುಂಬಗಳಿಗೆ ಸೌದೆ ಒದಗಿಸಲಿಕ್ಕಾಗಿ. ಆದರೆ, ಸರಕಾರ ಯೋಜಿಸಿದಂತೆ ಸುಬಾಬುಲಿನ ಮೃದುಮೋಪು ಜನಪ್ರಿಯವಾಗಲಿಲ್ಲ. ೧೯೮೦ರ ದಶಕ ಮುಗಿಯುತ್ತಿದ್ದಂತೆ ಸರಕಾರವೂ ಜನರೂ ಇದರ ಬಗ್ಗೆ ಆಸಕ್ತಿ ಕಳೆದುಕೊಂಡರು.
ಆದರೆ, ಸುಬಾಬುಲ್ ಗಿಡಗಳು ನಮ್ಮ ನೆಲದಿಂದ ಕಣ್ಮರೆಯಾಗಲಿಲ್ಲ. ಯಾಕೆಂದರೆ, ಪ್ರತಿ ಗಿಡವೂ ವರುಷದಲ್ಲಿ ಎರಡು ಸಲ ಉತ್ಪಾದಿಸುವ ಬೀಜಗಳು ಸಾವಿರಾರು ಮತ್ತು ಇದು ಬೆಳೆಯಲು ಬಹಳ ಕಡಿಮೆ ನೀರು ಸಾಕು. ಸಹಜ ರೀತಿಯಲ್ಲಿ ಸುಬಾಬುಲ್ ಬೀಜಗಳು ಪ್ರಸಾರವಾಗಿ, ಇದನ್ನು ನೆಟ್ಟ ಪ್ರದೇಶದಲ್ಲಿ ವೇಗವಾಗಿ ಹರಡಿತು.
ನವಂಬರ್ ೨೦೧೮ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನಿನಲ್ಲಿ ಸುಬಾಬುಲ್ ಅಂತರರಾಷ್ಟ್ರೀಯ ಸಮ್ಮೇಳನ ಜರಗಿತು. ಅಲ್ಲಿಗೆ ವಿವಿಧ ದೇಶಗಳಿಂದ ಬಂದಿದ್ದ ಸಂಶೋಧಕರು ಮತ್ತು ಕಾರ್ಯಕರ್ತರು ಸುಬಾಬುಲನ್ನು ಇನ್ನಷ್ಟು ವಿಸ್ತಾರ ಪ್ರದೇಶದಲ್ಲಿ ಬೆಳೆಸುವುದು ಹೇಗೆಂದು ಚರ್ಚಿಸಿದರು.
ಈಗ ಜಗತ್ತಿನ ಹಲವು ದೇಶಗಳಲ್ಲಿ ಮೇವಿನ ಬೆಳೆಯಾಗಿ ಸುಬಾಬುಲ್ ಜನಪ್ರಿಯ. ಜೊತೆಗೆ ಸೌದೆಯಾಗಿ ಮತ್ತು ಕಾಗದದ ಪಲ್ಪ್ ಆಗಿ ಬಳಕೆಯಾಗುವ ಸುಬಾಬುಲ್ ನಮ್ಮ ದೇಶಕ್ಕೆ ಸೂಕ್ತವಾದ ಒಂದು ಸಸ್ಯ.
ಬ್ರಿಸ್ಬೇನಿನ ಸಮ್ಮೇಳನದಲ್ಲಿ ಎಲ್ಲ ಸಂಶೋಧಕರೂ ಜಾನುವಾರುಗಳಿಗೆ ಸುಬಾಬುಲ್ ಅತ್ಯುತ್ತಮ ಮೇವು ಎಂದು ಖಚಿತ ಪಡಿಸಿದರು. ಉತ್ತಮ ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳೆರಡಕ್ಕೂ ಇದು ಸೂಕ್ತ ಮೇವಿನ ಬೆಳೆ. ಪ್ರತಿದಿನ ಹೈನಪಶುಗಳಿಗೆ ಕೆಲವೇ ಗ್ರಾಮ್ ಸುಬಾಬುಲ್ ಎಲೆ ತಿನ್ನಿಸಿದರೂ ಸಾಕು – ಅವುಗಳ ಹಾಲಿನ ಪ್ರಮಾಣ ಜಾಸ್ತಿಯಾಗುತ್ತದೆ. ಇದರಿಂದಾಗಿ, ಪಶುಆಹಾರ ತಿನ್ನಿಸುವ ಅಗತ್ಯವಿಲ್ಲ ಅಥವಾ ಕಡಿಮೆ ತಿನ್ನಿಸಿದರೆ ಸಾಕು.
ಆಸ್ಟ್ರೇಲಿಯಾದ ಹಲವು ಹೈನಪಶು ಸಾಕಣೆ ಘಟಕಗಳ ವಿಸ್ತೀರ್ಣ ೩,೦೦೦ದಿಂದ ೫,೦೦೦ ಎಕರೆಗಳು. ಅಲ್ಲಿ, ಹೈನಪಶುಗಳು ಅಡ್ಡಾಡುತ್ತಾ ಸುಬಾಬುಲ್ ಎಲೆಗಳನ್ನು ತಿನ್ನುತ್ತವೆ. ಸುಬಾಬುಲ್ ಎಲೆಗಳಲ್ಲಿರುವ ಮೈಮೊಸಿನ್ ಎಂಬ ರಾಸಾಯನಿಕ ಹೈನಪಶುಗಳಿಗೆ ವಿಷಕಾರಿ. ಆ ಸಮ್ಮೇಳನದ ಸಂಶೋಧಕರು, ಹೈನಪಶುಗಳು ಈ ರಾಸಾಯನಿಕಕ್ಕೆ ಬೇಗನೇ ಹೊಂದಿಕೊಂಡು, ಅದನ್ನು ಜೀರ್ಣಿಸಿಕೊಳ್ಳುತ್ತವೆ ಎಂದು ತೋರಿಸಿ ಕೊಟ್ಟಿದ್ದಾರೆ. ಅದಲ್ಲದೆ, ಮೈಮೊಸಿನಿನ ವಿಷವನ್ನು ಪೂರ್ತಿ ನಿವಾರಿಸುವ ಹಾಗೂ ಹೈನಪಶುಗಳಿಗೆ ತಿನ್ನಿಸಬಹುದಾದ ಬ್ಯಾಕ್ಟೀರಿಯವನ್ನು ಸಂಶೋಧಕರು ಗುರುತಿಸಿದ್ದಾರೆ.
ಆಡು, ಕುರಿ, ದನ, ಎಮ್ಮೆ – ಎಲ್ಲವಕ್ಕೂ ಮೇವು ಬೇಕೇ ಬೇಕು. ಅವನ್ನು ಸಾಕುವ ಭಾರತದ ಹಲವು ಡೈರಿಗಳೂ ಹೈನಪಶು ಸಾಕಣೆ ಘಟಕಗಳೂ ಮೇವಿನ ಕೊರತೆ ಎದುರಿಸುತ್ತಿವೆ. ಅಲ್ಲೆಲ್ಲ ಸುಬಾಬುಲಿನ ಎಲೆಗಳನ್ನು ಒಣಗಿಸಿಯೂ ಹೈನಪಶುಗಳಿಗೆ ತಿನ್ನಿಸಬಹುದಾಗಿದೆ.
ಜೊತೆಗೆ, ಸುಬಾಬುಲಿನ ಕಾಂಡ ಮತ್ತು ಗೆಲ್ಲುಗಳನ್ನು ಕಾಗದದ ಪಲ್ಪ್ ತಯಾರಿಗೆ ನಮ್ಮ ದೇಶದಲ್ಲಿ ಈಗಾಗಲೇ ಬಳಸಲಾಗುತ್ತಿದೆ. ಅದಕ್ಕಾಗಿಯೇ ಸುಮಾರು ಒಂದು ಲಕ್ಷ ಹೆಕ್ಟೇರಿನಲ್ಲಿ ಸುಬಾಬುಲ್ ಬೆಳೆಯಲಾಗುತ್ತಿದೆ.
ನಿಂಬ್‍ಕರ್ ಕೃಷಿ ಸಂಶೋಧನಾ ಸಂಸ್ಥೆ ೧೯೯೦ರ ದಶಕದ ಆರಂಭದಲ್ಲಿ, ತಾಲೂಕು ಮಟ್ಟದಲ್ಲಿ ೧೦ ಮೆಗಾವಾಟ್ ಜೈವಿಕ ಶಕ್ತಿ ಉತ್ಪಾದನೆಗಾಗಿ ಯೋಜನೆ ರೂಪಿಸಿದೆ – ಕೃಷಿಯ ಕಸ ಮತ್ತು ಸುಬಾಬುಲ್ ಕಾಂಡಕೊಂಬೆಗಳೇ ಇದರಲ್ಲಿ ಬಳಕೆಯಾಗುವ ಕಚ್ಚಾವಸ್ತುಗಳು. ನೂತನ ಮತ್ತು ಮರುಬಳಕೆಯ ಶಕ್ತಿಯ ಮಂತ್ರಾಲಯವು ಇದನ್ನು ಜ್ಯಾರಿಗೊಳಿಸಿತ್ತು. ಇದೇ ರೀತಿಯಲ್ಲಿ, ದೇಶದ ಪ್ರತಿಯೊಂದು ತಾಲೂಕಿನಲ್ಲಿಯೂ ೫ – ೧೦ ಮೆಗಾವಾಟ್ ಶಕ್ತಿ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಬಹುದಾಗಿದೆ. ಇಲ್ಲಿ ಉಳಿಕೆಯಾಗುವ ಸುಬಾಬುಲ್ ಎಲೆಗಳಿಂದ ಒಣ ಪಶುಆಹಾರ ತಯಾರಿಸಿ ಡೈರಿಗಳಿಗೆ ಮಾರಾಟ ಮಾಡಬಹುದು.
ಐದು ಮೆಗಾವಾಟ್ ಶಕ್ತಿ ಉತ್ಪಾದನೆಗೆ ಬೇಕಾದ ಸುಬಾಬುಲ್ ಕಾಂಡಕೊಂಬೆಗಳನ್ನು ಬೆಳೆಸಲು ೧,೬೦೦ ಹೆಕ್ಟೇರಿನಲ್ಲಿ ಸುಬಾಬುಲ್ ಬೆಳೆಸುವುದು ಅಗತ್ಯ. ಇದರಿಂದ ಉತ್ಪಾದನೆಯಾಗುವ ಸುಬಾಬುಲ್ ಎಲೆಗಳು ಮತ್ತು ಸಣ್ಣ ರೆಂಬೆಗಳ ತೂಕ ಸುಮಾರು ೧೨,೦೦೦ ಟನ್. ಇದು ೭,೫೦೦ ಹೈನಪಶುಗಳಿಗೆ ಮೇವು ಒದಗಿಸಲು ಸಾಕು.
ಸುಬಾಬುಲ್ ಗಿಡಗಳ ಸರಾಸರಿ ಇಳುವರಿ: ವರುಷಕ್ಕೆ ಹೆಕ್ಟೇರಿಗೆ ೫–೧೦ ಟನ್ ಒಣ ಮೇವು ಮತ್ತು ೪೦–೫೦ ಟನ್ ಕಾಂಡ ಹಾಗೂ ಕೊಂಬೆ. ಈ ಅಧಿಕ ಪ್ರೊಟೀನಿನ ಪಶುಮೇವಿನ ಬೆಲೆ ಕಿಲೋಕ್ಕೆ ರೂ.೧೨. ಈ ಬೆಲೆಯಲ್ಲಿ ಪ್ರತಿಯೊಂದು ಹೆಕ್ಟೇರ್ ಸುಬಾಬುಲ್ ತೋಟದಿಂದ ರೈತನೊಬ್ಬ ಗಳಿಸಬಹುದಾದ ಆದಾಯ ರೂ.೬೦,೦೦೦. ಇದಕ್ಕೆ ಕಿಲೋಕ್ಕೆ ರೂ.೨ ದರದಲ್ಲಿ ಸುಬಾಬುಲ್ ಕಾಂಡಕೊಂಬೆಗಳ ಮಾರಾಟದ ಆದಾಯ ಕೂಡಿಸಿದರೆ, ಒಂದು ಹೆಕ್ಟೇರ್ ಸುಬಾಬುಲ್ ತೋಟದಿಂದ ವರುಷಕ್ಕೆ ರೂ.೧.೪ ಲಕ್ಷ ಆದಾಯ ಗಳಿಸಲು ಸಾಧ್ಯ.
ಅಂತೂ, ಪ್ರತಿ ಹೆಕ್ಟೇರಿಗೆ ಅಧಿಕ ಜೈವಿಕವಸ್ತು (ಅಂದರೆ ಎಲೆ, ಕೊಂಬೆ, ಕಾಂಡ) ಉತ್ಪಾದಿಸುವ ಸುಬಾಬುಲ್ ತಳಿಗಳನ್ನು ಅಭಿವೃದ್ಧಿ ಪಡಿಸಿದರೆ, ಸುಬಾಬುಲ್ ಕೃಷಿ ಇನ್ನಷ್ಟು ಲಾಭದಾಯಕವಾಗಲು ಸಾಧ್ಯ.