ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌?

ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌?

ಸಪ್ತಪದಿ, ಪಾಣಿಗ್ರಹಣದ ಜೊತೆಗೆ ಮದುವೆಯ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣವೂ ಒಂದು. ಈ ಕರಿಮಣಿ ಸರ, ತಾಳಿ ಸರ ಅಥವಾ ಮಾಂಗಲ್ಯ ಸರವನ್ನು ವಿವಾಹೊತ್ಸವ ಸಮಯದಲ್ಲಿ ವರನು ವಧುವಿನ‌ ಕೊರಳಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದೇ ಇದೆ. ಈ ಮಾಂಗಲ್ಯ ಸರದಲ್ಲಿ ಹಲವು ವಿಧಗಳೂ ಇವೆ. ಪ್ರತಿಯೊಬ್ಬರ ಮಾಂಗಲ್ಯ ಸರವು ಒಂದೇ ರೀತಿ ಇರುವುದಿಲ್ಲ. ಹಾಗೆ ಒಂದೇ ರೀತಿ ಇರಬೇಕೆಂದೇನೂ ಶಾಸ್ತ್ರವಿಲ್ಲ. ಆದರೆ ಈ ಮಾಂಗಲ್ಯ ಸರವನ್ನು‌ ಹೇಗೆ ಧರಿಸಬೇಕು ಎಂಬುದೇ ಜಿಜ್ಞಾಸೆಯ ವಿಷಯ. 

ಕೆಲವರು ಸೆರಗಿನ ಹೊರಗೆ ಕಾಣಿಸುವಂತೆಯೂ, ಇನ್ನು ಕೆಲವರು ಸೆರಗಿನಿಂದ ಮುಚ್ಚಿರುವಂತೆಯೂ  ಹಾಗೂ ಇನ್ನೂ ಕೆಲವರು ಕುಪ್ಪಸದೊಳಗೆ ಅವಿತಿಟ್ಟಿರುವಂತೆಯೂ ಧರಿಸುತ್ತಾರೆ. ಸೀರೆ ಧರಿಸದವರದ್ದು ಬೇರೆಯೇ ರೀತಿ. ಇದು ಅವರವರ ಅನುಕೂಲಕ್ಕೆ  ಹಾಗೂ ಭಾವನೆಗಳಿಗೆ ತಕ್ಕಂತೆ ಅವರವರು ಧರಿಸುವ ರೀತಿ. ಈ ಬಗ್ಗೆ ನನ್ನದೇನೂ ಆಕ್ಷೇಪವಿಲ್ಲ. ಅದು ಅವರವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಇರಲಿ.

ನಾವೆಲ್ಲಾ ಸತ್ಯಹರೀಶ್ಚಂದ್ರನ ಕಥೆಯನ್ನು ಕೇಳಿದ್ದೇವೆ. ಲೋಹಿತಾಶ್ವನ ಸಾವು ಸಂಭವಿಸಿದ ನಂತರ ಚಂದ್ರಮತಿ ನಡುರಾತ್ರಿಯಲ್ಲಿ ಮಗನ ಶವವನ್ನು‌ ಹೊತ್ತುಕೊಂಡು ಹೋಗಿ ಸ್ಮಶಾನ ಸೇರಿ ಅಲ್ಲಿ ಮಗನ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆ ಕೂಡಿ ಚಿತೆಯ ತಯಾರಿ ನಡೆಸಿದಾಗ ಆ ಸ್ಮಶಾನದ ಕಾವಲುಗಾರನಾಗಿದ್ದ ಸತ್ಯ ಹರೀಶ್ಚಂದ್ರ ನಿದ್ರೆಯಿಂದ ಎಚ್ಚರಗೊಂಡು ಆಕೆಯನ್ನು ತಡೆದು, ಚಿತೆಯ ಮೇಲಿದ್ದ ಬಾಲಕನ ಶವವನ್ನೆಳೆದು ಹೆಣ ಸುಡುವ ನೆಲದ ತೆರಿಗೆ ಕೇಳುತ್ತಾನೆ.‌ ಆಗ ಚಂದ್ರಮತಿಯು ತಾನು ಬಡ ದಾಸಿಯೆಂತಲೂ, ತನ್ನಲ್ಲಿ ತೆರಿಗೆ ಪಾವತಿಸಲು ಹಣವಿಲ್ಲವೆಂತಲೂ ತನ್ನ ಅಸಹಾಯಕತೆಯ ಅಳಲನ್ನು ತೋಡಿಕೊಳ್ಳುತ್ತಾಳೆ. ಆಗ  ಸತ್ಯಹರೀಶ್ಚಂದ್ರನು "ನಿನ್ನ ಕೊರಳಿನಲ್ಲಿರುವ ಚಿನ್ನದ ತಾಳಿಯನ್ನು ಅಡವಿಟ್ಟು ಹಣ ತಂದು ತೆರಿಗೆ ಪಾವತಿಸು!" ಎಂದು ತೀರಾ ಕಠೋರವಾದ ಧ್ವನಿಯಲ್ಲಿ ನಿಷ್ಠೂರವಾಗಿಯೇ ನುಡಿಯುತ್ತಾನೆ.

ಆಗ ಚಂದ್ರಮತಿಯು ಪರಮಾಶ್ಚರ್ಯ ಚಕಿತಳಾಗಿ "ಶಿವ ಶಿವಾ, ನನ್ನ ಪತಿದೇವರು ಜೀವಂತವಿರುವುದಾದರೆ ನನ್ನೀ ಮಾಂಗಲ್ಯವು ಈ ಸಾಮಾನ್ಯ ಶ್ವಪಚನಿಗೆ ಕಾಣಿಸುವುದೇ?! ಸತ್ಯ ಹರೀಶ್ಚಂದ್ರ ಮಹಾರಾಜರು ಜೀವಂತವಿರಲು ಸಾಧ್ಯವೇ ಇಲ್ಲ! ನನ್ನ‌ ಮುತ್ತೈದೆತನವು ಮುಗಿದಿದೆಯೆಂಬುದರಲ್ಲಿ‌ಸಂಶಯವೇ ಇಲ್ಲ!"  ಎಂದು ಗೋಳಿಡುತ್ತಾ ಒಂದು‌ ಕ್ಷಣ ಮೂರ್ಚೆ‌ ಹೋಗುತ್ತಾಳೆ. 

ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌ ಯಾರಿಗೆ ಕಾಣಿಸುವಂತಿರಬೇಕು, ಯಾರಿಗೆ ಕಾಣಿಸದಂತಿರಬೇಕು ಎಂಬ ಬಗ್ಗೆ ಸ್ಪಷ್ಟ ನಿದರ್ಶನ ಈ ಸುಂದರ ಕಥೆ.‌ ಇಲ್ಲಿ ಈ ಕಥೆಯ ಹಿಂದಿರುವ ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯದ ವಿಡಂಬನೆಯ ಅಗತ್ಯ ಇಲ್ಲ ಅಂತ ಕಥೆಯನ್ನು ಇಲ್ಲಿಗೇ ಮೊಟಕುಗೊಳಿಸುತ್ತಿದ್ದೇನೆ. ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!

-ಮೌನಮುಖಿ (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)