ಸುಮ್ಮನಿರಿ ಸಾಕು

ಸುಮ್ಮನಿರಿ ಸಾಕು

ಕವನ

ಸುಮ್ಮನಿರಿ ಸಾಕು
ನನಗೆಲ್ಲವೂ ಅರ್ಥವಾಗಿದೆ
ಲೋಕ ಸುತ್ತುತ್ತಿದೆ ನಿಜ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವನ ಹರಿದ ಬಟ್ಟೆ
ಹೊಲೆಯುವ ತನಕ
ಅವಳ ಬೇಡು ಕೈಗಳು
ಸ್ವಚ್ಛವಾಗುವ ತನಕ
ಅವರ ಮಾಸಲು ನಗೆ
ತಿಳಿಯಾಗುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವರ ಮಹಾಸಭೆಗಳಲ್ಲಿ
ಸತ್ಯಕಾಣುವ ತನಕ
ಅವರ ನಡೆಯಲ್ಲಿ
ವಿಶ್ವಾಸಮೂಡುವ ತನಕ
ಅವರ ಆಶ್ವಾಸನೆಗಳಲ್ಲಿ
ನಿಜ ಗೋಚರಿಸುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಎಲ್ಲೆಲ್ಲೂ ಸಮಾನತೆ
ನೆಲೆಸಿನಿಲ್ಲುವ ತನಕ
ಸಜ್ಜನರ ಹಿತನುಡಿಗಳು
ಅರಳಿನಗುವ ತನಕ
ಜಾತಿ ಮತಗಳು
ಮರೆತುಹೋಗುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವರ ಯುದ್ಧಗಳು
ಕೊನೆಯಾಗುವ ತನಕ
ಅವರ ಯೋಜನೆಗಳು
ಅಳಸಿಹೋಗುವ ತನಕ
ಈ ಜಗತ್ತಿನ್ನೆಲ್ಲೆಡೆ
ಶಾಂತಿ ನೆಲಸುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ ಅಲ್ಲವೆ?

Comments