ಸುರಕ್ಷಾ ಕ್ರಮಗಳು ಅವಶ್ಯ

ಸುರಕ್ಷಾ ಕ್ರಮಗಳು ಅವಶ್ಯ

ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, ನೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿರುವುದು ನಿಜಕ್ಕೂ ಶೋಚನೀಯ. ಅಪಘಾತಗಳನ್ನು ತಡೆಯಲು ಅರಿವು, ಜಾಗೃತಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿರುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆಯೇನೋ ಹೌದು. ಆದರೆ, ಇತ್ತೀಚಿನ ದಿನಗಳ ಸ್ಥಿತಿಯನ್ನು, ಅಪಘಾತಗಳು ಸೃಷ್ಟಿಸಿರುವ ಜೀವಹಾನಿಯನ್ನು ನೋಡಿದರೆ ಆ ಬಗ್ಗೆ ಇನ್ನಷ್ಟು ಕ್ರಮಗಳು ಕೈಗೊಳ್ಳುವುದು ಅವಶ್ಯಕವಾಗಿದ್ದು, ಅಮೂಲ್ಯವಾದ ಜೀವಗಳನ್ನು ಉಳಿಸುವುದು ಮೊದಲ ಆದ್ಯತೆಯಾಗಬೇಕಿದೆ. ಕರ್ನಾಟಕದಲ್ಲಿ ಕಳೆದ ವರ್ಷ (೨೦೨೩) ಸರಾಸರಿ ನಿತ್ಯ ೩೨ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ೩೦ ಮಂದಿ ಪ್ರಾಣ ಕಳೆದುಕೊಂಡರೆ, ೯೬ ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ ೨-೩ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಕನಿಷ್ಟ ಇಬ್ಬರು ಅಥವಾ ಮೂವರು ಸಾವನ್ನಪ್ಪುತ್ತಿದ್ದಾರೆ ಎಂದು ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್ ಸಿ ಆರ್ ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ೨೦೨೩ನೇ ಸಾಲಿನಲ್ಲಿ ೧೦,೮೩೦ ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು ೧೧,೪೮೯ ಮಂದಿ ಪ್ರಾಣ ತ್ಯಜಿಸಿದ್ದಾರೆ.

ಮೂರು ವರ್ಷಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ೫ ಅಪಘಾತ ಸಂಭವಿಸಿ ೧೦ ಮಂದಿ ಸಾವನ್ನಪ್ಪಿದರೆ ಅಂತಹ ಸ್ಥಳವನ್ನು ‘ಬ್ಲ್ಯಾಕ್ ಸ್ಪಾಟ್' ಎಂದು ಗುರುತಿಸಿ ಆ ಸ್ಥಳದಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ. ಆದರೆ ೨೦೧೬-೧೮ರಲ್ಲಿ ಗುರುತಿಸಿರುವ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಇಂಥ ನಿರ್ಲಕ್ಷ್ಯವೇ ಜನರ ಪ್ರಾಣವನ್ನು ಬಲಿ ಪಡೆಯುತ್ತಿದೆ ಎಂಬುದನ್ನು ಆಡಳಿತದಲ್ಲಿ ಇರುವವರು ಮರೆಯಬಾರದು. ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಸರ್ಕಾರ ಅಗತ್ಯ ಸುರಕ್ಷಾ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳುವ ಅವಶ್ಯಕತೆ ಇದೆ.

ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜಂಟಿ ಹೊಣೆಗಾರಿಕೆ ಇದೆ. ರಸ್ತೆಗಳ ದುಸ್ಥಿತಿ, ವಾಹನ ಸವಾರರ ಅಜಾಗರೂಕ ಚಾಲನೆ, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು, ವಿಶ್ರಾಂತಿ ಇಲ್ಲದೆ ವಾಹನ ಚಲಾಯಿಸುವುದು ಮತ್ತು ಹವಾಮಾನ ವೈಪರೀತ್ಯದಂಥ ಕಾರಣಗಳು ಅಪಘಾತದ ಪ್ರಮಾಣ ಹೆಚ್ಚಿಸುತ್ತವೆ. ಜನರು ಕೂಡ ಸಂಚಾರ ನಿಯಮಗಳ ಪಾಲನೆಯಲ್ಲಿ ಅಸಡ್ಡೆ ತೋರಬಾರದು. ಅಡ್ಡಾದಿಡ್ಡಿ ವಾಹನ ಚಾಲಕರ ವಿರುದ್ಧ ಸಂಚಾರ ಪೋಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ, ರಸ್ತೆಗಳ ಗುಣಮಟ್ಟ ಹೆಚ್ಚಬೇಕು. ಗುಂಡಿಗಳು ಸೃಷ್ಟಿಸಿರುವ ಗಂಡಾಂತರಗಳಿಂದ ಮಾರಣಾಂತಿಕ ಅಪಘಾತಗಳು ಸಂಭವಿಸಿದ ಹಲವು ನಿದರ್ಶನಗಳಿಗೆ ಬೆಂಗಳೂರು ಸಾಕ್ಷಿಯಾಗಿದೆ.

ಸುರಕ್ಷಿತ ಚಾಲನೆಯ ಶಿಸ್ತನ್ನು ಚಾಲಕರು ಅಳವಡಿಸಿಕೊಳ್ಳಬೇಕು. ರಸ್ತೆ ಮತ್ತು ವಾಹನಗಳು ಅಭಿವೃದ್ಧಿಯ ವಾಹಕಗಳಾಗಬೇಕೇ ಹೊರತು ಜೀವಹಾನಿಯ ಮಾಧ್ಯಮಗಳಲ್ಲ ಎಂಬ ವಾಸ್ತವವನ್ನು ಸರ್ಕಾರ ಮತ್ತು ಜನಸಾಮಾನ್ಯರು ಮನಗಾಣಬೇಕಿದೆ. ಅಪಘಾತಗಳು ಮತ್ತು ಜೀವಹಾನಿ ತಗ್ಗಬೇಕಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೬-೦೨-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ