'ಸುವರ್ಣ ಸಂಪುಟ' (ಭಾಗ ೮೦) - ಅರವಿಂದ ನಾಡಕರ್ಣಿ

'ಸುವರ್ಣ ಸಂಪುಟ' (ಭಾಗ ೮೦) - ಅರವಿಂದ ನಾಡಕರ್ಣಿ

ಅರವಿಂದ ನಾಡಕರ್ಣಿಯವರು ಹುಟ್ಟಿದ್ದು ಜನವರಿ ೧, ೧೯೩೧ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ. ಇವರ ತಂದೆ ದತ್ತಾತ್ರೇಯ ನಾಡಕರ್ಣಿ, ತಾಯಿ ಉಮಾಬಾಯಿ (ಭವಾನಿ). ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹನೇಹಳ್ಳಿ ಹಾಗೂ ಬಂಕಿಕೊಡ್ಲು ಗ್ರಾಮಗಳಲ್ಲಿನ ಶಾಲೆಗಳಲ್ಲಿ ಪೂರೈಸಿದರು. ಮಾಧ್ಯಮಿಕ ಶಾಲೆಯಲ್ಲಿ ಇವರಿಗೆ ಖ್ಯಾತ ಸಾಹಿತಿಗಳಾದ ಗೌರೀಶ ಕಾಯ್ಕಿಣಿ ಹಾಗೂ ಸು.ರಂ.ಎಕ್ಕುಂಡಿ ಇವರು ಗುರುಗಳಾಗಿದ್ದ ಕಾರಣ ಸಾಹಿತ್ಯದ ಮೇಲೆ ಒಲವು ಮೂಡಿತು. ತಮ್ಮ ಬಿ ಎಸ್ಸಿ. ಪದವಿಯನ್ನು ಮುಂಬಯಿಯ ರೂಯಿಯಾ ಕಾಲೇಜಿನಿಂದ ಪಡೆದುಕೊಂಡರು. ನಂತರ ಕೊಲ್ಲಾಪುರದ ಶಹಾಜೀ ಲಾ ಕಾಲೇಜಿನಿಂದ ಎಲ್ ಎಲ್ ಬಿ ಪದವಿಯನ್ನು ಪೂರೈಸಿದರು. ಪುಣೆಯಲ್ಲಿದ್ದಾಗ ವಿ ಕೃ ಗೋಕಾಕ್ ಹಾಗೂ ರಂ ಶ್ರೀ ಮುಗಳಿ ಇವರ ಸಂಪರ್ಕಕ್ಕೆ ಬಂದು ಹಲವಾರು ಕವಿತೆಗಳನ್ನು ರಚನೆ ಮಾಡಿದರು. ಇವರ ಹಲವಾರು ಕವಿತೆಗಳು ಜಯಂತಿ, ಜಯಕರ್ನಾಟಕ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗತೊಡಗಿದವು. 

ಅರವಿಂದ ನಾಡಕರ್ಣಿ ಇವರು ಮುಂಬಯಿಯ ಆದಾಯ ತೆರಿಗೆ ಕಚೇರಿಯಲ್ಲಿ ಗುಮಾಸ್ತರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಕಚೇರಿ ಸಂಬಂಧಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಇನ್ಸ್ ಪೆಕ್ಟರ್ ಹುದ್ದೆಗೇರಿದರು. ಕೆಲವು ಸಮಯದ ಬಳಿಕ ಈ ಹುದ್ದೆಗೆ ರಾಜೀನಾಮೆ ನೀಡಿ ತೆರಿಗೆ ಸಲಹೆಗಾರರಾಗಿ ದುಡಿದು ನಿವೃತ್ತಿಹೊಂದಿದರು. ಇವರು ವೃತ್ತಿಯಲ್ಲಿದ್ದಾಗ ಕನ್ನಡ ಸಂಘಗಳ ಜೊತೆ ನಿರಂತರ ಸಂಪರ್ಕವನ್ನು ಇರಿಸಿಕೊಂಡಿದ್ದರು. 'ಸಾಹಿತ್ಯ ಸಂಧ್ಯಾ' ಕಾರ್ಯಕ್ರಮದಡಿ ಕನ್ನಡ ಹಾಗೂ ಮರಾಠಿ ಕವಿಗಳನ್ನು ಒಂದೇ ವೇದಿಕೆಯಡಿಯಲ್ಲಿ ತಂದು ಕವಿತಾ ವಾಚನ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 'ಸೃಜನ ವೇದಿ' ಚತುರ್ಮಾಸ ಪತ್ರಿಕೆ ಪ್ರಾರಂಭಿಸಿ ನಾಲ್ಕು ವರ್ಷಗಳ ಕಾಲ ಸಂಪಾದಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದರು. ಹಲವಾರು ಕಾರ್ಯಕ್ರಮಗಳಲ್ಲಿ ಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ತಮ್ಮ ಜೀವನದ ಬಹುಭಾಗವನ್ನು ದೂರದ ಮುಂಬೈಯಲ್ಲಿ ಕಳೆದರೂ ಇವರ ಕನ್ನಡದ ಪ್ರೇಮಕ್ಕೇನೂ ಚ್ಯುತಿಯಾಗಲಿಲ್ಲ. ಅರವಿಂದ ನಾಡಕರ್ಣಿ ಇವರು ಕಾವ್ಯಾರ್ಪಣ, ಮಾಯಾವಿ, ಜರಾಸಂಧ, ನಾ ಭಾರತೀ ಕುಮಾರ, ನಗರಾಯಣ, ಆತ್ಮಭಾರತ, ಅಜ್ಞಾತ, ಜಂಕ್ಷನ್ ಕವಿತೆಗಳು, ಸಲೂನಿನಲ್ಲಿ ಹುಡುಗ ಮೊದಲಾದ ಕವನಸಂಕಲನಗಳನ್ನು ಹೊರತಂದಿದ್ದಾರೆ. ಇವರು ಬರೆದ ವೈಚಾರಿಕ ಲೇಖನಗಳು 'ಅಹತ' ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. 

ಅರವಿಂದ ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷತೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ಮೇ ೧೯, ೨೦೦೮ರಲ್ಲಿ ನಿಧನ ಹೊಂದಿದರು.

ಇವರ ಒಂದು ಕವನ ಮಾತ್ರ 'ಸುವರ್ಣ ಸಂಪುಟ' ದಲ್ಲಿ ಪ್ರಕಟವಾಗಿದೆ. ಅದರ ಹೆಸರು -

ನಾವಿಗನ ಹಾಡು

ಕಡಲ ತೆರೆಯ ಜೋಕಾಲಿಯಾಟ ಆಡುವದೊ ಬಾಳದೋಣಿ,

ಪೂರ ಬರಲಿ ಬಿರುಗಾಳಿ ಬರಲಿ ನಾವಿಗನದೊಂದೆ ವಾಣಿ.

 

ಬೆಳ್ಳಿನೊರೆಯ ನೂಪುರದ ಕಿಂಕಿಣಿ ನಿನಾದ ಕಾಲಿನಲ್ಲಿ

ದಣಿದ ಮೈಗೆ ಮೆಲುಗಾಳಿ ಮುದ್ದು ಅಲೆ ತುಮುರ ಹಾಲಿನಲ್ಲಿ.

 

ರತ್ನ ಕಿರಣ ಕೈಹುಟ್ಟು ಮಿಸುನಿ ಮೀನುಗಳ ಕೂಟ ಮುರಿದು,

ನಾವೆ ದೂಡುತಿರೆ ದೂರ ಬರುವದೋ ಮೋಡ ಹಿಂಡು ಒಂದು.

 

ಅದರ ಹಿಂದೆ ಸುಳಿಗಾಳಿ ಹಿಂದೆ ಅಭ್ರಾಳಿ ಹಿಂದೆ ಗಾಳಿ

ಹೇಳಲ ಹಿಸಿದು ಕಿಡಿಯಣ್ಣ ಕಿಸಿದು ನಿಲ್ಲುವಳೊ ರುದ್ರ ಕಾಳಿ.

 

ನನ್ನ ಬಾಳ ಹರಗೋಲನುಳಿಸೆ ನಾನೊಬ್ಬನಿಂದು ಧೀರ,

ಅಲೆಯ ಪ್ರಳಯದಲಿ ಯಾರು ಬರುವರೋ ತೊರೆದು ಕಡಲತೀರ.

 

ಸಾಗುತಿರಲಿ ಮುಂದಾಗುತಿರಲಿ ಹರಗೋಲು ತೆರೆಯಮೇಲೆ.

ಅದುವೆ ನನ್ನುಸಿರು ಉಳಿವು ಅಳಿವು ಇವು ಎಲ್ಲ ದೊರೆಯ ಮೇಲೆ

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)