'ಸುವರ್ಣ ಸಂಪುಟ' (ಭಾಗ ೭೯) - ಎಸ್. ನಾರಾಯಣ ಶೆಟ್ಟಿ

'ಸುವರ್ಣ ಸಂಪುಟ' (ಭಾಗ ೭೯) - ಎಸ್. ನಾರಾಯಣ ಶೆಟ್ಟಿ

'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ. ಇವರ ತಂದೆ ಸುಬ್ಬ ಶೆಟ್ಟಿ ಹಾಗೂ ತಾಯಿ ಗೌರಮ್ಮನವರು. ತಮ್ಮ ಗ್ರಾಮವಾದ ಹೊಸಹೊಳಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ನಂತರ ಹೊಳೆ ನರಸೀಪುರದಲ್ಲಿ ಪ್ರೌಢ ಶಿಕ್ಷಣ, ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. 

ವಿದ್ಯಾರ್ಥಿ ಜೀವನದ ಸಮಯದಲ್ಲೇ ಕನ್ನಡ ಸಾಹಿತ್ಯದತ್ತ ಆಕರ್ಷಿತರಾಗಿದ್ದ ನಾರಾಯಣ ಶೆಟ್ಟರು ಮೈಸೂರು ವಿಶ್ವ ವಿದ್ಯಾನಿಲಯದಿಂದ ಬಿ ಎ ಆನರ್ಸ್ ಪದವಿಯನ್ನು ಪಡೆದು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ನಾರಾಯಣ ಶೆಟ್ಟರು ನಂತರದ ದಿನಗಳಲ್ಲಿ ಯುವರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯ ಬಳಿಕ ಒಂದೂವರೆ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 

ನಾರಾಯಣ ಶೆಟ್ಟಿ ಇವರು ವಿಜ್ಞಾನದ ವಿಷಯದಲ್ಲೂ ಆಸಕ್ತಿಯನ್ನು ಹೊಂದಿದ್ದರು. ಇವರು ನಾಣ್ಯ ಯಾತ್ರೆ, ಒಂದೇ ಸೂರಿನಡಿಯಲ್ಲಿ, ಆರತಿ, ಮಂಗಳಾರತಿ, ಚಿಲಿಪಿಲಿ (ಮಕ್ಕಳ ಕವನ ಸಂಕಲನ), ಇಬ್ಬನಿ, ಏಜಾಕ್ಸ್ (ಅನುವಾದಿತ ನಾಟಕ), ಬಾಲಕಾಂಡ ವಾಲ್ಮೀಕಿ ರಾಮಾಯಣ, ಹೃದಯ ಸಂವಾದ, ಕುವೆಂಪು ಪು ತಿ ನ ಸಾಹಿತ್ಯದ ಹೊಳಹುಗಳು, ಪರಂಪರೆ, ಯುಗ ಸಂಧ್ಯಾ, ಭಾರತ ಕಥಾಮಂಜರಿ ಮೊದಲಾದ ಕೃತಿಗಳನ್ನು ರಚನೆ ಮಾಡಿದ್ದಾರೆ. 

ಇವರ 'ಯುಗ ಸಂಧ್ಯಾ' ಕೃತಿಗೆ ೨೦೦೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 'ಹೃದಯ ಸಂವಾದ' ಎಂಬ ವಿಮರ್ಶಾ ಕೃತಿಗೆ ೧೯೬೩ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 'ಒಂದೇ ಸೂರಿನಡಿಯಲ್ಲಿ' ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸೇವೆಯಿಂದ ನಿವೃತ್ತರಾದ ಬಳಿಕ ಮೈಸೂರಿನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಇವರು ಅಲ್ಲಿಯೇ ಮೇ ೧೬, ೨೦೧೧ರಲ್ಲಿ ನಿಧನ ಹೊಂದಿದರು.

'ಸುವರ್ಣ ಸಂಪುಟ' ಕೃತಿಯಲ್ಲಿ ನಾರಾಯಣ ಶೆಟ್ಟಿ ಇವರ ಮೂರು ಕವನಗಳು ಪ್ರಕಟವಾಗಿವೆ. ವಿಳಾಸ ತಪ್ಪಿದ ಕಾಗದ, ಗಾಂಧಿ ಹಾಗೂ ಹೆಣ್ಣು. ಈ ಕವಿತೆಗಳಿಂದ ಒಂದು ಕವಿತೆಯನ್ನು ಆರಿಸಿ ಪ್ರಕಟ ಮಾಡಿದ್ದೇವೆ. ಓದುವ ಸಂತಸ ನಿಮ್ಮದಾಗಲಿ…

ವಿಳಾಸ ತಪ್ಪಿದ ಕಾಗದ

ತಪ್ಪು ವಿಳಾಸವನು ಹೊತ್ತ ಅಂಚೆಯ ಲಕೋಟೆ-

ಅದರ ಮೈತುಂಬ ಮುದ್ರೆಯೋ ಮುದ್ರೆ

ಈ ಊರು ಆ ಊರು, ಆ ಹೆಸರು ಈ ಹೆಸರು

ಎಲ್ಲವೂ ಧಿಕ್ಕರಿಸಿ ಗೊಟ್ಟಕೆಸೆಯುತಿರಲು

ಬೇಸರಿಲ್ಲದ ಅಂಚೆ ಅದನಿನ್ನು ಹೊತ್ತು ಸಾಗುತಿರಲು

ಸಾಗಿಹುದು ಪತ್ರ ಆ ಊರು ಏ ಊರ ಯಾತ್ರೆ !

ಪ್ಯಾರಿಸ್ಸು ಬೊಂಬಾಯಿ ಮದ್ಯ ಜಲಧಿಯಲಿ ಮಿಂದು

ಹಾಲಿವುಡ್ ತಾರಾಸಮೇತ ಜಲಕ್ರೀಡೆಯಾಡಿ

ತಿರುಪತಿಯ ಪುಣ್ಯ ಕ್ಷೇತ್ರದಲಿ ತಲೆ ಕ್ಷೌರಮಾಡಿ

ಕಾಶಿ ರಾಮೇಶ್ವರಾ ಸಾಂಚಿ ಬೃಂದಾವನಾ

ಸರ್ವತೀರ್ಥಗಳ ಸ್ನಾನ ಪಾನವನು ಮಾಡಿ

ಮೇಲುಕೋಟೆಯ ನಾಮ, ನಂಜುಂಡನ ವಿಭೂತಿ

ಎಲ್ಲವನು ಭಯಭಕ್ತಿಯಲಿ ಮೈತುಂಬ ಧರಿಸಿ

ಯಾತ್ರೆ ಹೊರಟಿದೆ ಮುಂದೆ, ಕಂಡುಕಾಣದ ವಿಶ್ವದೆಡೆಗೆ.

 

ವಿಳಾಸ ತಪ್ಪಿದ ಕಾಗದ

ಯಾರಿಗೂ ಬೇಡದ

ನಾಟ್ ಪೆಯ್ಡು ಕಾಗದ !

 

ಕೆಳಗೆ ಉಕ್ಕುವ ಕಡಲು

ಮೇಲೆ ಸುರಿಯುವ ಮಳೆಯು 

ಸುತ್ತಲೂ ಅಪ್ಪಳಿಸುತಿರಲು ಗಾಳಿ

 

ಸಂಜೆಯಾಗಿರಲಂದು

ಮುಂದೆ ಸಾಗಿರೆ ಹಿಂಡು

ಹಾರುತಿದೆ ತೂರಾಡಿ ಒಂಟಿ ಪರವೆ :

ಬಿರುಗಾಳಿ ಮಳೆಯೊಳಗೆ ತೊಯ್ದು ಒಂಟಿ ಪರವೆ !

 

ಕುರುಡು ಕರು ತಾಯ ಕೆಚ್ಚಲನರಸಿ 

ತುರುಮಂದೆಯಲಿ ನುಗ್ಗುತ್ತಿರೆ,

ತೊಂಡೆದನಗಳ ಕಾಲ ಒದೆತಗಳ ಮಳೆ

ಒಂದೆ ಸಮ ಮುಖದಿ ಸುರಿಯುತ್ತಿರೆ

ರಕ್ತಕಣ್ಣೀರು ಕೊಚ್ಚೆರೊಚ್ಚೆಯಲಿ

ತೊಟ್ಟ ತೊಟ್ಟಿಟ್ಟು ಕರಗುತ್ತಿದೆ.

 

ಪಾತ್ರತಪ್ಪಿದ ತೊರೆಯು

ಸಹರ ಮರುಭೂಮಿಯೆಡೆ

ತನ್ನ ಕೂಡುನದಿಯನು ಅರಸುತ್ತಿದೆ.

 

ಹರಿದ ಮೈ ಲಕೋಟೆಯ ಹೊರಗೆ

ಇಣುಕುತಿರೆ ವಿಲಿಗುಡುತೆ ಒಳಗಿರುವ ಪತ್ರ,

ಹೊತ್ತು ಸಾಗುತಲಿಹನು ಅಂಚೆಯಾಳದನು

ಕರ್ಮಬದ್ಧ ; ಪತ್ರಲೇಖನ ನಿರಾಸಕ್ತ.

 

ಬರೆದವಗೆ ಅದನು ಹಿಂದೆ ಕಳುಹಿಸಲೆ

ಮೇಲೆ ಆದ ಬರೆದವರ ಕುಲಗೋತ್ರ ಒಂದು ಇಲ್ಲ.

ಇನ್ನೇನು ಸತ್ತಕಾಗದಗಳ ಕಚೇರಿ ಗತಿಯದಕೆ ಎಲ್ಲ.

"ಯಾರು ಕೈ ಬಿಟ್ಟರೂ ನೀ ಕೈಯ ಬಿಡದಿರೊ ರಂಗಾ !"

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)