'ಸುವರ್ಣ ಸಂಪುಟ' (ಭಾಗ ೮೧) - ಚಂದ್ರಕಾಂತ ಕುಸುನೂರ

'ಸುವರ್ಣ ಸಂಪುಟ' (ಭಾಗ ೮೧) - ಚಂದ್ರಕಾಂತ ಕುಸುನೂರ

ಚಂದ್ರಕಾಂತ ಕುಸನೂರ ಇವರು ಕನ್ನಡದ ಖ್ಯಾತ ಸಾಹಿತಿಗಳು ಮತ್ತು ರಂಗಕರ್ಮಿಗಳು. ಚಂದ್ರಕಾಂತ ಇವರು ಅಕ್ಟೋಬರ್ ೨೧, ೧೯೩೧ರಲ್ಲಿ ಕಲಬುರ್ಗಿಯ ಕುಸನೂರು ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಗುಂಡೇರಾವ್ ಹಾಗೂ ತಾಯಿ ರಂಗೂಬಾಯಿ. ಇವರ ತಂದೆ ಶಿಕ್ಷಕರಾಗಿದ್ದರು. ಕುಸನೂರ ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಬಿ ಎ ಪದವಿ ತನಕ ಓದಿದ್ದು ಉರ್ದು ಮಾಧ್ಯಮದ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ. ನಂತರ ಹಿಂದಿ ಸಾಹಿತ್ಯದಲ್ಲಿ ಎಂ ಎ ಪದವಿಯನ್ನು ಗಳಿಸಿದರು. ಇಂಗ್ಲೀಷ್ ನಲ್ಲಿ ಬಿ ಎಡ್ ಪದವಿಯನ್ನೂ ಗಳಿಸಿದ್ದಾರೆ. 

ಚಂದ್ರಕಾಂತ ಕುಸನೂರ ಇವರು ತಮ್ಮ ವೃತ್ತಿ ಜೀವನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರಾರಂಭ ಮಾಡಿದರು. ನಂತರ ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಕರಾಗಿ ಮೈಸೂರು ಮತ್ತು ರಾಯಚೂರಿನಲ್ಲಿ ಹಿಂದಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ, ಬಳಿಕ ಗುಲ್ಬರ್ಗಾ ಜೂನಿಯರ್ ಕಾಲೇಜಿನಲ್ಲಿ, ಬಿ ಎಡ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹತ್ತು ವರ್ಷಗಳ ಕಾಲ ಬೆಳಗಾವಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಪ್ರಭುತ್ವವನ್ನು ಹೊಂದಿದ್ದ ಚಂದ್ರಕಾಂತರನ್ನು ಕನ್ನಡದತ್ತ ಎಳೆದು ತಂದದ್ದು ದ ರಾ ಬೇಂದ್ರೆ ಇವರು. ಒಂದು ಸಮ್ಮೇಳನದಲ್ಲಿ ಚಂದ್ರಕಾಂತರ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಅವರನ್ನು ಕುರಿತು 'ನೀವ್ಯಾಕೆ ಕನ್ನಡದಲ್ಲಿ ಬರೆಯಬಾರದು?' ಎಂದರು. ಈ ಮಾತಿನಿಂದ ಪ್ರೇರಣೆಗೊಂಡು ಇವರು ನಂತರದ ದಿನಗಳಲ್ಲಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಲು ಪ್ರಾರಂಭಿಸಿದರು. ಇವರ ಕನ್ನಡ ಅಧ್ಯಯನಕ್ಕೆ ಬೆಂಬಲ ನೀಡಿದವರು ಸಿದ್ಧಲಿಂಗ ಪಟ್ಟಣಶೆಟ್ಟಿಯವರು. ಇವರು ಬರೆದ ಕವನಗಳನ್ನು 'ನಂದಿಕೋಲು' ಎಂಬ ಹೆಸರಿನಲ್ಲಿ ಕವನ ಸಂಕಲನವಾಗಿ ಪ್ರಕಟ ಮಾಡಿದವರು ಸಾಹಿತಿ ಶಾಂತರಸ ಇವರು. ನಂತರ ಚರ್ಚ್ ಗೇಟ್ ಎಂಬ ಕಾದಂಬರಿ, ಹಳ್ಳ ಕೊಳ್ಳ ನೀರು ಎಂಬ ನಾಟಕವನ್ನೂ ತಮ್ಮ ಪ್ರಕಾಶನದಿಂದ ಶಾಂತರಸ ಇವರು ಪ್ರಕಟ ಮಾಡಿದರು.

ನಂತರ 'ಮೂರು ಅಸಂಗತ ನಾಟಕಗಳು' (ಅಕ್ಷರ ಪ್ರಕಾಶನ), ನಾಲ್ಕು ಅಸಂಗತ ನಾಟಕಗಳು (ಸುರುಚಿ ಪ್ರಕಾಶನ) ಗಳು ಬಿಡುಗಡೆಯಾದವು. ಇವುಗಳಿಗೆ ೧೯೭೨ರಲ್ಲಿ ನಾಟಕ ಅಕಾಡೆಮಿಯ ಪ್ರಶಸ್ತಿ ದೊರೆಯಿತು. ಇವರು ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ಯು ಆರ್ ಅನಂತಮೂರ್ತಿಯ 'ಸಂಸ್ಕಾರ' ಹಾಗೂ ಶ್ರೀಕೃಷ್ಣ ಆಲನಹಳ್ಳಿ ಇವರ 'ಕಾಡು' ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದ ಮಾಡಿರುವರು. 'ಹಾಯ್ಕು' ಅಥವಾ 'ಹಾಯಕು' ಎಂಬ ಪ್ರಕಾರದ ಕವನಗಳನ್ನು ಕನ್ನಡ ಭಾಷೆಯಲ್ಲಿ ಪ್ರಚುರಪಡಿಸಿದವರಲ್ಲಿ ಇವರು ಪ್ರಮುಖರು.

ಚಂದ್ರಕಾಂತ ಇವರಿಗೆ ೧೯೭೫ರಲ್ಲಿ 'ಯಾತನಾ ಶಿಬಿರ' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ೨೦೦೬ನೇ ಸಾಲಿನ ನಾಡೋಜ ಪ್ರತಿಷ್ಟಾನದ ಅರವಿಂದ ಪ್ರಶಸ್ತಿ ದೊರೆತಿದೆ. ೨೦೧೩ರಲ್ಲಿ ಕರ್ನಾಟಕ ಸರಕಾರವು ಇವರಿಗೆ 'ಕನ್ನಡ ರಾಜ್ಯೋತ್ಸವ' ಪುರಸ್ಕಾರವನ್ನು ನೀಡಿ ಗೌರವಿಸಿದೆ. ಇವರು ಎಪ್ರಿಲ್ ೧೮, ೨೦೨೦ರಂದು ನಿಧನ ಹೊಂದಿದರು.

'ಸುವರ್ಣ ಸಂಪುಟ' ಕೃತಿಯಲ್ಲಿ ಚಂದ್ರಕಾಂತ ಕುಸುನೂರ ಇವರ ಎರಡು ಪುಟ್ಟ ಕವನಗಳು ಪ್ರಕಟವಾಗಿವೆ. ಅವುಗಳೆರಡನ್ನೂ ಇಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ.

ನೊಣ

ಕ್ಷಣ- ಒಂದು ನೊಣ

ಕೂಡುವದು- ಆಯುಷ್ಯದ

ಅನ್ನದ ಮೇಲೆ

ಅದು ಇಟ್ಟ

ಕೊಳೆ ತಿಂದು

ಬದುಕುವರು

ಯಾರಿಲ್ಲಿ?

ಹತ್ತಾರು ರೋಗಗಳಿಗೆ

ಒಂದು ನೊಣ

ಒಂದು ಕ್ಷಣ

ತಾಯಿ - ತಂದೆ

ಇದ್ದವರು ಹೇಳುವರು

ಕ್ಷಣ (ನೊಣ) ದ ಮಹಾತ್ಮ್ಯೆ

ಕ್ಷುದ್ರ ರೆಕ್ಕೆಯ ಕೀಟ

ಇಷ್ಟೊಂದು ಬಲಶಾಲಿ

ಎಂದು ಕೊಂಡಾಡುವರು

ಕೀಟ ಜಾತಿಯನು

ಬಂದು ಅಂಗೈ ಮೇಲೆ

ಕುಳಿತಿರುವ ಕ್ಷಣ (ನೊಣ) ವನ್ನು

ಮತ್ತೊಂದು ಕೈಯಿಂದ

ಬಡಿದರಾಯಿತು ಎಂದು

ಫಟ್ಟನೆ ಬಡಿದೆನು

ಹಾರಿ ಹೋಯಿತು ಕ್ಷಣ

ಸತ್ತು ಬಿದ್ದಿತು ನೊಣ

"ಸತ್ತವನ ಆತ್ಮಕ್ಕೆ ಶಾಂತಿ ಸಿಗಲಿ."

***

ಸುಗ್ಗಿ

ಸಮಯ ನೇಗಿಲು

ಹಗಲು ರಾತ್ರಿಗಳ -ಜೋಡೆತ್ತುಗಳು-

ಜನ್ಮ, ಮರಣದ - ಸುಗ್ಗಿ ಎರಡು-

ಸಾಗುವಳಿ ನಡೆದಿದೆ - ನಿರಂತರ-

ನಾವು? ಬೀಜಗಳು-

ಜನ್ಮ - ಮರಣದ ಸುಗ್ಗಿಯಲ್ಲಿ -ಬಿದ್ದು

ಬೆಳೆದು,

ಅಳಿದು,

ಹೋಗೋಣ.

***

('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)