ಸುಬ್ಬ: ಪಂಚೇಂದ್ರಿಯ ಪಂಚಾಯಿತಿ
ಹೇಗಿದ್ರೂ ಸುಬ್ಬನ ಅಜ್ಜೀನೂ ಬಂದಿದ್ದಾರೆ ಅಂತ ಸುಬ್ಬನ ಮನಗೆ ಹೋದೆ ... ಸಾಮಾನ್ಯವಾಗಿ ನನಗೆ ಈ ಅಜ್ಜಿಯರು ಅಂದರೆ ಬಹಳ ಗೌರವ, ಒಂದೇ ಕಂಡೀಶನ್ನೂ ಅಂದರೆ ಅವರು ಕುರುಕಲು ತಿಂಡಿ ಮಾಡುವ ಅಜ್ಜಿ ಆಗಿರಬೇಕು ... ಅದು ಏನಾಯ್ತು ಅಂದ್ರೆ, ನೆನ್ನೆ ಯಾರೋ ಆಫೀಸಿನಲ್ಲಿ ಚಕ್ಕಲಿ ತಂದವರು, ಒಂದೇ ಬಳ್ಳಿ ನನ್ನ ಕಡೆ ತಳ್ಳಿದ್ದರು ... ಅದರ ನಂತರ ಸುಬ್ಬನ ಅಜ್ಜಿ ನೆನಪು ಒದ್ದುಗೊಂಡು ಬಂದಿತ್ತು ...
ಸುಬ್ಬನ ಮನೆಯ ಬಾಗಿಲ ಬಳಿ ಬಂದೆ ... ಮನೆಯೊಳಗಿನಿಂದ ಬರುತ್ತಿದ್ದ ವಾಕ್ ಪ್ರವಾಹಕ್ಕೆ ’ವಾಕ್-ಔಟ್’ ಮಾಡುವ ಇರಾದೆ ತೋರಿದೆ ... ಆದರೆ ಜಿಹ್ವಾ ಚಾಪಲ್ಯ ಬಿಡಬೇಕಲ್ಲ ... ಹಾಗಾಗಿ ಮೂಲೆಯಲ್ಲಿ ಚಪ್ಪಲಿ ಬಿಟ್ಟು ತೆರೆದೇ ಇದ್ದ ಬಾಗಿಲೊಳು ಕಾಲಿಡಲು ಹೋದವ ಹಾಗೇ ನಿಂತೆ ...
ಅಜ್ಜಿ-ಮೊಮ್ಮಗನ ವಾಕ್ ಸಮರ ... ಶಿಖಂಡಿ-ಭೀಷ್ಮರ ಯುದ್ದದಂತೆ ... ಅಂದರೆ ಒನ್-ವೇ ಸಮರ ಎಂದರ್ಥ ... ಅಜ್ಜಿ ಬಾಣ ಬಿಡ್ತಾ ಇದ್ದರು, ಸುಬ್ಬ ತೊಗೊಳ್ತಾ ಇದ್ದ ... ಮಧ್ಯೆ ಏನೋ ಹೇಳಲು ಬಾಯಿ ತೆರೆದರೆ, ಬಾಯಿಬಿಟ್ ಬೊಗಳಿದ ಶ್ವಾನದ ಬಾಯಲ್ಲಿ ಬಾಣ ತುಂಬಿದ ಏಕಲವ್ಯನಂತೆ ಅಜ್ಜಿಯ ಬೈಗುಳ ಅವನ ಬಾಯಿ ಮುಚ್ಚಿಸುತ್ತಿತ್ತು.
"ಲೋ ಸುಬ್ಬ! ಇಲ್ಲೇ ಕೂತಿದ್ದೀಯಾ. ಒಲೆ ಮೇಲೆ ಬೇಳೆಗೆ ಇಟ್ಟಿದ್ದೆ, ಸೀದು ಹಾಳಾಗ್ತಿದೆ. ಅಷ್ಟೂ ಗೊತ್ತಾಗೋಲ್ವಾ. ಬಂದು ಹೇಳೋದು ತಾನೇ?"
"ಟೀ.ವಿ ಜೋರಾಗಿ ಹಾಕಿದ್ನಲ್ಲ ಅದಕ್ಕೇ ಗೊತ್ತಾಗ್ಲಿಲ್ಲ, ಮತ್ತೇ ..."
"ಹು .. ಮು.. ದೇ, ಸುಟ್ಟು ಟಿ.ವಿ ಹಾಕಿದ್ರೆ ಕಣ್ಣು-ಕಿವಿ ಸತ್ತಿರುತ್ತೆ ... ಮೂಗಿಗೆ ಏನು ಬಡಿದಿರುತ್ತೆ? ಸೀದಿದ ಬೇಳೆ ವಾಸನೆ ನಿನ್ನ ಬುದ್ದೀನ್ನೂ ಮುಚ್ಚಿ ಹಾಕಿದೆ ಅನ್ನಿಸುತ್ತೆ ... ಇಷ್ಟಕ್ಕೂ ನಿನಗೆ ಬುದ್ದಿ ಎಲ್ಲಿದೆ? ಅದನ್ನು ಮುಚ್ಚೋದೆಲ್ಲಿಂದ ಬಂತು?"
"ಹಂಗಲ್ಲಾ ಅಜ್ಜಿ .. ಕೇಳಿಸಲಿಲ್ಲ ಅಂದ್ರೆ, ಕುಕ್ಕರ್ ಶಬ್ದ ...."
"ಹು .. ಮು.. ದೇ, ನಾನು ಅಗ್ಗಿಷ್ಟಿಕೆ ಒಲೇಲ್ಲಿ ತಾನೇ ಅಡುಗೆ ಮಾಡೋದೂ ... ಕಿವಿ ಕೇಳಲ್ಲ, ಕಣ್ಣು ಕಾಣಲ್ಲ, ಮೂಗಿಗೆ ವಾಸನೆ ಬಡಿಯಲ್ಲ ... ಸ್ಪರ್ಶ ಬಿಡು, ಎಮ್ಮೆ ಚರ್ಮ ... ನಾಲಿಗೆ ಮಾತ್ರ ಕೇಳೋದೇ ಬೇಡ ... ದನದ ಸೆಗಣಿಗೆ ಉಪ್ಪು-ಖಾರ ಹಾಕಿ ಕೊಟ್ರೂ ಅದನ್ನು ಮೆದ್ದು ಇನ್ನೂ ಇದ್ಯಾ ಅಂತ್ಯಾ ..."
"ಅಯ್ಯೋ ಅಜ್ಜಿ, ಅದು ಹಂಗಲ್ಲಾ ..."
"ಇನ್ನು ಹೇಗೋ ... ಆ ಸುಟ್ಟು ಟಿ.ವಿ ಆರಿಸು ... ರಾಮಾ ಕೃಷ್ಣ ಅಂತ ಯಾವುದಾದರೂ ನೋಡೋದು ಬಿಟ್ಟು, ಅಲ್ನೋಡು ... ಅದೇನು ... ಅಯ್ಯೋ! ರಾಮ ರಾಮ .... ಜಡೆ ಬಿಟ್ಕೊಂಡು, ಬರೀ ಪ್ಯಾಂಟು ಹಾಕಿಕೊಂಡು ಮೇಲೆ ಏನೂ ಹಾಕಿಕೊಳ್ದೆ ಕುಣೀತಿರೋ ಅವಳನ್ನ ನೋಡ್ತಿದ್ದೀಯಾ ... ಥೂ .. ಅನಿಷ್ಟ ... ನಿನಗೇನು ಬಂತೋ ಧಾಡಿ?"
"ಅಯ್ಯೋ ಅಜ್ಜಿ, ಅದು ಹುಡುಗಿ ಅಲ್ಲ .... ಉದ್ದ ಕೂದಲು ಬಿಟ್ಟಿರೋದು ಸಲ್ಮಾನ್ ಖಾನ್ ಅಜ್ಜಿ "
"ಅನಿಷ್ಟ ... ಅನಿಷ್ಟ ... ಅವನ ಅಜ್ಜೀಗ್ಯಾಕೆ ಬಂತೋ ಈ ಕೇಡಿಗ್ ಬುದ್ದೀ"
"ಶಿವನೇ, ನಾನು ಅಜ್ಜಿ ಅಂದಿದ್ದು ನಿಮಗೆ ... ಅವನು ಬರೀ ಶರ್ಟಿಲ್ಲದ ಸಲ್ಮಾನ ಖಾನು"
"ಶರಟಿಲ್ವಂತೆ! ಬರೀ ಹೆಸರಲ್ಲಿ ಮಾನ ಇದ್ರೆ ಸಾಕೇ ... ಅಲ್ಲಾ, ಅಷ್ಟೆಲ್ಲ ದುಡ್ಡು ಹಾಕಿ ಸಿನಿಮಾ ಮಾಡ್ತಾರೆ .. ಅವನಿಗೆ ಒಂದು ಶರಟು ಹೊಲಿಸಿ ಹಾಕಕ್ಕೆ ಆಗಲ್ವೇ? "
"ಅಜ್ಜೀ, ಅದೂ ... ಹೋಗ್ಲಿ ಬಿಡಿ"
ಮನೋರಂಜನೆ ಸಾಕಾಯ್ತು .... ಒಳಗೆ ಅಡಿಯಿಟ್ಟೆ ....
"ಅಜ್ಜೀ ಚೆನಾಗಿದ್ದೀರಾ?" ... ಇರಲಿ ಅಂತ "ಇದ್ದಾನಾ ಸುಬ್ಬ?"
"ಬಾಪ್ಪಾ ಬಾ ... ಅವನ್ಯಾವನೋ ಮೈಮೇಲೆ ಅರಿವೆ ಇಲ್ಲದೆ ಕುಣೀತಿದ್ದಾನೆ, ಇವನು ಮೈಮೇಲೆ ಅರಿವಿಲ್ಲದೆ ನೋಡ್ತಿದ್ದಾನೆ! ಎಲ್ಲಿಗೆ ಹೋಗ್ತಾನೆ ... ಅಲ್ಲೇ ಕುಕ್ಕರುಬಡಿದಿದೆ ನೋಡು" ಅಂತಂದು ಒಳ ನೆಡೆಯುತ್ತಾ "ಬಂದ ... ಕಮಂಗಿ ಜೊತೆ ಕೋಡಂಗಿ"
ತಮಗೆ ಕೇಳಿಸೋಲ್ಲ ಅಂತ ಯಾರಿಗೂ ಕೇಳಿಸೋಲ್ಲ ಅಂತ ಅಂದುಕೊಂಡಿರ್ತಾರೆ ಅಜ್ಜಿ ... ಹೋಗ್ಲಿ ಬಿಡಿ ...
ಕೂತಲ್ಲಿಂದ್ಲೇ ಸುಬ್ಬ "ಓ! ಬಾರೋ ... ಒಬ್ಬನೇ ಇದ್ದೆ ... ಜೊತೆ ಆಯ್ತು "
"ಯಾಕಪ್ಪಾ ... ನಿಮ್ಮಜ್ಜಿ ಬಾಯಲ್ಲಿ ಉಗಿಸಿಕೊಳ್ಳಲಿಕ್ಕಾ?
"ಹಂಗಲ್ವೋ ಹೇಳಿದ್ದೂ ..."
"ಏನೂ? ನಿನ್ನ ಪಂಚೇಂದ್ರಿಯಗಳಿಗೆ ಪಂಚ್ ಹೊಡೀತಿದ್ರು ಅಜ್ಜಿ?"
"ಏನಿಲ್ವೋ ... ಬೇಳೇ ಸೀದಿದ್ದರಿಂದ ಅಜ್ಜಿಗೆ ಸಿಟ್ಟು. ಮೊದಲೇ ನೆನ್ನೆ ಏಕಾದಶಿ ಉಪವಾಸ ... ಬೇಳೆ ಸೀದು ಅಡುಗೆ ಲೇಟ್ ಆಗುತ್ತೆ. ದ್ವಾದಶಿ ಪಾರಣೆ ಲೇಟ್ ಆಗುತ್ತಲ್ಲ ಅಂತ"
"ಪಾಪ ... ಅಲ್ವೋ ಸಿಂಗಲೀಕ ... ಸೀದ ವಾಸನೆ ನಿನ್ನ ಮೂಗಿಗೆ ಬಡೀಲಿಲ್ವಾ?"
"ನಾನೇನೋ ಮಾಡ್ಲೀ ... ನೆನ್ನೆ ರಾತ್ರಿಯಿಂದ ಮೂಗು ಲೀಕ್ ... ನೆಗಡಿ ... ಯಾವ ವಾಸನೇನೂ ಬಡೀತಾನೇ ಇಲ್ಲ. ಸದ್ಯಕ್ಕೆ ನನ್ನ ಮೂಗಿಗೆ ಗೊತ್ತಿರೋದು ವಿಕ್ಸ್ ವಾಸನೆ ಮಾತ್ರ"
"ಓಹೋ! ಹಂಗೆ ವಿಷಯ"
"ಈಗ ಬೇಳೆ ಸೀದಿದ್ದಕ್ಕೆ ಮಾತ್ರ ಬೈಸಿಕೊಂಡೆ ... ನಾನೇನಾದ್ರೂ ಹಾಳಾಗ್ತಿದ್ಯಲ್ಲಾ ಅಂತ ಪಾತ್ರೆ ತೆಗೆದು ಕೆಳಗೆ ಇಟ್ಟಿದ್ರೆ, ಉರಿಯೋ ಸೌದೇಲಿ ಹೊಡೆಸಿಕೊಳ್ತಿದ್ದೆ ... "
"ಎಮ್ಮೆ ಚರ್ಮ ಹಗುರ ಆಗಿರೋದು .. ಅ ಚಾನ್ಸ್ ಮಿಸ್ ಆಯ್ತು ಬಿಡು"
"ಅದೆಲ್ಲ ಬಿಡು ... ಏನು ನಾನು ಹೇಳಿ ಕಳಿಸದೆ ಬಂದಿ? ಅಪರೂಪಕ್ಕೆ?"
"ಏನಿಲ್ವೋ ... ನಿನಗೆ ನೆಗಡಿ ಅಂತ ಗೊತ್ತಾಯ್ತಲ್ಲ, ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದೆ ..."
"ಒಳ್ಳೇದಾಯ್ತು ಕಣೋ ! ವಿಕ್ಸ್ ಬಿಟ್ರೆ ನನ್ನ ಮೂಗಿಗೆ ನೀನೇ ಕಣೋ ಹತ್ತಿರ ಆದೋನು ... "
ಪಾಪಿ ಸುಬ್ಬ ... ನಿನ್ನ ಕೊಳಕು ಮೂಗಿಗೆ ನಾನೇ ಹತ್ತಿರವಾಗಬೇಕೆ? ಆದರೂ, ಸುಬ್ಬ ಗ್ರೇಟು ಕಣ್ರೀ ... ಅವನು ಹೇಳಿದ ವಿಷಯ ಅವನಿಗೇ ಹೇಳಿದರೂ ಗೊತ್ತಾಗಲಿಲ್ಲ ... ಪಾಪ ...
"ಅಜ್ಜಿ ಏನೂ ತಿಂಡಿ ಮಾಡಿಲ್ವೇನೋ ? ಕುರುಕಲು ... ತರಕಲು"
"ಇಲ್ಲ ಕಣೋ ಇನ್ನೇನು ದಿನಗಳು ಹತ್ತಿರ ಬಂತಲ್ಲ, ಅದಕ್ಕೆ ಯಾಕೆ ಸುಮ್ನೆ ವೇಷ್ಟು ಅಂತ"
"ಸುಬ್ಬ ... ಏನೋ ಮಾತಾಡ್ತಿದ್ದೀಯಾ? ಅಜ್ಜಿ ಹುಷಾರಾಗಿದ್ದಾರೆ ತಾನೇ?"
"ಅಯ್ಯಾ... ಈಗ್ಲೇ ನೋಡಿದ್ಯಲ್ಲಾ ... ಲೇಡೀ ಸಾಯಿಕುಮಾರ್ ತರಹ ಒಂದೇ ಸಮನೆ ಬಿಡದೆ ಮಾತಲ್ಲೇ ಹೊಡೆದರು ನನಗೆ? ಅವರಿಗೇನೂ ಆಗಿಲ್ಲ ... ಈ ಟಿ.ವಿ’ನವರು ಪ್ರಳಯ ಪ್ರಳಯ ಅಂತ ಕೂಗಾಡಿಕೊಂಡು ಅಜ್ಜಿ ತಲೆ ಕೆಡಿಸಿದ್ದಾರೆ... ಇಪ್ಪತ್ತೊಂದನೇ ತಾರೀಖು ಮುಗಿದ ಮರುದಿನ, ಇದ್ರೆ, ಹಿಟ್ಟು ಕಲಿಸಿ .... "
ಸುಬ್ಬ ಹೇಳಿದ್ದು ಕೇಳಿಸ್ತಿಲ್ಲ ...
ಕುರುಕಲು ತಿಂಡಿ ಸಿಗಲಿಲ್ಲ ...
ಕಣ್ಣ ಮುಂದೆ ಬರೀ ತಿಂಡಿ ಕಾಣಿಸ್ತಿದೆ ಆದರೆ ಕೈಗೆ ಎಟುಕುತ್ತಿಲ್ಲ ....
ಕಂಗಳಿಗೆ ಕಾಣದೆಯೇ ತಿಂಡಿಗಳ ಪರಿಮಳ ಮೂಗಿಗೆ ಬಡಿದಿವೆ ...
ನನ್ನ ಜಿಹ್ವಾ ಚಾಪಲ್ಯದ ಹಕ್ಕನ್ನು ಕಸಿದುಕೊಂಡ ಪ್ರಳಯ ವಾರ್ತೆಗೆ ಧಿಕ್ಕಾರ !
Comments
ಪ್ರಳಯ ಅಂತ ತಿಂಡಿ ಎಲ್ಲಾ ಈಗಲೇ
In reply to ಪ್ರಳಯ ಅಂತ ತಿಂಡಿ ಎಲ್ಲಾ ಈಗಲೇ by kavinagaraj
ನಾಗರಾಜರೇ, ಅಜ್ಜಿ ಒಂದು ರೀತಿ ಒನ್
ಆತ್ಮೀಯ ಭಲ್ಲೆ ಅವರೇ,
In reply to ಆತ್ಮೀಯ ಭಲ್ಲೆ ಅವರೇ, by Prakash Narasimhaiya
ಅದು ಏನಾಯ್ತು ಅಂದ್ರೆ, ಒಮ್ಮೆ
ಅ0ತು ನಿಮ್ಮ ಅಜ್ಜಿ ಪ್ರಳಯಾ0ತಕಳು
In reply to ಅ0ತು ನಿಮ್ಮ ಅಜ್ಜಿ ಪ್ರಳಯಾ0ತಕಳು by partha1059
ಪ್ರಳಯಾಂತ ಅಜ್ಜಿ ಆಗುವ ಬದಲು
;())0'
In reply to ;())0' by venkatb83
ವೆಂಕಟೇಶರೇ, ಇಲ್ಲ ... ಸಮಯದ
ಮನೆಗೆ ಹೊರಡುವ ಸಮಯದಲ್ಲಿ ಒಳ್ಳೆಯ
In reply to ಮನೆಗೆ ಹೊರಡುವ ಸಮಯದಲ್ಲಿ ಒಳ್ಳೆಯ by RAMAMOHANA
ಎಲ್ಲದರಲ್ಲೂ ಮುಂದೆ ಇರದಿದ್ದರೂ
In reply to ಎಲ್ಲದರಲ್ಲೂ ಮುಂದೆ ಇರದಿದ್ದರೂ by venkatb83
ವೆಂಕಟೇಶ್ವರನ ನಂಬಿ ... ಏನೂ
In reply to ಮನೆಗೆ ಹೊರಡುವ ಸಮಯದಲ್ಲಿ ಒಳ್ಳೆಯ by RAMAMOHANA
ನಿಮಗೆ ಸ೦ತಸ ತ೦ದ ವಿಷಯ ನಮಗೂ
ಹಾಸ್ಯ ಲೇಖನ ಚೆನ್ನಾಗಿದೆ.
In reply to ಹಾಸ್ಯ ಲೇಖನ ಚೆನ್ನಾಗಿದೆ. by Premashri
ಧನ್ಯವಾದಗಳು ಪ್ರೇಮಶ್ರೀ ಅವರೇ
ವ್ಹಾ ಭಲ್ಲೇಜಿ,
In reply to ವ್ಹಾ ಭಲ್ಲೇಜಿ, by ಗಣೇಶ
ಗಣೇಶ್'ಜಿ ಧನ್ಯವಾದಗಳು ... ನಾನು
ಭಲ್ಲೆಯವರೇ..
In reply to ಭಲ್ಲೆಯವರೇ.. by raghumuliya
ರಘು ... ಧನ್ಯವಾದಗಳು ... ನಿಮಗೆ