ಸುಬ್ರಹ್ಮಣ್ಯ ದೇವರ ಷಷ್ಠಿ ಪೂಜಾ ಸಂಭ್ರಮ

" ಶ್ರೀ ಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಛ್ರೀ ಪಂಚಮಿ ಸ್ಮೃತಾ / ಷಷ್ಠ್ಯಾಂ ಕೃತಾರ್ಥೊಭೂದ್ಯಸ್ತಸ್ಮಾತ್ ಷಷ್ಠಿ ಮಹಾತಿಥಿಃ//". ಸ್ಕಂದನು ದೇವಸೇನೆಯನ್ನು ವಿವಾಹಮಾಡಿಕೊಂಡು ಶ್ರೀ ಯೋಗವನ್ನು ಪಡೆದ ದಿವಸ ಶ್ರೀ ಪಂಚಮಿ. ಹಾಗೇ ತಾರಕಾಸುರನನ್ನು ಸಂಹಾರ ಮಾಡಿ ಜಗತ್ತಿಗೆ ಶುಭದಿನವನ್ನು ತಂದು ಕೃತಕೃತ್ಯನಾದ ದಿನ ಈ ಷಷ್ಠಿ. ಆದುದರಿಂದ ಇವೆರಡೂ ಸ್ಕಂದನಿಗೆ ಪ್ರಿಯವಾದ ಮಹಾ ತಿಥಿಗಳು ಎಂದು ಶ್ರೀಮನ್ಮಹಾಭಾರತವು ತಿಳಿಸುತ್ತದೆ. ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದು ಆಚರಿಸಬೇಕಾದ ಹಬ್ಬವಿದು. ಷಷ್ಠಿ ತಿಥಿಗೆ ಅದರ ಹಿಂದಿನ ತಿಥಿ ಪಂಚಮಿಯ ವೇಧೆ ಇದ್ದರೆ ಶ್ರೇಷ್ಠವೇ. "ಕೃಷ್ಣಾಷ್ಟಮೀ ಸ್ಕಂದ ಷಷ್ಠಿ ಶಿವರಾತ್ರಿಶ್ಚತುರ್ದಶಿ / ಏತಾಃ ಪೂರ್ವಯುತಾಃ ಕಾರ್ಯಾಃ ತಿಥ್ಯನ್ತೇ ಪಾರಣಂ ಭವೇತ್ /" ಇದು ಒಂದು ಭೃಗುಮಹರ್ಷಿಗಳ ವಚನ. ಹಾಗಾಗಿ ಹಿಂದಿನ ತಿಥಿಯ ವೇಧೆಯೇ ಇದಕ್ಕೆ ಪ್ರಶಸ್ತ. ಆ ದಿವಸವಂತೂ ಭಾನುವಾರ ಮತ್ತು ವೈಧೃತಿಯ ಸಂಯೋಗ ಇದ್ದರೆ ಇನ್ನೂ ವಿಶೇಷ. ಆಗ ಈ ಪರ್ವವನ್ನು ಚಂಪಾಷಷ್ಠಿ ಎಂದು ಕರೆಯುವರು. ಆದರೆ ಚಂಪಾ ಷಷ್ಠಿಗೆ ಪಂಚಮಿಯ ವೇಧೆ ಅಥವಾ ಸಪ್ತಮಿಯ ವೇಧೆ ಎರಡೂ ಕೂಡಾ ಯೋಗವಶದಿಂದ ಆಗಬಹುದು. (ವೈಧೃತಿ ಎಂದರೆ ಪಂಚಾಂಗವು ಹೇಳಲ್ಪಡುವ ಒಂದು ಯೋಗ.)
ಜ್ಞಾನ ಶಕ್ತಿ, ಸ್ಕಂದ, ಅಗ್ನಿಜಾತ, ಸೌರಭೇಯ, ಗಾಂಗೇಯ, ಶರವಣೋದ್ಭವ, ಕಾರ್ತೀಕೇಯ, ಕುಮಾರ, ಷಣ್ಮುಖ, ತಾರಕಾರಿ, ಸೇನಾನೀ, ಗುಹ, ಬ್ರಹ್ಮಚಾರಿ, ದೇಶಿಕ, ಕ್ರೌಂಚಭೇಧನ, ಶಿಖಿವಾಹನ ಮತ್ತು ವೇಲಾಯುಧ ಎಂಬೆಲ್ಲಾ ಸುಬ್ರಹ್ಮಣ್ಯ ಮೂರ್ತಿಬೇಧಗಳನ್ನು ' ಶೈವಾಗಮಶೇಖರ' ಗ್ರಂಥವು ಹೇಳುತ್ತದೆ. ( ಶ್ರೀ ಶಂಕರಭಗವತ್ಪಾದರು ಶೈವ, ವೈಷ್ಣವ, ಶಾಕ್ಯ, ಸೌರ, ಗಾಣಾಪತ್ಯ ಮತ್ತು ಸ್ಕಂದ ಎಂಬ ಆರು ದರ್ಶನಗಳನ್ನು ವೈದಿಕ ಭಕ್ತಿದರ್ಶನಗಳೆಂದು ಪುನರುದ್ಧಾರ ಮಾಡಿದರೆಂದು ಹೇಳುತ್ತಾರೆ). ನಾಗದೇವರ ರೂಪಿಯಾದ ಸುಬ್ರಹ್ಮಣ್ಯನನ್ನು ಪಂಚಮಿ ಅಥವಾ ಎರಡೂ ದಿನಗಳಲ್ಲಿಯೂ ಆಚರಿಸುವುದುಂಟು. ಸ್ವಾಮಿಯ ಆವಾಹನೆಮಾಡಿ ಹಾಲಿನಿಂದ ಅಭಿಷೇಕ ಮಾಡಿ, ಪಾಯಸಾದಿಗಳನ್ನು ನೀವೇದನೆ ಮಾಡಿ, ಅಂದು ಏಕಭುಕ್ತ ಅಥವಾ ಉಪವಾಸವನ್ನು ಆಚರಿಸುತ್ತಾರೆ. ಅಂದು ಬೇಯಿಸಿದ, ಕರಿದ, ಉಪ್ಪು ಹಾಕಿದ ಪದಾರ್ಥಗಳು ನಿಶಿದ್ಧ. ಏಕೆಂದರೆ ಅಗ್ನಿಯ ಶಾಖದ ಸ್ಪರ್ಷ ನಾಗನಿಗೆ ಆಗದು. ತಂಪಾದ, ಸಿಹಿಯಾದ ನೈವೇದ್ಯ ಇಷ್ಟವಾಗುತ್ತದೆ. ತುಂಬಾ ಮಡಿವಂತಿಕೆಯನ್ನು ಅಪೇಕ್ಷಿಸುವ ಹಬ್ಬ ಇದಾಗಿದೆ. ಅಶುಚಿಯ ಸ್ಪರ್ಷವೂ ಇರಬಾರದು.
ಗಣೇಶನ ಪೂಜಾಕಲ್ಪದಲ್ಲಿ 21 ರ ಸಂಖ್ಯೆಗೆ ವಿಶೇಷವಿದ್ದಂತೆ, 6 ಎಂಬ ಸಂಖ್ಯೆಗೂ ಪ್ರಧಾನವಿದೆ. ಪೂಜಿಸುವ ತಿಥಿ ಷಷ್ಠಿ,, ಮುಖವೂ ಆರು, ಶಕ್ತಿಗಳು ಆರು, ಅವುಗಳಲ್ಲಿ ಮುಖ್ಯವಾದ ಶಕ್ತಿಗೆ ಷಷ್ಠಿ, ಅವನಿಗೆ ಪ್ರಿಯವಾದ ನಾದ ಷಷ್ಠೀನಾದ, (ಅದಕ್ಕೆ ಷಣ್ಮುಖ ಪ್ರಿಯರಾಗ ಎನ್ನುವರು) ಪೂಜೆಗೆ ಬಳಸುವ ಪತ್ರ, ಪುಷ್ಪ ಮತ್ತು ಅತೈಲಪಕ್ವವಾದ "ಆವಿಯಲ್ಲಿ" ಬೇಯಿಸಿದ ಸಿಹಿಗಡುಬಿನ ನೈವೇದ್ಯ ಆರು ಹೀಗೆ ಆರು ಇಲ್ಲಿ ಪ್ರಧಾನವಾಗಿದ್ದು , ಸಿಕ್ಕಿದರೆ ಆರು ಮಂದಿ ಬ್ರಹ್ಮಚಾರಿಗಳಾದ ಬಾಲಸುಬ್ರಹ್ಮಣ್ಯ ಸ್ವಾಮಿ ಭಾವದಿಂದ ಪೂಜಿಸಿ ಸಂತೋಷ ಪಡಿಸಬೇಕು. ಅಂದು ಹಾಗೆ ಪೂಜಿಸಲ್ಪಟ್ಟ ಬ್ರಹ್ಮ ಚಾರಿಗಳು ಏಕಭುಕ್ತ ಮಾಡಬೇಕು. ಆನಂತರ ಪೂಜೆ ಮುಗಿದ ಪಾರಣೆಯಾದಮೇಲೆ ಅಂದೇ ಏಕಭುಕ್ತವಾಗಿ ಪ್ರಸಾದ ಸ್ವೀಕರಿಸಬೇಕು. (ಸಾಮಾನ್ಯವಾಗಿ ಇದು ಎಲ್ಲಾ ಕಲ್ಪಗಳಲ್ಲಿಯು ಸಾಮಾನ್ಯವಾಗಿರುತ್ತದೆ).
ಶಿವನ ಸಂಕಲ್ಪದಿಂದಲೇ ಸ್ಕಂದನು ಮಹಾಸರ್ಪತಾಳಿ ಕುಕ್ಕೆಯಲ್ಲಿ ಯೋಗಾರೂಢನಾದನೆಂದು ಪ್ರತೀತಿ. ಸ್ಕಂದಮೂರ್ತಿ, ಶೇಷಸರ್ಪ ಮೂರ್ತಿ ಮತ್ತು ವಾಸುಕೀ ಸರ್ಪಮೂರ್ತಿ ಈ ಮೂರು ದೇವರನ್ನು ದೇವಗರ್ಭದಲ್ಲಿ ನೋಡುತ್ತೇವೆ. ನಾದಕ್ಕೆ ಪರಾದೇವತೆಯಾದ ಸುಬ್ರಹ್ಮಣ್ಯ ಸ್ವಾಮಿಯದೇ ಅಗ್ರ ಸ್ಥಾನ ಎಂಬ ತತ್ವ ಹೊರಹೊಮ್ಮುತ್ತದೆ. ಘಂಟೆಯನ್ನು ಪ್ರತಿಷ್ಠೆ ಮಾಡುವಾಗ ಅದರ ನಾದದಲ್ಲಿ ಈ ಸ್ವಾಮಿಯನ್ನು ಆವಾಹನೆ ಮಾಡಬೇಕೆಂದು ವೈಖಾನ ಸಾಗಮ ಹೇಳುತ್ತದೆ.
ದೇವತೆಗಳನ್ನು ನಮ್ಮ ದೇವರು ನಿಮ್ಮ ದೇವರೆಂದು ವಿಂಗಡಿಸಬಾರದು. ಎಲ್ಲಾ ದೇವರೂ ಎಲ್ಲರದ್ದು. ನಾವು ಪೂಜೆ ಮಾಡುವುದು ಆಧ್ಯಾತ್ಮಿಕ ಲಾಭಕ್ಕಾಗಿಯೇ ಹೊರತು ಬೌದ್ಧಿಕವಾದ ಕುತೂಹಲ ಪ್ರವೃತ್ತಿಯ ತುರಿಕೆಯನ್ನು ತೀರಿಸಿಕೊಳ್ಳಲು ಅಲ್ಲ. ನಮ್ಮ ನಮ್ಮಲ್ಲಿಯೇ ಮಡಿವಂತಿಕೆ ಸಲ್ಲದು.
"ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹೀ ತನ್ನಃಷಣ್ಮುಖಃ ಪ್ರಚೋದಯಾತ್" ಎಲ್ಲರಿಗೂ ಶುಭವಾಗಲಿ
(ಒಂದಷ್ಟು ಕೇಳಿದ್ದು....ಒಂದಷ್ಟು ಓದಿದ್ದ ...ಮಾಹಿತಿಗಳನ್ನು ಹಂಚಿಕೊಂಡಿರುವೆ)
-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
ಚಿತ್ರ ಕೃಪೆ: ಇಂಟರ್ನೆಟ್ ತಾಣ