ಸುಮ್ಮನೇ ಯಾರೂ ದೊಡ್ಡ ಮನುಷ್ಯರಾಗೋಲ್ಲ !

ಸುಮ್ಮನೇ ಯಾರೂ ದೊಡ್ಡ ಮನುಷ್ಯರಾಗೋಲ್ಲ !

ನಾವು ನಮ್ಮ ಜೀವನದಲ್ಲಿ ಬಹಳಷ್ಟು ಮಹನೀಯರ ವಿಚಾರಗಳನ್ನು ಕೇಳಿರುತ್ತೇವೆ. ನೋಡಿರುತ್ತೇವೆ. ಕೆಲವರ ಜೀವನದಲ್ಲಾದ ಘಟನೆಗಳನ್ನು ಗಮನಿಸುವಾಗ ಇಂಥವರೂ ಇರ್ತಾರಾ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ. ಆ ಮಹನೀಯರ ಸರಳತೆಯಾಗಲೀ, ಪ್ರಾಮಾಣಿಕತೆಯಾಗಲೀ ಇಂದಿನ ಜನಾಂಗಕ್ಕೆ ಒಂದು ಪ್ರೇರಣೆಯೇ ಸರಿ. ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ತಿಳಿಯದವರಿಲ್ಲ. ರಾಷ್ಟ್ರಪತಿ ಎಂಬ ಪದಕ್ಕೆ ಗೌರವ ತಂದುಕೊಟ್ಟ ಅಪರೂಪದ ರಾಜಕಿಯೇತರ ವ್ಯಕ್ತಿ ಇವರು. ತಮ್ಮ ಅಧಿಕಾರಾವಧಿ ಮುಗಿದ ಬಳಿಕವೂ ಸುದ್ದಿಯಲ್ಲಿ ಇರುತ್ತಿದ್ದವರು. ಮಕ್ಕಳನ್ನು ತಮ್ಮ ಪ್ರೇರಣಾತ್ಮಕ ಭಾಷಣಗಳಿಂದ ಹುರಿದುಂಬಿಸುತ್ತಿದ್ದರು. ಇವರಂಥ ವ್ಯಕ್ತಿ ಅಪರೂಪದಲ್ಲಿ ಅಪರೂಪ. 

ಅಬ್ದುಲ್ ಕಲಾಂ ಅವರೊಂದಿಗೆ ಸುಮಾರು ಇಪ್ಪತ್ತೆರಡು ವರ್ಷಗಳ (೧೯೯೩-೨೦೧೫) ಕಾಲ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಆರ್ ಕೆ ಪ್ರಸಾದ್ ಅವರು “Kalam : The Untold Story” ಎನ್ನುವ ಚಂದನೆಯ ಪುಸ್ತಕವನ್ನು ಹೊರತಂದಿದ್ದಾರೆ. ಅದರಲ್ಲಿ ಕಲಾಂ ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಅದರಲ್ಲಿ ಪ್ರಸಾದ್ ಅವರು ಬರೆದ ಒಂದು ಪ್ರಸಂಗ ಹೀಗಿದೆ.

ಡಾ. ಕಲಾಂ ರಾಷ್ಟ್ರಪತಿಯಾಗಿದ್ದಷ್ಟು ಕಾಲ, ಪ್ರಸಾದ್ ಅವರು ರಾಷ್ಟ್ರಪತಿ ಭವನದ ಎಸ್ಟೇಟ್ ನಲ್ಲಿ ವಾಸವಾಗಿದ್ದರು. ಡಾ. ಕಲಾಂ ಆ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ, ರಾಜಾಜಿ ಮಾರ್ಗದಲ್ಲಿರುವ ನಿವಾಸದಲ್ಲಿ ವಾಸಿಸಲಾರಂಭಿಸಿದರು. ಪ್ರಸಾದ್ ಅವರಿಗೆ ಮನೆ ಇಲ್ಲದಂತಾಯಿತು. ರಾಷ್ಟ್ರಪತಿ ಭವನದ ಎಸ್ಟೇಟ್ ಬಿಟ್ಟುಕೊಡುವಂತೆ ನೋಟೀಸ್ ಬಂತು. ಡಾ. ಕಲಾಂ ನಿವಾಸದ ಸನಿಹದಲ್ಲಿಯೇ ಮನೆ ಹುಡುಕಿಕೊಳ್ಳುವುದು ಪ್ರಸಾದ್ ಗೆ ಅನಿವಾರ್ಯವಾಗಿತ್ತು. ಮಾಜಿ ರಾಷ್ಟ್ರಪತಿಗಳು ತಡ ರಾತ್ರಿಯವರೆಗೂ ಕಾರ್ಯನಿರತರಾಗಿರುತ್ತಿದ್ದರು. ಆದರೆ ನಗರಾಭಿವೃದ್ಧಿ ಇಲಾಖೆಗೆ ಎಷ್ಟೇ ಪತ್ರ ಬರೆದರೂ, ಪ್ರಸಾದ್ ಅವರ ಕೆಲಸ ಆಗಲಿಲ್ಲ. ಡಾ. ಕಲಾಂ ನಿವಾಸದ ಸನಿಹದಲ್ಲೇ ಒಂದು ಮನೆ ಖಾಲಿ ಇತ್ತು. ಆದರೆ ನಗರಾಭಿವೃದ್ಧಿ ಇಲಾಖೆಯವರು ಆ ಮನೆಯನ್ನು ಯಾರಿಗೂ ನೀಡದೇ ಖಾಲಿ ಇಟ್ಟಿದ್ದರು. ಸಾಮಾನ್ಯವಾಗಿ ವೈಯಕ್ತಿಕ ಕೆಲಸಗಳಿಗೆ ಪ್ರಸಾದ್ ಅವರು ಡಾ ಕಲಾಂ ಸಹಾಯವನ್ನು ಅಪೇಕ್ಷಿಸುತ್ತಿರಲಿಲ್ಲ. ಆದರೆ ಈ ವಿಷಯದಲ್ಲಿ ಮಾತ್ರ ಅವರು ಡಾ. ಕಲಾಂ ನೆರವು ಪಡೆಯುವುದು ಅನಿವಾರ್ಯವಾಯಿತು. ಕಳೆದ ಎರಡು ತಿಂಗಳಿನಿಂದ ಪ್ರಯತ್ನಿಸುತ್ತಿದ್ದರೂ ತಮನೆ ಮನೆ ಸಿಗದಿರುವ ವಿಷಯವನ್ನು ಪ್ರಸ್ತಾಪಿಸಿದಾಗ, ಡಾ. ಕಲಾಂ ತಕ್ಷಣ ಸಂಬಂಧಪಟ್ಟ ಇಲಾಖೆಯ ಅಂದಿನ ಸಚಿವರಾಗಿದ್ದ ಜೈಪಾಲ್ ರೆಡ್ಡಿಯವರ ಜೊತೆ ಮಾತನಾಡುವುದಾಗಿ ಹೇಳಿದರು.

ರಾಷ್ಟ್ರಪತಿ ಸ್ಥಾನದಂತಹ ಉನ್ನತ ಹುದ್ದೆಯಲ್ಲಿದ್ದವರು ಬಯಸಿದರೆ, ಜೈಪಾಲ್ ರೆಡ್ಡಿಯವರನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಳ್ಳಬಹುದಿತ್ತು. ಆದರೆ ಡಾ. ಕಲಾಂ ಅದನ್ನು ಬಯಸುತ್ತಿರಲಿಲ್ಲ. ಸಚಿವರಾದವರನ್ನು ಇಂಥ ಸಣ್ಣ-ಪುಟ್ಟ ಮತ್ತು ಖಾಸಗಿ ಕೆಲಸಗಳಿಗೆ ಕರೆಯಿಸಿಕೊಳ್ಳಬಾರದು ಎಂದು ಹೇಳುತ್ತಿದ್ದರು. ಫೋನ್ ಎತ್ತಿಕೊಂಡವರೇ “ಜೈಪಾಲ್ ರೆಡ್ಡಿ ಸರ್, ನಾನು ಕಲಾಂ ಮಾತಾಡ್ತಾ ಇರೋದು' ಎಂದರು. ಡಾ. ಕಲಾಂ ಯಾರನ್ನೂ ‘ಸರ್' ಎಂದು ಹೇಳದೇ ಸಂಬೋಧಿಸುತ್ತಿರಲಿಲ್ಲ. ಅದೊಂದು ಮಾತಿನ ಧಾಟಿಗೆ ಅನೇಕರು ಕರಗಿಹೋಗುತ್ತಿದ್ದರು. 

‘ನನ್ನ ಆಪ್ತ ಸಹಾಯಕನಿಗೆ ಮನೆ ಸಿಕ್ಕಿಲ್ಲ, ನನ್ನ ನಿವಾಸದ ಸನಿಹ ಒಂದು ಮನೆ ಖಾಲಿ ಇದೆಯಂತೆ. ಅದನ್ನು ಅವರಿಗೆ ನೀಡಬಹುದೇ?’ ಎಂದು ಕೇಳಿದರು. ತಕ್ಷಣವೇ ಜೈಪಾಲ್ ರೆಡ್ಡಿ ‘ಆದಷ್ಟು ಶೀಘ್ರ ಆ ಕೆಲಸವನ್ನು ಮಾಡುತ್ತೇನೆ' ಎಂದು ಹೇಳಿದರು. ಈ ಸಂದರ್ಭವನ್ನು ಬಳಸಿಕೊಂಡ ರೆಡ್ಡಿಯವರು ‘ಹೈದರಾಬಾದ್ ಸನಿಹದಲ್ಲಿರುವ ನಮ್ಮ ಸ್ಕೂಲಿಗೆ ಬಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತಾಡಬೇಕು' ಎಂದು ಭಿನ್ನವಿಸಿಕೊಂಡರು. 

‘ನೋಡು, ನಿನ್ನ ಕೆಲಸಕ್ಕಾಗಿ ರೆಡ್ಡಿಯವರು ನನಗೆ ಒಂದು ಕೆಲಸ ಹೇಳಿದರು.’ ಎಂದು ಡಾ.ಕಲಾಂ ತಮಾಷೆ ಮಾಡಿದರಂತೆ. ಡಾ. ಕಲಾಂ ಫೋನ್ ಇಟ್ಟ ಹತ್ತು ನಿಮಿಷಗಳಲ್ಲಿ ರೆಡ್ಡಿಯವರ ಆಫೀಸಿನಿಂದ, ಎಲ್ಲಾ ಕಾಗದ ಪತ್ರಗಳನ್ನು ನೀಡುವಂತೆ ಫೋನ್ ಬಂತು. ಡಾ. ಕಲಾಂ ಬೆಳಿಗ್ಗೆ ಹತ್ತೂವರೆ ಹೊತ್ತಿಗೆ ಫೋನ್ ಮಾಡಿದ್ದರು. ಅದೇ ದಿನ ಸಾಯಂಕಾಲ ನಾಲ್ಕು ಗಂಟೆ ಹೊತ್ತಿಗೆ ಪ್ರಸಾದ್ ಕೈಯಲ್ಲಿ ಮನೆ ಹಂಚಿಕೆ ಪತ್ರವಿತ್ತು. ಎರಡು ದಿನಗಳಲ್ಲಿ ಸುಣ್ಣ-ಬಣ್ಣವಾಗಿ ವಾಸಯೋಗ್ಯ ಮನೆಯಾಗಿ ಬದಲಾಗಿತ್ತು. ಅದಾಗಿ ಆರು ದಿನಗಳಲ್ಲಿ ಪ್ರಸಾದ್ ಹೊಸ ಮನೆಯಲ್ಲಿ ಹಾಲು ಉಕ್ಕಿಸಿದರು. ತಕ್ಷಣ ಜೈಪಾಲ್ ರೆಡ್ಡಿಯವರಿಗೆ ಧನ್ಯವಾದ ಹೇಳಲು ಡಾ, ಕಲಾಂ ಮರೆಯಲಿಲ್ಲ. ಅದಕ್ಕೇ ಹೇಳುವುದು ದೊಡ್ದ ಮನುಷ್ಯರು ಸುಮ್ಮನೇ ದೊಡ್ಡವರಾಗುವುದಿಲ್ಲ ! 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ