'ಸುವರ್ಣ ಸಂಪುಟ' (ಭಾಗ ೭೪) - ಎ ಕೆ ಪುಟ್ಟರಾಮು
ಕಳೆದ ವಾರ ನಾವು 'ಸುವರ್ಣ ಸಂಪುಟ' ದಿಂದ ಆರಿಸಿದ ಕವಿ ಹೆಚ್ ತಿಪ್ಪೇರುದ್ರಸ್ವಾಮಿ. ಇವರ ಕವನವಾದ 'ಯಾತ್ರೆ' ಸ್ವಲ್ಪ ದೀರ್ಘವಾಗಿದ್ದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಎಂದು ಹಲವಾರು ಮಂದಿ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಸೊಗಸಾಗಿ ಪ್ರವಾಸವನ್ನು ವರ್ಣಿಸಿದ್ದಾರೆ ಎಂದು ಬಹಳಷ್ಟು ಓದುಗರು ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದಾರೆ.
ಈ ವಾರ ನಾವು ಆಯ್ದುಕೊಂಡ ಕವಿ ಎ ಕೆ ಪುಟ್ಟರಾಮು. ಇವರ ಬಗ್ಗೆ ಯಾವುದೇ ಮಾಹಿತಿ ಎಲ್ಲೂ ಸರಿಯಾಗಿ ಸಿಗುತ್ತಿಲ್ಲ ಎಂಬುವುದು ಬೇಸರದ ಸಂಗತಿಯಾಗಿದೆ. ಇವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಎಂಬ ಒಂದು ವಾಕ್ಯದ ಮಾಹಿತಿ ಹೊರತು ಪಡಿಸಿ ಯಾವುದೇ ಮಾಹಿತಿಗಳು 'ಸುವರ್ಣ ಸಂಪುಟ' ದಲ್ಲೂ ಇಲ್ಲ. ಅಂತರ್ಜಾಲ ತುಂಬಾ ಹುಡುಕಾಡಿದರೂ ಅವರ ಬಗ್ಗೆಯಾಗಲಿ, ಅವರ ಬರಹಗಳ ಬಗ್ಗೆಯಾಗಲೀ, ಕನಿಷ್ಟ ಅವರ ಭಾವಚಿತ್ರವಾಗಲೀ ದೊರೆಯುತ್ತಿಲ್ಲ. ಕೊನೆಗೆ ನ್ಯಾಶನಲ್ ಕಾಲೇಜಿನ ಫೇಸ್ಬುಕ್ ಪುಟದಲ್ಲಿರುವ ಒಂದು ಫೋಟೋದಲ್ಲಿ ಅವರ ಅಸ್ಪಷ್ಟವಾದ ಚಿತ್ರವೊಂದು ದೊರೆತಿದೆ. ಉಳಿದಂತೆ ಯಾವ ವಿವರಗಳೂ ಇಲ್ಲ. ೧೯೩೦ರಲ್ಲಿ ಬಿಡುಗಡೆಯಾದ 'ತಳಿರು' ಎಂಬ ಕವನ ಸಂಕಲನದಲ್ಲಿ ಕುವೆಂಪು, ಬಿ ಎಂ ಶ್ರೀ, ಪುತಿನ, ಎಲ್ ಗುಂಡಪ್ಪ ಮೊದಲಾದ ಕವಿಗಳ ಜೊತೆ ಎ ಕೆ ಪುಟ್ಟರಾಮು ಅವರ ಕವನವೂ ಮುದ್ರಿತವಾಗಿದೆ.
ಮಾನ್ಯ ಓದುಗರಿಗೆ ಇವರ ಬಗ್ಗೆ ಮಾಹಿತಿ ಇದ್ದಾರೆ ದಯಮಾಡಿ ಪ್ರತಿಕ್ರಿಯೆಯಲ್ಲಿ ತಿಳಿಸಬೇಕಾಗಿ ವಿನಂತಿ. ಎ ಕೆ ಪುಟ್ಟರಾಮು ಅವರ 'ಹಕ್ಕಿಗೆ' ಎಂಬ ಒಂದು ಕವನ ಸುವರ್ಣ ಸಂಪುಟದಲ್ಲಿ ಪ್ರಕಟವಾಗಿದೆ. ಓದಿ…
ಹಕ್ಕಿಗೆ
ಮನದಿ ಬೇಸರಗೊಂಡು ನಿನ್ನೆಡೆಗೆ ಬಂದಿಹೆನು
ಸವಿನುಡಿಯನಾಡೆಲ್ಲವೊ ಸಣ್ಣ ಹಕ್ಕಿ.
ಕೆಟ್ಟ ಮಾತನು ಕೇಳಿ ನೊಂದು ಬಂದಿಹೆನ ನಾನು
ರಾಗದಲಿ ಹಾಡೆಲವೊ ಪುಟ್ಟ ಹಕ್ಕಿ.
ಏತಕೀಪರಿ ನೀನು ಸುಮ್ಮನೆಯೆ ಕುಳಿತಿರುವೆ?
ಕೊರಳ ಕೊಂಕಿಸುತಾರ ನೆನೆಯುತಿರುವೆ?
ಗಗನಾಚಾರಿಯೆ ನಿನಗೆ ಜೀವನದಿ ಬೇಸರವೆ?
ಹೇಳೆಲವೊ ನನ್ನಲ್ಲಿ ನಿನ್ನ ಮನವ.
ಹಸಿದಿಹೆಯೆ? ಬಿಸಿಲಲ್ಲಿ ಹಾರಾಡಿ ಬಳಲಿಹೆಯ?
ಬಳಲಿಕೆಯು ಮೊಗದಲ್ಲಿ ತೋರುತ್ತಿಲ್ಲ.
ಕೋಪ ಬಂದಿತೆ ಹಕ್ಕಿ? -ನಿನ್ನಾಲಿ ಕೆಂಪೇರಿ
ಕಿರುಗಿಡಿಯ ಕಾರುವುದು ಕಾಣುತ್ತಿಲ್ಲ.
ರಾಗದಲಿ ನನಗೆಣೆಯು ಮತ್ತೊಬ್ಬರಿಲ್ಲೆನುತ
ಬೀಗಿಹೆಯ ಬಿಂಕದಲಿ ಬೆಡಗುಗಾರ ?
ನನ್ನಂತೆಯೇ ನಿನಗೆ ಕೋಪತಾಪಗಳುಂಟೆ?
ನನ್ನಲ್ಲಿ ಹೇಳಿಬಿಡು, ಬೆದರಬೇಡ.
ಸಂಪಗೆಯ ಹೂವಿನೊಲು ಸೊಂಪಾದ ನುಣ್ಗೊರಳ
ನೀನಾವ ಕಾರಣದಿ ಕೊಂಕಿಸಿರುವೆ?
ಉಪ್ರೆಗಚಿ ಮೆಳೆಯಲ್ಲಿ ಮುತ್ತುಗಳ ಬಿಗಿದಂತೆ
ಹಣ್ಣುಗಳು ತುಂಬಿಹುವು, ತಿರುಗಿ ನೋಡು.
ಸಣ್ಣ ಪಂಜರಗಳನ್ನು ಹಿಡಿದೆತ್ತಿ ತೋರುವೀ
ಹೂಬಿಟ್ಟ ದಾಳಿಂಬೆ ಮರವ ನೋಡು
ನೀನಿರುವ ಸುರಹೊನ್ನೆ ಕೊನೆಯಲ್ಲೆ ಹೂವೆಂದು
ಅರೆವಿರಿದು ನಸುನಗುತಲಿಹುದು ನೋಡು.
ಕೊರಳೊಳಗೆ ತುಂಬಿರುವ ಸಂಗೀತರಸವನ್ನು
ಕಿವಿಗೆರೆದು ಮನದಳಲ ತಂಪುಗೊಳಿಸು.
ನಿನ್ನಂಗದೀ ಸೊಬಗನೆಲ್ಲಿಂದ ತಂದಿರುವೆ?
ಹಾಡುತ್ತ ಹೇಳದನು ಮುದ್ದು ಹಕ್ಕಿ.
ತುಂಬಿರುವ ಹರುಷದಲಿ ನೀನಿಂತು ಮಾತುಳಿದು
ಮೈಮರೆತು ಕುಳಿತಿರುವೆ ; ತಿಳಿಯಿತೀಗ.
ರಾಗದಲಿ ಹಾಡೆಲವೊ ಬಲುಸರಳ, ಸವಿಗೊರಳ,-
ಜೀವನವ ಸವಿ ಮಾಡಿ ನಲಿವುದೆಂತು ?
ನಸುವಿರಿದು ಮಗಮಗಿಪ ಮಲ್ಲಿಗೆಯ ಸೌರಭವ
ಕಿವಿಯೆಂತು ಸವಿನೋಳ್ಪುದದನು ತಿಳಿಸು
ಹರಳುಗಲ್ಲಿನ ಮೇಲೆ ಹರಿವ ಹೊನಲಿನ ನೀರ
ನಿನದವನ್ನನುಕರಿಸು ಕೇಳ್ವೆ ನಾನು ,
ಬೆಳುದಿಂಗಳಲಿ ಹೂವ ಮುಡಿದಿರುವ ಹಂಬಿನಾ
ಚೆಂದವನು ಹಾಡಿನೆಲೆ ತೋರು ನನಗೆ,
ಸವಿ ಹಾಡ ಮಳೆಗೆರೆದು ನುಣ್ವರದ ಹೊಳೆಯಲ್ಲಿ
ತೇಲಿಸೆನ್ನನು ಮುದದಿ ಮುದ್ದು ಹಕ್ಕಿ.
ಕಾನನದೊಳರಳಿರುವ ಹೂವುಗಳು ಪರಿಮಳವ
ಮಾರುತಗೆ ಬೀರದೆಯೆ ಸುಮ್ಮನಿಹವೆ?
ಬನದ ಬಳ್ಳಿಯು ತನ್ನ ಕೆಂದಳಿರ ಮರೆಮಾಡಿ
ಚೆಂದವನು ಜನಗಳಿಗೆ ತೋರದಿಹುದೆ?
ಮಕರಂದವನು ಹೂವು ದುಂಬಿಗೀಯದೆ ತಾನೆ
ಪಾನ ಮಾಡಿದುದನ್ನು ನೋಡಿರುವೆಯಾ?
ನಿನ್ನೊಳಗೆ ತುಂಬಿರುವ ಸಂಗೀತವನು ನೀನು
ಬಿಡದಿಂತು ನುಂಗುವುದು ತರವೆ ಹೇಳು.
ಜತೆಯವರು ನಲವಿಂದ ಹಾಡುತಿರೆ ನೀನೇಕೆ
ದೂರದಲಿ ಮೌನದಲಿ ತಪಿಸುತಿರುವೆ?
ಹಾಲು ಬತ್ತದ ತೆನೆಯ ಕೊಕ್ಕಿನಲಿ ಬಿಗಿಹಿಡಿದು
ಫರಫರನೆ ಬರುತಿಹಳು ನಿನ್ನ ಗೆಳತಿ.
ನೋಡಿಲ್ಲಿ ನಿನ್ನೆಡೆಯೆ ನಿಂತಿರುವ ನಲ್ಲೆಯನು
ಮಾತನಾಡಿಸು ಬೇಗ ಬಳಲಿರುವಳು.
ಇನ್ನು ತೊರೆ ಮೌನವನು, ಮನವನ್ನು ಹೇಳಿಬಿಡು ;
ಕೇಳ್ವುದಕೆ ಕೌತುಕದಿ ಕುದಿಯುತಿಹಳು.
ಸುಖಿಗಳಿರ ನಿಮ್ಮ ನುಡಿಗಳನು ಕೇಳಿ
ಬೇಸರವ ತೊರೆದು ಸಂತಸವ ತಾಳಿ
ನೀವಿತ್ತ ಮುದವ ಜನಕೆಲ್ಲ ಸಾರಿ
ನಲಿವೆ ನಾಂ ನಿಮ್ಮನ್ನೆ ನೆನೆದು ನೆನೆದು.
-'ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ