'ಸುವರ್ಣ ಸಂಪುಟ' (ಭಾಗ ೭೮) - ವಿ.ಚಿಕ್ಕವೀರಯ್ಯ

'ಸುವರ್ಣ ಸಂಪುಟ' (ಭಾಗ ೭೮) - ವಿ.ಚಿಕ್ಕವೀರಯ್ಯ

ಕಾವ್ಯ ಲೋಕದಲ್ಲಿ 'ವೀಚಿ' ಎಂದೇ ಖ್ಯಾತರಾಗಿರುವ ವಿ.ಚಿಕ್ಕವೀರಯ್ಯ ಅವರು ಜನಿಸಿದ್ದು ನವೆಂಬರ್ ೫, ೧೯೩೦ರಲ್ಲಿ ತುಮಕೂರು ನಗರದ ಚಿಕ್ಕವೀರಯ್ಯನ ಪಾಳ್ಯದಲ್ಲಿ. ಇವರ ತಂದೆ ವೀರಭದ್ರಪ್ಪನವರು ಹಿಂದುಳಿದ ವರ್ಗಕ್ಕೆ ಸೇರಿದ ಬಡ ರೈತರಾಗಿದ್ದರು. ತಾಯಿ ಗಂಗಮ್ಮ. ಚಿಕ್ಕವೀರಯ್ಯನವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತುಮಕೂರಿನಲ್ಲೇ ಪೂರೈಸಿದರು. ಆದರೆ ಇವರು ಇಂಟರ್ ಮೀಡಿಯಟ್ ನಲ್ಲಿ ಕಲಿಯುತ್ತಿರುವಾಗ ತಂದೆ ತೀರಿಕೊಂಡದ್ದರಿಂದ ಅನಿವಾರ್ಯವಾಗಿ ವಿದ್ಯೆಗೆ ತಿಲಾಂಜಲಿ ನೀಡಬೇಕಾಯಿತು. 

ಆದರೆ ಇವರು ಶಾಲಾ ದಿನಗಳಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದುದರಿಂದ ಕುವೆಂಪು, ಮಾಸ್ತಿ ಮೊದಲಾದ ಸಾಹಿತಿಗಳನ್ನು ತಮ್ಮ ಶಾಲೆಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸಿದ್ದರು. ಚಿಕ್ಕವೀರಯ್ಯನವರ ಬರಹಕ್ಕೆ ಬೆನ್ನೆಲುಬಾಗಿ ನಿಂತವರು ಎಸ್ ಕೆ ಕರೀಂಖಾನ್ ಇವರು. ಅವರ ಬೆಂಬಲದಿಂದ ಇವರ ಹಲವಾರು ಕವಿತೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದುವು. ಚಿಕ್ಕವೀರಯ್ಯನವರ ಮೊದಲ ಕವನ ಸಂಕಲನ 'ಪ್ರಯಣ ಚೈತ್ರ' ೧೯೬೧ರಲ್ಲಿ ಬಿಡುಗಡೆಯಾಯಿತು. ಈ ಕವನ ಸಂಕಲನಕ್ಕೆ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರೇ ಮುನ್ನುಡಿ ಬರೆದು ಶುಭಕೋರಿದ್ದಾರೆ. ತಮ್ಮ ಹೊಟ್ಟೆ ಪಾಡಿಗಾಗಿ ವ್ಯವಸಾಯ ಮಾಡುತ್ತಾ ಕೇವಲ ಆತ್ಮ ಸಂತೋಷಕ್ಕಾಗಿ ಕವಿತೆಗಳನ್ನು ರಚಿಸಿದವರು ಚಿಕ್ಕವೀರಯ್ಯನವರು. 

ಸಮಾನ ಮನಸ್ಕರೊಂದಿಗೆ ಮಾತುಕತೆಯಾಡುವ ಸಮಯದಲ್ಲಿ ರಾಜಕೀಯದ ಪ್ರಸ್ತಾವ ಬಂದಾಗ ಚಿಕ್ಕವೀರಯ್ಯನವರು ಅಲ್ಲಿಗೂ ಕಾಲಿರಿಸಿದರು. ೧೯೫೬ರಲ್ಲಿ ತುಮಕೂರು ಪುರಸಭೆಯ ಸದಸ್ಯರಾಗುವುದರೊಂದಿಗೆ ತಮ್ಮ ರಾಜಕೀಯ ಬದುಕಿಗೆ ನಾಂದಿ ಹಾಡಿದ ಇವರು ನಂತರ ಪುರಸಭೆಯ ಉಪಾಧ್ಯಕ್ಷರಾಗಿ (೧೯೫೯-೬೦), ಅಧ್ಯಕ್ಷರಾಗಿ (೧೯೭೧-೭೩) ಕಾರ್ಯನಿರ್ವಹಣೆ ಮಾಡಿದರು. ಪುರಸಭಾಧ್ಯಕ್ಷರಾಗಿದ್ದ ಸಮಯದಲ್ಲಿ ಬೇಂದ್ರೆ, ಅಡಿಗರನ್ನು ಆಹ್ವಾನಿಸಿ ಪೌರ ಸನ್ಮಾನದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಮೊದಲ ಕವನ ಸಂಕಲನ 'ಪ್ರಣಯ ಚೈತ್ರ' ದ ಬಳಿಕ 'ವಿಷಾದ ನಕ್ಷೆ' 'ಸಂಕರ ತಳಿ', ನವಿಲು ಮನೆ, ಅಭಿನಯದ ಬಯಲು, ನಿತ್ಯ ಮದುವಣಗಿತ್ತಿ ಮೊದಲಾದ ಕವನ ಸಂಕಲನಗಳನ್ನು ಹೊರತಂದರು. ಇದರ ಜೊತೆಗೆ 'ಮಹಾಯಾನ' ಎಂಬ ಆಯ್ದ ಕವನಗಳ ಸಂಕಲನವೂ ಪ್ರಕಟವಾಯಿತು. ಸಿದ್ದರ ಬೆಟ್ಟ, ಒಂದು ಸಂದರ್ಶನ, ಇವರು ನನ್ನವರು, ನೆಚ್ಚಿನವರು, ಇಷ್ಟಮಿತ್ರರು ಮೊದಲಾದ ಗದ್ಯ ಕೃತಿಗಳನ್ನು ಹೊರತಂದಿದ್ದಾರೆ. ೧೯೭೧ ರಲ್ಲಿ 'ನಿಕಷ' ಎಂಬ ರಾಜಕೀಯ ಹಾಗೂ ಸಾಂಸ್ಕೃತಿಕ ಮಾಸ ಪತ್ರಿಕೆಯನ್ನು ಹೊರತಂದರು. ಇವರ ಸಾಹಿತ್ಯ ಪ್ರೀತಿಯನ್ನು ಗಮನಿಸಿದ ತುಮಕೂರಿನ ಗೆಳೆಯರು 'ಹಣ್ಣು ಮೆಟ್ಟಿದ ಅವರೆ' ಎಂಬ ಅಭಿನಂದನಾ ಗ್ರಂಥವನ್ನು ಅರ್ಪಣೆ ಮಾಡಿ ಗೌರವಿಸಿದ್ದಾರೆ. 

ಇವರಿಗೆ ಅಭಿನಂದನಾ ಉಡುಗೊರೆಯಾಗಿ ನೀಡಿದ ರೂ.೧,೩೨,೦೦೦ ಗಳನ್ನು 'ವೀಚಿ' ಸಾಹಿತ್ಯ ಪ್ರತಿಷ್ಟಾನ ಸ್ಥಾಪಿಸಲು ನೀಡಲಾಗಿದ್ದು, ಅದರ ವತಿಯಿಂದ ಪ್ರತೀ ವರ್ಷ 'ವೀಚಿ ಪ್ರಶಸ್ತಿ' ನೀಡುತ್ತಾ ಬರುತ್ತಿದ್ದಾರೆ. ೧೯೯೩ರಲ್ಲಿ ತುಮಕೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೯೪ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಮೊದಲಾದ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಚೆನ್ನವೀರಯ್ಯನವರು ಸೆಪ್ಟೆಂಬರ್ ೨೯, ೨೦೦೭ರಲ್ಲಿ ನಿಧನ ಹೊಂದಿದರು.

ವಿ.ಚೆನ್ನವೀರಯ್ಯನವರ ಒಂದು ಕವನ 'ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿದೆ. ಅದರ ಹೆಸರು-

ಸುಖವೇ !

ಸುಖವೇ!

ಸುಖವೇ!

ಎತ್ತೆತ ಲು ಸೌಂದರ್ಯದ ಮುಖವೆ !

ಹಾ ! ಅನುಭವವೆ !

ಬಾನೊಳು ಬೈಗಿಳಿದಾಟವನಾಡಿರೆ

ಕಠಿಣತೆ ಸುಳಿವಿಲ್ಲ.

ಮರವೊಂದನು ಮುಗಿಲಾಶೀರ್ವದಿಸಿರೆ

ತಲೆ ಬಾಗಿಹುದಲ್ಲ.

ಆರಿಸಿದ ಕುಂಕುಮ ಶೋಭಿತೆಯಾದರು

ದಿಜ್ಞಾರಿಯರೆಲ್ಲ.

ಸ್ವರ್ಣಸರೋವರದೆದೆಯಲಿ ಬಣ್ಣದ

ಮುಗಿಲಿನ ಮಂಜುಳ ಕಮಲಗಳು.

ಪಶ್ಚಿಮ ದಿಗ್ಭಾಗದ ಮೇಲ್ಭಾಗದಿ

ತೇಲಿವೆ ಅರಳಿವೆ ರಂಜಿಸಿವೆ.

ಮೌನ ಮಹತ್ತರ ವೇಳೆಯಲಿ,

ಸಂಜೆಯ ಈ ಸುಳಿಗಾಳಿಯಲಿ,

ಸುಖವೇ,

ಸುಖವೇ,

ಎತ್ತೆತ್ತಲು ಸೌಂದರ್ಯದ ಮುಖವೇ !

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)