ಸುಬ್ಬಪ್ಪ ಹರಸು

ಸುಬ್ಬಪ್ಪ ಹರಸು

ಕವನ

ಮಾರ್ಗಶಿರ ಮಾಸದ ಆರನೇ ದಿನದಂದು

ಕಾರ್ತಿಕೇಯನ ಪೂಜೆ ವ್ರತ ಚಂಪಾ ಷಷ್ಠಿ ವಿಶೇಷವಿಂದು

ಪಾಪವನು ಇಲ್ಲವಾಗಿಸಿ ಕ್ಲೇಶವನು ಪರಿಹರಿಸು

ಇಷ್ಟಾರ್ಥ ನೀಡುತ ಸುಬ್ಬಪ್ಪ ಹರಸು

 

ದುಷ್ಟ ತಾರಕನ ವಧೆಗಾಗಿ ಜನ್ಮವೆತ್ತಿದೆಯಂತೆ

ಕುಟ್ಟಿ ಕೆಡಹುತ ಮಟ್ಟ ಹಾಕಿದೆಯಂತೆ

ಲೋಕದ ತಂದೆ ಪರಶಿವನ ಮಗನಂತೆ

ಶಿವೆಯ ಮಡಿಲಿನ ಪ್ರೀತಿ ಕಂದನಂತೆ

 

ಕಾರ್ತಿಕೇಯ ಸುಬ್ರಹ್ಮಣ್ಯ  ಷಣ್ಮುಖ ಪೆಸರಂತೆ

ದೇವನೇ ನಿನಗೆ ನವಿಲು ವಾಹನವಂತೆ

ಭಕುತವೃಂದವು ನೇಮ ವ್ರತ ಉಪವಾಸ ಗೈವರಂತೆ

ಇಷ್ಟಾರ್ಥ ನೀಡೆಂದು ಭಜಿಸಿನಮಿಸುವರಂತೆ

 

ಮಂಗಳದ ಅಧಿಪತಿ ಗಣಪನ ಸೋದರನೆ

ತುಪ್ಪ ಮೊಸರು ಜಲದರ್ಘ್ಯ ಸ್ವೀಕರಿಪನೆ

ಪಾಪಕರ್ಮ ನೋವು ಬೇಸರಿಕೆ ಕಳೆಯುವವನೆ  

ಶಾಂತಿ ನೆಮ್ಮದಿ ಆರೋಗ್ಯ ಕರುಣಿಪನೆ

 

ಕುಕ್ಕೆಸುಬ್ರಹ್ಮಣ್ಯದಲಿಂದು ವೈಭವ ಸಂಭ್ರಮವು 

ನಾಗಶೇಷನ ಆವಾಸ ಸ್ಥಾನದಲಿ ಸಡಗರವಿಂದು

ಕೊಪ್ಪರಿಗೆ ಪಲ್ಲಪೂಜೆ ಬಂಡಿ ಉತ್ಸವ ಮೆರವಣಿಗೆ

ಬ್ರಹ್ಮರಥೋತ್ಸವದ ಧಾರ್ಮಿಕ ಆಚರಣೆಯು

 

ಲಕ್ಷದೀಪಗಳ ಪ್ರಜ್ವಲನೆ ಪ್ರಖರ ಬೆಳಕಿನಲಿ

ವೇದಮಂತ್ರ ಕೀರ್ತನೆಗಳ ಜಯ ಘೋಷದಲಿ

ಬಂಡಿ ಹೂವಿನ ತೇರು  ಉತ್ಸವ ಗಂಟಾನಾದದಲಿ

ಪಲ್ಲಕ್ಕಿಯಲಿ ಕುಳಿತ ಸುಬ್ರಹ್ಮಣ್ಯನ ಸವಾರಿಯಲಿ

 

ನೈವೇದ್ಯ ಅರ್ಪಿಸಿ ಧನ್ಯರಾಗುವ ಜನಸ್ತೋಮದಲಿ

ಭೋಜನಪ್ರಸಾದ ಸ್ವೀಕರಿಪ ಭಕ್ತಜನ ವೃಂದದಲಿ

ಎಳ್ಳು ನಾಣ್ಯ ಪರಿಮಳ ಹೂಗಳ ರಥಕೆ ಎಸೆಯುತಲಿ

ಶ್ರದ್ಧಾ ಭಕ್ತಿಯಲಿ ನಮಿಸುತ ತೃಪ್ತಿ ಭಾವದಲಿ

 

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್