ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ…!
ಸುಳ್ಳು ಮತ್ತು ಸತ್ಯದ ನಡುವಿನ ತಾಕಲಾಟ. ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ ಇದೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವಿಷಯಗಳಲ್ಲಿ ತಮ್ಮ ಅನುಕೂಲಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಸುಳ್ಳುಗಳನ್ನು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ.
ಸುಳ್ಳು ಅತ್ಯಂತ ಪರಿಣಾಮಕಾರಿ ಮತ್ತು ಬಲಿಷ್ಠ ಎಂದು ವ್ಯಾವಹಾರಿಕ ಜಗತ್ತಿನಲ್ಲಿ ಈಗಾಗಲೇ ಸಾಬೀತಾಗಿದೆ. ಆದ್ದರಿಂದಲೇ ಸುಳ್ಳು ದಿನೇ ದಿನೇ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಖಾಸಗಿ ಸಂಬಂಧಗಳಿಂದ ಪ್ರಾರಂಭಿಸಿ ದೇಶದ ಅತ್ಯಂತ ಮಹತ್ವದ ಆಡಳಿತದವರೆಗೆ, ಕೂಲಿಯಿಂದ - ಪ್ರಾಣ ಉಳಿಸುವ ವೈದ್ಯರವರೆಗೆ ಸುಳ್ಳೇ ಹೆಚ್ಚು ಕೆಲಸ ಮಾಡುತ್ತದೆ. ಸುಳ್ಳಿನಿಂದ ಪ್ರೀತಿ ಮಾಡಬಹುದು, ಹಣ ಅಧಿಕಾರ ಅಂತಸ್ತು ಗಳಿಸಬಹುದು, ಗೌರವ ಪಡೆಯಬಹುದು, ವಾಸ್ತವ ಬದುಕಿನ ಅನೇಕ ಲಾಭಗಳನ್ನು ಸುಳ್ಳಿನ ಕಲೆಯಿಂದ ಸಂಪಾದಿಸಬಹುದು.
ಇದಕ್ಕೆ ವಿರುದ್ಧವಾಗಿ ನೀವು ಸತ್ಯ ಅಥವಾ ನಿಜವನ್ನು ಪ್ರಯೋಗಿಸಿ ನೋಡಿ. ಸಾಮಾನ್ಯವಾಗಿ ನೀವು ಬದುಕಿನ ಕೆಳಹಂತಕ್ಕೆ ಬಂದು ತಲುಪುವುದು ಗ್ಯಾರಂಟಿ. ಎಲ್ಲಾ ಕೆಲಸಗಳಲ್ಲಿಯೂ ವಿಫಲರಾಗುವ ಸಾಧ್ಯತೆಯೇ ಹೆಚ್ಚು. ಮೇಲ್ನೋಟಕ್ಕೆ ಎಲ್ಲರೂ ಹೇಳುವುದು ನಿಜವೇ ಶಕ್ತಿಶಾಲಿ, ನಿಜವೇ ಅತ್ಯಂತ ಪವಿತ್ರವಾದುದು, ನಿಜ ಶಾಶ್ವತ - ಸುಳ್ಳು ತಾತ್ಕಾಲಿಕವಾದುದು ಎಂದು.. ಆದರೆ ವಾಸ್ತವದಲ್ಲಿ ಅದು ಕೇವಲ ಅಪರೂಪದ ಉದಾಹರಣೆಗಳು ಮಾತ್ರ. ದಿನನಿತ್ಯದ ಜೀವನದಲ್ಲಿ ಸುಳ್ಳೇ ಲಾಭದಾಯಕ. ನಿಜ ಕೆಲವೊಮ್ಮೆ ಮಾತ್ರ ಯಶಸ್ವಿಯಾದರೆ ಸುಳ್ಳು ಯಾವಾಗಲೂ ಯಶಸ್ವಿಯಾಗುತ್ತಿರುತ್ತದೆ.
ನ್ಯಾಯಾಲಯದಲ್ಲಿ, ರಾಜಕಾರಣದಲ್ಲಿ, ಸಮಾಜ ಸೇವೆಯಲ್ಲಿ, ಸಾಹಿತ್ಯದಲ್ಲಿ, ವ್ಯಾಪಾರದಲ್ಲಿ, ಧಾರ್ಮಿಕ ನಂಬಿಕೆಗಳಲ್ಲಿ ಸುಳ್ಳಿನಿಂದ ಸಾಧಿಸಬಹುದಾದುದನ್ನು ಸತ್ಯದಿಂದ ಸಾಧಿಸಲು ಸಾಧ್ಯವಿಲ್ಲ. ಅನೇಕ ಮಹತ್ವದ ಸಮಯದಲ್ಲಿ ಸುಳ್ಳು ಮತ್ತು ಸತ್ಯ ನಮ್ಮ ಎದುರು ಒಂದು ಆಯ್ಕೆಯಾಗಿ ಇರುತ್ತದೆ. ಸುಳ್ಳು ರಮ್ಯವಾಗಿಯೂ ಸತ್ಯ ಕಠೋರವಾಗಿಯೂ ಕಾಣುತ್ತದೆ. ಆಗ ಬಹುತೇಕ ನಮ್ಮ ಆಯ್ಕೆ ತಕ್ಷಣದ ರಮ್ಯ ಸುಳ್ಳೇ ಅಪ್ಯಾಯಮಾನವಾಗಿರುತ್ತದೆ. ನಾವು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ.
ಕೆಲವೊಮ್ಮೆ ದೀರ್ಘ ಕಾಲದಲ್ಲಿ ಸುಳ್ಳು ಸತ್ಯವಾಗಿಯೂ ಸತ್ಯ ಸುಳ್ಳಾಗಿಯೂ ಮಾರ್ಪಡಬಹುದು. ಅದನ್ನು ಅದೃಷ್ಟ ಅಥವಾ ದುರಾದೃಷ್ಟ ಎಂದು ಕರೆಯಲಾಗುತ್ತದೆ. ಮಾಹಿತಿ ಕ್ರಾಂತಿಯ ಈ ಆಧುನಿಕ ಕಾಲದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯನ್ನು ಗಮನಿಸಬಹುದು. ಅದು ಸುಳ್ಳಿಗೆ ಅಕ್ಷರ ಜ್ಞಾನದ, ದೃಶ್ಯದ ಮತ್ತು ನಿರೂಪಣಾ ತಂತ್ರದ ಲೇಪನ ಬಳಸಿ ಅದನ್ನೇ ಸತ್ಯವೆಂದು ಬಿಂಬಿಸುವುದು. ಅದನ್ನು ವ್ಯಾಪಕವಾಗಿ ಬಹಳಷ್ಟು ಸಲ ಪ್ರಚಾರ ಮಾಡುವುದು. ಇದರಿಂದಾಗಿ ವೇಗದ ಬದುಕಿನ ಸಾಮಾನ್ಯ ಜನ ಸುಳ್ಳು ಸತ್ಯದ ನಡುವಿನ ಅಂತರವನ್ನೇ ಗುರುತಿಸಲಾರದಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
ಇದು ಈ ಕ್ಷಣದ ಬಹುದೊಡ್ಡ ಸವಾಲು ನಮ್ಮ ಸಮಾಜ ಎದುರಿಸುತ್ತಿದೆ. ಸತ್ಯ ನುಡಿವವರು ಅತ್ಯಂತ ಕಷ್ಟದಾಯಕ ಬದುಕನ್ನು ಸುಳ್ಳರು ಆರಾಮದಾಯಕ ಬದುಕನ್ನು ಮಾಡುತ್ತಿರುವುದು ಯುವ ಜನಾಂಗ ಗಮನಿಸುತ್ತಿದೆ. ಸುಳ್ಳು ನಮ್ಮನ್ನು, ಸಮಾಜವನ್ನು ನಾಶ ಮಾಡುತ್ತದೆ ಎಂಬುದು ವಾಸ್ತವ. ಹಾಗಾದರೆ ಇದಕ್ಕೆ ಪರಿಹಾರವೇನು?
ಸುಳ್ಳನ್ನು ನಿಜದ ವಿರುದ್ಧ ನಿಲ್ಲಿಸಿ ಎಲ್ಲಾ ವಿಷಯಗಳಲ್ಲೂ, ಎಲ್ಲಾ ಸಂದರ್ಭಗಳಲ್ಲಿಯೂ ನಿಜವೇ ಹೆಚ್ಚು ಶಕ್ತಿಶಾಲಿ ಎಂಬ ವಾತಾವರಣ ನಿರ್ಮಿಸಬೇಕು. ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಷ್ಟು ಜನರನ್ನು ಪ್ರಬುದ್ಧಗೊಳಿಸಬೇಕು. ಸುಳ್ಳು ಅಸಹ್ಯ ಆತ್ಮವಂಚನೆಯ ಸಂಕೇತವೆಂದು, ಸತ್ಯ ನ್ಯಾಯ ನಿಷ್ಠೆ ದೃಢತೆಯ ಸಂಕೇತವೆಂದು ದಿನನಿತ್ಯದ ಚಟುವಟಿಕೆಗಳಲ್ಲಿ ಬಿಂಬಿಸಬೇಕು. ಸುಳ್ಳಿನ ಹಾದಿ ವಿಫಲತೆಯ, ನಾಶದ ಮಾರ್ಗವೆಂದು, ಸತ್ಯವು ಸಾಧನೆಯ, ನಾಗರಿಕತೆಯ, ನೆಮ್ಮದಿಯ ಮಾರ್ಗವೆಂದು ವ್ಯಾವಹಾರಿಕ ಜಗತ್ತಿನಲ್ಲಿ ಫಲಿತಾಂಶಗಳ ಮುಖಾಂತರ ತೋರಿಸಿಕೊಡಬೇಕು.
ಸಿನಿಮಾ ಸಂಗೀತ ಸಾಹಿತ್ಯ ವಿಜ್ಞಾನ ರಾಜಕೀಯ ವ್ಯಾಪಾರ ಎಲ್ಲಾ ಕ್ಷೇತ್ರಗಳಲ್ಲೂ ಸುಳ್ಳಿನಿಂದ ಸಿಗುವ ತಾತ್ಕಾಲಿಕ ಲಾಭಗಳು ಸಹ ಸಿಗದಂತೆ ಸಾಮೂಹಿಕ ಮನೋಭಾವ ಬೆಳೆಸಬೇಕು. ಸತ್ಯದಿಂದ ಸಿಗುವ ಯಶಸ್ಸು ಕೇವಲ ಕೆಲವು ಉದಾಹರಣೆಗಳಾಗದೆ ಎಲ್ಲರ ಬದುಕಿನ ಸಹಜ ಪರಿಸ್ಥಿತಿಯಾಗಬೇಕು ಮತ್ತು ಸುಳ್ಳಿನಿಂದ ಜೀವನ ಹೇಗೆ ನಾಶವಾಗುತ್ತದೆ ಎಂದು ಸಾಧ್ಯವಿರುವ ಎಲ್ಲಾ ಕಡೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು.
ಮುಖ್ಯವಾಗಿ, ಸತ್ಯ ಹೇಳುವ, ಅದನ್ನು ಕೇಳಿಸಿಕೊಳ್ಳುವ, ಪ್ರೋತ್ಸಾಹಿಸುವ ವಾತಾವರಣ - ಸ್ವಾತಂತ್ರ್ಯ, ಕುಟುಂಬದಿಂದ ಸಂಸತ್ತಿನವರೆಗೆ ಎಲ್ಲಾ ಹಂತಗಳಲ್ಲೂ ನಿರ್ಮಾಣವಾಗಬೇಕು. ಇದು ಅಸಾಧ್ಯ ಎಂದು ಮಾತ್ರ ಹೇಳಬೇಡಿ. ಪ್ರಾರಂಭ ಅತ್ಯಂತ ಕಠಿಣ. ಆದರೆ ಒಮ್ಮೆ ಒಂದು ಸಾಮಾಜಿಕ ಭಾವನೆ ಮತ್ತು ವ್ಯಕ್ತಿತ್ವ ರೂಪಗೊಂಡರೆ ಮುಂದೆ ಅದು ಸುಲಭವಾಗಿ ಆಚರಣೆಗೆ ಬರುತ್ತದೆ.
( ಕೆಲವೊಂದು ವ್ಯಾವಹಾರಿಕ ಸುಳ್ಳುಗಳು ಮತ್ತು ಯಾರಿಗೂ ತೊಂದರೆ ಕೊಡದೆ ನಮ್ಮ ಸ್ವಯಂ ರಕ್ಷಣೆಗಾಗಿ ಉಪಯೋಗಿಸಲ್ಪಡುವ ಸುಳ್ಳುಗಳು ಸಹನೀಯ. ಅತ್ಯಂತ ಅಪಾಯಕಾರಿ ಸೈದ್ದಾಂತಿಕ ಮತ್ತು ಉದ್ದೇಶ ಪೂರ್ವಕ ಸುಳ್ಳುಗಳ ಬಗ್ಗೆ ಈ ಲೇಖನ )
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ