ಸುಲಭದ ಸಾಲಕ್ಕಾಗಿ ವಂಚನೆಯ ಬಲೆಗೆ ಬೀಳದಿರಿ

ಸುಲಭದ ಸಾಲಕ್ಕಾಗಿ ವಂಚನೆಯ ಬಲೆಗೆ ಬೀಳದಿರಿ

ಚೀನದ ಸುಲಭ ಸಾಲದ ವಂಚನೆಯ ಜಾಲಕ್ಕೆ ಬೀಳಬೇಡಿ ಎಂದು ಪದೆ ಪದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದರೂ, ಇದು ಕಡಿಮೆಯಾಗದೇ ಇರುವುದು ದುರದೃಷ್ಟಕರ ಸಂಗತಿ. ಇಂದಿಗೂ, ಚೀನ ಲೋನ್ ಆಪ್ ಗಳ ಹಾವಳಿ ಮುಂದುವರಿದಿದ್ದು, ಲಕ್ಷಾಂತರ ಭಾರತೀಯರು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಈ ಬಲೆಯೊಳಗೆ ಸಿಲುಕಿದ ನೂರಾರು ಮಂದಿ ತಮ್ಮ ಖಾಸಗೀತನವನ್ನೂ ಕಳೆದುಕೊಂಡಿದ್ದಾರೆ.

ಸುಲಭವಾಗಿ ಸಾಲ ನೀಡುವ ಆಪ್ ಗಳ ಕುರಿತಂತೆ ಬಲವಾಗಿ ಯೋಚಿಸಬೇಕಾದ ಅನಿವಾರ್ಯ ಇದೆ. ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಮಾತ್ರ ಈ ಬಗ್ಗೆ ಯೋಚಿಸಲಿ ಎಂದು ಬಿಟ್ಟರೆ ಕೆಲಸವಾಗದು. ಈ ವಿಚಾರದಲ್ಲಿ ಜನರೂ ಕೈಜೋಡಿಸಬೇಕಾದ ಅಗತ್ಯ ಇದೆ. ಏಕೆಂದರೆ, ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೆಯೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ ಎಂಬುದನ್ನು ಮರೆಯಬಾರದು. 

ಈ ಆಪ್ ಸಾಲದ ಮೋಡಿ ಹೆಚ್ಚಾಗಿದ್ದು ಕೊರೊನಾ ಸಾಂಕ್ರಮಿಕ ಬಂದು, ಜನರ ಆರ್ಥಿಕತೆಯನ್ನು ಹಾಳುಗೆಡವಿದ ಮೇಲೆಯೇ. ಅದಕ್ಕೂ ಮುನ್ನ ಇದ್ದವಾದರೂ, ಕೆಲವೇ ಕೆಲವು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇವುಗಳಿಗೆ ಆರ್ ಬಿ ಐ ನ ಸಂಕೋಲೆಯೂ ಇದ್ದುದರಿಂದ ಸುಲಭವಾಗಿ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಿರಲಿಲ್ಲ.

ಆದರೆ, ಕೊರೋನೋತ್ತರದಲ್ಲಿ ಜನರು ಕೈಯಲ್ಲಿ ಹಣ ಕಡಿಮೆಯಾಗಿ ಅವರ ಆರ್ಥಿಕ ಸ್ಥಿತಿ ಏರುಪೇರಾದ ಮೇಲೆ ಹಣಕ್ಕಾಗಿ ಬಹಳಷ್ಟು ಮಂದಿ ಇಂಥ ಸುಲಭ ಸಾಲದ ಆಪ್ ಗಳ ಮೊರೆ ಹೋಗಿದ್ದಾರೆ. ಒಮ್ಮೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ ಗಳಿಗೆ ಹೋಗಿ ಸರ್ಚ್ ಮಾಡಿದರೆ, ಇಂಥ ಸಾವಿರಾರು ಆಪ್ ಗಳು ಕಾಣ ಸಿಗುತ್ತವೆ. ಇವುಗಳಲ್ಲಿ ನಿಜವಾಗಿಯೂ, ಯಾವುದೇ ಮೋಸವಿಲ್ಲದೇ ಸಾಲ ನೀಡುವ ಆಪ್ ಯಾವುದು? ಚೀನದಿಂದ ಹಣ ಪೂರೈಕೆಯಾಗಿ ಕಾರ್ಯನಿರ್ವಹಿಸುವ ಆಪ್ ಗಳು ಯಾವುವು ಎಂಬುವುದನ್ನು ತಿಳಿಯುವುದೇ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಆರ್ ಬಿ ಐ ಒಟ್ಟಿಗೆ ಸೇರಿಕೊಂಡು ಇಂಥ ಆಪ್ ಗಳ ನಿಯಂತ್ರಣಕ್ಕಾಗಿ ತುರ್ತು ಗಮನ ನೀಡಬೇಕಾದದ್ದು ಅವಶ್ಯಕವಾಗಿದೆ.

ರವಿವಾರವೂ ಸುಮಾರು ೫೦೦ ಕೋಟಿ ರೂ.ಗಳಷ್ಟು ಅವ್ಯವಹಾರದ ಹಗರಣ ಬೆಳಕಿಗೆ ಬಂದಿದೆ. ಪತ್ರಿಕಾ ವರದಿಗಳ ಪ್ರಕಾರ, ಸದ್ಯ ದೇಶದಲ್ಲಿ ಶೇ ೫೪ರಷ್ಟು ಸಾಲ ನೀಡುವ ಆಪ್ ಗಳು ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ, ಭಾರತದಲ್ಲಿ ಮೊಬೈಲ್ ಬ್ಯಾಂಕಿಂಗ್ ಆರಂಭವಾದ ಮೇಲೆ ಇಂಥ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾಹಿತಿಯೂ ಇದೆ. 

ಮೊದಲೇ ಹೇಳಿದ ಹಾಗೆ, ಅಕ್ರಮ ಆಪ್ ಗಳ ಬೆನ್ನುಮೂಳೆ ಮುರಿಯಲು ಸಾಧ್ಯವಿರುವುದು ಜನರಿಗೇ. ಸುಲಭವಾಗಿ ಥಟ್ ಅಂತ ಸಾಲ ಕೊಡುತ್ತೇವೆ ಎಂದು ಹೇಳುವವರನ್ನು ನಂಬಲು ಹೋಗಬಾರದು. ಕಡಿಮೆ ದಾಖಲೆಗಳನ್ನು ಪಡೆದುಕೊಂಡು ಸಾಲ ಕೊಡುತ್ತಾರೆ ಎಂದಾದರೆ, ಅವರು ವಸೂಲಿಗೆ ಅಡ್ಡ ಮಾರ್ಗ ಹಿಡಿದೇ ಹಿಡಿಯುತ್ತಾರೆ. ಇಂಥವರ ಕುರಿತಂತೆ ಎಚ್ಚರದಿಂದ ಇರಬೇಕು. ಸಾಧ್ಯವಾದರೆ, ಆರ್ ಬಿ ಐ ನ ಕೆಳಗೆ ಬರುವಂಥ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ನೋಡುವುದು ಸೂಕ್ತ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೨-೦೮-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ