ಸುವರ್ಣ ಸಂಪುಟ' (ಭಾಗ ೭೬) - ಶಾಂತರಸ

ಸುವರ್ಣ ಸಂಪುಟ' (ಭಾಗ ೭೬) - ಶಾಂತರಸ

ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಗಾಗಿ ದುಡಿದ ಸಾಹಿತಿ ಶಾಂತರಸ ಅವರು. ಶಾಂತರಸ ಇವರು ಸೆಪ್ಟೆಂಬರ್ ೭, ೧೯೨೪ರಲ್ಲಿ ರಾಯಚೂರು ಜಿಲ್ಲೆಯ ಹೆಂಬೆರಾಳ ಎಂಬ ಗ್ರಾಮದಲ್ಲಿ ಚನ್ನಬಸವಯ್ಯ ಹಾಗೂ ಸಿದ್ದಲಿಂಗಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರ ಹುಟ್ಟು ಹೆಸರು ಶಾಂತಯ್ಯ. ಇವರ ತಂದೆ ಚನ್ನಬಸಯ್ಯ ಹಿರೇಮಠ ಅವರು ಕನ್ನಡ-ಸಂಸ್ಕೃತ ಪಂಡಿತರೂ, ಖ್ಯಾತ ಜ್ಯೋತಿಷಿಗಳೂ ಆಗಿದ್ದರು. 

ಶಾಂತರಸ ಅವರು ತಮ್ಮ ಪ್ರಾಥಮಿಕ ಆಗೂ ಮಧ್ಯಮ ಶಿಕ್ಷಣವನ್ನು ತಿಮ್ಮಾಪುರ, ಹೆಂಬೆರಾಳ, ಶಿರಿವಾರ, ಮಹಾರಾಷ್ಟ್ರದ ಲಾತೂರ್ ಮೊದಲಾದೆಡೆಗಳಲ್ಲಿ ಪೂರೈಸಿದರು. ೧೯೪೪ರಲ್ಲಿ ಮೆಟ್ರಿಕ್ ಶಿಕ್ಷಣ ಪೂರೈಸಿದ ಬಳಿಕ ರಾಯಚೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಖ್ಯಾತ ಸಂಗೀತಜ್ಞ, ಶಿಕ್ಷಣ ತಜ್ಞರೆನಿಸಿದ್ದ ಪಂಡಿತ ತಾರಾನಾಥ ಇವರು ಪ್ರಾರಂಭಿಸಿದ ಹಮ್ ದರ್ದ್ ಸಂಸ್ಥೆಯ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಇವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಉರ್ದು ಮಾಧ್ಯಮದಲ್ಲಿ ಬಿ ಎ ಪದವಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಬಿ ಎಡ್ ಪದವಿ ಮತ್ತು ಕನ್ನಡ ಎಂ ಎ ಪದವಿಗಳನ್ನು ಪಡೆದುಕೊಂಡರು. ಆದರೆ ಉದ್ಯೋಗವನ್ನು ಹಮ್ ದರ್ದ್ ಸಂಸ್ಥೆಯಲ್ಲೇ ಮುಂದುವರೆಸಿ ಕ್ರಮೇಣ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾಗಿ, ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೮೧ ನಿವೃತ್ತರಾದರು. 

೧೯೪೨ರ 'ಕ್ವಿಟ್ ಇಂಡಿಯಾ' ಸಮಯದಲ್ಲಿ ಇವರು ಕವನ, ಕಥೆಗಳನ್ನು ರಚಿಸಲು ಪ್ರಾರಂಭಿಸಿದರು. ಉರ್ದು ಭಾಷೆಯಲ್ಲಿ ಉತ್ತಮ ಪಾಂಡಿತ್ಯ ಹಾಗೂ ಹಿಡಿತ ಇದ್ದ ಕಾರಣ ಹಲವಾರು ಗಝಲ್, ರುಬಾಯಿಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇವರು ಸುಮಾರು ೪೫ ಕ್ಕೂ ಅಧಿಕ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಇವರು ಮಾನಸಗಳ್ಳಿ ಬಯಲು, ಗಜಲ್ ಮತ್ತು ದ್ವಿಪದಿ, ಸಮಗ್ರ ಕಾವ್ಯ ಮೊದಲಾದ ಕವನ ಸಂಕಲನ, ಬಡೇಸಾಬ ಪುರಾಣ, ನಾಯಿ ಮತ್ತು ಪಿಂಚಣಿ, ಸ್ವಾತಂತ್ರ್ಯವೀರ ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನಗಳು, ಸಣ್ಣ ಗೌಡಸಾನಿ ಎಂಬ ಕಾದಂಬರಿ, ಸತ್ಯಸ್ನೇಹಿ, ನಂಜು ನೊರೆವಾಲು, ಮರೆಯಾದ ಮಾರಮ್ಮ, ಶರಣ ಬಸವೇಶ್ವರ (ರೇಡಿಯೋ ನಾಟಕ) ಮೊದಲಾದ ನಾಟಕಗಳು, ಸಿದ್ಧರಾಮ, ಆಯ್ದಕ್ಕಿ ಮಾರಯ್ಯ ದಂಪತಿಗಳು, ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು, ಬಸರೀಗಿಡದ ವೀರಪ್ಪ, ಕಲಬುರ್ಗಿಯ ದೊಡ್ಡಪ್ಪ ಅಪ್ಪ ಮೊದಲಾದ ಜೀವನ ಚರಿತ್ರೆಗಳು, ಬಹುರೂಪ, ಉಲಿವ ಮರ ಮುಂತಾದ ಪ್ರಬಂಧ, ಬಸವಪೂರ್ವ ಯುಗದ ಶರಣರು, ಮೊದಲ ವಚನಕಾರ ಮಾದಾರ ಚನ್ನಯ್ಯ, ಎಡದೊರೆ ನಾಡಿನ ಅನುಭಾವಿ ಕವಿಗಳು, ಬಳ್ಳಾರಿ ಜಿಲ್ಲೆಯ ಶಿವಶರಣರು ಮುಂತಾದ ಸಂಶೋಧನಾ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಅಮೃತಾ ಪ್ರೀತಂ ಅವರ ಕಥೆಗಳನ್ನು 'ಕಾಡಿನ ಬೇರು' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.

ಶಾಂತರಸ ಅವರ 'ಸತ್ಯಸ್ನೇಹಿ' ನಾಟಕಕ್ಕೆ ಕರ್ನಾಟಕ ಸರಕಾರದ ಪುರಸ್ಕಾರ ಲಭಿಸಿದೆ. ೨೦೦೬ರಲ್ಲಿ ಬೀದರ್ ನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು ಸರಕಾರದ ಧೋರಣೆಯನ್ನು ವಿರೋಧಿಸಿ ತಿರಸ್ಕರಿಸಿದ್ದರು. ಇವರು ಎಪ್ರಿಲ್ ೧೩ ೨೦೦೮ರಲ್ಲಿ ನಿಧನ ಹೊಂದಿದರು. 

'ಸುವರ್ಣ ಸಂಪುಟ' ಕೃತಿಯಲ್ಲಿ ಶಾಂತರಸ ಅವರ ಎರಡು ಕವನಗಳು ಪ್ರಕಟವಾಗಿವೆ. ಕೌದಿ ಹಾಗೂ ಜಾಹೀರಾತಿನ ತೇರು. ಅದರಿಂದ ಒಂದು ಕವನವನ್ನು ಆರಿಸಿ ಪ್ರಕಟಿಸಲಾಗಿದೆ.

ಕೌದಿ

ಲಕ್ಷಗಟ್ಟಲೆ ನವಿರ ನಾಲಗೆಯ

ಜೊಲ್ಲು ಸೇವಿಸಿದ

ಹಳೆಯ ಸೀರೆ

ನೂರು ತೆರ ವಾಸನೆಯ ರುಚಿನೋಡಿ

ಬಳಿದು ಬಿಳುಪಿಗೆ ಮಸಿಯ

ಪಿಂಜೆದ್ದ ಹರಕುಪಂಚೆ.

ಮಾಲಿನ್ಯದಲಿ ಏಸೋ ಮಾತುಗಳ ಹುದುಗಿಟ್ಟ-

ಲಂಗ, ಲುಂಗಿ, ಶಲ್ಯೆ, ಚಡ್ಡಿ, ಕೋಟು

ಎದೆಯ ಬಡಿತಕೆ ಯಾವಾಗಲೂ ಕಿವಿಗೊಟ್ಟು

ಆಕಾರ ಗೆಟ್ಟ

ಎದೆಕಟ್ಟು

ಎಳೆತನದ ಹಾಲುಂಡ ಕುಲಾಯಿ ಕುಂಚಿಗಿ

ಮುಪ್ಪಿನ ಒಪ್ಪಗೇಡಿತನ ಮೈಗೆ ಬಳಿದುಕೊಂಡ

ಮುದುಕಿಯ ದಾವಳಿ

ತನ್ನಷ್ಟಕ್ಕೆ ತಾನೇ ಚಿಂದಿಯಾಗಿ ಮೈಯಿಂದ

ಹೊರಬಂದ ಅಜ್ಜನ ಅಂಗಿ

ಬಾಸಿಂಗ ಬಿಗಿದು ಕಟ್ಟಿದ ಅಪ್ಪನ

ಎಳೆಯೆಳೆ ಬಿಚ್ಚಿದ ರುಮಾಲು

ಮೊದಲಗಿತ್ತಿಯಾಗಿ ಮೆರೆದ ಅಮ್ಮನ

ಬಣ್ಣಗೆಟ್ಟ ಸೇಸೆ ಸೀರೆ

ಗಾಳಿಯೊಡನೆ ಸಲಿಗೆ ಬೆಳಿಸಿ ಎಷ್ಟು ಸರಿಸಿದರೂ

ಎದೆ ಮೇಲೆ ನಿಲ್ಲದೆ ಜಾರಿ ಹುಡುಗೆಯನ್ನು 

ಪೀಡಿಸಿದ ಮೇಲುದ

ನುಚ್ಚುನೂರಾದ ಬನೀನು

ಬೆಳೆದ ಮಗುವಿಗೆ ಸಣ್ಣದಾದ ಗೌನು

ಕಂಕುಳ ಬೆವರಿನಲ್ಲಿ ಮಿಂದು

ಎದೆಯ ಭಾರಕ್ಕೆ ತನ್ನೆದೆ ಸೀಳಿಕೊಂಡ 

ಕುಪ್ಪಸ

ರವಿಕೆ, ಜಾಕೀಟು, ಷರ್ಟು ಪರಕಾರ-

(ಸಮ್ಮಿಶ್ರ ಸರಕಾರ)

ಹದಗೆಟ್ಟ ಹಳತೆಲ್ಲ ಸೇರಿ ಹೊಸ ರೂಪಾಗಿ

ಗೈದ ಅವತಾರ

ಮೈತುಂಬ ಜನಿವಾರ

ಒಡಲಲ್ಲಿ ಅಂಗೈಯಗಲದ ಹಂಡಬಂಡ

ಪಟ್ಟಿಗಳು

ನೂರಾರು ಆಶೆಆಕಾಂಕ್ಷೆಗಳ 

ಗೋರಿಗಳು

ಇದರ ಉದ್ದಗಲಕ್ಕೆ ಅಂಟಿಹವು

ಆಕಾರ ಕಳಕೊಂಡ ಏಸೋ ಬಿಂಬಗಳ

ಪ್ರತಿಬಿಂಬ

ಇದು-

ಕೌದಿ

ಮೇಲೊಂದು-

ಚುಕ್ಕೆಚಂದ್ರಾಮ ಸೂರ್ಯ ಸೌರವ್ಯೂಹ

ಮೋಡಮಿಂಚು ಮಳೆಬಿಲ್ಲುಗಳನ್ನೊಳಗೊಂಡ

ತಿಳಿನೀಲ ಬಾನು-

ಕೌದಿ

ಕೆಳಗೆ-

ಹೊಲ ಜಲ ಪೈರು ಬೆಟ್ಟ ಹೊಳೆ

ಕಾಡು ಕಾಲುವೆ ತೋಟಗಳನ್ನೊಳಗೊಂಡ

ದುಂಡು ಭೂಮಿ-

ಕೌದಿ

ಕೌದಿ

?

ಹಳೆಬಟ್ಟೆಯ ಹೊಸ ಹೊದಿಕೆ.

(ಸುವರ್ಣ ಸಂಪುಟ ಕೃತಿಯಿಂದ ಆಯ್ದ ಕವಿತೆ)