'ಸುವರ್ಣ ಸಂಪುಟ' (ಭಾಗ ೮೧) - ಆರ್ ಜಿ ಕುಲಕರ್ಣಿ

'ಸುವರ್ಣ ಸಂಪುಟ' (ಭಾಗ ೮೧) - ಆರ್ ಜಿ ಕುಲಕರ್ಣಿ

ಕಳೆದ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಆಯ್ದು ಪ್ರಕಟಿಸಿದ ಸಾಹಿತಿ ಅರವಿಂದ ನಾಡಕರ್ಣಿ ಅವರ 'ನಾವಿಗನ ಹಾಡು' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಅರವಿಂದ ನಾಡಕರ್ಣಿ ಅವರ ಹೆಸರನ್ನು ಬಹಳಷ್ಟು ಮಂದಿ ಕೇಳಿಯೇ ಇಲ್ಲ. ಆದುದರಿಂದ ಅವರು ಬರೆದ ಇತರೆ ಕವನಗಳಿದ್ದರೆ ಪ್ರಕಟಿಸಿ ಎಂದು ಒತ್ತಾಯ ಮಾಡಿದ್ದಾರೆ. ಆದರೆ ನಮ್ಮ ಬಳಿ ಲಭ್ಯ ಇರುವ ಮಾಹಿತಿಯಲ್ಲಿ ಅದೊಂದೇ ಕವನ ಅಚ್ಚಾಗಿರುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಸುಳಿವುಗಳು ದೊರೆತರೆ ಖಂಡಿತವಾಗಿಯೂ ಪ್ರಕಟಿಸುತ್ತೇವೆ.

ಈ ವಾರ ನಾವು ಆಯ್ದುಕೊಂಡ ಕವಿ ಆರ್ ಜಿ ಕುಲಕರ್ಣಿ. ಇವರ ಬಗ್ಗೆ ಹುಡುಕಾಡುವಾಗ ದೊರೆತ ಮಾಹಿತಿಗಳು ಅತ್ಯಲ್ಪ. ಇವರ ಒಂದು ಭಾವಚಿತ್ರವೂ ದೊರೆಯಲಿಲ್ಲ. ಇವರು 'ಸಾಕ್ಷಿ' ಎಂಬ ಕಾವ್ಯನಾಮದಲ್ಲಿ ತಮ್ಮ ಬರಹಗಳನ್ನು ಬರೆಯುತ್ತಿದ್ದರು. ಉತ್ತಮ ವಿಮರ್ಶಕರೂ ಹಾಗೂ ಕವಿಗಳೂ ಆಗಿದ್ದರು. ಇವರು ಆಡುಗೋಡಿಯ ಶ್ರೀ ಸತ್ಯ ಸಾಯಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರು ಆಗಿ ನಿವೃತ್ತರಾಗಿದ್ದಾರೆ. ಇವರ ಪ್ರಮುಖ ಕೃತಿಗಳು : ಮಂತ್ರಪುಷ್ಪ, ನಾಕು ಹೆಜ್ಜೆ-ಮೂರು ಮೆಟ್ಟಿಲು, ಚತುರ್ಮುಖ, ಕುವೆಂಪು ಕಮಲ ಮುಖ ಇತ್ಯಾದಿ. ಉಳಿದಂತೆ ಯಾವ ವಿವರಗಳೂ ಸಿಗುತ್ತಿಲ್ಲ. ಓದುಗರಿಗೆ ಇವರ ಬಗ್ಗೆ ತಿಳಿದಿದ್ದರೆ ದಯವಿಟ್ಟು ಪ್ರತಿಕ್ರಿಯೆಯಲ್ಲಿ ಬರೆದು ತಿಳಿಸಿ.

'ಸುವರ್ಣ ಸಂಪುಟ' ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿದೆ. ಎರಡೂ ಕವನಗಳು ಪುಟ್ಟದ್ದಾಗಿರುವುದರಿಂದ ಎರಡನ್ನೂ ಪ್ರಕಟಿಸಿದ್ದೇವೆ.

ಬಲ್ಲವರು

೧.

ಕಾಲಿನ ಕಣಿವ್ಯಾಗ ಕಳ್ಳರ ಕೈಸೆರೆ

ಬಿಡಿಸುವರಾರಾರ?

ಟೊಂಕದ ಸುಂಕದ ಕಟ್ಯಾಗ ಸಿಕ್ಕರ

ಉಳಿಸುವರಾರಾರ?

೨.

ಒಡಲಿನರಣ್ಯದಿ ಒರಲುವ ಹಸುವನು

ಪೊರೆಯುವರಾರಾರ?

ಎದೆಯಾಗುಃದುಗಿದ ಬಿದಿಗಿಯ ಚಂದ್ರನ

ತೋರುವರಾರಾರ?

೩. 

ಬಿದಿಗಿಯ ಚಂದ್ರನ ಬೆಳೆಸುವ ಸೂರ್ಯನ

ತಿಳಿಸುವರಾರಾರ?

ಜಾನಕಿ ಜೀವನ ರಾಜಾರಾಮರೆ

ಅಲ್ಲದೆ ಇನ್ಯಾರ?

***

ಬಿರುದು ಹೊತ್ತಾನ

ಬಿರಿದು ಹೊತ್ತಾನ

ನಮ್ಮ ಸ್ವಾಮೀ

ಬಿರುದು ಹೊತ್ತಾನ

ಬಿರಿದು ಹೊತ್ತಾನ...॥

 

ಮಣ್ಣಿನ್ಯಾಗ ಬೀಜ ಬಿತ್ತಿ

ಹಣ್ಣಮ್ಯಾಲ ತರತೀನಂತ ॥

 

ಬಿರಿದು ಹೊತ್ತಾನ

ನಮ್ಮ ಸ್ವಾಮೀ

ಬಿರುದು ಹೊತ್ತಾನ

ಬಿರಿದು ಹೊತ್ತಾನ

 

ನಿಂತ ನೀರ ಮೇಲಕೆತ್ತೀ

ಮಳೆಯ ಮರಕ ಕರೆವೇನಂತ ।।

 

ಬಿರಿದು ಹೊತ್ತಾನ

ನಮ್ಮ ಸ್ವಾಮೀ

ಬಿರುದು ಹೊತ್ತಾನ

ಬಿರಿದು ಹೊತ್ತಾನ

 

ಮರದ ಹಸಿರ ತೋಳಿನ್ಯಾಗ

ಕೆಂಪುಗಿಣಿಯ ನಿಟ್ಟೀನಂತ …

 

ಬಿರಿದು ಹೊತ್ತಾನ

ನಮ್ಮ ಸ್ವಾಮೀ

ಬಿರುದು ಹೊತ್ತಾನ

ಬಿರಿದು ಹೊತ್ತಾನ

 

ಮುದ್ದು ಗಿಣಿಯ ಮುಂದ ನಿಂತೂ 

ನುಡಿಸತೇನೀ ರಾಮನಂತಾ…

 

ಬಿರಿದು ಹೊತ್ತಾನ

ನಮ್ಮ ಸ್ವಾಮೀ

ಬಿರುದು ಹೊತ್ತಾನ

ಬಿರಿದು ಹೊತ್ತಾನ.

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)