'ಸುವರ್ಣ ಸಂಪುಟ' (ಭಾಗ ೮೩) -ದೇವೇಂದ್ರಕುಮಾರ ಹಕಾರಿ

ಸಾಹಿತಿ ದೇವೇಂದ್ರಕುಮಾರ ಹಕಾರಿ ಇವರು ಜನ್ಮ ತಾಳಿದ್ದು ಎಪ್ರಿಲ್ ೧೪, ೧೯೩೧ರಂದು ರಾಯಚೂರಿನ ಯಲಬುರ್ಗಾ ತಾಲೂಕಿನ ಚಿಕ್ಕೇನಕೊಪ್ಪ ಗ್ರಾಮದಲ್ಲಿ. ಇವರ ತಂದೆ ಸಿದ್ದಪ್ಪ ಹಾಗೂ ತಾಯಿ ಮಲ್ಲವ್ವ. ಇವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ನಂತರ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಜಾನಪದ ಕಥನ ಗೀತೆಗಳಲ್ಲಿ ದುಃಖಾಂತ ನಿರೂಪಣೆ ಪ್ರಬಂಧವನ್ನು ಮಂಡಿಸಿ ಪಿ ಎಚ್ ಡಿ ಪದವಿಯನ್ನು ಗಳಿಸಿದ್ದಾರೆ.
ತಮ್ಮ ವೃತ್ತಿ ಜೀವನವನ್ನು ಕಲಬುರ್ಗಿಯ ಶರಣ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಆರಂಭ ಮಾಡಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರು ಆಕಾಶವಾಣಿಯ ಸಲಹೆಗಾರರಾಗಿ ಮತ್ತು ಜಾನಪದ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಸ್ವಾತಂತ್ರ್ಯ ಪಡೆದುಕೊಂಡ ಸಮಯದಲ್ಲಿ ನಡೆದ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇವರು ಕೂಗುತಿವೆ ಕಲ್ಲು, ಚೆಲ್ವ ಕೋಗಿಲೆ (ಕಾದಂಬರಿ), ಚಿನ್ಮಯ, ಆಚೆ ಈಚೆ, ಬಿಡುಗಡೆ, ನನ್ನ ಸುತ್ತು (ಕವನ ಸಂಕಲನ) ಸಾಹಿತ್ಯ ಸಮ್ಮುಖ, ಕನ್ನಡ ಕಾವ್ಯಗಳಲ್ಲಿ ಕಿರಾತಾರ್ಜುನ ಪ್ರಸಂಗ, ಶಿವನ ಡಂಗುರ (ವಿಮರ್ಶೆ) ಚಾಟಿ, ಓರೆಗಲ್ಲು (ಕಥಾ ಸಂಕಲನ) ಅಮೃತಿಮತಿ, ಶಾಕುಂತಲಾ, ಕ್ಷಿತಿಜದಾಚೆ, ಗೀತಶಿವ ಕಥಾ (ಗೀತ ನಾಟಕ) ಆರದ ದೀಪ, ಶಿರಸಂಗಿ ಲಿಂಗರಾಜರು, ನಾಗಚಂದ್ರ, ಮಾದಾರ ಚೆನ್ನಯ್ಯ, ನೇಮಿಚಂದ್ರ, ಆಲೂರು ವೆಂಕಟರಾಯರು, ನೀಲಕಂಠ ಬುವಾ (ಚರಿತ್ರೆ) ಮುಂತಾದುವುಗಳು ಇವರ ಪ್ರಮುಖ ಕೃತಿಗಳು.
ಹಕಾರಿ ಇವರಿಗೆ ಮೈಸೂರು ಸರಕಾರದ ಬಹುಮಾನ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯ ಯೋಧ ಸನ್ಮಾನ, ಕಾವ್ಯಾನಂದ ಪ್ರಶಸ್ತಿ ಮೊದಲಾದ ಗೌರವಗಳು ಲಭಿಸಿವೆ. ದೇವೇಂದ್ರಕುಮಾರ್ ಇವರು ಎಪ್ರಿಲ್ ೭, ೨೦೦೭ರಲ್ಲಿ ನಿಧನ ಹೊಂದಿದರು.
ದೇವೇಂದ್ರಕುಮಾರ ಹಕಾರಿ ಇವರ ಎರಡು ಕವನಗಳು 'ಸುವರ್ಣ ಸಂಪುಟ' ಕೃತಿಯಲ್ಲಿ ಪ್ರಕಟವಾಗಿವೆ. ಪುಟ್ಟದಾದ ಕವನಗಳೆರಡನ್ನೂ ಇಲ್ಲಿ ಪ್ರಕಟಿಸಲಾಗಿದೆ. ಓದಿ, ಪ್ರತಿಕ್ರಿಯೆ ನೀಡಲು ಮರೆಯದಿರಿ.
ಬೇಡ ನಿನ್ನಯ ಕರುಣೆ
ಮೂರಾಗ ಬಯಸುವೆನು ಮುಕ್ಕಾಗ ಬಯಸುವೆನು
ಸಿಕ್ಕು ನಿನ್ನಯ ಪಾದತುಳಿತದಲ್ಲಿ !
ನೂರಾಗ ಬಯಸುವೆನು ನುಗ್ಗಾಗ ಬಯಸುವೆನು
ಸಿಕ್ಕು ನಿನ್ನಯ ಕೊನೆಯ ಕುಣಿತದಲ್ಲಿ !
ಪರಪರನೆ ಸುಲಿಯೆ ನಾ ತೊಗಲಾಗ ಬಯಸುವೆನು
ಸಿಕ್ಕು ನಖಗಳ ಕರುಣ ಸುಲಿತದಲ್ಲಿ !
ಕರಕರನೆ ಉರಿದು ಮೈಬೂದಿ ನಿನಗಾಗುವೆನು
ಪಕ್ಕಾಗಿ ಹಣೆಗಣ್ಣ ಬೆಂಕಿಯಲ್ಲಿ !
ಮಿರುಮಿರುಗುತಿಹ ಹಾವ ಹೆಡೆಯಾಗ ಬಯಸುವೆನು
ಹೆಕ್ಕಿ ನಂಜನು, ಕೊರಲ ಚೆಲುವಿನಲ್ಲಿ !
ನೂರುನೋವುಗಳೊಡನೆ ಮೌನಗರತಿಗೆ ತುಡಿಸಿ
ನಂದಿಯಾಗುವೆ ನಿನ್ನ ಸೇವೆಯಲ್ಲಿ !
ಹರಿದು ಬರುತಿಹ ಕರುಣ ತೊರೆಯಾಗ ಬಯಸುವೆನು
ಏರಿ ನಿನ್ನಯ ಜಟಾಜೂಟದಲ್ಲಿ !
ಎಳನಗೆಯ ಸಿಂಗಾರ, ಪೆರೆಯಾಗ ಬಯಸುವೆನು
ಸೇರಿ ನಿನ್ನಯ ಮುಡಿಯ ಜಡೆಗಳಲ್ಲಿ !
ಬೇಡ ನಿನ್ನಯ ಕರುಣೆ ಕೋಟಿ ಸಲ ತುಳಿದರೂ
ಬಿಡದೆ ಮೂಡುವೆ ಬಯಲ ಭಾವದಲ್ಲಿ !
ಈ ಬಾಳ ಬಿತ್ತರದಿ ಮತ್ತೆ ನಾನಳಿದರೂ
ಕೂಡಿಬರುವೆನು ಪ್ರಾಣತೇಜದಲ್ಲಿ !
***
ಗೀತ-ಪ್ರಭಾತ
ಋತುಚಕ್ರದಂತರದ ಶ್ರುತಿ ಸಂಚು ಹೂಡಿ
ಬೀಸಿರಲು ಇಂದ್ರಜಾಲ,
ಬಾನಗೂಡೊಳು ಕುಳಿತು ಕಣ್ಬಿಟ್ಟು ನೋಡುತಿವೆ
ಚಿಕ್ಕೆ-ಹಕ್ಕಿಗಳೆಲ್ಲ ಜೋಡಿ ಜೋಡಿ.
ಮೆಲ್ಲಮೆಲ್ಲನೆ ಗುಟುರು ಗುಟುರುಗೂಂ ಗುಟುರುಗೂಂ
ಸಿಂಬಿ ಸುಳಿ ಬಿಚ್ಚಿ,
ಉಲಿವ ತುಪ್ಪಳನವರು ಮೈಗೆ ಸೋಕಿ,
ಚುಂಚಿನಿಂಚರದಲ್ಲಿ ಹೊಂಚು ಹಾಕಿ
ಮತ್ತೆ....
ಮತ್ತೆ ಬೆಚ್ಚನೆ ಮೌನ ; ಬಿಚ್ಚಿಹೊದೆದು,
ತಂದ್ರಿ ಬಿಚ್ಚಿ ಹೊದೆದು,
ದಿಟ್ಟಿಸುತ ಹುಕಿಯ ಟಿಕಿ ಟಿಕ್ಕಿಯನು ಹಚ್ಚಿ ;
----
ಇರುಳ - ಬೇಡನು ಬಿಟ್ಟ ಬಾಣ ಕೊರಳಿಗೆ ನಟ್ಟು
ದೊಪ್ಪೆಂದು ಕೆಡಕೆಡೆದು ಕೊರಗಿ ಕೊರಗಿ
ನೆಲದ ತೊಡೆ ಮೇಲೊರಗಿ
ಹೊರಳುತಿರೆ ; ಕರಗಿ,
ಕ್ಷಿತಿಜವಾಲ್ಮೀಕಿಯೆದೆಯಿಂದ ಚಿಮ್ಮಿದ ಗೀತ,
ಸುಪ್ರಭಾತ.
('ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನಗಳು)