ಸುಬ್ಬನ ಸೋದರಮಾವ !
ಅಜ್ಜಿ ಅಂದ್ರೆ ಅಜ್ಜಿ ... ಅದರಲ್ಲೂ ಸುಬ್ಬನ ಅಜ್ಜಿ ... ಅಲಿಯಾಸ್ ಸುಬ್ಬಜ್ಜಿ ...
ಅಜ್ಜಿಯ ಕುರುಕಲು ತಿಂಡಿ ಎಷ್ಟು ಫೇಮಸ್ಸು ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಸುಬ್ಬ ಆ ಎಣ್ಣೆ ಪದಾರ್ಥ ತಿಂದೂ ತಿಂದೂ ಎಣ್ಣೆ ಕುಡಿಯದೆ ಎಣ್ಣೆ ತಿಂಬ ’ಎಣ್ಣೆ ಪಾರ್ಟಿ’ ಆಗಿದ್ದ ನಮ್ ಸುಬ್ಬ. ಅವನಮ್ಮ, ಅರ್ಥಾತ್ ಅಜ್ಜಿಯ ಸೊಸೆ, ಸುಬ್ಬನನ್ನು ಒಂದು ಶೇಪ್’ಗೆ ತಂದು ಕೂಡಿಸುವಷ್ಟರಲ್ಲಿ, ಒಮ್ಮೆ ಅಜ್ಜಿ ಬಂದು ಹೋಗಿರ್ತಾರೆ ! ತೆಂಗೋ / ಅಡಿಕೆಯೋ ಆಗಿದ್ದ ಸುಬ್ಬನೆಂಬ ಮರ ಬಿಳಲು ಬಿಟ್ಟ ಆಲ’ವಾಗಿರ್ತಾನೆ ...
ಸುಬ್ಬ ಸೊಂಪಾಗಿ ಬೆಳೆದಿರೋದ್ರಲ್ಲಿ ಅಜ್ಜಿಯ ಕೈವಾಡ ಖಂಡಿತ ಇದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತ ಅಜ್ಜಿ ಮುಂದೆ ಹೇಳೀರಾ, ಹುಷಾರು ... ಅವರ ಮಡಿಕೋಲು ತೊಗೊಂಡೇ ಹೊಡೆದಾರು!
ಸುಬ್ಬನಿಗೂ ಎಣ್ಣೆಗೂ ಇನ್ನೊಂದು ರೀತಿ ಸಂಬಂಧ ಇದೆ. ಅದು ಎಣ್ಣೆ-ಸೀಗೇಕಾಯಿ ಸಂಬಂಧ ... ಇಲ್ಲೂ ಅಜ್ಜಿಯ ಕೈವಾಡ ಇದೆ! ಓಹೋ! ಇಲ್ಲ, ಇಲ್ಲ ... ಅಜ್ಜಿ ಮೊಮ್ಮಗ ಎಷ್ಟೇ ಕಿತ್ಲಾಡಿದರೂ ಅಜ್ಜಿಯ ಪ್ರೀತಿಯ ಮೊಮ್ಮಗ ಸುಬ್ಬ ... ನಾನಂದದ್ದು ಹಾಗಲ್ಲ ... ಇದು ಎಣ್ಣೆ-ಸೀಗೇಪುಡಿ ಸಂಬಂಧ !
ಸುಬ್ಬನ ಮನೆಗೆ ಅಜ್ಜಿ ಬಂದಾಗಲೆಲ್ಲ ಸುಬ್ಬನಿಗೆ ತಲೆಗೆ ಎಣ್ಣೆ ಒತ್ತಿ ಸ್ನಾನ ... ಅಗಲವಾದ ಕೈ ತುಂಬಾ ಎಣ್ಣೆ ತೆಗೆದುಕೊಂದು ನೆತ್ತಿ ಮೆಲೆ ಒತ್ತೋದ್ರಿಂದ, ಆ ಎಣ್ಣೆ ನೆತ್ತಿಯಿಂದ ತಲೆಯೊಳಗೆ ಇಳಿದು, ಅಲ್ಲಲ್ಲೇ ಜಡ್ಡು ಕಟ್ಟಿ, ನಿಮ್ಮ ಮೊಮ್ಮಗ ದಡ್ಡ ಅಗಿದ್ದಾನೆ ಅಂತ ಸೊಸೆಯ ವರಾತ ...
ಹುಟ್ಟಿನಿಂದಲೇ ಬಂದ ದಡ್ಡತನವನ್ನು, ತಾನು ಎಣ್ಣೆ ಒತ್ತಿ ನೆತ್ತಿ ಮೇಲೆ ಕುಟ್ಟಿರೋದ್ರಿಂದ, ತಲೆಯ ಒಳಗಿರೋ ಜೇಡಿ ಮಣ್ಣು ಉದುರಿ, ನೆತ್ತಿಂದ ಇಳಿದ ಎಣ್ಣೆ ಕಿಲುಬು ಹಿಡಿದ ಮೆಷೀನಿಗೆ ಎಣ್ಣೆ ಹಾಕಿದಾಗ ದಬಾಯಿಸಿಕೊಂಡು ಓಡುವಂತೆ ಸುಬ್ಬನ ಬುದ್ದಿ ಚುರುಕಾಗಿದೆ ಅಂತ ಅಜ್ಜಿಯ ವಾದ ...
ಮೊದಲಿಂದಲೂ ಅತ್ತೆ-ಸೊಸೆಯ ಈ ವಾಕ್-ಯುದ್ದ ಇದ್ದೆ ಇದೆ. ಅತ್ತೆ ಸ್ವರ ಏರಿಸಿದಾಗ ಸೊಸೆ ವಾಕ್-ಔಟ್ ಮಾಡಿದರೆ, ಸೊಸೆ ದನಿ ಎರಿಸಿದಾಗ ಅತ್ತೆ-ವಾಕ್-ಔಟ್ !
ಇವರ ಯುದ್ದದ ನಡುವೆ ಎಣ್ಣೆ ಒತ್ತಿಸಿಕೊಂಡು ಬಿಟ್ಟಿ ಮಸಾಜ್ ಮಾಡಿಸಿಕೊಳ್ಳುತ್ತ "ಎಣ್ಣೆಯನೊತ್ತುತ ಯದುಕುಲ ತಿಲಕಗೆ, ಬಣ್ಣಿಸಿ ಗೋಪಿ ಹರಸಿದಳು" ಎಂಬ ಅಜ್ಜಿಯ ಹಾಡನ್ನೂ ಕೇಳಿಸಿಕೊಳ್ಳುತ್ತ ನಿದ್ದೆ ಹೋದ ಸಂದರ್ಭವೂ ಇದೆ.
ಎಣ್ಣೆ ಒತ್ತಿಸಿಕೊಂಡು, ಅಲ್ಲಿ ಇಲ್ಲಿ ಕುಳಿತು, ಗೋಡೆಗೋ ಸೋಫ’ಗೋ ಎಣ್ಣೆ ಮೆತ್ತಿ ಅಮ್ಮನ ಕೈಲಿ ಬೈಸಿಕೊಳ್ಳುತ್ತ, ಒಂದು ಘಂಟೆ ಹೊತ್ತು ಕಾಲಹರಣ ಮಾಡಿ, ನಂತರ ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿಕೊಂಡು, ಪೊಗದಸ್ತಾದ ಊಟ ಮಾಡಿ, ಭಯಂಕರ ನಿದ್ದೆ ಮಾಡಿ, ಸಂಜೆ ವಾಕಿಂಗ್ ಅಂತ ಪಕ್ಕದ ಮನೆಗೆ ಹೋಗುವುದು, ವಾಡಿಕೆ. ಒಮ್ಮೆ, ಎಣ್ಣೆ ಸ್ನಾನ ಆಗುವಾಗ, ’ಹಸಿವೆ’ ಎಂದು ಅಜ್ಜಿಗೆ ಹೇಳಿದಾಗ, ರೇಗಿದ ಅಜ್ಜಿ ಒಮ್ಮೆ ಕೈಲಿದ್ದ ಸೀಗೆಪುಡಿ ಬಾಯಿಗೆ ತುರುಕಿದ್ದೂ ಇದೆ !!
ಮೊನ್ನೆ ಭಾನುವಾರವೂ ಇದೇ ಆಯ್ತು. ಅಜ್ಜಿ ಬಂದಿರೋದು ಗೊತ್ತಿರೋದ್ರಿಂದ ಸುಮ್ನೆ ಸುಬ್ಬನನ್ನು ಭೇಟಿ ಮಾಡುವ ನೆಪದಲ್ಲಿ ಅವನ ಮನೆಗೆ ಹೋದೆ. ಕೂಸು ಇನ್ನೂ ಮಲಗಿತ್ತು. ಸುಮ್ನೆ ಕೂತೆ. ಅವನು ಬಾರದಿದ್ದರೂ ತಿಂಡಿ ಬರಬಹುದು ಅಂತ.
ನಿದ್ದೆಯಿಂದ ಎದ್ದ ಸುಬ್ಬ ಮುಖ ತೊಳೆದು ಲಕ್ಷಣವಾಗಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿ, ಬಟ್ಟೆ ಬದಲಿಸಿ ಹಾಗೇ ಹೊರಗೆ ನನ್ನನ್ನು ಕಂಡು ಕಿರು ನಗೆ ಸೂಸುವ ಮುನ್ನ, ಅಜ್ಜಿಯ ಉರಿಗಣ್ಣು ನೋಡಿ ಹಾಗೇ ನಿಂತ ... ತಾನೇನು ತಪ್ಪು ಮಾಡಿದೆ ಅಂತ !
ಸುಬ್ಬ ಅಜ್ಜಿಯ ಕೈಲಿ ಬೈಸಿಕೊಳ್ಳೋದು ಹೊಸದೇನಲ್ಲ ... ಅವನೇನು ಮಾಡಿದ ಎಂದು ತಿಳಿವ ಕುತೂಹಲ ನನಗೆ.
ಮುಸ್ಸಂಜೆ ಹೊತ್ತು ಯಾವುದೋ ಒಂದು ರಾಜಕೀಯ ಪಕ್ಷ ಮತ್ತೊಂದು ಪಕ್ಷದವರಿಗೆ ಬತ್ತಿ ಹಚ್ಚುವ ಲಗ್ನದಲಿ, ಸುಬ್ಬನ ಅಮ್ಮ ದೇವರ ದೀಪ ಹಚ್ಚಲು ಬತ್ತಿಯನ್ನು ಎಣ್ಣೆಯಲಿ ಮುಳುಗಿಸುತ್ತಿದ್ದ ಕಾಲದಲಿ, ಬತ್ತಿ ಹೊಸೆಯುತ್ತ ಬಾಗಿಲ ಬಳಿ ಕುಳಿತಿದ್ದ ಸಮಯದಲಿ, ಉರಿಗಣ್ಣ ಅಜ್ಜಿಯನ್ನು ನೋಡಿದ ಸುಬ್ಬನಿಗೆ ಹೊರಗೆ ಅಡ್ಡಡಿ ಬರುವ ಆಸೆಯೇ ಬತ್ತಿ ಹೋಯಿತು.
"ಹು..ಮು..ದೆ ... ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿಕೊಂಡಿರೋ ದಿನ ಎಣ್ಣೆ ಹಚ್ಚಿಕೊಂಡ್ಯಾ?" ಅಂದರು ಅಜ್ಜಿ. ಹೀಗೆಲ್ಲ ಹೇಳಿದರೆ ಸುಬ್ಬನಿಗೆ ಅರ್ಥ ಆಗಲ್ಲ. ಹೋಗ್ಲಿ ಬಿಡಿ, ನನಗೂ ಅರ್ಥವಾಗಲಿಲ್ಲ. ಪೆಕರು ಪೆಕರಾಗಿ ಅಜ್ಜಿಯತ್ತ ನೋಡಿದ ಸುಬ್ಬ "ಯಾಕಜ್ಜಿ?" ಅಂದ.
"ತಲೆಗೆ ಹರಳೆಣ್ಣೆ ಹಚ್ಚಿ ಎರೆದುಕೊಂಡಿದ್ಯ. ಅದೂ ಸಂಜೆ ಹೊತ್ತು, ಅದೇ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡ್ಯಲ್ಲ. ಹು..ಮು..ದೆ " ...
"ಅಲ್ಲ ಅಜ್ಜಿ ... ಅದೇ ತಲೆಗೆ ಅಂದರೆ, ನನಗಿರೋದು ಒಂದೇ ತಲೆ ಅಲ್ವಾ? ತಲೆಗೆ ಎಣ್ಣೆ ಹಾಕಬಾರದಾ?"
"ಹು..ಮು..ದೆ ... ಎರೆದುಕೊಂಡ ತಲೆಗೆ ಅಂದೇ ಎಣ್ಣೆ ಹಚ್ಚಿಕೊಂಡ್ರೆ ಸೋದರಮಾವನಿಗೆ ಸಾಲ ಆಗುತ್ತೆ ಅಂತ ಗೊತ್ತಿಲ್ವೇ? ದೊಡ್ಡವರು ಅಂತ ಅನ್ನಿಸಿಕೊಂಡವರು ಹೇಳಿಕೊಡಬೇಕು ... ಹು..ಮು..ಗ..ನ್ನ ತಂದು"
ನನಗೆ ಸಂಪೂರ್ಣ ಕನ್ಫ್ಯೂಸ್ ಆಯ್ತು ... ಸುಬ್ಬ ಇಲ್ಲಿ ತನ್ನ ತಲೆಗೆ ಎಣ್ಣೆ ಹಚ್ಚಿಕೊಂಡ್ರೆ ಅಲ್ಲಿ ಸೋದರಮಾವನಿಗೆ ಸಾಲ ಹೇಗೆ ಆಗುತ್ತೆ? ’ಅಲ್ಲಿ’ ಅನ್ನಲಿಕ್ಕೆ ನನಗೆ ಆ ಸೋದರಮಾವ ಎಲ್ಲಿದ್ದಾರೆ ಎಂದೇ ಗೊತ್ತಿಲ್ಲ ಬಿಡಿ !
"ಮಾವನಿಗೆ ಸಾಲ ಹೇಗಾಗುತ್ತೆ ಅಜ್ಜಿ?"
"ಅಲ್ವೋ ಪೆದ್ದು ... ಎಣ್ಣೆ ಹಚ್ಚಿಕೊಂಡು ಒಂದೆರಡು ಘಂಟೆ ನೆಂದ ಮೇಲೆ ಸ್ನಾನ ಆಗಿರುತ್ತೆ. ಮತ್ತೆ ಎಣ್ಣೆ ಹಚ್ಚಿಕೊಂಡ್ರೆ ತಲೆಗೂದಲು ವಾಸನೆ ಮತ್ತು ಎಣ್ಣೆ ಖರ್ಚು. ತಂಗಿಯಾದವಳು ಗಂಡನ ಮನೆಯಲ್ಲಿ ಚೆನ್ನಾಗಿರಲಿ ಅಂತ ಅಣ್ಣ ಅಡುಗೆಗೂ, ತಲೆಗೂದಲಿಗೂ ಆಗಲಿ ಅಂತ ಆರು ತಿಂಗಳಿಗೊಮ್ಮೆ ಹಳ್ಳಿಯಿಂದ ಎಣ್ಣೆ ತಂದುಕೊಡ್ತಾನೆ. ಅದು ಬೇಗ ಖರ್ಚಾದರೆ ಅವನು ಸಾಲ ಸೋಲ ಮಾಡಿ ತಾನೇ ತಂದಿಡಬೇಕು?"
ಎಲ್ಲಿಂದ ಬರ್ತಿದೆ ಈ ವಿಷಯಗಳು? ಅಲ್ಲಾ, ಈಗಿನ ಕಾಲದಲ್ಲಿ ಅವರ ಮನೆ ಖರ್ಚು ಅವರು ನೋಡಿಕೊಂಡ್ರೆ ಸಾಕಾಗಿರುತ್ತೆ, ಅಂಥಾದ್ರಲ್ಲಿ ತಂಗಿ ಮನೆಗೆ ಎಣ್ಣೆ ತಂದಿಡೋ ಅಣ್ಣನೋ / ತಮ್ಮನೋ ಎಷ್ಟು ಜನ ಇದ್ದಾರು? ಇನ್ನು ಅಡುಗೆ ವಿಷಯ ... ನಾನಂತೂ ಮಂಗಳೂರಿನವನಲ್ಲ. ಹಾಗಾಗಿ ನಮ್ಮ ಮನೆಯಲ್ಲಂತೂ ಅಡುಗೆಗೆ ಕೊಬ್ಬರಿ ಎಣ್ಣೆ ಬಳಸೋಲ್ಲ.
ಸುಬ್ಬ "ಸರಿ ಅಜ್ಜಿ ! ಈಗ ತಲೆ ಸ್ನಾನ ಮಾಡ್ಲಾ?"
"ಹು..ಮು..ದೆ ... ಒಂದು ದಿನಕ್ಕೆ ಎರಡು ಸ್ನಾನ ಮಾಡ್ತಾರೇನೋ, ಅದೂ ಅಲ್ದೇ ಸಂಜೆ ದೀಪ ಹಚ್ಚೋ ಹೊತ್ತು? ಅನಿಷ್ಟ!"
ಸುಬ್ಬನಿಗೆ ಎಣ್ಣೆ ಹಾಕಿದ್ದಕ್ಕೆ ತಲೆ ಕೆಡ್ತೋ ... ಎಣ್ಣೇ ಹಾಕದೆ ತಲೆ ತಿರುಗ್ತಾ ಇದೆಯೋ ಗೊತ್ತಿಲ್ಲ ... ನಾನು ಬಾಯಿಬಿಟ್ಟೆ "ಆಯ್ತು ಅಜ್ಜಿ ... ಸೋದರಮಾವನಿಗೆ ಸಾಲ ಆಗುತ್ತೆ ಅನ್ನೋ ಹಾಗಿದ್ರೆ ಇನ್ನು ಮುಂದೆ ಅವನು ಈ ಕೆಲಸ ಮಾಡಲ್ಲ. ಇವತ್ತು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ" ಅಂದೆ ...
"ಲೋ! ಸುಬ್ಬ ... ಅವನ ಕೈಗೆ ಒಂದೆರಡು ಗಟ್ಟಿ ಚಕ್ಕಲಿ ಹಾಕು"
ಅರ್ಥವಾಗಲಿಲ್ಲ! ಮೆದುವಾದ ಚಕ್ಕಲಿ ಚೆನ್ನಾಗಿರೋಲ್ಲ ಅಂತ ಗಟ್ಟಿ ಚಕ್ಕಲಿ ಕೊಡು ಅಂದ್ರಾ? ಅಥವಾ ನಾನು ಮಧ್ಯೆ ಬಾಯಿ ಹಾಕಿದ್ದಕ್ಕೆ ಒಂದೆರಡು ಹಲ್ಲು ಮುರಿಸೋಣ ಅಂತ ಗಟ್ಟಿ ಚಕ್ಕಲಿ ತಿನ್ನಿಸುತ್ತಿದ್ದಾರಾ?
ಏನೋ ಒಂದು ... ಅಜ್ಜಿ ಪ್ರೀತಿಯಿಂದ ಕೊಟ್ಟ ಚಕ್ಕಲಿ ಅವೋಘವಾಗೇ ಇತ್ತು. ಚಕ್ಕಲಿ ತಿಂದು, ನೀರು ಕುಡಿದು, ಸುಬ್ಬನ ಜೊತೆ ಹೊರಗೆ ಹೊರಟೆ.
ಮುಸ್ಸಂಜೆಯ ತಂಗಾಳಿಯಲ್ಲಿ, ವಾಹನಗಳ ಗಲಾಟೆಯ ಮಧ್ಯೆ, ಆಟೋಗಳು ನುಗ್ಗೋ ರೀತಿಯಲ್ಲಿ ಆರಾಮವಾಗಿ ವಾಕಿಂಗ್ ಹೋಗುವಾಗ ಸುಬ್ಬನನ್ನು ಕೇಳಿದೆ "ನಿಮ್ಮ ಸೋದರಮಾವ ಯಾವ ಊರಲ್ಲಿ ಇದ್ದಾರೋ?"
ಸುಬ್ಬ ನುಡಿದ "ನನಗೂ ಗೊತ್ತಿಲ್ವೋ ! ನಮ್ಮಮ್ಮನಿಗೆ ಅಣ್ಣ-ತಮ್ಮ ಯಾರೂ ಇಲ್ಲ"!
ನಾನು ಅಜ್ಜಿ ಸ್ಟೈಲಿನಲ್ಲೇ ಬೈದೆ "ಅಲ್ವೋ! ಹು.ಮು.ದೆ ... ನಿನಗೆ ಸೋದರಮಾವಾನೇ ಇಲ್ಲ !! ಮತ್ತೆ ಸಾಲ ಆಗೋದು ಯಾರಿಗೆ? ಇಷ್ಟು ಹೊತ್ತೂ ಅಜ್ಜಿ ಕೈಲಿ ಉಗಿಸಿಕೊಂಡಿದ್ದು ಇಲ್ಲದ ಸೋದರಮಾವನ ಬಗ್ಗೆನೇ?"
ಸುಬ್ಬ "ಹೌದಲ್ವೇನೋ?" ಅಂದ !
Comments
ನಿಮ್ಮ ಸ್ನೇಹಿತ ಸುಬ್ಬನಿಗೆ ಅಜ್ಜಿ
In reply to ನಿಮ್ಮ ಸ್ನೇಹಿತ ಸುಬ್ಬನಿಗೆ ಅಜ್ಜಿ by sathishnasa
general ಆಗಿ ಬುದ್ದಿ ಕೆಲಸ
ಇಲ್ಲದ ಸೋದರ ಮಾವನ ಮೇಲೆ ಸಾಲ...
In reply to ಇಲ್ಲದ ಸೋದರ ಮಾವನ ಮೇಲೆ ಸಾಲ... by venkatb83
ಅವನ ಜಗತ್ತಿನಲ್ಲಿ ಅವನು ಅರಾಮವಾಗೇ
>>ನಾನು ಅಜ್ಜಿ ಸ್ಟೈಲಿನಲ್ಲೇ ಬೈದೆ
In reply to >>ನಾನು ಅಜ್ಜಿ ಸ್ಟೈಲಿನಲ್ಲೇ ಬೈದೆ by ಗಣೇಶ
ಧನ್ಯವಾದಗಳು ಗಣೇಶ್’ಜಿ :-))
ಸುಬ್ಬಜ್ಜಿ ಕೈಲಿ ಸುಬ್ಬ ಬಜ್ಜಿ!!
In reply to ಸುಬ್ಬಜ್ಜಿ ಕೈಲಿ ಸುಬ್ಬ ಬಜ್ಜಿ!! by kavinagaraj
ಹ ಹ ಹ ... ಚೆನ್ನಾಗಿ ಹೇಳಿದಿರಿ
In reply to ಹ ಹ ಹ ... ಚೆನ್ನಾಗಿ ಹೇಳಿದಿರಿ by bhalle
:) ಚೆನ್ನಾಗಿದೆ.
In reply to :) ಚೆನ್ನಾಗಿದೆ. by Premashri
ಧನ್ಯವಾದಗಳು ಪ್ರೇಮ ಅವರೇ !