ಸುಲಭದಲ್ಲಿ ಸಾಂಬಾರ್

ಸುಲಭದಲ್ಲಿ ಸಾಂಬಾರ್

ಬೇಕಿರುವ ಸಾಮಗ್ರಿ

ಮೆಣಸು (1 ಟೀ ಚಮಚೆ) ಒಣಕೊಬ್ಬರಿ (10-15 ಗ್ರಾಂ) ದಾಲ್ಚಿನ್ನಿ ಚಕ್ಕೆ (ಒಂದೆರಡು ಜಿಗಟು) ಲವಂಗ (ಎರಡು) ಒಣ ಮೆಣಸಿನ ಕಾಯಿ (ಬ್ಯಾಡಗಿ - 4) ಕಡಲೆ ಬೇಳೆ (2 ಟೀ ಚಮಚೆ) ತೊಗರಿ ಬೇಳೆ (ಸಾಧಾರಣ ಗಾತ್ರದ ಕೈನ ಒಂದು ಹಿಡಿ) ಹುಣಿಸೆ ಹಣ್ಣು (ಒಂದು ತೊಳೆ) ಧನಿಯ (3 ಟೀ ಚಮಚೆ) ಕರಿಬೇವು (6-8 ಎಲೆ) ಇಂಗು (2 ಚಿಟಿಕೆ) ಟೊಮ್ಯಾಟೋ (ಸಾಧಾರಣ ಗಾತ್ರದ 1) ಬೆಲ್ಲ (1 ತುಂಡು) ಕಲ್ಲುಪ್ಪು (2 ಟೀ ಚಮಚೆ)

ತಯಾರಿಸುವ ವಿಧಾನ

ಒಣ ಕೊಬ್ಬರಿಯನ್ನು ಕುಟ್ಟಿ ಹದ ಮಾಡಿಕೊಳ್ಳಿ. ನಸುಕಾದ ಬಣಲೆಗೆ ಮೆಣಸು ಹಾಕಿ. ಒಣಮೆಣಸಿನಕಾಯಿ ಎಣಿಸಿ ಹಾಕಿ ಕೊಬ್ಬರಿ ಹಳಕು ಹಾಕಿ ಮೊಗಚು ಕೈಯಾಡಿಸಿ ಆತುರವಿಲ್ಲದೆ ಕಡಲೆಬೇಳೆ ಬೆರಸಿ. ನಿಮಿಷ ಹುರಿದು ಚೆಕ್ಕೆ-ಲವಂಗ ಹಾಕಿ. ಕರಿಬೇವು ಹಾಕಿ ಒಂದೆರಡುಬಾರಿ ಆಡಿಸಿ. ತೊಗರಿಬೇಳೆ ಬೆರಸಿ. ಹುಣಿಸೆ ಹಣ್ಣು ಚೂರು-ಚೂರು ಮಾಡಿ ಹಾಕಿ ಒಂದು ನಿಮಿಷ ಹುರಿಯಿರಿ (ಎಲ್ಲಾ ಸಣ್ಣ ಉರಿಯಲ್ಲಿ) ಧನಿಯ ಹಾಕಿ, ಬೇಳೆ ಕೆಂಡ ಸಂಪಿಗೆ ಬಣ್ಣ ಬರುವವರೆಗೆ (ಎರಡು ನಿಮಿಷ) ಹುರಿಯಿರಿ. ಉರಿ ಆರಿಸಿ ಇಂಗು ಹಾಕಿ 30 ಸೆಕೆಂಡ್ ಕಾಲ ಆಡಿಸುತ್ತಲೇ ಇರಿ.
ಅದು ತಣ್ಣಗಾಗುವ ಹೊತ್ತಿನಲ್ಲಿ, ಟೊಮ್ಯಾಟೋ ಕೊಚ್ಚಿ, ನಿಮ್ಮಿಷ್ಟ ತರಕಾರಿ ಹೆಚ್ಚಿಕೊಳ್ಳಿ. ಸಾಂಬಾರ್ ಪಾತ್ರೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ, ಸಾಸಿವೆ-ಇಂಗು ಒಗ್ಗರಣೆ ಮಾಡಿ. ಅದು ಸೀಯುವ ಮುನ್ನ ಟೊಮ್ಯಾಟೋ ಮತ್ತು ಬೆಲ್ಲ ಹಾಕಿ ಬುಡ ಹಿಡಿದಂತೆ ಆಡಿಸಿ ಹೆಚ್ಚಿಟ್ಟ ತರಕಾರಿನ್ನೂ ಸೇರಿಸಿ ಚೆನ್ನಾಗಿ ಆಡಿಸಿ 1 1/2 ಲೀಟರ್ ನೀರು ಹಾಕಿ ಮುಚ್ಚಿಡಿ. ಉರಿ ದೊಡ್ಡದಿರಲಿ. 10 ನಿಮಿಷ, ತರಕಾರಿ ಮಗ್ಗುವಷ್ಟರಲ್ಲಿ ಹುರಿದಿಟ್ಟ ಸಾಮಗ್ರಿಯನ್ನು ಸಾಂಬಾರ್ ಪುಡಿ ಮಾಡಿಕೊಳ್ಳಿ. ತರಕಾರಿ ಹದಕ್ಕೆ ಬೆಂದ ಕೂಡಲೆ ಉರಿ ಸಣ್ಣ ಮಾಡಿ ಸಾಂಬಾರ್ ಪುಡಿ ಮತ್ತು ಉಪ್ಪು ಹಾಕಿ, 1/2 ಲೀಟರ್ ನೀರು ಬೆರಸಿ ಚೆನ್ನಾಗಿ ಕಲಕಿ. ಐದು ನಿಮಿಷ ಕುದಿಯಲು ಬಿಡಿ. ರುಚಿಕಟ್ಟಾದ 2-2 1/2 ಲೀಟರ್ ಸಾಂಬರ್ (ಹುಳಿ) ಸಿದ್ಧವಾಗುತ್ತದೆ.